ADVERTISEMENT

ಹುಲಿ ಅಡ್ಡಾದಲ್ಲಿ ಗೌರವ–ನಮನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2015, 19:38 IST
Last Updated 19 ನವೆಂಬರ್ 2015, 19:38 IST

ಅದೊಂದು ವರ್ಣ ರಂಜಿತ ಸಮಾರಂಭ. ಸಿನಿಮಾದಲ್ಲಿ ನಟಿಸಿದ ಹಿರಿಯ ಕಲಾವಿದರಿಗೆ ಮತ್ತು ಚಿತ್ರದಲ್ಲಿ ನಟಿಸಿದ ಪೋಷಕ ನಟರನ್ನು ಸನ್ಮಾನಿಸಿ ಗೌರವಿಸುವ ವೇದಿಕೆ. ‘ಟೈಸನ್‌’ ಚಿತ್ರತಂಡ ಈ ಗೌರವ–ಸನ್ಮಾನದ ಸಮಾರಂಭ ಹಮ್ಮಿಕೊಂಡಿತ್ತು. ‘ಟೈಸನ್’ ಚಿತ್ರದಲ್ಲಿ ಅತಿಥಿ–ಪೋಷಕ ಪಾತ್ರ ಮಾಡಿದ ಕಲಾವಿದರನ್ನು ಸನ್ಮಾನಿಸಿತು.

ನಟಿ ಮೈತ್ರಿಯಾ ಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಬಿ ಅಶೋಕ್‌ ಕುಮಾರ್, ನಟ ಮತ್ತು ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು, ರಾಜಕಾರಣಿ ಜೇಡರಹಳ್ಳಿ ಕೃಷ್ಣಮೂರ್ತಿ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಹಾಗೂ ಹಿರಿಯ ನಟ ಶ್ರೀನಿವಾಸ ಮೂರ್ತಿ ಸನ್ಮಾನಕ್ಕೆ ಪಾತ್ರರಾದವರು.

ಅಶೋಕ್ ಕುಮಾರ್ ‘ಟೈಸನ್‌’ನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ‘ನಾನು ಸೇವೆಯಲ್ಲಿದ್ದಾಗ ಕೈಕೋಳ ಹಾಕಿಸಿಕೊಂಡವರು ಇಂದು ಶಕ್ತಿಸೌಧದಲ್ಲಿ ಇದ್ದಾರೆ. ಒಳ್ಳೆಯ ಪೊಲೀಸ್ ಇದ್ದರೆ ಒಳ್ಳೆಯ ಸಮಾಜ ಇರುತ್ತದೆ’ ಎಂದು ವೃತ್ತಿಯ ಅನುಭವಗಳನ್ನು ಅವರು ನೆನಪಿಸಿಕೊಂಡರು.

ಪಕ್ಕದಲ್ಲಿಯೇ ಇದ್ದ ಜೇಡರಹಳ್ಳಿ ಕೃಷ್ಣಮೂರ್ತಿ ಅಲಿಯಾಸ್ ಜೇಡ್ರಳ್ಳಿ ಕೃಷ್ಣಪ್ಪ, ‘ನನ್ನ ಹೆಸರು ಹೇಳಿಕೊಂಡು ಕೆಟ್ಟ ಕೆಲಸ ಮಾಡುತ್ತಿದ್ದರು. ನಾನು ಎಂದು ಯಾರನ್ನೂ ಹೆದರಿಸಿಲ್ಲ. ಸಾಹೇಬರಿಂದ ಉತ್ತಮ ಮನುಷ್ಯನಾದೆ. ಅವರ ಮಾರ್ಗದರ್ಶನದಿಂದ ಸಮಾಜದಲ್ಲಿ ಒಳ್ಳೆ ಮನುಷ್ಯನೆಂಬ ಹೆಸರುಗಳಿಸಿದ್ದೇನೆ’ ಎಂದರು.

ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಅವರದು ಚಿತ್ರದಲ್ಲಿ ಗೃಹ ಸಚಿವನ ಪಾತ್ರ. ಥ್ರಿಲ್ಲರ್‌ ಮಂಜು ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಹಾಗೂ ಶ್ರೀನಿವಾಸಮೂರ್ತಿ  ಅವರು ನಾಯಕಿಯ ತಂದೆಯಾಗಿ ನಟಿಸಿದ್ದಾರೆ. ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ ಮೈತ್ರಿಯಾ ಗೌಡ.

ಮರಿ ಟೈಗರ್ ವಿನೋದ್ ಪ್ರಭಾಕರ್ ಮತ್ತು ಗಾಯತ್ರಿ ಅಯ್ಯರ್ ಜೋಡಿಯ ‘ಟೈಸನ್‌’ ರಾಮ್ ನಾರಾಯಣ್ ನಿರ್ದೇಶನದ ಚಿತ್ರ. ‘ಚಿತ್ರಮಂದಿರಕ್ಕೆ ಬರುವಾಗ ಪ್ರಭಾಕರ್ ಸಿನಿಮಾ ನೋಡಲು ಬರುತ್ತಿದ್ದೇನೆ ಅಂತ ಭಾಸವಾಗುತ್ತದೆ. ಹೊರಬರುವಾಗ ವಿನೋದ್ ಪ್ರಭಾಕರ್ ನೆನಪಿನಲ್ಲಿ ಉಳಿಯುತ್ತಾರೆ’ ಎಂದು ಟೈಸನ್ ಬಗ್ಗೆ ಒಂದು ಸಾಲಿನ ವಿವರಣೆ ನೀಡಿದರು ನಿರ್ದೇಶಕ ರಾಮ್‌ ನಾರಾಯಣ್‌.

ಇಲ್ಲಿಯವರೆಗೂ ಅಪ್ಪನ ಇಮೇಜನ್ನು ತಮ್ಮ ಜತೆ ಇಟ್ಟುಕೊಂಡು ಚಿತ್ರರಂಗದಲ್ಲಿ ಹೆಜ್ಜೆಯಿಟ್ಟಿದ್ದ ವಿನೋದ್ ಪ್ರಭಾಕರ್‌ ಟೈಸನ್‌ನಿಂದ ತಮ್ಮದೇ ಆದ ಇಮೇಜು ಪಡೆಯುತ್ತಾರಂತೆ. ನಾಯಕಿ ಗಾಯತ್ರಿ ಅಯ್ಯರ್ ಮುಗುಳ್ನಗೆಯೇ ಮಾತು ಎನ್ನುವಂತಿದ್ದರು. ನಿರ್ಮಾಪಕ ಬಾಬು ರೆಡ್ಡಿ ಮತ್ತಿತರರು ವೇದಿಕೆಯಲ್ಲಿ ಹಾಜರಿದ್ದರು. ಜನವರಿಯಲ್ಲಿ ‘ಟೈಸನ್’ ತೆರೆ ಕಾಣುವ ಸಾಧ್ಯತೆ ಇದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.