ADVERTISEMENT

‘ಡೊಕೊಮೊ’ಗೆ ಪವರ್!

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST
‘ಪವರ್‌***’ ಚಿತ್ರದೊಂದಿಗೆ ಮೊಬೈಲ್‌ ಸೇವಾ ಕಂಪೆನಿ ಟಾಟಾ ಡೊಕೊಮೊ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿತು 	–ಚಿತ್ರ: ಕೆ. ಎನ್‌. ನಾಗೇಶ್‌ ಕುಮಾರ್‌
‘ಪವರ್‌***’ ಚಿತ್ರದೊಂದಿಗೆ ಮೊಬೈಲ್‌ ಸೇವಾ ಕಂಪೆನಿ ಟಾಟಾ ಡೊಕೊಮೊ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿತು –ಚಿತ್ರ: ಕೆ. ಎನ್‌. ನಾಗೇಶ್‌ ಕುಮಾರ್‌   

ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಪವರ್ ***’ ಚಿತ್ರದ ಹಾಡುಗಳು ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿವೆ. ಧ್ವನಿಮುದ್ರಿಕೆ ಬಿಡುಗಡೆಯಾಗಿ ಕಡಿಮೆ ಅವಧಿಯಲ್ಲೇ ದಾಖಲೆ ಪ್ರಮಾಣದಲ್ಲಿ ಸಿಡಿಗಳು ಮಾರಾಟವಾಗಿರುವುದು ಹಾಗೂ ಅಂತರ್ಜಾಲದ ಮೂಲಕ ಹಾಡುಗಳು ಡೌನ್‌ಲೋಡ್ ಆಗಿರುವುದು ಹಾಡುಗಳ ‘ಪವರ್‌’ಗೆ ಸಾಕ್ಷಿಯಾಗಿದೆ. ಚಿತ್ರದ ಆಡಿಯೊ ಹಕ್ಕು ಪಡೆದಿರುವ ಲಹರಿ ಮ್ಯೂಸಿಕ್ಸ್ ಈ ಖುಷಿಗಾಗಿಯೇ ಇತ್ತೀಚೆಗಷ್ಟೇ ‘ಪ್ಲಾಟಿನಂ ಡಿಸ್ಕ್’ ಸಮಾರಂಭವನ್ನೂ ಆಯೋಜಿಸಿತ್ತು.

ಈಗ ಚಿತ್ರದ ಪ್ರಚಾರಕಾರ್ಯ ಮತ್ತೊಂದು ಆಯಾಮಕ್ಕೆ ಹೊರಳಿಕೊಂಡಿದೆ. ಹಾಡುಗಳ ಜನಪ್ರಿಯತೆಯನ್ನು ಪರಿಗಣಿಸಿದ ಮೊಬೈಲ್ ಸಂಪರ್ಕ ಸೇವಾ ಸಂಸ್ಥೆ ಟಾಟಾ ಡೊಕೊಮೊ, ‘ಪವರ್ ***’ ಚಿತ್ರ ನಿರ್ಮಿಸಿರುವ ‘೧೪ ರೀಲ್ಸ್ ಎಂಟರ್‌ಟೈನ್‌ಮೆಂಟ್’ ಹಾಗೂ ‘ಕೊಲ್ಲ ಎಂಟರ್‌ಟೈನ್‌ಮೆಂಟ್’ ಜೊತೆ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಚಿತ್ರ ಹಾಗೂ ತನ್ನ ಹೊಸ ಉತ್ಪನ್ನದ ಪ್ರಚಾರದ ಹಕ್ಕನ್ನು ಟಾಟಾ ಡೊಕೊಮೊ ಪಡೆದುಕೊಂಡಿದೆ.

ಒಪ್ಪಂದದ ಅಡಿಯಲ್ಲಿ ‘ಪವರ್’ ಎಂಬ ಹೆಸರಿನಲ್ಲಿ ಟಾಟಾ ಡೊಕೊಮೊ ತನ್ನ ಕೆಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಜೊತೆಗೆ ರಾಜ್ಯದಾದ್ಯಂತ 50,000 ಮಳಿಗೆಗಳನ್ನು ತೆರೆದು ಹಾಡುಗಳ ಪ್ರಚಾರವನ್ನೂ ಕೈಗೊಳ್ಳಲಿದೆ. ಬೆಂಗಳೂರು, ಮೈಸೂರುಗಳಲ್ಲಿ ‘ಮೀಟ್ ಆ್ಯಂಡ್ ಗ್ರೀಟ್ ಸ್ಟಾರ್‍ಸ್ ಅಟ್ ಮಾಲ್ಸ್’ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ.

ಟಾಟಾ ಡೊಕೊಮೊ ಕರ್ನಾಟಕ ವೃತ್ತದ ಮೊಬಿಲಿಟಿ ವಹಿವಾಟು ವಿಭಾಗದ ಮುಖ್ಯಸ್ಥ ರೋಹಿತ್ ಟಂಡನ್ ಮಾತನಾಡಿ, ‘ಒಪ್ಪಂದ ಖುಷಿ ತಂದಿದೆ. ಪುನೀತ್ ಅವರ ಜನಪ್ರಿಯತೆ ನಮ್ಮ ಬ್ರ್ಯಾಂಡ್ ಪ್ರಮೋಷನ್‌ಗೆ ಸಹಾಯವಾಗಲಿದೆ’ ಎಂದರು.

‘ನಮ್ಮಿಂದ ಟಾಟಾ ಡೊಕೊಮೊ ಸಂಸ್ಥೆಗೆ ಹಾಗೂ ಅವರಿಂದ ನಮ್ಮ ಚಿತ್ರಕ್ಕೆ ಹೆಚ್ಚಿನ ಸಹಾಯವಾಗಲಿ. ಇಂಥ ಪ್ರಯತ್ನಗಳು ಹೆಚ್ಚಲಿ’ ಎಂದ ಪುನೀತ್, ‘ಡೊಕೊಮೊ’ ಎನ್ನುವುದನ್ನು ಸ್ವಲ್ಪ ತಿರುಚಿ ‘ಡು ಕಮ್ ಅಂಡ್ ವಾಚ್ ಫಿಲ್ಮ್’ ಎಂದರು. ಚಿತ್ರದ ನಿರ್ಮಾಪಕ ಪ್ರವೀಣ್ ಕೊಲ್ಲ ಮಾತನಾಡಿ, ‘ಸಂವಹನ ಪಾಲುದಾರನಾಗಿ ನಮ್ಮ ಚಿತ್ರಕ್ಕೆ ವಿವಿಧ ಮಾಧ್ಯಮಗಳಲ್ಲಿ ಪ್ರಚಾರ ನೀಡಲು ಈ ಒಪ್ಪಂದ ಸಹಕಾರಿಯಾಗಲಿದೆ’ ಎಂದರು. ನಿರ್ದೇಶಕ ಕೆ.ಮಾದೇಶ್, ಲಹರಿ ವೇಲು, ಹಿರಿಯ ನಟ ಉಮೇಶ್, ರಂಗಾಯಣ ರಘು, ಸುಂದರರಾಜ್ ಅರಸ್ ಕಾರ್ಯಕ್ರಮದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.