ADVERTISEMENT

ಹಾಡಾಗಿ ಹೊಮ್ಮಿದ ಒಳಗಿನ ಬೇಗುದಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 5:56 IST
Last Updated 14 ಜುಲೈ 2017, 5:56 IST
ವಿಕ್ರಮ್‌ ಹತ್ವಾರ್‌
ವಿಕ್ರಮ್‌ ಹತ್ವಾರ್‌   

ಹೇ...
ಹೇ ರಾಮ ಮಹಿಮ
ಧಗಧಗಿಸಿದೆ ಧರ್ಮ
ನೆತ್ತರಿನೋಕುಳಿಗೆ
ನಲುಗುತ್ತಿದೆ ಪ್ರೇಮ

ಎಲ್ಲಿಂದೆಲ್ಲಿಗೆ ಬದುಕಿನ ಪಯಣ
ಸಿಗಬಹುದೇ ನಮ್ಮೊಲವಿನ ತಾಣ?
ಏನೇ ಇರಲಿ ನೋವಿನ ಬಾಣ
ಕೊರಗಿಲ್ಲದೆ ಬರಲಿ ಸುಖಮರಣ

ಅಲೆದಲೆದು ದಣಿವಾಗಿ
ಭರವಸೆಯೇ ಬರಿದಾಗಿ
ಬೇರೆಲ್ಲ ಸಡಿಲಾಯಿತು
ಬೇ..ರೊಂದು ದಡ ಕಂಡಿತು

ADVERTISEMENT

ನೆಲೆಯಿಲ್ಲದ ಜನ್ಮ
ಹಂಬಲಿಸಿದೆ ಪ್ರೇಮ...

ಸುಳಿನೀರಿನ ಮಾತೆಲ್ಲ ಹಿತವಾಗಿದೆ
ಇಳಿಜಾರುವ ಕನಸೆಲ್ಲ ಸಾ..ಕಾಗಿದೆ
ಬೇಡುವುದು ಇನ್ನಾರಿಗೇ?
ಕಂಬನಿಗೆ ಕೊನೆ ಎಂದಿಗೇ?

ಸುಡುಸುಡು ಬಾನಿನ ಶಿಲುಬೆ
ಬೆನ್ನೇರಿದೆ ಸಿಗ್ಗಿಲ್ಲದೆ
ಬಿಡುಗಡೆ ನೀಡೋ ಪ್ರಭುವೇ
ಸಲ್ಲದ ಹುಸಿ ಷರತ್ತಿಲ್ಲದೇ...
ಪ್ರೀತಿಸು... ಯೇಸುವೇ...!

ಹುನ್ನಾರದ ಹುಳಿಗೆ
ಕೊಳೆಯುತ್ತಿದೆ ಧರ್ಮ

ಕರುಳಿಲ್ಲ ತಿರುಳಿಲ್ಲ ಈ ರೋಷಕೆ
ಬಯಲಿಲ್ಲ ನೆರಳಿಲ್ಲ ಆವೇಶಕೆ

ನೀರೊಂದೇ ನೆಲವೊಂದೇ
ಸಲಹುವ ತಿಳಿ ಬೆಳಕೊಂದೇ

ಬಿರುಕಿಲ್ಲದಾಕಾಶಕೆ
ಒಲವೊಂದೇ ಕಿರುಕಾಣಿಕೆ
ಕೈಮೀರಿದಾ ಆಟಕೆ
ಹೋರಾಟವೇ ದೀಪಿಕೆ..

ಹೇ...
ಹೇ ರಾಮ ಮಹಿಮಾ
ಸಹನೆಯೆ ಸದ್ಧರ್ಮ

****
ಹಾಡು ಹುಟ್ಟಿದ ಹೊತ್ತು
ಇಲ್ಲಿನ ಸರಳವಾದ ಸತ್ಯ ಎಲ್ಲರಿಗೂ ತಿಳಿದಿರುವುದೇ. ಎಲ್ಲ ಧರ್ಮ ಮತಗಳಿಗಿಂತಲೂ ಮುಖ್ಯವಾದುದು ಮನುಷ್ಯ ಬದುಕಿನ ನೆಮ್ಮದಿ. ಇಂಥ ನೆಮ್ಮದಿಯನ್ನು ಹಂಬಲಿಸುವಂಥ ಕತೆಯನ್ನು ನಿರ್ದೇಶಕ ಲೋಕೇಶ್ ಹೇಳಿದರು. ಜೊತೆಗೆ ಸ್ಕ್ರಿಪ್ಟ್ ರೀಡಿಂಗ್ ಕೊಟ್ಟು, ಇಡಿಯ ಸಿನಿಮಾದ ಆಶಯಕ್ಕೆ ಹೊಂದುವಂಥ ಹಾಡು ಬರೆದುಕೊಡಿ ಅಂದರು. ಅದನ್ನು ಕ್ಲೈಮಾಕ್ಸಿಗೆ ಬಳಸಿಕೊಳ್ಳಬೇಕು ಅಂದುಕೊಂಡಿದ್ದಾರೆ.

ಅದುವರೆಗೆ ನಾನು ಯಾವ ಸಿನಿಮಾಗೂ ಹಾಡು ಬರೆದಿರಲಿಲ್ಲ. ವಿವೇಕ್ ಶಾನಭಾಗರ ಸಣ್ಣಕತೆ ‘ನಿರ್ವಾಣ’ ಆಧರಿಸಿದ ಕಿರುಚಿತ್ರಕ್ಕೆ (ಮೌನೇಶ್ ಬಡಿಗೇರ್‌ ನಿರ್ದೇಶನ) ಹಾಡು ಬರೆದಿದ್ದೆ. ಲೋಕೇಶ್ ಅವರ ಸ್ಕ್ರಿಪ್ಟ್, ಅವರು ಕೊಟ್ಟ ರೀಡಿಂಗ್, ಅದರ ಆಶಯ, ಹಾಡಿನ ಬೇಡಿಕೆ ಎಲ್ಲವೂ ಸ್ಫುಟವಾಗಿತ್ತು. ಹಾಗಾಗಿ ಹಾಡು ಬರೆಯುವಾಗ ನನಗೆಲ್ಲೂ ಬಹಳ ತೊಡಕು ಅಂತನಿಸಲಿಲ್ಲ. ಸಿನಿಮಾದ ಆಶಯದ ಜೊತೆಗೆ ನನ್ನೊಳಗಿನ ಬೇಗುದಿಯೂ ಬೆರೆತು ಈ ಹಾಡು ಹೊಮ್ಮಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.