ADVERTISEMENT

ಅತಿರಂಜಕ ನಿರೂಪಣೆ

ಗಣೇಶ ವೈದ್ಯ
Published 31 ಮಾರ್ಚ್ 2017, 12:13 IST
Last Updated 31 ಮಾರ್ಚ್ 2017, 12:13 IST
ಅತಿರಂಜಕ ನಿರೂಪಣೆ
ಅತಿರಂಜಕ ನಿರೂಪಣೆ   

ರೋಗ್
ನಿರ್ಮಾಣ: ಸಿ.ಆರ್. ಮನೋಹರ್, ಸಿ.ಆರ್. ಗೋಪಿ
ನಿರ್ದೇಶಕ: ಪೂರಿ ಜಗನ್ನಾಥ್
ತಾರಾಗಣ: ಇಶಾನ್, ಮನ್ನಾರ್ ಚೋಪ್ರಾ, ಏಂಜೆಲಾ ಕ್ರಿಸ್ಲಿಂಜ್‌ಕಿ, ಅವಿನಾಶ್, ಸಾಧುಕೋಕಿಲ

‘ರೋಗ್’ ಪದಕ್ಕೆ ರಾಕ್ಷಸ, ಪುಂಡ ಎಂಬ ಅರ್ಥಗಳಿವೆ. ಈ ಚಿತ್ರದ ನಾಯಕನೂ ಅಂಥವನೇ. ಯಾರ ಅಂಕೆಗೂ ನಿಲುಕದ, ತನ್ನಿಷ್ಟದಂತೆಯೇ ವರ್ತಿಸುವ ಹುಂಬ. ತನ್ನನ್ನು ನಂಬಿದವರಿಗೆ ರಕ್ಷಕನೂ ಆಗುತ್ತಾನೆ. ಹೊಸ ನಾಯಕನನ್ನು ಪರಿಚಯಿಸುವ ಉದ್ದೇಶಕ್ಕೇ ಮಾಡಿದ ಸಿನಿಮಾ ‘ರೋಗ್’. ಆ ಪದಕ್ಕೆ ಅನ್ವರ್ಥ ಆಗುವಂತೆ ನಾಯಕನನ್ನು ತೋರಿಸಲು ನಿರ್ದೇಶಕರು ಪಟ್ಟ ಶ್ರಮ ಆರಕ್ಕೆ ಏರುವುದಿಲ್ಲ, ಮೂರಕ್ಕೆ ಇಳಿಯುವುದಿಲ್ಲ.

ಸಂಜು ಮತ್ತು ಅಂಜಲಿ ಪ್ರೀತಿಸಿದ್ದಾರೆ. ಆದರೆ ಸಂಜುವಿಗಿಂತ ಸ್ಥಿತಿವಂತ ಹುಡುಗ ಸಿಕ್ಕ ತಕ್ಷಣ ಆತನನ್ನೇ ಮದುವೆಯಾಗುತ್ತಾಳೆ. ಅಂಜಲಿಯ ನಿಶ್ಚಿತಾರ್ಥ ತಡೆಯಲು ಹೋಗುವ ಭರದಲ್ಲಿ ಸಂಜು ಒಬ್ಬ ಪೊಲೀಸ್ ಪೇದೆಯ ಕಾಲು ಮುರಿದು, ಎರಡು ವರ್ಷ ಜೈಲು ವಾಸವನ್ನೂ ಅನುಭವಿಸಿದ್ದಾನೆ. ಹಾಗಿದ್ದೂ ಆವೇಶದ ಬುದ್ಧಿಗೆ ಆತ ವಿದಾಯ ಹೇಳುವುದಿಲ್ಲ.

ತನ್ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಪೇದೆಯ ಕುಟುಂಬವನ್ನು ಸಲಹುವ ಹೊಣೆ ಹೊರುತ್ತಾನೆ. ಕೈ ಕೊಟ್ಟ ಅಂಜಲಿಯ ಅವಕಾಶವಾದಿ ಗುಣದಿಂದ ಬೇಸತ್ತು ಎಲ್ಲ ಹುಡುಗಿಯರೂ ಹೀಗೇ ಎಂದು ನಿರ್ಧರಿಸಿ ಹುಡುಗಿಯರಿಂದಲೇ ದೂರವಿರುತ್ತಾನೆ. ಆತನ ಪ್ರಕಾರ ‘ಹುಡುಗಿಯರೆಂದರೆ ಲೆಕ್ಕಾಚಾರ’.

