ADVERTISEMENT

ಸೂಪರ್‌ ಸ್ಟಾರ್‌ ಕಬೀರ!

ಆನಂದತೀರ್ಥ ಪ್ಯಾಟಿ
Published 29 ಜುಲೈ 2016, 11:21 IST
Last Updated 29 ಜುಲೈ 2016, 11:21 IST
ಸೂಪರ್‌ ಸ್ಟಾರ್‌ ಕಬೀರ!
ಸೂಪರ್‌ ಸ್ಟಾರ್‌ ಕಬೀರ!   

* ‘ಕಬಡ್ಡಿ’ ಚಿತ್ರ ತೆರೆಕಂಡ ಏಳು ವರ್ಷಗಳ ಬಳಿಕ ನಿಮ್ಮ ನಿರ್ದೇಶನದ ಎರಡನೇ ಸಿನಿಮಾ ‘ಸಂತೆಯಲ್ಲಿ ನಿಂತ ಕಬೀರ’ ತೆರೆ ಕಾಣುತ್ತಿದೆ. ‘ಕಬಡ್ಡಿ’ ಮೆಚ್ಚುಗೆ ಗಳಿಸಿದ್ದ ಮೇಲೂ ಇಷ್ಟೊಂದು ಸಮಯ ಬೇಕಿತ್ತಾ?
ಆ ಚಿತ್ರದ ನಂತರ ‘ಸಾರಂಗ’ ಎನ್ನುವ ಚಿತ್ರದ ಸಿದ್ಧತೆ ನಡೆಸಿದ್ದೆ. ಶಿವರಾಜಕುಮಾರ್ ಅವರ ಜತೆಗೆ ಸಿನಿಮಾ ಮಾಡುವ ಪ್ರಾಮಾಣಿಕವಾದ ಆಸೆ ನನ್ನಲ್ಲಿತ್ತು. ಆ ಸಿನಿಮಾ ಮಾಡಿದ ಬಳಿಕವೇ ಬೇರೆ ನಾಯಕ ನಟರೊಂದಿಗೆ ಚಿತ್ರ ಮಾಡಬೇಕೆಂಬ ಹಟ ಅದು! ಒಂದರ್ಥದಲ್ಲಿ ಅದು ನನಗೆ ನಾನೇ ಹಾಕಿಕೊಂಡ ಷರತ್ತು. ಹೀಗಾಗಿ ಆರೇಳು ವರ್ಷದ ನಂತರ ಈಗ ಮತ್ತೆ ಕಾಣಿಸಿಕೊಳ್ಳುವಂತಾಗಿದೆ.

* ಕಮರ್ಷಿಯಲ್ ಚಿತ್ರಗಳ ಅಬ್ಬರದಲ್ಲಿ ಐತಿಹಾಸಿಕ ಕಥಾವಸ್ತುವಿನ ಸಿನಿಮಾ ಮಾಡುವುದು ಒಂದು ರೀತಿ ಸಾಹಸವಲ್ಲವೇ?
ನನ್ನ ಪ್ರಕಾರ ಯಾವುದೂ ಕಷ್ಟವಲ್ಲ. ಯಾಕೆಂದರೆ, ‘ರಂಜಿಸದಿದ್ದರೆ ಯಾವ ಸಾಹಿತ್ಯಕ್ಕೂ ಉಳಿಗಾಲವಿಲ್ಲ’ ಎಂದು ಚಿಂತಕ ಡಿ.ಆರ್. ನಾಗರಾಜ್ ಹೇಳಿದ್ದನ್ನು ನಾನು ಪದೇ ಪದೇ ನೆನಪಿಸಿಕೊಳ್ಳುತ್ತೇನೆ. ಸಿನಿಮಾದಲ್ಲೂ ರಂಜನೆ ಮುಖ್ಯ. ಒಂದು ಸಣ್ಣ ಕಲಾತ್ಮಕ ಸಿನಿಮಾ ಮಾಡುವುದಾಗಿದ್ದರೆ ನಾನು ಇಷ್ಟೆಲ್ಲ ಕಷ್ಟಪಡುವ ಅಗತ್ಯವೇ ಇರಲಿಲ್ಲ.

