ADVERTISEMENT

ಹೊಸ ಚೌಕಟ್ಟಲ್ಲಿ ಹಾದಿ ಬೀದಿ ಪ್ರೀತಿ

​ಪ್ರಜಾವಾಣಿ ವಾರ್ತೆ
Published 21 ಮೇ 2015, 19:30 IST
Last Updated 21 ಮೇ 2015, 19:30 IST

‘ಹಾದೀಲಿ ಲವ್ ಶುರುವಾಗುತ್ತೆ. ಬೀದೀಲಿ ಮುಗಿಯುತ್ತೆ...’
ನಾಯಕ ನಟ ಅರುಣ್ ‘ಹಾದಿ ಬೀದಿ ಲವ್ ಸ್ಟೋರಿ’ ಸಿನಿಮಾದ ಕಥೆಯುನ್ನು ಒಂದೇ ಸಾಲಿನಲ್ಲಿ ಹೇಳಿದ್ದು ಹೀಗೆ! ತುಂಬಾ ಸಹಜವಾಗಿ ನಡೆಯುವ ಘಟನೆಗಳನ್ನು ಆಧರಿಸಿದ ಚಿತ್ರ ಇದಾಗಿರುವುದರಿಂದ, ಶೀರ್ಷಿಕೆ ಕೂಡ ಸಹಜವಾಗಿ ಇದೆ ಎಂಬ ಅಭಿಮತ ಅವರದು.

‘ನೆನಪಿನಂಗಳ’ ಎಂಬ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಚಂದ್ರಶೇಖರ ಮಾವಿನಕುಂಟೆ, ನೈಜ ಘಟನೆ ಆಧರಿಸಿ ಎರಡನೇ ಚಿತ್ರ ಸಿದ್ಧಪಡಿಸಿದ್ದಾರೆ. ಕಾಲ್ಪನಿಕ ಕಥೆಗಿಂತಲೂ ಹಾದಿ ಬೀದಿಯಲ್ಲಿ ಹುಟ್ಟುವ ಕಥೆಗಳು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತವೆಯಂತೆ! ‘ಅದಕ್ಕಾಗಿಯೇ ನಾನು ನೋಡಿದ ಘಟನೆಗಳನ್ನು ಆಧರಿಸಿ ಕಥೆ ಹೆಣೆದಿದ್ದೇನೆ. ಪ್ರೇಕ್ಷಕನಿಗೆ ಏನೇನು ಬೇಕೋ ಅದೆಲ್ಲ ಈ ಚಿತ್ರದಲ್ಲಿದೆ’ ಎಂದರು ಚಂದ್ರಶೇಖರ. ಇದರಲ್ಲಿ ಹೊಸ ಮಾದರಿಯ ನುಡಿಗಟ್ಟನ್ನು ಅವರು ಬಳಸಿದ್ದಾರಂತೆ. ಆ ನುಡಿಗಟ್ಟು ಯುವಕರನ್ನು ಖಂಡಿತ ಸೆಳೆಯುತ್ತದೆ ಎಂಬ ವಿಶ್ವಾಸ ಅವರದು.

‘ಗೊಂಬೆಗಳ ಲವ್’ ಬಳಿಕ ಸಿಕ್ಕಿರುವ ಒಳ್ಳೆಯ ಪಾತ್ರ ತಮ್ಮದು ಎಂದು ಬಣ್ಣಿಸಿಕೊಂಡ ಅರುಣ್‌, ಮೂರ್ನಾಲ್ಕು ಪುಟಗಳಷ್ಟು ಉದ್ದನೆಯ ಸಂಭಾಷಣೆ ಬರೆದು ಕೊಟ್ಟ ನಿರ್ದೇಶಕರ ಮೇಲೆ ಹುಸಿಮುನಿಸು ತೋರಿದರು. ಸಿನಿಮಾದುದ್ದಕ್ಕೂ ತಾವು ಲುಂಗಿ ಹಾಗೂ ಟಿ–ಶರ್ಟ್‌ಧಾರಿ ಎಂದ ಅರುಣ್, ಇಂಥದೊಂದು ಸಹಜ ಪಾತ್ರ ಸಿಕ್ಕಿರುವುದಕ್ಕೆ ಖುಷಿಪಟ್ಟರು. ಕೆಲವು ದಿನಗಳಿಂದ ರೂಪಿಕಾ ಚಿತ್ರರಂಗದಲ್ಲಿ ಕಾಣಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಈ ‘...ಲವ್ ಸ್ಟೋರಿ’ ಸಿನಿಮಾದ ಮೂಲಕ ಉತ್ತರ ನೀಡಲಿದ್ದೇನೆ ಎಂದು ನಾಯಕಿ ರೂಪಿಕಾ ನುಡಿದರು.

ಈ ಹಿಂದೆ ‘ಬಾಸು, ಅದೇ ಹಳೆ ಕಥೆ’ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಎಚ್.ಎಂ. ಸುಧೀರ್ ಅವರಿಗೆ ಚಂದ್ರಶೇಖರ್ ಮೇಲೆ ಅಪರಿಮಿತ ವಿಶ್ವಾಸ. ಅದಕ್ಕಾಗಿ ಅವರು ಎರಡು ಕೋಟಿ ರೂಪಾಯಿ ಬಜೆಟ್‌ಗೂ ಓಕೆ ಅಂದಿದ್ದಾರೆ. ಕ್ಯಾಮೆರಾ ಹಿಡಿದಿರುವ ನಾಗರಾಜ್, ನಾಲ್ಕು ಹಾಡುಗಳಿಗೆ ಸಂಗೀತ ಹೊಸೆದಿರುವ ಸಿ.ಆರ್. ಬಾಬಿ, ಸಂಕಲನಕಾರ ಕುಮಾರ್, ನೃತ್ಯ ನಿರ್ದೇಶಕ ಮಂಜು ಹಾಗೂ ಕಾರ್ಯಕಾರಿ ನಿರ್ಮಾಪಕ ಸುನೀಲ್ ಮಾತನಾಡಿದರು.

ಮೂರು ಹಂತಗಳಲ್ಲಿ ದೇವಹನಹಳ್ಳಿ, ಮೈಸೂರು, ಬೆಂಗಳೂರು ಹಾಗೂ ಘಾಟಿ ಸುಬ್ರಹ್ಮಣ್ಯದಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಉಳಿದ ತಾಂತ್ರಿಕ ಕೆಲಸಗಳು ನಡೆದಿವೆ. ಜೂನ್ ಎರಡನೇ ವಾರದಲ್ಲಿ ಆಡಿಯೋ ಸಿಡಿ ಬಿಡುಗಡೆ ಮಾಡಿ, ಜುಲೈನಲ್ಲಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ಚಿತ್ರತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.