ಯಾವ ಹೆಸರಿನಿಂದ ನಾಯಕ ವಿಚಲಿತನಾಗುತ್ತಾನೋ ಅದೇ ಹೆಸರಿನ ಹುಡುಗಿಯರನ್ನೇ ಮತ್ತೆ ಮತ್ತೆ ಎದುರುಗೊಳ್ಳುತ್ತಾನೆ. ಪೊಲೀಸ್ ಪೇದೆಯ ತಂಗಿಯ ಹೆಸರೂ ಅಂಜಲಿ. ಬೇಡವೆಂದರೂ ಅವಳ ಪ್ರೀತಿಯಲ್ಲಿ ಸಿಲುಕುತ್ತಾನೆ. ವಿಚಿತ್ರವೆಂದರೆ ಸಿನಿಮಾದಲ್ಲಿ ಬರುವ ಬಹುತೇಕ ಹುಡುಗಿಯರ ಹೆಸರು ಅಂಜಲಿ! ಅದು ಅನುಕೂಲಕಾರಿ ನಡೆ.

ತನ್ನ ಹೆತ್ತವರು ಒಂದು ಮಾತು ಬೈದರೆ ಸಹಿಸಿಕೊಳ್ಳದ ನಾಯಕ ಯಾರದೋ ಕುಟುಂಬವನ್ನು ನೋಡಿಕೊಳ್ಳುವಷ್ಟು ಜವಾಬ್ದಾರಿಯ ಮನುಷ್ಯನಾಗಿಬಿಡುತ್ತಾನೆ. ಅತಿರಂಜಕ ನಿರೂಪಣಾ ಮಾದರಿಯ ಮೊರೆ ಹೋದ ನಿರ್ದೇಶಕರು, ಹೊಸತಲ್ಲದ ಕಥೆಯನ್ನು ಹೊಸತನದಿಂದ ಹೇಳುವ ಕಾಳಜಿ ವಹಿಸಿಲ್ಲ.

ADVERTISEMENT



ರೇಸ್ ತಿರುವದೇ ಹೋದರೂ ಬೈಕ್ ವಿಪರೀತ ಸದ್ದು ಮಾಡುತ್ತದೆ. ಬೈಕ್ ಓಡುತ್ತಿರುವಾಗ ಖಾಲಿ ಇರುವ ಪ್ಲೇಟ್‌ನಲ್ಲಿ, ಸ್ಟಂಟ್ ಮಾಡುವಾಗ ಸಂಖ್ಯೆಗಳು ಕಾಣುತ್ತವೆ. ಕಲಾವಿದರ ಮಾತು ಮತ್ತು ತುಟಿಚಲನೆಗೆ ಹೊಂದಾಣಿಕೆಯೇ ಇಲ್ಲ. ಸಿನಿಮಾ ನಡೆಯುವುದು ಕಲ್ಕತ್ತಾ ಪರಿಸರದಲ್ಲಿ. ಹಿಂದಿ ಸಂಭಾಷಣೆಗಳಿಗೆ ಭರಪೂರ ಅವಕಾಶವಿದೆ.

ಒಟ್ಟಾರೆಯಾಗಿ ಇದು ಕನ್ನಡ ಸಿನಿಮಾ ಎಂಬ ಭಾವವೇ ಹುಟ್ಟುವುದಿಲ್ಲ. ಸಂಗೀತ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿರಬೇಕು ಎಂಬುದನ್ನೂ ಮರೆತಂತಿದೆ. ಹೀಗೆ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಸಿನಿಮಾದುದ್ದಕ್ಕೂ ಇವೆ.

ಸಹಜವಾಗಿ ಕಾಣಬೇಕಾದ ಸನ್ನಿವೇಶದಲ್ಲೂ ಇಶಾನ್ ಗಂಟು ಮುಖದಲ್ಲೇ ಕಾಣಿಸುತ್ತಾರೆ. ಒಂದೇ ಧಾಟಿಯಲ್ಲಿ ಸಂಭಾಷಣೆ ಒಪ್ಪಿಸುತ್ತಾರೆ. ಹೆಚ್ಚು ಅವಕಾಶವಿಲ್ಲದ ಏಂಜೆಲಾ ಗ್ಲಾಮರ್‌ಗೆ ಸೀಮಿತ. ಮನ್ನಾರ್ ಅಭಿನಯಿಸುವ ಪ್ರಯತ್ನದಲ್ಲಿದ್ದಾರೆ. ಸೈಕೊ ಪಾತ್ರದಲ್ಲಿ ಚಿರಾಗ್ ಜಾನಿ ಸೆಳೆಯುತ್ತಾರೆ. ಮುಖೇಶ್ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ರಿಚ್ ಆಗಿ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.