ADVERTISEMENT

ಹೊಸ ಮಿಂಚು! ಹೊಸ ದೆವ್ವ!

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2015, 19:30 IST
Last Updated 16 ಏಪ್ರಿಲ್ 2015, 19:30 IST

ಕನ್ನಡದ ಯಶಸ್ವೀ ಚಿತ್ರ ‘ಶ್!!!’ ಗೆಲುವಿನ ಜಾಡು ಹಿಡಿದು ನಿರ್ಮಾಣವಾಗಿರುವ ಚಿತ್ರ ‘ಮತ್ತೆ ಶ್!!!’. ‘ಶ್!!!’ ರೀತಿಯಲ್ಲೇ ದೊಡ್ಡ ಗೆಲುವು ದೊರೆಯುತ್ತದೆ ಎಂಬುದು ತಂಡದ ನಿರೀಕ್ಷೆ. ಈ ನಿರೀಕ್ಷೆಯ ಮೊದಲ ಹೆಜ್ಜೆಯಾಗಿ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಮಾಡಿದ ಚಿತ್ರತಂಡ, ಪತ್ರಕರ್ತರೊಂದಿಗೆ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.

ಈ ಹಿಂದೆ ‘ಮೊದಲ ಮಿಂಚು’ ಚಿತ್ರ ನಿರ್ದೇಶಿಸಿದ್ದ ವೆಸ್ಲಿ ಬ್ರೌನ್ ‘ಮತ್ತೆ ಶ್!!!’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಶ್!!!’ನಲ್ಲಿ ಚಿತ್ರೀಕರಣಕ್ಕೆ ಹೋಗುವ ತಂಡವೊಂದು ದೆವ್ವ–ಭೂತದ ಕಾಟವನ್ನು ಎದುರಿಸುವುದನ್ನು ಉಪೇಂದ್ರ ನಿರೂಪಿಸಿದ್ದರು. ‘ಮತ್ತೆ ಶ್!!!’ನಲ್ಲಿ ಕೂಡ ಅಂಥದ್ದೇ ಕಥೆಯನ್ನು ಹೇಳಲು ಹೊರಟಿದ್ದಾರೆ ವೆಸ್ಲಿ. ಇಲ್ಲಿಯೂ ಚಿತ್ರೀಕರಣಕ್ಕೆಂದು ತೆರಳುವ ಚಿತ್ರತಂಡ ಅನುಭವಿಸುವ ಪರದಾಟವನ್ನೇ ತೋರಿಸದಲಾಗಿದೆಯಂತೆ. ಆ ನಿಟ್ಟಿನಲ್ಲಿ ಚಿತ್ರಕ್ಕೆ ‘ಮತ್ತೆ ಶ್!!!’ ಶೀರ್ಷಿಕೆ ತುಂಬ ಸೂಕ್ತವಾಗಿದೆ ಎನ್ನುತ್ತಾರೆ ಅವರು.

‘6–5=2’ ಹಾರರ್ ಚಿತ್ರದಲ್ಲಿ ನಟಿಸಿದ ನೆನಪಿನಲ್ಲೇ ‘ಮತ್ತೆ ಶ್!!!’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ವಿಜಯ್ ಚೆಂಡೂರ್. ಪ್ರೀತಿ, ಹಾಸ್ಯ, ಭಯ– ಹೀಗೆ ಪ್ರೇಕ್ಷಕ ನಿರೀಕ್ಷಿಸುವ ಎಲ್ಲ ಅಂಶಗಳನ್ನೂ ನೀಡುವ ಚಿತ್ರ ಇದು ಎಂಬುದು ಅವರ ಭರವಸೆ. ಶ್ರುತಿ ಹೀರಾ ಮತ್ತು ಸಂಹಿತಾ ನಾಯಕಿಯರು. ವಿಚಿತ್ರ ಎಂದರೆ ಚಿತ್ರೀಕರಣದ ಸಂದರ್ಭದಲ್ಲಿ ಶ್ರುತಿ ಅಸಹಜವಾಗಿ ಆಡಲು ಆರಂಭಿಸಿದ್ದರಂತೆ. ಗಣೇಶನ ಪೂಜೆ ಮಾಡಿದ ನಂತರ ಎಲ್ಲವೂ ಸರಿಯಾಯಿತಂತೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು ಡ್ಯಾನಿಯಲ್ ಸಂಗೀತ ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಡ್ಯಾನಿಯಲ್ ಸಾಹಿತ್ಯಕ್ಕೆ ರೇಡಿಯೊ ನಿರೂಪಕಿ ಸೌಜನ್ಯ, ಸ್ಪರ್ಶ್ ಮತ್ತು ಮಲ್ಲಿ ತುಮಕೂರು ದನಿ ನೀಡಿದ್ದಾರೆ. ಆನಂದ್ ಆಡಿಯೊ ಸಂಸ್ಥೆ ಹಾಡುಗಳನ್ನು ಮಾರುಕಟ್ಟೆಗೆ ತಂದಿದೆ. ರವಿಚಂದ್ರನ್ ಅವರು ಸಾಮಾನ್ಯ ಒಂದು ಹಾಡಿಗೆ ಖರ್ಚು ಮಾಡುವಷ್ಟು ಬಜೆಟ್‌ನಲ್ಲಿ ಇಡೀ ಚಿತ್ರ ನಿರ್ಮಿಸಿದ್ದಾರಂತೆ ನಿರ್ಮಾಪಕ ದಯಾನಂದ್ ಮಠಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.