ADVERTISEMENT

ಸಿಲ್ವೆಸ್ಟರ್‌ ಬಗ್ಗೆ ಅಕ್ಷಯ್‌ ಮೆಚ್ಚುಗೆ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 19:30 IST
Last Updated 4 ಅಕ್ಟೋಬರ್ 2015, 19:30 IST

ನಟ ಅಕ್ಷಯ್‌ ಕುಮಾರ್‌ಗೆ ಮತ್ತೊಮ್ಮೆ ಹಾಲಿವುಡ್‌ ಸೂಪರ್‌ ಸ್ಟಾರ್‌ ಸಿಲ್ವೆಸ್ಟರ್‌ ಸ್ಟ್ಯಾಲೋನ್‌ ಜೊತೆಗೆ ಕೆಲಸ ಮಾಡುವ ಬಯಕೆಯಾಗಿದೆ.

 2009ರಲ್ಲಿ ‘ಕಂಬಖ್ತ್ ಇಷ್ಕ್’ ಚಿತ್ರದಲ್ಲಿ ಸಿಲ್ವೆಸ್ಟರ್‌ ಜೊತೆಗೆ ಕೆಲಸ ಮಾಡಿದ ಅನಿಭವವನ್ನು ಮತ್ತೊಮ್ಮೆ ನೆನಪಿಸಿಕೊಂಡ ಅಕ್ಷಯ್‌, ಅವರೊಂದಿಗೆ ಕೆಲಸ ಮಾಡುವ ಅವಕಾಶಕ್ಕಾಗಿ ಈಗಲೂ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಈಗ ಪ್ರಭುದೇವ ಅವರ ‘ಸಿಂಗ್‌ ಈಸ್ ಬ್ಲಿಂಗ್‌’ ಚಿತ್ರದಲ್ಲಿ ರಫ್ತಾರ್‌ ಆಗಿ ಅಭಿಮಾನಿಗಳ ಬಾಯಲ್ಲಿ ಇರುವ ಅಕ್ಷಯ್‌, ಈ ಚಿತ್ರದ ಪ್ರಚಾರಕ್ಕೆಂದು ಶನಿವಾರ ತಮ್ಮ ಅಭಿಮಾನಿಗಳೊಂದಿಗೆ ಟ್ವಿಟರ್‌ ಮೂಲಕ ಸಂವಾದ ನಡೆಸಿದ್ದರು. ಆಗ ‘ನೀವು ಮತ್ತೊಮ್ಮೆ ಕೆಲಸ ಮಾಡಬಯಸುವ ನಟ ಅಥವಾ ನಟಿ ಯಾರು?’ ಎನ್ನುವ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್‌, ‘ಸಿಲ್ವೆಸ್ಟರ್‌ ಸ್ಟ್ಯಾಲೋನ್‌ ಜೊತೆಗೆ ಮತ್ತೊಮ್ಮೆ ಕೆಲಸ ಮಾಡಬೇಕೆನ್ನುವ ಬಯಕೆ ಇದೆ’ ಎಂದು ಪ್ರತಿಕ್ರಿಯಿಸಿದರು.

‘ಹಾಗೆಯೇ ‘ಸಿಂಗ್‌ ಈಸ್‌ ಬ್ಲಿಂಗ್‌’ ಚಿತ್ರದಲ್ಲಿ ಬ್ರಿಟಿಷ್‌ ರೂಪದರ್ಶಿ ಹಾಗೂ ನಟಿ ಆಮಿ ಜಾಕ್ಸನ್‌ ಜೊತೆ ನಟಿಸಿದ್ದೂ ಸಹ ಖುಷಿ ಕೊಟ್ಟಿತು’ ಎಂದು ಅಕ್ಷಯ್‌ ಟ್ವೀಟ್‌ ಮಾಡಿದ್ದಾರೆ. ಸಲ್ಮಾನ್‌ ಖಾನ್‌ ಸಹ ಸಿಲ್ವೆಸ್ಟರ್‌ ಸ್ಟ್ಯಾಲೋನ್‌ನ ಅಭಿಮಾನಿ. ಒಮ್ಮೆ ಅವರು ಟ್ವಿಟರ್‌ನಲ್ಲಿ ತಮ್ಮ ಮೆಚ್ಚಿನ ಹೀರೊ ಸ್ಟ್ಯಾಲೋನ್‌ನನ್ನು ಹೆಚ್ಚಿನ ಸಂಖ್ಯೆಯಲ್ಲಿ ಫಾಲೋ ಮಾಡುವಂತೆ ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು.

ಇದಕ್ಕೆ ಉತ್ತರವಾಗಿ ಸ್ಟ್ಯಾಲೋನ್‌, ‘ಸೂಪರ್‌ ಟ್ಯಾಲೆಂಟೆಡ್‌ ಇಂಡಿಯನ್‌ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ಕಾಂಪ್ಲಿಮೆಂಟ್‌ ಟ್ವೀಟ್‌ಗೆ ಧನ್ಯವಾದಗಳು’ ಎಂದು ಮರು ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.