ADVERTISEMENT

ಸಿನಿಮಾ ಬಿಡುಗಡೆಗೆ ಮಾರ್ಗಸೂಚಿ: ಚಲನಚಿತ್ರ ವಾಣಿಜ್ಯ ಮಂಡಳಿ ಚಿಂತನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 12:20 IST
Last Updated 7 ಜುಲೈ 2018, 12:20 IST
ಎಸ್.ಎ. ಚಿನ್ನೇಗೌಡ 
ಎಸ್.ಎ. ಚಿನ್ನೇಗೌಡ    

ಬೆಂಗಳೂರು: ಪ್ರತಿ ವಾರ ಮೂರು ಅಥವಾ ನಾಲ್ಕು ಸಿನಿಮಾಗಳ ಬಿಡುಗಡೆಗೆ ಮಾತ್ರವೇ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಮಾರ್ಗಸೂಚಿ ರೂಪಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚಿಂತನೆ ನಡೆಸಿದೆ.

ಈಗ ವಾರಕ್ಕೆ ಏಳೆಂಟು ಚಿತ್ರಗಳು ತೆರೆಕಾಣುತ್ತಿವೆ. ಕೆಲವು ಚಿತ್ರಗಳು ಒಂದು ವಾರವೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವುದಿಲ್ಲ. ಈ ವರ್ಷದ ಜೂನ್‌ ಅಂತ್ಯದವರೆಗೆ 109 ಚಿತ್ರಗಳು ತೆರೆಕಂಡಿವೆ. ಈ ಪೈಕಿ ಯಶಸ್ಸು ಕಂಡಿದ್ದು ‘ಟಗರು’ ಮತ್ತು ‘ಗುಳ್ಟು’ ಮಾತ್ರ. ಹಲವು ಚಿತ್ರಗಳಿಗೆ ಹೂಡಿಕೆ ಮಾಡಿದ್ದ ಬಂಡವಾಳವೂ ವಾಪಸ್‌ ಬಂದಿಲ್ಲ. ಹಾಗಾಗಿ, ‘ಚಂದನವನ’ದಲ್ಲಿ ಸೃಷ್ಟಿಯಾಗಿರುವ ಅನಾರೋಗ್ಯಕರ ಪೈಪೋಟಿ ತಪ್ಪಿಸಲು ಮಂಡಳಿ ನಿರ್ಧರಿಸಿದೆ.

‘ಕನ್ನಡದಲ್ಲಿ ವರ್ಷಕ್ಕೆ ಇನ್ನೂರಕ್ಕೂ ಹೆಚ್ಚು ಚಿತ್ರಗಳು ತೆರೆಕಾಣುತ್ತಿವೆ. ಆದರೆ, ಸಿನಿಮಾಗಳ ಗುಣಮಟ್ಟ ತೃಪ್ತಿಕರವಾಗಿಲ್ಲ. ವಾರಕ್ಕೆ ಏಳೆಂಟು ಚಿತ್ರಗಳ ಬಿಡುಗಡೆಯಿಂದ ಯಾರಿಗೂ ಲಾಭವಿಲ್ಲ. ಎಲ್ಲಾ ಚಿತ್ರರಂಗದಲ್ಲೂ ಈ ಸಮಸ್ಯೆಯಿದೆ. ಇದು ಚಿತ್ರರಂಗದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ದಶಕದ ಹಿಂದೆ ಮಾರ್ಗಸೂಚಿ ಸಮಿತಿ ಇತ್ತು. ಇದಕ್ಕೆ ಸಾ.ರಾ. ಗೋವಿಂದು ಅಧ್ಯಕ್ಷರಾಗಿದ್ದರು. ಆಗ ವಾರಕ್ಕೆ ಮೂರು ಅಥವಾ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಹಬ್ಬ ಅಥವಾ ವಿಶೇಷ ದಿನಗಳಂದು ಹೆಚ್ಚುವರಿಯಾಗಿ ಎರಡು ಚಿತ್ರಗಳ ಬಿಡುಗಡೆಗೆ ಅವಕಾಶ ನೀಡಲಾಗಿತ್ತು. ಆದರೆ, ಮೂರೇ ತಿಂಗಳಿಗೆ ಈ ಪ್ರಕ್ರಿಯೆ ಸ್ಥಗಿತಗೊಂಡಿತು’ ಎಂದು ವಿಷಾದಿಸಿದರು.

‘ಚಿತ್ರರಂಗದ ಈಗಿನ ಪರಿಸ್ಥಿತಿ ಅವಲೋಕಿಸಿದರೆ ಸಮಿತಿ ರಚಿಸುವ ತುರ್ತು ಇದೆ. ಇದೇ 11ರಂದು ನಡೆಯುವ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಷಯ ಮಂಡಿಸಿ ಎಲ್ಲರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಮಾರ್ಗಸೂಚಿ ಉಲ್ಲಂಘಿಸಿದರೆ ವಿತರಕರು, ನಿರ್ಮಾಪಕರು, ನಿರ್ದೇಶಕರ ವಿರುದ್ಧ ಶಿಸ್ತುಕ್ರಮಕೈಗೊಳ್ಳುವ ಅಧಿಕಾರ ಮಂಡಳಿಗೆ ಇಲ್ಲ. ಆದರೆ, ಚಿತ್ರರಂಗದ ಬೆಳವಣಿಗೆ ದೃಷ್ಟಿಯಿಂದ ಎಲ್ಲರೂ ಮಂಡಳಿಯ ತೀರ್ಮಾನಕ್ಕೆ ಸಹಮತ ಸೂಚಿಸುವುದು ಒಳ್ಳೆಯದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.