ADVERTISEMENT

ಸಾಯಿಪ್ರಕಾಶ್ ಕಂಡ ‘ರಿಯಲ್ ಪೊಲೀಸ್’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 19:30 IST
Last Updated 2 ಮಾರ್ಚ್ 2017, 19:30 IST
ಸ್ಪಂದನ
ಸ್ಪಂದನ   
‘ಇದುವರೆಗಿನ ನನ್ನ ಸಿನಿಪಯಣದಲ್ಲಿ 97 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಈ ಪೈಕಿ ಶೇ 75ರಷ್ಟು ಚಿತ್ರಗಳು ಗೆದ್ದಿವೆ. ಇದೀಗ ‘ರಿಯಲ್ ಪೊಲೀಸ್’ 98ನೇ ಚಿತ್ರ. ಸೆಂಟಿಮೆಂಟ್ ಚಿತ್ರಗಳೆಂದರೆ ಎಲ್ಲರಿಗೂ ತಕ್ಷಣ ನನ್ನ ಹೆಸರು ನೆನಪಿಗೆ ಬರುತ್ತದೆ. ಆದರೆ, ಈ ಚಿತ್ರದ ಮೂಲಕ ಅದನ್ನು ಮೀರಿದ್ದೇನೆ’ ಎಂದರು ಶುಭ್ರ ಬಿಳಿ ಉಡುಪಿನಲ್ಲಿದ್ದ ನಿರ್ದೇಶಕ ಓಂ ಸಾಯಿಪ್ರಕಾಶ್.
 
ಮಾರ್ಚ್ 10ರಂದು ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು. ‘ಪೊಲೀಸರನ್ನು ಇದುವರೆಗೆ ತೋರಿಸಿರುವುದಕ್ಕಿಂತ ಸ್ವಲ್ಪ ಭಿನ್ನವಾಗಿ ತೋರಿಸುವ ಯತ್ನ ಮಾಡಿದ್ದೇನೆ. ಅದಕ್ಕಾಗಿಯೇ ಶೀರ್ಷಿಕೆಯನ್ನು ‘ರಿಯಲ್ ಪೊಲೀಸ್’ ಎಂದು ಇಟ್ಟಿದ್ದೇನೆ. ಅಧಿಕಾರ ಮತ್ತು ಸಮಾಜವನ್ನು ತಲೆಯಲ್ಲಿಟ್ಟುಕೊಂಡು ಕಟ್ಟಿದ ಕಥೆ ಇದು. ಜಿಹಾದ್, ಡ್ರಗ್ ಮಾಫಿಯಾ ಸೇರಿದಂತೆ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೇನೆ. ಸಮಾಜಕ್ಕೆ ಸಂದೇಶವೂ ಇದೆ. ನಟ ಸಾಯಿಕುಮಾರ್ ಹೆಸರಿನ ಜತೆಗೆ ಪೊಲೀಸ್ ಪಾತ್ರವೂ ತಳಕು ಹಾಕಿಕೊಂಡಿದೆ. ಹಾಗಾಗಿ ಅವರನ್ನೇ ಈ ಚಿತ್ರದ ನಾಯಕನಟನಾಗಿ ಆಯ್ಕೆ ಮಾಡಿಕೊಂಡೆ’ ಎಂದು ಹೇಳಿದರು.
 
(ಓಂ ಸಾಯಿಪ್ರಕಾಶ್)
 
‘ಚಿಕ್ಕಂದಿನಲ್ಲೇ ಜಿಹಾದ್‌ನತ್ತ ಆಕರ್ಷಿತನಾಗುವ ಬಾಲಕನ ತಾಯಿಯ ಪಾತ್ರ ನನ್ನದು. ಇದುವರೆಗೆ ಅಳುಮುಂಜಿ ಪಾತ್ರಗಳಿಗೆ ಮೀಸಲಾಗಿದ್ದ ನನಗೆ, ಈ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಸಿಕ್ಕಿದೆ’ ಎಂದು ಸಂತಸಪಟ್ಟರು ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿರುವ ಸ್ಪಂದನ.
 
‘ಮೊದಲ ಸಲ ತಂದೆ ನಿರ್ದೇಶಿಸಿರುವ ಚಿತ್ರಕ್ಕೆ ಬಣ್ಣ ಹಾಕಿರುವೆ’ ಎಂದು ಮಾತು ಆರಂಭಿಸಿದ ಸಾಯಿಕೃಷ್ಣ, ‘ತಂದೆ ನೋಡಲು ಮೆದು ಮನುಷ್ಯನಂತೆ ಕಾಣುತ್ತಾರೆ. ಆದರೆ, ಅವರೊಳಗೊಬ್ಬ ಕ್ರಾಂತಿಕಾರಿ ಇದ್ದಾನೆ. ಮದುವೆಗೆ ಕೇವಲ ಒಂದು ತಿಂಗಳಿರುವಾಗ, ಪ್ರತಿಭಟನೆಗಿಳಿದು ಪೊಲೀಸರ ಕೈಲಿ ಒದೆ ತಿಂದು ಜೈಲು ಸೇರಿದ್ದರು’ ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡರು. 
 
(ಅಕ್ಷಿತಾ)
 
ಚಿತ್ರಕ್ಕೆ ಬಂಡವಾಳ ಹಾಕಿರುವ ಚಿತ್ರದುರ್ಗದ ಸಾಧಿಕ್‌ ಉಲ್ಲಾ ಆಜಾದ್, ‘ಸಮಾಜಕ್ಕೆ ಒಂದೊಳ್ಳೆ ಸಂದೇಶವಿರುವ ಚಿತ್ರ ನಮ್ಮದು’ ಎಂದು ಮಾತು ಮುಗಿಸಿದರು. ಸಾಧುಕೋಕಿಲಾ, ಮಿಮಿಕ್ರಿ ರಾಜಗೋಪಾಲ್, ರಮೇಶ್ ಪಂಡಿತ್, ಅಕ್ಷಿತಾ ಗಮನ ಸೆಳೆಯುವಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
 
ಜೆ.ಜೆ. ಕೃಷ್ಣ ಛಾಯಾಗ್ರಹಣ, ಬಲರಾಮ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಗೋಕುಲ್‌ರಾಜ್ ವಿತರಣೆಯ ಹೊಣೆ ಹೊತ್ತಿದ್ದು, ಸುಮಾರು 60 ಚಿತ್ರಮಂದಿರಗಳಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾರಂತೆ.
 
(ಸಾಯಿಕೃಷ್ಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.