ಸಣ್ಣ ಬಜೆಟ್‌ನಲ್ಲಿ, ನನಗಿರುವ ರಂಗಭೂಮಿ ಹಾಗೂ ಸಾಹಿತ್ಯದ ನಂಟಿನಲ್ಲಿ ಒಂದು ಸಿನಿಮಾ ಮಾಡಿಬಿಡಬಹುದಿತ್ತು. ಈಗ ಮುಖ್ಯವಾಹಿನಿಯಲ್ಲಿ ಬರುತ್ತಿರುವ ಸಿನಿಮಾಗಳ ಮಾದರಿಯನ್ನು ಅನುಕರಿಸಿ, ನಾಲ್ಕಾರು ಹಾಡು, ಎರಡು ಫೈಟ್‌, ಒಂದಷ್ಟು ಕಾಮಿಡಿ ಮತ್ತೊಂದಷ್ಟು ಸಿದ್ಧಸೂತ್ರಗಳನ್ನು ಜೋಡಿಸಿ ಮಸಾಲೆ ಸಿನಿಮಾ ಮಾಡುವುದು ಕಷ್ಟವೇ? ಆದರೆ ಸಿನಿಮಾ ಎಂದರೆ, ನಾನು ಇಲ್ಲವಾದಾಗಲೂ ನನ್ನನ್ನು ನೆನಪಿಸುವ ಮಾಧ್ಯಮ ಎಂದೇ ನಂಬುತ್ತೇನೆ.

* ಸಾಹಿತ್ಯ ಕೃತಿಯನ್ನು ಸಿನಿಮಾರೂಪಕ್ಕೆ ಅಳವಡಿಸುವಾಗ ಮುನ್ನೆಚ್ಚರಿಕೆ ಏನಾದರೂ ಬೇಕೆನಿಸಿತೇ?
ಏನಿಲ್ಲದೇ ಹೋದರೂ ಧೈರ್ಯವಂತೂ ಬೇಕು. ಈ ಹಿಂದೆ ನಡೆಯುತ್ತಿದ್ದ ಹಡಗಿನ ಪಯಣದಂತೆ ಇದು! ಹೊರಡುವುದು ಖಚಿತ; ವಾಪಸ್ ಬರುತ್ತೇವೆಯೋ ಇಲ್ಲವೋ ಗ್ಯಾರಂಟಿ ಇಲ್ಲ. ಇಂದಿನ ದಿನಮಾನದಲ್ಲಿ ಬೇರೆಯ ತೆರನಾದ ಪ್ರಯತ್ನ ಮಾಡುತ್ತೇವೆ ಎಂಬುದಷ್ಟೇ ಖಚಿತ.

ಎಲ್ಲಿಗೆ ತಲುಪುತ್ತೇವೋ ಗೊತ್ತಿಲ್ಲ. ಆದರೆ ನಮ್ಮ ಗುರಿಯನ್ನು ಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಆ ಪಯಣವೇ ಒಂದು ಸುಂದರ ಅನುಭವ ಕೊಡುತ್ತದೆ. ಮುನ್ನೆಚ್ಚರಿಕೆ ಎಂಬುದನ್ನು ನಾನು ಈ ಅರ್ಥದಲ್ಲಿ ಪರಿಗಣಿಸುತ್ತೇನೆ.

