ADVERTISEMENT

‘ಮೇ 1’ ಸಿನಿಮಾ ಕುರಿತು ಒಂದಿಷ್ಟು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 9:53 IST
Last Updated 23 ಆಗಸ್ಟ್ 2018, 9:53 IST
ರಕ್ಷಾ
ರಕ್ಷಾ   

‘ನಮಗೆ ಅವಕಾಶಗಳು ಸಿಕ್ಕದೇ ಇರುವ ಪರಿಸ್ಥಿತಿ ಬಂದಾಗ ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು’ ಎಂದರು ಜೆ.ಕೆ. ಅವರಿಗೆ ಈ ಫಿಲಾಸಫಿ ಹೊಳೆದಿದ್ದು ಅನುಭವದ ಮೂಲಕವೇ. ಇಂಥದ್ದೊಂದು ಅವಕಾಶ ಸೃಷ್ಟಿಸಿಕೊಳ್ಳುವ ಸಲುವಾಗಿಯೇ ಅವರು ‘ಮೇ 1’ ಎಂಬ ಸಿನಿಮಾ ಮಾಡಿದ್ದು. ಅವರ ಕನಸಿನ ಸಿನಿಮಾ ಈ ವಾರ (ಆಗಸ್ಟ್ 24) ಬಿಡುಗಡೆಯಾಗುತ್ತಿದೆ.

‘ಈ ಸಿನಿಮಾದಲ್ಲಿ ನಾನು ಬರಹಗಾರ, ಸಹಾಯಕ ನಿರ್ದೇಶಕ, ವಸ್ತ್ರ ವಿನ್ಯಾಸಕ, ಸೆಟ್‌ ಬಾಯ್ ಆಗಿಯೂ ಕೆಲಸ ಮಾಡಿದ್ದೇನೆ. ನಾನು ಮನಸಲ್ಲಿ ಅಂದುಕೊಂಡಿದ್ದನ್ನು ನಿರ್ದೇಶಕ ನಾಗೇಂದ್ರ ಅರಸ್‌ ಸಮರ್ಥವಾಗಿ ತೆರೆಯ ಮೇಲೆ ತಂದಿದ್ದಾರೆ’ ಎಂದೂ ಅವರು ಹೇಳಿಕೊಂಡರು.

ಈ ಚಿತ್ರದಲ್ಲಿ ಜೆ.ಕೆ. ಅವರೇ ನಾಯಕನಾಗಿ ನಟಿಸಿದ್ದಾರೆ. ಆ ನಾಯಕನ ಹೆಸರೂ ಜೆ.ಕೆ. ಎಂದೇ.

ADVERTISEMENT

‘ಅಭಿಮಾನ ಮಿತಿ ಮೀರಿದಾಗ ಏನಾಗುತ್ತದೆ ಎನ್ನುವುದೇ ಈ ಚಿತ್ರದ ಕಥಾಹೂರಣ’ ಎಂದರು ನಿರ್ದೇಶಕ ನಾಗೇಂದ್ರ ಅರಸ್‌. ಹಲವು ಸನ್ನಿವೇಶಗಳಲ್ಲಿ ಹಾಲಿವುಡ್‌ ಚಿತ್ರಗಳನ್ನು ನೆನಪಿಸುವ ಹಾಗಿದೆ ಎಂದೂ ಅವರೇ ಹೊಗಳಿಕೊಂಡರು.

‌‘ಮೇ 1’ ಚಿತ್ರದಲ್ಲಿ ಜೆ.ಕೆ. ಅವರ ಜತೆ ರಕ್ಷಾ ಎಂಬ ಹೊಸ ಪ್ರತಿಭೆ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ಇದು ನನ್ನ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿದಿನವೂ ಹಲವು ಹೊಸ ವಿಷಯಗಳನ್ನು ಕಲಿತುಕೊಂಡಿದ್ದೇನೆ. ಮೀರಾ ಎಂಬುದು ನನ್ನ ಪಾತ್ರದ ಹೆಸರು. ಅವಳು ಗೃಹಿಣಿ. ಕುಟುಂಬವೇ ತನ್ನ ಪ್ರಪಂಚ. ಗಂಡ ಮತ್ತು ಮಗುವೇ ತನ್ನ ಪ್ರಾಣ ಎಂದು ನಂಬಿಕೊಂಡಿರುವವಳು. ಇಂಥವಳ ಬದುಕು, ಮೇ ಮೊದಲ ದಿನ ನಡೆದ ಒಂದು ಘಟನೆಯಿಂದಾಗಿ ಅಲ್ಲೋಲ ಕಲ್ಲೋಲವಾಗುತ್ತದೆ’ ಎಂದು ಕಥೆಯ ಎಳೆಯನ್ನು ಚೂರೇ ಬಿಟ್ಟುಕೊಟ್ಟರು.

ಮೇ 1ರಂದು ಜೆ.ಕೆ. ಅವರ ಜನ್ಮದಿನ. ಹಾಗೆಯೇ ಅವರ ಸಿನಿಮಾ ನಾಯಕನ ಜನ್ಮದಿನವೂ ಆಗಿರುತ್ತದಂತೆ. ಅಂದು ನಡೆಯುವ ಒಂದು ಘಟನೆಯನ್ನು ಇಟ್ಟುಕೊಂಡೇ ಸಿನಿಮಾ ಕಟ್ಟಲಾಗಿದೆ.

ಕಿರಣ್, ಸಂದೀಪ್‌, ಸತೀಶ್ ಮೂವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

ಎಪ್ಪತ್ತೈದರಿಂದ ಎಂಬತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.