ADVERTISEMENT

ಸಿನಿಮಾ ರೂಪದಲ್ಲಿ ನರಗುಂದ ಬಂಡಾಯ

ವಿಜಯ್ ಜೋಷಿ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಸಿನಿಮಾ ರೂಪದಲ್ಲಿ ನರಗುಂದ ಬಂಡಾಯ
ಸಿನಿಮಾ ರೂಪದಲ್ಲಿ ನರಗುಂದ ಬಂಡಾಯ   

80ರ ದಶಕದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಹಾಗೂ ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಕಾರಣಗಳಲ್ಲಿ ಒಂದಾದ ನರಗುಂದ ಬಂಡಾಯ ಕುರಿತು ಸಿನಿಮಾ ಸಿದ್ಧವಾಗುತ್ತಿದೆ. ಅಭಿವೃದ್ಧಿ ಕರ ವಿರೋಧಿಸಿ ನರಗುಂದದಲ್ಲಿ ರೈತರು ನಡೆಸಿದ ಹೋರಾಟ, ಪ್ರತಿಭಟನೆಯಲ್ಲಿ ಆದ ರೈತರ ಸಾವು ಈ ಸಿನಿಮಾದ ಕಥಾಹಂದರ.

ಎಂಬತ್ತರ ದಶಕದಲ್ಲಿ ನರಗುಂದ ಭಾಗದಲ್ಲಿ ಒಂದು ಎಕರೆ ಒಣ ಜಮೀನಿನ ಬೆಲೆ ಇದ್ದಿದ್ದು ಅಂದಾಜು ₹ 1,500ರಿಂದ ₹ 2,000 ಮಾತ್ರ. ಇಂತಹ ಪ್ರದೇಶದಲ್ಲಿ ಅಭಿವೃದ್ಧಿ ಕರ ಎಂದು ರಾಜ್ಯ ಸರ್ಕಾರ ಪ್ರತಿ ಎಕರೆಗೆ ₹ 1,500 ನಿಗದಿ ಮಾಡಿತು. ಇದು ಮಣ್ಣಿನ ಮಕ್ಕಳ ಆಕ್ರೋಶಕ್ಕೆ ಕಾರಣವಾಯಿತು. ರೈತರು ನಡೆಸಿದ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಹಾರಿಸಿದ ಗುಂಡಿಗೆ ನವಲಗುಂದದಲ್ಲಿ ಬಸಪ್ಪ ಲಕ್ಕುಂಡಿ, ನರಗುಂದದಲ್ಲಿ ಈರಪ್ಪ ಕಡ್ಲಿಕೊಪ್ಪ ಎಂಬ ರೈತರು ಬಲಿಯಾದರು. ಈರಪ್ಪ ಕಡ್ಲಿಕೊಪ್ಪ ಈ ಸಿನಿಮಾದ ಕಥಾನಾಯಕ. ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟ ರಕ್ಷಿತ್.

‘ನಾನು ನವಲಗುಂದ ತಾಲ್ಲೂಕಿನವನು. ನಮ್ಮ ಸಿನಿಮಾದ ನಿರ್ಮಾಪಕ ಸಿದ್ದೇಶ್ ವಿರಕ್ತಮಠ ಅವರು. ಹುತಾತ್ಮ ರೈತ ಈರಪ್ಪ ಅವರ ಊರು ಹಾಗೂ ನಿರ್ಮಾಪಕರ ಊರು ಒಂದೇ. ಈರಪ್ಪ ಅವರದು ಒಂದು ಅದ್ಭುತ ಕಥೆ. ನಮ್ಮೂರಿನ ಕಥೆಯನ್ನು ಜನ ಮರೆಯಬಾರದು ಎಂಬ ಉದ್ದೇಶ ಈ ಸಿನಿಮಾದ ಹಿಂದೆ ಇದೆ’ ಎಂದರು ನಿರ್ದೇಶಕ ನಾಗೇಂದ್ರ ಮಾಗಡಿ.

ADVERTISEMENT

‘ಚಂದನವನ’ ಜೊತೆ ಮಾತಿಗೆ ಸಿಕ್ಕಿದ್ದ ಅವರು, ‘ನಾವು ಈ ಸಿನಿಮಾ ಮಾಡಲು ಕಥೆ ಸೃಷ್ಟಿಸುವ ಕೆಲಸಕ್ಕೆ ಹೋಗಿಲ್ಲ. ನಾಡಿಗೇ ಗೊತ್ತಿರುವ ಕಥೆಯೊಂದನ್ನು ಸಿನಿಮಾ ಮಾಧ್ಯಮದ ಮೂಲಕ ಹೇಳುತ್ತಿದ್ದೇವೆ. ಈ ಚಿತ್ರಕ್ಕೆ ಒಂದು ಕಮರ್ಷಿಯಲ್ ಸ್ಪರ್ಶ ಕೂಡ ಇರುತ್ತದೆ. ಎಲ್ಲರೂ ಈ ಸಿನಿಮಾ ನೋಡಬೇಕು ಎಂಬುದು ನಮ್ಮ ಬಯಕೆ’ ಎಂದರು.

