ADVERTISEMENT

ಹಳೆ ಸೆಲ್ಲು... ಹೊಸ ಖೈದಿ...

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST

‘ತಾಳೆ ಹೂವ ಪೊದೆಯಿಂದ ಜಾರಿ ಜಾರಿ ಹೊರಬಂದ...’ ಇದು ದಿವಂಗತ ವಿಷ್ಣುವರ್ಧನ್ ನಟನೆಯ ‘ಖೈದಿ’ ಚಿತ್ರದ ಹಾಡು. ಈ ಪ್ರಸಿದ್ಧ ಹಾಡು ಮತ್ತೆ ಪ್ರೇಕ್ಷಕ ಗುನುಗಲು ಸಿಗಲಿಗೆ. ಅದು ಹೊಸ ‘ಖೈದಿ’ಯಲ್ಲಿ!

ಧನುಶ್ ನಟನೆಯ ‘ಖೈದಿ’ ಚಿತ್ರದ ಆಡಿಯೊ ಬಿಡುಗಡೆಗೊಂಡಿದ್ದು ‘ತಾಳೆ ಹೂವ ಪೊದೆಯಿಂದ...’ ಹಾಡನ್ನು ಕಾನೂನಿನ ರೀತ್ಯ ಪಡೆದು, ಹಳೆಯ ಹಾಡಿಗೆ ಹೊಸ ಟ್ಯೂನ್ ಬಳಸಿಕೊಳ್ಳಲಾಗಿದೆ. ‘ಆಮದು ನಿರ್ದೇಶಕರಾದರೂ ಚೆನ್ನಾಗಿ ಸಂಗೀತವನ್ನು ಸಂಯೋಜಿಸಿದ್ದಾರೆ. ಇಲ್ಲಿನ ಹಾಡುಗಳು ಗುನುಗುವ ಗುಣ ಪಡೆದಿವೆ’ ಎಂದು ‘ಲಹರಿ’ ವೇಲು ಸಂಗೀತವನ್ನು ಮೆಚ್ಚಿಕೊಂಡರು. ಬಾಲಿವುಡ್‌ನ ಜಸ್ಟೀನ್ ಮತ್ತು ಕನ್ನಡಿಗ ಉದಯ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಈ ಜೋಡಿಯನ್ನು ಎರಡು ನದಿಗಳ ಸಂಗಮ ಎಂದು ಬಣ್ಣಿಸಿದರು ವೇಲು. ಒಟ್ಟು ಆರು ಹಾಡುಗಳು ಚಿತ್ರದಲ್ಲಿ ಇವೆಯಂತೆ.

ಚಿತ್ರಕ್ಕೆ ಆ್ಯಕ್ಷನ್–ಕಟ್‌ ಹೇಳಿ ಬಂಡವಾಳ ತೊಡಗಿಸಿ ರುವ ಗುರುದತ್‌ ಅವರಿಗೆ ತಾವು ಅಂದುಕೊಂಡತೆಯೇ ಸಿನಿಮಾ ಬಂದಿದೆ ಎನ್ನುವ ವಿಶ್ವಾಸ. ‘ಒಂದು ಹಾಡು ಮತ್ತು ಒಂದು ಸಾಹಸ ದೃಶ್ಯದ ಚಿತ್ರೀಕರಣ ಮಾತ್ರ ಬಾಕಿ ಇದೆ. ಡಿಸೆಂಬರ್‌ನಲ್ಲಿ ಸಿನಿಮಾವನ್ನು ತೆರೆ ಕಾಣಿಸುವ ಆಲೋಚನೆ ಇದೆ’ ಎಂದರು ನಿರ್ಮಾಪಕರು.

‘ಎ’, ‘ಎ.ಕೆ 47’ ಚಿತ್ರಗಳ ಮೂಲಕ ಕನ್ನಡಿಗರ ಮನವನ್ನು ತಟ್ಟಿದ್ದ ಚಾಂದಿನಿ ಬಹುದಿನಗಳ ನಂತರ ‘ಖೈದಿ’ಯಲ್ಲಿ ನಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಿಂಚಿ ಮಿನುಗಿದ ಅವರು ‘ಕನ್ನಡವನ್ನು ಬಿಟ್ಟು ನಾನು ಎಲ್ಲಿಗೂ ಹೋಗಿಲ್ಲ. ತುಂಬಾ ದಿನದ ನಂತರ ಅವಕಾಶ ಬಂದಿತು, ನಟಿಸಿದೆ’ ಎಂದು ನಕ್ಕರು.  ನಾಯಕ ಧನುಶ್ ಖುಷಿಯಲ್ಲಿ ಓಡಾಡಿದರೂ ಹೆಚ್ಚು ಮಾತನಾಡಲಿಲ್ಲ.

ಹಿರಿಯ ನಿರ್ದೇಶಕ ಕೆ.ಎಸ್‌.ಎಲ್. ಸ್ವಾಮಿ, ‘ಕನ್ನಡಿಗರು ಒಳ್ಳೆಯವರು. ಹೊರಗಿನವರನ್ನು ಆಮದು ಮಾಡಿಕೊಂಡು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿಸುತ್ತಾರೆ. ಹಾಡುಗಳು ಚೆನ್ನಾಗಿ ಬಂದಿವೆ’ ಎಂದು ಮಾರ್ಮಿಕವಾಗಿ ಹೇಳಿದರು.  ನಟರಾದ ಕರಿಸುಬ್ಬು, ಮಾಸ್ಟರ್ ಆನಂದ್, ನಿರ್ಮಾಪರಾದ ಚಿನ್ನೇಗೌಡ, ಬಸಂತಕುಮಾರ್ ಪಾಟೀಲ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.