ADVERTISEMENT

ಹಾರರ್ ಪರ್ವದ ‘ಕರ್ವ’ ಅಧ್ಯಾಯ

ಗಣೇಶ ವೈದ್ಯ
Published 26 ಮೇ 2016, 19:41 IST
Last Updated 26 ಮೇ 2016, 19:41 IST
ನಿರ್ದೇಶಕ ನವನೀತ್‌
ನಿರ್ದೇಶಕ ನವನೀತ್‌   

ಸದ್ಯ ಚಾಲ್ತಿಯಲ್ಲಿರುವ ಹಾರರ್ ಟ್ರೆಂಡ್‌ಗೆ ನವನೀತ್ ಕುಮಾರ್ ನಿರ್ದೇಶನದ ‘ಕರ್ವ’ ಮತ್ತೊಂದು ಸೇರ್ಪಡೆ. ಆದರೆ ಸಿನಿಮಾ ಪೂರ್ಣ ದೆವ್ವದ ಕಾಟ ಇರುವುದಿಲ್ಲ. ಸಿನಿಮಾದಲ್ಲಿ ಎರಡು ಭಿನ್ನ ಕಥೆಯ ಎಳೆಯನ್ನು ಇಟ್ಟುಕೊಂಡಿದ್ದಾರೆ. ಒಂದು ಸಸ್ಪೆನ್ಸ್, ಇನ್ನೊಂದು ಹಾರರ್. ಒಬ್ಬ ಶ್ರೀಮಂತ ವ್ಯಕ್ತಿಯ ಮಗಳು ಅಪಹರಣವಾಗುತ್ತಾಳೆ.

ಈ ಕಥೆ ಒಂದು ಕಡೆ ಸಾಗಿದರೆ, ಇನ್ನೊಂದೆಡೆ ದೆವ್ವದ ಆಟ ನಡೆಯುತ್ತದೆ. ವಾಹಿನಿಯಯೊಂದರ ‘ಹೀಗೂ ಉಂಟೆ’ ಕಾರ್ಯಕ್ರಮದ ತಂಡವು ಕೌತುಕದ ಕಥನವೊಂದನ್ನು ಬೆನ್ನು ಹತ್ತುವಲ್ಲಿ ಈ ಎಳೆ ಆರಂಭವಾಗುತ್ತದೆ. ರಹಸ್ಯ ಭೇದಿಸಲು ತಂಡ ಹೊರಟಾಗ ಅದಕ್ಕೆ ಎದುರಾಗುವ ಘಟನೆಗಳ ಮೂಲಕ ಪ್ರೇಕ್ಷಕನನ್ನು ಹೆದರಿಸುವ ಯೋಜನೆ ನಿರ್ದೇಶಕರದ್ದು.

ಈ ಎರಡೂ ಎಳೆಗಳು ಬೇರೆ ಬೇರೆಯಾಗಿ ನಿರೂಪಣೆ ಆಗುತ್ತಾ ಹೋದರೂ ಅವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ಕೊನೆಯಲ್ಲಿ ಒಂದೇ ಕಡೆ ಸೇರುವುದು ಕ್ಲೈಮ್ಯಾಕ್ಸ್. ಹಾಗಾಗಿ ಇದು ಹತ್ತರಲ್ಲಿ ಹನ್ನೊಂದು ಎಂದು ಕಡೆಗಣಿಸುವಂತಿಲ್ಲ ಎಂಬುದು ನಿರ್ದೇಶಕರ ವಿಶ್ವಾಸ.

ನವನೀತ್ ಮಾಡಿದ್ದ ‘ನೆವರ್ ಎಂಡಿಂಗ್ ಸ್ಟೋರಿ’ ಎಂಬ ಕಿರುಚಿತ್ರ ನೋಡಿದ್ದ ‘6–5=2’ ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ ಅವರು ನವನೀತ್ ಅವರನ್ನು ಕರೆದು, ‘ಕಥೆ ಇದ್ದರೆ ಹೇಳಿ’ ಎಂದಿದ್ದಾರೆ. ಅದಕ್ಕೆ ಒಂದು ಸಸ್ಪೆನ್ಸ್ ಹಾರರ್ ಕಥೆ ಇದೆ ಎಂಬ ನವನೀತ್ ಪ್ರತಿಕ್ರಿಯೆಗೆ ಚೈತನ್ಯ ನಿರಾಸೆಗೊಂಡಿದ್ದರು. ತಮ್ಮ ಎರಡನೇ ಚಿತ್ರವೂ ಹಾರರ್ ಆಗಬಾರದು. ತನ್ನ ಬ್ಯಾನರ್ ಹಾರರ್ ಚಿತ್ರಕ್ಕೆ ಬ್ರ್ಯಾಂಡ್ ಆಗಬಾರದು.

ಆ್ಯಕ್ಷನ್ ಸಿನಿಮಾ ಮಾಡಬೇಕು ಎಂಬುದು ಕೃಷ್ಣ ಚೈತನ್ಯ ಅವರ ಯೋಚನಾ ಲಹರಿಯಾಗಿತ್ತು. ಆದರೆ ‘ಕರ್ವ’ ಕಥೆಯನ್ನು ಕೇಳಿದ ನಂತರ ನಿರ್ಮಾಪಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಂದರೆ ಅವರು ನಂಬಿಕೆ ಇಟ್ಟಿರುವುದು ಕಥೆಯ ಮೇಲೆ.

