ADVERTISEMENT

ಇಲ್ಲಿ ಮೂವರು ‘ರತ್ನಮಂಜರಿ’ಯರು!

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST
ಪಲ್ಲವಿ ರಾಜು, ರಾಜ್ ಚರಣ್, ಅಖಿಲಾ ಪ್ರಕಾಶ್
ಪಲ್ಲವಿ ರಾಜು, ರಾಜ್ ಚರಣ್, ಅಖಿಲಾ ಪ್ರಕಾಶ್   

ಸತ್ಯಘಟನೆ ಆಧರಿಸಿ ರೂಪುಗೊಂಡಿರುವ ಸಿನಿಮಾ ‘ರತ್ನಮಂಜರಿ’. ಇದರ ಚಿತ್ರೀಕರಣ ಈಗ ಭಾಗಶಃ ಪೂರ್ಣಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ನಿರ್ಮಾಪಕ, ನಿರ್ದೇಶಕರಾದಿಯಾಗಿ ಎಲ್ಲರೂ ಅಲ್ಲಿದ್ದರು.

ಚಿತ್ರದ ಒಂದು ಭಾಗದ ಚಿತ್ರೀಕರಣ ಮಡಿಕೇರಿಯಲ್ಲಿ ಮೂವತ್ತು ದಿನಗಳ ಅವಧಿಯಲ್ಲಿ ನಡೆದಿದೆ. ‘ಹಾಲಿವುಡ್‌ನ ಗುಣಮಟ್ಟಕ್ಕೆ ಸರಿಸಾಟಿಯಾಗುವಂತೆ ಸಿನಿಮಾ ಮಾಡುವುದು ನಮ್ಮ ಗುರಿ. ಈ ಚಿತ್ರದಲ್ಲಿ ಇರುವುದು ಥ್ರಿಲ್ಲರ್ ಕಥೆ’ ಎಂದು ತಂಡ ಹೇಳಿದೆ. ಅಮೆರಿಕದಲ್ಲಿ ನಡೆಯಲಿರುವ ‘ಅಕ್ಕ’ ಸಮ್ಮೇಳನದಲ್ಲಿ ಚಿತ್ರದ ಹಾಡುಗಳ ಬಿಡುಗಡೆ ನಡೆಯಲಿದೆ. ಅದಾದ ನಂತರ, ಅಮೆರಿಕದಲ್ಲಿ ಇಪ್ಪತ್ತು ದಿನ ಚಿತ್ರೀಕರಣ ನಡೆಯಲಿದೆಯಂತೆ.

ಈ ಚಿತ್ರದ ನಾಯಕ ರಾಜ್ ಚರಣ್. ‘ಸಿದ್ಧಾಂತ್ ಎನ್ನುವ ಪಾತ್ರ ನನಗೆ ಸಿಕ್ಕಿದೆ. ಕೊಡಗಿನಲ್ಲಿ ಬಹಳ ಕಷ್ಟದ ಸಂದರ್ಭದಲ್ಲೂ ಚಿತ್ರೀಕರಣ ನಡೆಸಿದೆವು. ಅಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿತ್ತು’ ಎಂದು ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡರು. ಕೊಡಗಿನಲ್ಲಿ ಅತಿವೃಷ್ಟಿಯಿಂದ ಆದ ದುರಂತದ ಛಾಯೆಗಳು ಅವರ ಮಾತುಗಳಲ್ಲಿ ಇದ್ದವು. ‘ಈ ಚಿತ್ರದಲ್ಲಿ ಮೂವರು ನಾಯಕಿಯರು ಇದ್ದಾರೆ. ಅವರಿಂದ ನಾನು ಸಾಕಷ್ಟು ಕಲಿತುಕೊಂಡೆ’ ಎಂದರು ರಾಜ್‌ ಚರಣ್.