* ಶಿವರಾಜಕುಮಾರ್ ಅವರನ್ನು ಕಬೀರನ ಪಾತ್ರಕ್ಕೆ ಒಪ್ಪಿಸಿದ್ದು ಸುಲಭವಾಗಿತ್ತೇ?
ಈ ಮೊದಲು ನಾನು ಯೋಜಿಸಿದ್ದ ‘ಸಾರಂಗ’ ಸಿನಿಮಾಕ್ಕೂ ಅವರೇ ಹೀರೊ ಆಗಬೇಕಿತ್ತು. ಆದರೆ ಅದಕ್ಕೆ ಮೊದಲು ಒಂದು ಸಾಹಿತ್ಯ ಕೃತಿಯನ್ನು ಸಿನಿಮಾ ಮಾಡು ಎಂದು ಸ್ನೇಹಿತರು ಸಲಹೆ ಮಾಡಿದರು. ಆ ಬಗ್ಗೆ ಶಿವಣ್ಣನ ಜತೆ ಮಾತಾಡುತ್ತಿರುವಾಗ ಕಬೀರನ ಕಥೆ ಪ್ರಸ್ತಾಪವಾಯಿತು. ಅದು ಅವರಿಗೆ ತಕ್ಷಣವೇ ಒಪ್ಪಿಗೆಯಾಯಿತು.

ಹೀಗಾಗಿ ‘ಕಬೀರ’ ಮುನ್ನೆಲೆಗೆ ಬಂದ. ಅದಕ್ಕೂ ಮೊದಲಿಗೆ ನಡೆದ ತಮಾಷೆ ಘಟನೆ ಏನೆಂದರೆ, ಭೂಗತ ಲೋಕದ ಕಥೆಯೊಂದನ್ನು ನಾನು ಅವರಿಗೆ ಹೇಳಿದ್ದೆ. ಶಾರ್ಪ್‌ಶೂಟರ್‌ ಹಾಗೂ ಬಾರ್‌ ಗರ್ಲ್‌ ನಡುವಿನ ಕಥೆ. ಅದನ್ನು ಕೇಳಿ ಶಿವಣ್ಣ ನನ್ನನ್ನು ಚೆನ್ನಾಗಿ ಬೈದುಬಿಟ್ಟರು! ‘ಒಳ್ಳೆಯ ಸಿನಿಮಾ ಮಾಡೋದಿದ್ದರೆ ಒಳ್ಳೆಯ ಕಥೆಯನ್ನೇ ಆರಿಸಿಕೋ’ ಎಂದು ತಾಕೀತು ಮಾಡಿದ್ದರು.

* ಪ್ರತಿಭಾವಂತ ತಂತ್ರಜ್ಞರ ತಂಡವೇ ನಿಮ್ಮ ಚಿತ್ರದ ತಾಕತ್ತು ಎಂದು ಪದೇ ಪದೇ ಹೇಳುತ್ತಿರುತ್ತೀರಿ..?
ಹೌದು. ನನ್ನ ತಂಡ ಘೋಷಣೆಯಾದಾಗ ಚಿತ್ರರಂಗದ ಎಷ್ಟೋ ಮಂದಿ ‘ವಾಹ್! ಇದೇನ್ರೀ, ಇಷ್ಟು ಸ್ಟ್ರಾಂಗ್ ಟೀಮ್’ ಎಂದು ಉದ್ಗರಿಸಿದ್ದರು. ಒಂದೆಡೆ ಸಾಹಿತ್ಯದ ಜವಾರಿ ಪ್ರತಿಭೆ ಗೋಪಾಲ ವಾಜಪೇಯಿ ಹಾಗೂ ಸ್ವರ ಮಾಂತ್ರಿಕ ಇಸ್ಮಾಯಿಲ್ ದರ್ಬಾರ್ ಜತೆಗೆ ಶಿವರಾಜಕುಮಾರ್ ಮನೋಜ್ಞ ಅಭಿನಯ.

ADVERTISEMENT

ಇನ್ನೊಂದೆಡೆ ಛಾಯಾಗ್ರಾಹಕ ನವೀನ್ ಅವರ ಕೌಶಲ. ಎಷ್ಟೋ ಅಡೆತಡೆಗಳ ಮಧ್ಯೆಯೂ ಕಲಾ ನಿರ್ದೇಶಕ ಪ್ರಭು ಅಳವಡಿಸಿದ್ದ ವರ್ಣರಂಜಿತ ಸೆಟ್‌ಗಳ ವೈಭವವನ್ನು ತೆರೆಯ ಮೇಲೆ ನೋಡಿಯೇ ಅನುಭವಿಸಬೇಕು. ಅನಂತನಾಗ್,  ಶರತ್ ಕುಮಾರ್ ಸೇರಿದಂತೆ ಇತರ ಹಿರಿಯ ಕಲಾವಿದರ ಬಗ್ಗೆ ಹೇಳುವುದೇನಿದೆ?