ನವನೀತ್‌ಗೆ ಇದು ನಿರ್ದೇಶನದ ಮೊದಲ ಅನುಭವವಾದರೂ ಸಿನಿಮಾ ಉದ್ಯಮದಲ್ಲಿ ಹನ್ನೆರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಅವರು ಎಸ್. ನಾರಾಯಣ್, ರಾಘವ ಲೋಕಿ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಉದ್ಯಮದಲ್ಲಿ ಒಡನಾಟ ಬೆಳೆಸಿಕೊಂಡದ್ದ ಕಾರಣ ಅವರಿಗೆ ಕಲಾವಿದರು ಮತ್ತು ತಂತ್ರಜ್ಞರನ್ನು ಒಗ್ಗೂಡಿಸುವುದು ಕಷ್ಟ ಎನ್ನಿಸಿಲ್ಲ. ಕಲಾವಿದರನ್ನು ಕರೆಸಿ ರಿಹರ್ಸಲ್ ಕೂಡ ಮಾಡಿಸಿದ್ದಾರೆ.

ನವನೀತ್‌ರ ಸಿನಿಮಾದಲ್ಲಿ ಹಾಡುಗಳೇ ಇಲ್ಲ. ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕಥೆ ಸಿದ್ಧಪಡಿಸಲು ಒಂದೂವರೆ ವರ್ಷ ತಲೆ ಕೆಡಿಸಿಕೊಂಡ ನವನೀತ್, ಚಿತ್ರೀಕರಣ ಮತ್ತು ನಂತರದ ಕೆಲಸಕ್ಕೆ ಎಂಟು ತಿಂಗಳು ವ್ಯಯಿಸಿದ್ದಾರೆ.

ಚಿತ್ರದಲ್ಲಿ ಕಾಣುವ ಕ್ಯಾಸಿನೊ ಹಾಗೂ ಬೀಚ್ ದೃಶ್ಯಗಳನ್ನು ಶ್ರೀಲಂಕಾದಲ್ಲಿ ಚಿತ್ರೀಕರಿಸಿರುವ ಚಿತ್ರತಂಡ, ಉಳಿದಂತೆ ಊಟಿ, ಬೆಂಗಳೂರಿನಲ್ಲೂ ಶೂಟಿಂಗ್ ಮಾಡಿದೆ.ಮೊದಲ ದೃಶ್ಯದಿಂದ ಹಿಡಿದು ಕೊನೆಯ ದೃಶ್ಯದವರೆಗೆ ಪ್ರತಿಯೊಂದಕ್ಕೂ ಪರಸ್ಪರ ಸಂಬಂಧವಿದೆ.

ಪ್ರೇಕ್ಷಕರು ಒಂದು ದೃಶ್ಯವನ್ನು ತಪ್ಪಿಸಿಕೊಂಡರೂ ಕೊಂಡಿ ತಪ್ಪಿದಂತಾಗುತ್ತದೆ. ಒಂದು ನಿಮಿಷವೂ ರಿಲ್ಯಾಕ್ಸ್ ಆಗಲು ಅವಕಾಶ ಇರುವುದಿಲ್ಲ. ಸಿನಿಮಾ ಆರಂಭಕ್ಕೂ ಮುನ್ನವೇ ಪ್ರೇಕ್ಷಕರು ತಮ್ಮ ಸೀಟುಗಳಲ್ಲಿ ಭದ್ರವಾಗಿ ಕೂತುಕೊಳ್ಳಬೇಕು ಎಂಬ ವಿಶೇಷ ಸೂಚನೆಯನ್ನೂ ನೀಡುತ್ತಾರೆ ನವನೀತ್.    

ಸಿನಿಮಾ ಫ್ಯಾಶನ್
‘ತುಂಬಾ ಜನರಿಗೆ ಸಿನಿಮಾ ಹೊಟ್ಟೆಪಾಡೂ ಆಗಿರುತ್ತದೆ. ಆದರೆ ಹೊಟ್ಟೆಪಾಡು ಎಂದು ಸತತವಾಗಿ ಸಹಾಯಕನಾಗಿಯೇ ಸಿನಿಮಾ ಮಾಡುತ್ತಾ ಹೋದರೆ ಹಾಗೇ ಉಳಿದುಬಿಡುತ್ತೇವೆ. ಆಗ ನಮ್ಮ ಕನಸಿನ ಕೆಲಸ, ಅಂದರೆ ಸ್ವಂತ ನಿರ್ದೇಶನ ಮಾಡುವ ಆಸೆ ಈಡೇರುವುದಿಲ್ಲ. ಆದರೆ ನನಗೆ ಸಿನಿಮಾ ಹೊಟ್ಟೆಪಾಡಲ್ಲ.

ಇದೊಂದು ಫ್ಯಾಶನ್. ಹೊಟ್ಟೆಪಾಡಿಗೆ ನನಗೆ ಬೇರೆಯದೇ ವ್ಯವಹಾರವಿದೆ. ಹಾಗಾಗಿ ನಾನು ಸಹಾಯಕನಾಗುವುದರಿಂದ ಎರಡು ವರ್ಷಗಳ ಬಿಡುವು ತೆಗೆದುಕೊಂಡು ನಿರಾಳವಾಗಿ ಸ್ವಂತ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲು ಸಾಧ್ಯವಾಯಿತು’ ಎನ್ನುತ್ತಾರೆ ನವನೀತ್.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.