ADVERTISEMENT

ಮಡಿಕೇರಿ ಮೂಲದವರಾದ ಅಖಿಲಾ ಪ್ರಕಾಶ್ ಈ ಚಿತ್ರದ ನಾಯಕಿಯರಲ್ಲಿ ಒಬ್ಬರು. ಗೌರಿ ಎಂಬ ಹೆಸರಿನ ಫ್ಯಾಷನ್ ಡಿಸೈನರ್ ಪಾತ್ರ ಇವರದ್ದು. ಇನ್ನೊಬ್ಬಳು ನಾಯಕಿ ಪಲ್ಲವಿ ರಾಜು, ‘ಕಮಲಿ’ ಎನ್ನುವ ಕೆಲಸದ ಹುಡುಗಿಯ ಪಾತ್ರ ನಿಭಾಯಿಸುತ್ತಿದ್ದಾರೆ. ಈಕೆ ಕೆಲಸದ ಹುಡುಗಿಯಾದರೂ, ಸಖತ್ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ!

ಈ ಚಿತ್ರದ ಆರಂಭದಲ್ಲಿ, ‘ಸಿನಿಮಾ ಪಾತ್ರಗಳ ವಿಚಾರದಲ್ಲಿ ರಿಸ್ಕ್‌ ತೆಗೆದುಕೊಳ್ಳುವುದು ಬೇಡ. ಚಿತ್ರದಲ್ಲಿ ಹೆಸರಾಂತ ಕಲಾವಿದರೇ ಇರಲಿ’ ಎನ್ನುವ ಸಲಹೆಗಳು ನಿರ್ದೇಶಕ ಪ್ರಸಿದ್ಧ್ ಅವರಿಗೆ ಬಂದಿದ್ದವಂತೆ. ‘ಆದರೆ, ನನಗೆ ನನ್ನ ತಂಡದ ಸದಸ್ಯರ ಮೇಲೆ ನಂಬಿಕೆ ಇತ್ತು. ಚಿತ್ರದ ಮುಂದಿನ ಕೆಲವು ಭಾಗಗಳು ಅಮೆರಿಕದ ನ್ಯೂಯಾರ್ಕ್‌ ಮತ್ತು ಟೆಕ್ಸಾಸ್‌ನಲ್ಲಿ ಚಿತ್ರೀಕರಣ ಆಗಲಿವೆ’ ಎಂದರು ಪ್ರಸಿದ್ಧ್.

‘ಅಮೆರಿಕದ ಒಂದು ಭಾಗದಲ್ಲಿ ನಡೆದ ಘಟನೆಯಿಂದ ಒಂದು ಎಳೆಯನ್ನು ಎತ್ತಿಕೊಂಡು ಈ ಕಥೆ ರೂಪಿಸಿದ್ದೇನೆ’ ಎಂದರು. ಇದರ ಜೊತೆಯಲ್ಲೇ ತುಂಟ ನಗುವಿನೊಂದಿಗೆ ಇನ್ನೂ ಒಂದು ಮಾಹಿತಿ ನೀಡಿದರು. ‘ನಾನು ಚಿತ್ರದ ಮೂವರೂ ನಾಯಕಿಯರ ಬಳಿ ನೀನೇ ರತ್ನಮಂಜರಿ ಎಂದು ಹೇಳಿದ್ದೇನೆ’ ಎಂಬುದನ್ನು ಬಹಿರಂಗಪಡಿಸಿದರು. ಚಿತ್ರದ ಇನ್ನೊಬ್ಬಳು ನಾಯಕಿ ಶ್ರದ್ಧಾ ಸಾಲಿಯಾನ್‌ ಇದರಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರಂತೆ.

‘ಇದೊಂದು ಮರ್ಡರ್ ಮಿಸ್ಟರಿ. ದೇವರು- ದೆವ್ವ- ಅಪರಾಧ ಈ ಮೂರು ಅಂಶಗಳ ಸುತ್ತ ಕಥೆ ಹೆಣೆದಿದ್ದೇವೆ’ ಎಂದು ಚಿತ್ರತಂಡ ಈ ಹಿಂದೆ ತಿಳಿಸಿತ್ತು. ಹರ್ಷವರ್ಧನ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪ್ರೀತಮ್ ತೆಗ್ಗಿನಮನೆ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರಸಿದ್ಧ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.