ADVERTISEMENT

ಸಿ.ಎಂ. ಕಳೆದು ಹೋದಾಗ...

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST
ಅಮೂಲ್ಯಾ ರಾಜ್
ಅಮೂಲ್ಯಾ ರಾಜ್   

‘ಲಂಚಾವತಾರ ನಾಟಕ ಬಂದು ಹಲವು ದಶಕ ಉರುಳಿವೆ. ಹಾಗೆಂದು ಲಂಚ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆಯೇ? ನಾಟಕ ನೋಡಿ ಲಂಚ ‍ಪಡೆಯುವ ಹೊಸ ವಿಧಾನ ಕಲಿತ ಅಧಿಕಾರಿಗಳು ಇದ್ದಾರೆ’ ಎಂದು ನಕ್ಕರು ಹಿರಿಯ ನಟ ಬಾಬು ಹಿರಣ್ಣಯ್ಯ.

‘ಮುಖ್ಯಮಂತ್ರಿ ಕಳದೋದ್ನಪ್ಪೊ’ ಚಿತ್ರದಲ್ಲಿ ಸಿ.ಎಂ. ಏಕೆ ಕಳೆದು ಹೋಗುತ್ತಾನೆ ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದು ಹೀಗೆ.

ಚಿತ್ರಕಥೆಯು ಯಾವುದೇ ರಾಜಕಾರಣಿಗೂ ಹೋಲಿಕೆಯಾಗುವುದಿಲ್ಲ. ಯಾವ ಮುಖ್ಯಮಂತ್ರಿ ಬಗ್ಗೆಯೂ ಹೇಳಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ವಾರ ರಾಜ್ಯದಾದ್ಯಂತ ತೆರೆಗೆ ಬರುತ್ತಿದ್ದು, ಇದರ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

ADVERTISEMENT

‘ರಾಜಕಾರಣಿಗಳ ವಿರುದ್ಧ ಟೀಕೆ ಹಳೆಯದು. ಕಟು ಟೀಕೆ ಒಳ್ಳೆಯದಲ್ಲ. ಸೂಕ್ಷ್ಮವಾಗಿ ಟೀಕಿಸಿದರೂ ರಾಜಕಾರಣಿಗಳು ಅರ್ಥೈಸಿಕೊಳ್ಳುತ್ತಾರೆ. ಈಗಿನ ವ್ಯವಸ್ಥೆ ವಿರುದ್ಧ ಇರುವ ಸಿನಿಮಾ ಇದು. ಯಾವುದೇ ರಾಜಕೀಯ ಪಕ್ಷದ ವಿರುದ್ಧವೂ ಇಲ್ಲ’ ಎಂದು ಸ್ಪಷ್ಟನೆ ನೀಡಿದರು ಬಾಬು ಹಿರಣ್ಣಯ್ಯ.

ಆರ್‌. ಶಿವಕುಮಾರ್‌ ಭದ್ರಯ್ಯ ಈ ಚಿತ್ರದ ನಿರ್ದೇಶಕರು. ಅವರೇ ಕಥೆ, ಚಿತ್ರಕಥೆ, ಸಾಹಿತ್ಯ ಬರೆದಿದ್ದು, ಬಂಡವಾಳ ಕೂಡ ಹೂಡಿದ್ದಾರೆ. ಚಿತ್ರದ ಬಗೆಗಿನ ಮಾಹಿತಿ ಹಂಚಿಕೊಳ್ಳುವಾಗ ಅವರ ಮಾತಿನ ಲಹರಿ ನಿರ್ಮಾಪಕರ ದಯನೀಯ ಸ್ಥಿತಿಯತ್ತಲೂ ಹರಿಯಿತು. ‘ನಾವು ಜೇಬಿನಲ್ಲಿರುವಷ್ಟು ದುಡ್ಡಿಗೆ ಮಾತ್ರ ದೋಸೆ ತಿನ್ನಬೇಕು. ಎಲ್ಲರೂ ನಿರ್ಮಾಪಕ ಅನ್ನದಾತ ಎನ್ನುತ್ತಾರೆ. ಆದರೆ, ಆತ ನಿಜ ಅರ್ಥದಲ್ಲಿ ಅನಾಥ. ಚಿತ್ರದ ಕೊನೆಯಲ್ಲಿ ಉಳಿಯುವುದು ಆತ ಮಾತ್ರ’ ಎಂದರು.

‘ಚಿತ್ರದ ಮುಹೂರ್ತ ನೆರವೇರಿಸಿದಾಗ ನನ್ನ ಹಿಂದೆ ಸಾಕಷ್ಟು ಜನರಿದ್ದರು. ಇದರಿಂದ ಖುಷಿಗೊಂಡಿದ್ದು ಸಹಜ. ಈಗ ಹಿಂದಿರುಗಿ ನೋಡಿದಾಗ ಯಾರೊಬ್ಬರು ಕಾಣುತ್ತಿಲ್ಲ. ಜೇಬು ಖಾಲಿಯಾಗಿದೆ. ಜೊತೆಗೆ, ಜನರೂ ಖಾಲಿಯಾಗಿದ್ದಾರೆ’ ಎಂದು ಸಂಕಷ್ಟ ತೋಡಿಕೊಂಡರು.

ಶಿವಕುಮಾರ್‌ ಅವರ ಪುತ್ರ ಭರತ್‌ ಭದ್ರಯ್ಯ ಈ ಚಿತ್ರದ ನಾಯಕ. ಇದು ಅವರ ಮೊದಲ ಚಿತ್ರ. ‘ನನ್ನದು ಪತ್ರಕರ್ತನ ಪಾತ್ರ. ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ನನ್ನ ಪಾತ್ರ ಮಹತ್ವದ್ದಾಗಿದೆ’ ಎಂದರು.

ನಾಯಕಿ ಅಮೂಲ್ಯಾ ರಾಜ್‌ಗೂ ಇದು ಪ್ರಥಮ ಚಿತ್ರ. ಕುಟುಂಬದ ಪ್ರೀತಿಯಿಂದ ವಂಚಿತರಾಗುವ ಅವರು ನಾಯಕನ ಮೂಲಕ ಪ್ರೀತಿ ಪಡೆಯುತ್ತಾರಂತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿ.ಕೆ. ನಯನ್‌ ಸಂಗೀತ ಸಂಯೋಜಿಸಿದ್ದಾರೆ. ಹರೀಶ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ.


ಬಾಬು ಹಿರಣ್ಣಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.