ADVERTISEMENT

ಸಾಯಿ ಭಕ್ತಿಯ ಅದೇ ದಾರಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಭಕ್ತಿ ಪ್ರಧಾನ ಚಿತ್ರಗಳನ್ನು ಕೊಡುತ್ತ ಬಂದಿರುವ ಸಾಯಿಪ್ರಕಾಶ್, ಮತ್ತೊಮ್ಮೆ ಸಾಯಿಬಾಬಾ ಮಹಾತ್ಮೆ ವಿವರಿಸಲು ಹೊರಟಿದ್ದಾರೆ. ‘ಶ್ರೀ ಸಾಯಿ’ ಎಂಬ ಸಿನಿಮಾದ ಚಿತ್ರೀಕರಣವನ್ನು ನಿಗದಿ ಮಾಡಿದ್ದಕ್ಕಿಂತ ವೇಗವಾಗಿ ಮುಗಿಸಿರುವ ಅವರು, ಆ ಚಿತ್ರದ ಹಾಡುಗಳ ಸಿ.ಡಿ. ಬಿಡುಗಡೆ ಸಮಾರಂಭವನ್ನು ಈಚೆಗೆ ಆಯೋಜಿಸಿದ್ದರು.

ತಾವು ಅಂದುಕೊಂಡಂತೆ ಸಿನಿಮಾ ನಿರ್ಮಾಣದ ವಿವಿಧ ಹಂತಗಳನ್ನು ಸುಲಭವಾಗಿ ಮುಗಿಸಿರುವುದಕ್ಕೆ ಚಿತ್ರಂಡದ ಸದಸ್ಯರೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು ಸಾಯಿಪ್ರಕಾಶ್. ತಂಡದ ಎಲ್ಲ ಸದಸ್ಯರೂ ಉತ್ಸಾಹದಿಂದ ಪ್ರತಿಯೊಂದು ಕೆಲಸವನ್ನು ಕರಾರುವಾಕ್ಕಾಗಿ ಪೂರೈಸಿರುವುದನ್ನು ಕಂಡು ಅವರು ಅಚ್ಚರಿಪಟ್ಟಿದ್ದಾರೆ. ಎಲ್ಲವೂ ಸಾಯಿ ಆಶೀರ್ವಾದದ ಫಲ ಎಂಬ ನುಡಿ ಅವರದು. ‘ಸಾಯಿಬಾಬಾ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾರೆ ಎಂಬುದನ್ನು ನಾನು ಸಿನಿಮಾದ ಮೂಲಕ ತೋರಿಸಿದ್ದೇನೆ. ಸಾಯಿ ಭಕ್ತರಷ್ಟೇ ಅಲ್ಲ; ಎಲ್ಲ ವರ್ಗದ ಪ್ರೇಕ್ಷಕರಿಗೂ ಇದು ಇಷ್ಟವಾಗಲಿದೆ’ ಎಂಬ ಆಶಾವಾದವನ್ನು ಸಾಯಿಪ್ರಕಾಶ್ ವ್ಯಕ್ತಪಡಿಸಿದರು.

ನವೀನ್‌ ಕೃಷ್ಣ ಚಿತ್ರದ ನಾಯಕ. ಬಾಲ್ಯದಿಂದಲೂ ಸಾಯಿಬಾಬಾ ನಂಬಿಕೊಂಡು ಬೆಳೆದಿರುವ ಯುವಕನ ಪಾತ್ರ ಅವರದು. ‘ಸಾಯಿಬಾಬಾ ಆಶೀರ್ವಾದದಿಂದಲೇ ಏಳಿಗೆ ಕಾಣುತ್ತಾ ಬದುಕಿನಲ್ಲಿ ಸಾಧನೆ ಮಾಡುವ ಯುವಕನ ಪಾತ್ರ ಎಲ್ಲರಿಗೂ ಸ್ಫೂರ್ತಿ ಕೊಡುತ್ತದೆ’ ಎಂದರು. ಅವರ ಜತೆ ನಾಯಕಿಯಾಗಿ ಅಭಿನಯಿಸಿರುವ ರೋಜಾ, ‘ಸಾಯಿಪ್ರಕಾಶ್ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದು ಸಂತಸ ಕೊಡುತ್ತದೆ’ ಎಂದರು.

ಹಿರಿಯ ನಟಿ ಪದ್ಮಾ ವಾಸಂತಿ, ಸಾಹಿತಿ ದೊಡ್ಡರಂಗೇಗೌಡ ಮಾತನಾಡಿದರು. ನಿರ್ಮಲಾನಂದ ಸ್ವಾಮೀಜಿ, ಮೋಕ್ಷಪತಿ ಸ್ವಾಮೀಜಿ, ಆನಂದ ಗುರೂಜಿ ಹಾಗೂ ಸುಬ್ರಹ್ಮಣ್ಯ ಶಾಸ್ತ್ರಿ ಸಿ.ಡಿ ಬಿಡುಗಡೆ ಮಾಡಿದರು. ಸಿನಿಮಾ ನಿರ್ಮಾಣದ ಹಿನ್ನೆಲೆಯನ್ನು ನಿರ್ಮಾಪಕ ಟಿ.ಎ.ಸೆಂಥಿಲ್ ಹಂಚಿಕೊಂಡರು. ಚಿತ್ರಕ್ಕೆ ಹನ್ನೊಂದು ಹಾಡುಗಳನ್ನು ಬರೆದಿರುವ ಶ್ರೀಚಂದ್ರು ಹಾಗೂ ಅವುಗಳಿಗೆ ಸಂಗೀತ ಹೊಸೆದ ಬಿ.ಬಲರಾಮ್ ಮಾತನಾಡಿದರು. ನಾಯಕಿ ದಿಶ ಪೂವಯ್ಯ, ಛಾಯಾಗ್ರಾಹಕ ಜೆ.ಜಿ.ಕೃಷ್ಣ ಹಾಗೂ ಚಿತ್ರತಂಡದ ಇತರ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.