‘ಕಮರ್ಷಿಯಲ್ ಆಯಾಮವು ಎಷ್ಟರಮಟ್ಟಿಗೆ ಬೇಕೋ ಅಷ್ಟು ಮಾತ್ರ ಇರಲಿದೆ. ಅನಗತ್ಯವಾಗಿ ಏನನ್ನೂ ಸಿನಿಮಾಕ್ಕೆ ಎಳೆದು ತರುವುದಿಲ್ಲ. ಸಿನಿಮಾ ಚಿತ್ರೀಕರಣವನ್ನು ಆಗಸ್ಟ್‌ನಲ್ಲಿ ಶುರುಮಾಡಿ, ನವೆಂಬರ್‌ ಅಥವಾ ಡಿಸೆಂಬರ್‌ ವೇಳೆಗೆ ತೆರೆಗೆ ತರುವ ಉದ್ದೇಶವಿದೆ’ ಎಂದರು ನಾಗೇಂದ್ರ. ಈ ಸಿನಿಮಾದಲ್ಲಿ ಗುಂಡೂರಾವ್ ಪಾತ್ರ ಕೂಡ ಇರಲಿದೆಯಂತೆ. ಆದರೆ, ಗುಂಡೂರಾವ್ ಸರ್ಕಾರದ ಪತನದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ರಾಮಕೃಷ್ಣ ಹೆಗಡೆ ಅವರ ಪಾತ್ರ ಇರುವುದಿಲ್ಲ.

ಚಿತ್ರದ ನಾಯಕ ಈರಪ್ಪ ಅವರಿಗೆ ಯುವತಿಯೊಬ್ಬಳ ಜೊತೆ ಮದುವೆಯ ನಿಶ್ಚಯವಾಗಿರುತ್ತದೆ. ಆದರೆ ವಿವಾಹಕ್ಕೂ ಮೊದಲೇ ನಾಯಕ ಹುತಾತ್ಮನಾಗುತ್ತಾನೆ. ಯುವತಿಯ ಪಾತ್ರವನ್ನು ನಟಿ ಶುಭಾ ಪೂಂಜಾ ನಿಭಾಯಿಸಲಿದ್ದಾರೆ.

‘ಈ ಕಥೆಯನ್ನು ನಾಡಿನ ಎಲ್ಲರೂ ಕೇಳಬೇಕು. ನನ್ನ ಪಾಲಿಗೆ ಈ ಪಾತ್ರ ಒಂದು ರೀತಿಯಲ್ಲಿ ಬೋನಸ್ ಇದ್ದಂತೆ. ಹಾಗಾಗಿ ಇದನ್ನು ಒಪ್ಪಿಕೊಂಡೆ. ಹಳ್ಳಿಗಾಡಿನ ಮುಗ್ಧ. ಆದರೆ, ಧೈರ್ಯವಂತ ಹೆಣ್ಣುಮಗಳ ಪಾತ್ರ ನನ್ನದು’ ಎಂದರು ಶುಭಾ. ಸಿನಿಮಾಕ್ಕೆ ಪೂರಕವಾಗಿ, ಎಷ್ಟು ಬೇಕೋ ಅಷ್ಟು ಮಾತ್ರ ಪ್ರೀತಿ–ಪ್ರೇಮ ಬಳಸಿಕೊಳ್ಳಲಾಗಿದೆ ಎಂಬುದನ್ನು ಹೇಳಲು ಅವರು ಮರೆಯಲಿಲ್ಲ.

ಹುತಾತ್ಮ ರೈತನ ಕಥೆಯನ್ನು ತೆರೆಗೆ ತರಲು ಆ ಕಾಲದ ಪತ್ರಿಕಾ ವರದಿಗಳನ್ನು ಆಕರಗಳನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ನಾಗೇಂದ್ರ ಮಾಗಡಿ ಸ್ಪಷ್ಟಪಡಿಸಿದರು. ನರಗುಂದ, ನವಲಗುಂದ, ಅಣ್ಣಿಗೇರಿ ಕಡೆ ಚಿತ್ರೀಕರಣ ನಡೆಯಲಿದೆ.

***

ರೈತರ ಹೋರಾಟದ ಕಥೆ

‘ನರಗುಂದ ಬಂಡಾಯದಲ್ಲಿ ಕಂಡುಬಂದಂತಹ ಕಿಚ್ಚು ರಾಜ್ಯದ ಇನ್ನೆಲ್ಲೂ ಕಂಡುಬಂದಂತೆ ಇಲ್ಲ’ ಎಂದರು ನಿರ್ಮಾಪಕ ಸಿದ್ದೇಶ ವಿರಕ್ತಮಠ.

ಸಿನಿಮಾ ಕುರಿತು ವಿವರ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಮಗೆ ರಂಗಭೂಮಿಯ ಹಿನ್ನೆಲೆ ಇದೆ ಎಂದು ತಿಳಿಸಿದರು. ‘ನನಗೆ ಇದು ಸವಾಲಿನ ಚಿತ್ರ. ಈ ಚಿತ್ರಕ್ಕಾಗಿ ನಾನು ಉತ್ತರ ಕರ್ನಾಟಕ ಭಾಗದ ಭಾಷೆ ಕಲಿಯಲು ಆರಂಭಿಸಿದೆ’ ಎಂದರು ನಟ ರಕ್ಷಿತ್.

ಈ ಸಿನಿಮಾದಲ್ಲಿ ಐದು ಹಾಡುಗಳು ಇರಲಿವೆಯಂತೆ. 1980ರಿಂದ 1983ರ ನಡುವಣ ಅವಧಿಯಲ್ಲಿ ಈರಪ್ಪ ಕಡ್ಲಿಕೊಪ್ಪ ಬದುಕಿನಲ್ಲಿ ನಡೆದ ವಿದ್ಯಮಾನಗಳನ್ನು, ರೈತರ ಹೋರಾಟದ ಕಥೆಯನ್ನು ಸಿನಿಮಾ ರೂಪದಲ್ಲಿ ತೋರಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.