* ಸಿದ್ಧಸೂತ್ರದ ಸಿನಿಮಾಗಳ ಮಧ್ಯೆ ಬೇರೆಯದೇ ಲೋಕವನ್ನು ತೆರೆದಿಡುವ ‘ಕಬೀರ’ನ ಕುರಿತು ನಿಮ್ಮ ನಿರೀಕ್ಷೆ ಏನು?
ಮೊಟ್ಟಮೊದಲಿಗೆ ‘ಕಬೀರ’ನೇ ಸೂಪರ್‌ಸ್ಟಾರ್. 600 ವರ್ಷಗಳಿಂದಲೂ ಜನಮಾನಸದಲ್ಲಿ ಅಳಿಯದೇ ಉಳಿದಿದ್ದಾನೆಂದರೆ, ಆತನ ವರ್ಚಸ್ಸು ಎಂಥದಿದ್ದೀತು! ಆತನ ಕುರಿತಾದ ಸಿನಿಮಾವನ್ನು ಶ್ರದ್ಧೆಯಿಂದ ಮಾಡಿದ್ದೇನೆ. ಯಾರದೋ ಒತ್ತಾಯಕ್ಕೆ ಕಟ್ಟುಬಿದ್ದು ಆಕಸ್ಮಿಕವಾಗಿ ಶುರುವಾದ ಅಥವಾ ಗಿಮಿಕ್‌ನಿಂದ ಆರಂಭಿಸಿ ಅದರಲ್ಲೇ ಮುಂದುವರಿಯುತ್ತಾ ಮುಗಿಸಿದ ಸಿನಿಮಾ ಅಲ್ಲ ಇದು.

ಒಂದು ವರ್ಷದ ಕಾಲ ದರ್ಬಾರ್ ಸಂಗೀತದ ಮಟ್ಟು ಹಾಕಿದ್ದಾರೆ. ಆಮೇಲೆ ವಾಜಪೇಯಿ ಅವರು ಬರೆದ ಹಾಡುಗಳಿಗೆ ಟ್ಯೂನ್ ಹಾಕುವೆ ಎಂದು ಹೇಳಿದಾಗ ಮತ್ತೊಂದಷ್ಟು ಬದಲಾವಣೆ ಆಯಿತು. ಸಂಭಾಷಣೆಗೆ ಆರು ತಿಂಗಳು ಬೇಕಾಯಿತು. ಇದೆಲ್ಲಕ್ಕಿಂತ ನಿರ್ಮಾಪಕ ಕುಮಾರಸ್ವಾಮಿ ಅವರಿಗೆ ಕಬೀರನ ಮೇಲೆ ಆಸಕ್ತಿ ಹೆಚ್ಚುತ್ತ ಹೋಯಿತು. ಅವರು ಹುಡುಕಾಡಿ ತರುತ್ತಿದ್ದ ಕಬೀರನ ಕಥೆಗಳನ್ನು ಅಲ್ಲಲ್ಲಿ ಜೋಡಿಸುತ್ತ ಹೋದೆವು. ಇದೆಲ್ಲ ಒಂದು ಸಿನಿಮಾದ ಮೌಲ್ಯ ಹೆಚ್ಚಲು ನೆರವಾಯಿತು. ಈಗ ‘ಕಬೀರ’ನನ್ನು ಪ್ರೇಕ್ಷಕರ ಎದುರಿಗೆ ತಂದಿದ್ದೇವೆ. ಮುಂದಿನದೆಲ್ಲ ಅವರಿಗೆ ಬಿಟ್ಟಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.