ADVERTISEMENT

ಹೋಟೆಲ್ ಹೋಟೆಲ್ ಗೌಡರ ಹೋಟೆಲ್‌!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 19:30 IST
Last Updated 14 ಸೆಪ್ಟೆಂಬರ್ 2017, 19:30 IST
ವೇದಿಕಾ
ವೇದಿಕಾ   

ಅದು ಬೆಂಗಳೂರಿನ ತಾರಾ ಹೋಟೆಲ್‌ಗಳಲ್ಲಿ ಒಂದಾದ ‘ಜೆ.ಡಬ್ಲ್ಯೂ. ಮ್ಯಾರಿಯಟ್’. ಅಲ್ಲಿ ಆಯೋಜನೆಯಾಗಿದ್ದು ಅದ್ದೂರಿ ಸಿನಿಮಾವೊಂದರ ಹಾಡುಗಳ ಬಿಡುಗಡೆ ಕಾರ್ಯಕ್ರಮ. ಆ ಸಿನಿಮಾದ ಹೆಸರು ‘ಗೌಡ್ರು ಹೋಟೆಲ್’.

ಈ ಸಿನಿಮಾದ ಹೆಸರು ಹೇಳಿದ ತಕ್ಷಣ ಸಿನಿಮಾ ಪ್ರಿಯರ ಕಣ್ಣ ಮುಂದೆ ಬರುವುದು ಬಹುಭಾಷಾ ನಟ ಪ್ರಕಾಶ್ ರೈ, ಹಿರಿಯ ನಟ ಅನಂತ ನಾಗ್, ಈ ಸಿನಿಮಾದ ನಾಯಕ ನಟ ರಚನ್‌ ಚಂದ್ರ ಮತ್ತು ನಾಯಕಿ ವೇದಿಕಾ. ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಇಡೀ ಚಿತ್ರತಂಡ ಬಂದಿತ್ತು. ಆದರೆ ರೈ ಅವರು ಮಾತ್ರ ಬಂದಿರಲಿಲ್ಲ.

ಕಾರ್ಯಕ್ರಮದ ಆರಂಭದಲ್ಲಿ ಮಾತಿಗೆ ನಿಂತಿದ್ದು ವೇದಿಕಾ ಅವರು. ‘ಕೆಲವೇ ತಿಂಗಳುಗಳ ಹಿಂದೆ ಸಿನಿಮಾ ಚಿತ್ರೀಕರಣ ಆರಂಭಿಸಿದೆವು. ಈಗ ಇದರ ಹಾಡುಗಳ ಬಿಡುಗಡೆಯ ಹಂತ ಬಂದಿದೆ ಎಂದರೆ ನಂಬಲೇ ಆಗುತ್ತಿಲ್ಲ. ಪ್ರತಿ ವ್ಯಕ್ತಿಯೂ ಈ ಸಿನಿಮಾವನ್ನು ಇಷ್ಟಪಡುತ್ತಾನೆ ಎಂಬ ಆಸೆ ನನ್ನದು’ ಎಂದರು.

ADVERTISEMENT

‘ಅನಂತ್ ನಾಗ್ ಜೊತೆ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಬೇಕು ಎಂಬ ಆಸೆ ನನಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿಯಾದರೂ ಅಂಥದ್ದೊಂದು ಅವಕಾಶ ನನಗೆ ಸಿಗುತ್ತದೆ ಎಂದು ನಂಬಿದ್ದೇನೆ’ ಎಂದು ಹೇಳಿದ ವೇದಿಕಾ, ತಮ್ಮ ಪಕ್ಕದಲ್ಲೇ ಕುಳಿತಿದ್ದ ಅನಂತ ನಾಗ್ ಅವರನ್ನು ನೋಡಿ, ಮುಗುಳ್ನಕ್ಕರು. ಇದಕ್ಕೆ ಅನಂತ ನಾಗ್ ಅವರು ಕಿರುನಗುವಿನ ಮೂಲಕವೇ ಉತ್ತರಿಸಿದರು.

ನಾಯಕ ರಚನ್ ಚಂದ್ರ ಅವರ ಬಗ್ಗೆ ಒಳ್ಳೆಯ ಮಾತು ಹೇಳಲು ವೇದಿಕಾ ಮರೆಯಲಿಲ್ಲ. ‘ಸೂಪರ್‌ ಸ್ಟಾರ್‌ ನಂತರದ ಸಾಲಿನಲ್ಲಿ ರಚನ್ ಅವರೇ ನಿಲ್ಲುತ್ತಾರೆ. ಶಾಂತ ಸ್ವಭಾವದ ವ್ಯಕ್ತಿ ಅವರು’ ಎಂದರು.

ನಂತರ ಮಾತು ಆರಂಭಿಸಿದ ರಚನ್, ‘ನನ್ನ ಅಪ್ಪನಿಗೆ ಸುಳ್ಳು ಹೇಳುತ್ತಲೇ ನಾನು ಅಭಿನಯಿಸುವುದನ್ನು ಕಲಿತುಕೊಂಡೆ’ ಎಂದು ಚಟಾಕಿ ಹಾರಿಸಿದರು. ‘ಅನಂತ್ ನಾಗ್ ಜೊತೆ ಸಿನಿತೆರೆ ಹಂಚಿಕೊಂಡಿದ್ದು ನನ್ನ ಪಾಲಿಗೆ ಸಿಕ್ಕ ಗೌರವ’ ಎಂದರು. ಅನಂತ ನಾಗ್ ಇಡೀ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪ‍ಡಿಸಿದರು.

ಈ ಸಿನಿಮಾಕ್ಕೆ ಸಂಗೀತ ನೀಡಿದವರು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಮಗ ಯುವನ್ ಶಂಕರ ರಾಜ. ‘ನನ್ನ ತಂದೆ ವೃತ್ತಿ ಜೀವನ ಆರಂಭಿಸಿದ್ದು ಕನ್ನಡ ಚಿತ್ರರಂಗದ ಮೂಲಕ. ಈ ಚಿತ್ರ ನಾನು ಸಂಗೀತ ನೀಡಿರುವ ಮೊದಲನೆಯ ಕನ್ನಡ ಸಿನಿಮಾ’ ಎಂದರು ಯುವನ್.

ಸತೀಶ್ ರೆಡ್ಡಿ ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ರಮೇಶ್ ಶಿವ ಅವರು ಇದರ ಸಹ ನಿರ್ಮಾಪಕ. ‍ಪಿ. ಕುಮಾರ್ ಅವರು ಸಿನಿಮಾದ ನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.