ADVERTISEMENT

ಅಪ್ರತಿಮ ಪ್ರೇಮಿಯ ಅಸಾಧಾರಣ ಕಥನ

ಚಿತ್ರ : ಮಾಂಝಿ, ದಿ ಮೌಂಟೇನ್‌ ಮ್ಯಾನ್‌ (ಹಿಂದಿ)

ಅಮಿತ್ ಎಂ.ಎಸ್.
Published 21 ಆಗಸ್ಟ್ 2015, 19:30 IST
Last Updated 21 ಆಗಸ್ಟ್ 2015, 19:30 IST

ನಿರ್ಮಾಣ: ನೀನಾ ಲಾಥ್‌ ಗುಪ್ತಾ, ದೀಪಾ ಸಹಿ
ನಿರ್ದೇಶಕ:ಕೇತನ್‌ ಮೆಹ್ತಾ
ತಾರಾಗಣ: ನವಾಜುದ್ದಿನ್‌ ಸಿದ್ದಿಕಿ, ರಾಧಿಕಾ ಆಪ್ಟೆ, ಗೌರವ್‌ ದ್ವಿವೇದಿ, ಪಂಕಜ್‌ ತ್ರಿಪಾಠಿ, ಅಶ್ರಫ್‌ ಉಲ್‌ ಹಕ್‌, ತಿಗ್ಮನ್ಷು ಧುಲಿಯಾ, ಮತ್ತಿತರರು


ತನ್ನ ಪತ್ನಿಯ ಸಾವಿಗೆ ಕಾರಣವಾದ ಬೃಹತ್‌ ಬೆಟ್ಟವನ್ನು 22 ವರ್ಷಗಳವರೆಗೆ ಸತತವಾಗಿ ಕಡಿದು ಹಳ್ಳಿಗೆ ದಾರಿ ನಿರ್ಮಿಸಿದ ದಶರಥ ಮಾಂಝಿಯ ಸ್ಫೂರ್ತಿದಾಯಕ ಬದುಕನ್ನು ಸಿನಿಮಾ ರೂಪಕ್ಕೆ ತಂದಿದ್ದಾರೆ ನಿರ್ದೇಶಕ ಕೇತನ್‌ ಮೆಹ್ತಾ.

ಮಾಂಝಿಯ ಈ ಸಾಹಸ ರೋಮಾಂಚನಕಾರಿಯಾಗಿ ಕಂಡರೂ ಅದರ ಹಿನ್ನೆಲೆಯಲ್ಲಿ ಶತಮಾನಗಳ ನೋವಿದೆ, ದೌರ್ಜನ್ಯದ ಕರಿನೆರಳಿದೆ, ಅಸಮಾನತೆಯ ವಿರುದ್ಧದ ಕಿಡಿಯಿದೆ, ರಾಜಕೀಯದ ಭ್ರಷ್ಟ ಮುಖವಿದೆ. ವ್ಯಕ್ತಿ ಕೇಂದ್ರಿತ ಕಥನವನ್ನು ಕಟ್ಟಿಕೊಡುವಾಗ ಆತನ ಹಿಂದಿನ ಸಮಾಜದ ಚಿತ್ರಣವನ್ನೂ ಕೇತನ್‌ ಅಷ್ಟೇ ತೀವ್ರವಾಗಿ ಹಿಡಿದಿಟ್ಟಿದ್ದಾರೆ. ಈ ಕಾರಣದಿಂದ ‘ಮಾಂಝಿ...’ ವ್ಯಕ್ತಿಯೊಬ್ಬನ ಸಾಹಸಗಾಥೆಯಾಗಿ ಸೀಮಿತವಾಗದೆ ಒಂದು ಸಮುದಾಯದ ಅಸಹಾಯಕ ಬದುಕು ಮತ್ತು ಸಂಘರ್ಷದ ಸಶಕ್ತ ಬಿಂಬವೂ ಆಗಿದೆ.

ಮಾಂಝಿಯ ಸುತ್ತಲೂ ಹೆಣೆದಿರುವ ಕಥೆ ಆತನ ಜೀವನದ ಹಲವು ಮುಖಗಳನ್ನು ತೆರೆದಿಡುತ್ತದೆ. ಮಾಂಝಿ ಬಾಲ್ಯದಲ್ಲಿ ಶೋಷಣೆಯನ್ನು ವಿರೋಧಿಸುವ ಕಿಡಿ. ಜೀತ ಮಾಡಲು ಒಪ್ಪದೆ ಊರು ಬಿಟ್ಟು ಹೋದವನು ತಾರುಣ್ಯಕ್ಕೆ ಕಾಲಿಟ್ಟಾಗ ಮರಳಿ ಊರಿಗೆ ಹೋದಾಗ ಅಲ್ಲಿನ ಸನ್ನಿವೇಶ ಕಿಂಚಿತ್ತೂ ಬದಲಾಗದೆ ಇರುವುದನ್ನೂ ಕಾಣುತ್ತಾನೆ. ಹಳ್ಳಿಯ ಜಮೀನ್ದಾರನ ದಬ್ಬಾಳಿಕೆಯನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುವ ಅಲ್ಲಿನ ಜನರಲ್ಲಿ ಒಂದಾಗುತ್ತಾನೆ. ಅದರ ನಡುವೆಯೇ ಆತನೊಳಗಿನ ಪ್ರೇಮದ ತುಡಿತವೂ ಪ್ರಕಟವಾಗುತ್ತದೆ.

ಬಾಲ್ಯದಲ್ಲಿಯೇ ಮದುವೆಯಾಗಿದ್ದ ಹುಡುಗಿಯನ್ನು ಆಕೆಯ ತಂದೆಯ ವಿರೋಧ ಲೆಕ್ಕಿಸದೆ ಮನೆಗೆ ಹೊತ್ತುಕೊಂಡು ಬರುವ ಪ್ರೇಮಿ ಆತ. ಪತ್ನಿಯನ್ನು ಕಳೆದುಕೊಂಡಾಗ ಆಕೆಯ ನೆನಪಲ್ಲಿ ಬೆಟ್ಟವನ್ನು ಕಡಿದು ದಾರಿ ಮಾಡುವ ಆ ಪ್ರೇಮಿಯಲ್ಲಿ ಮೂಲಸೌಕರ್ಯಗಳಿಂದ ವಂಚಿತನಾಗುವ ಹಳ್ಳಿಗೆ ಒಳಿತನ್ನು ಮಾಡಬೇಕೆಂದು ಹೋರಾಡುವ ಮಹಾನ್ ಪುರುಷ ಇದ್ದಾನೆ.

ಬೆಟ್ಟಕ್ಕೆ ಕೋಪದಿಂದ ಕಲ್ಲು ಬೀಸುವ ಆತನಲ್ಲಿನ ಕೋಪದ ತೀವ್ರತೆಯಂತೆಯೇ ಅಲ್ಲಿನ ಕಲ್ಲುಬಂಡೆಗಳ ಮೈದಡವುವ ಪ್ರೀತಿಯ ಕಾವು ಸಹ ಮನಮುಟ್ಟುತ್ತದೆ.

ಬಿಹಾರದ ಗ್ರಾಮೀಣ ಬದುಕು, ಅಲ್ಲಿನ ಜನರ ಸಂಕಟಗಳನ್ನು ಚಿತ್ರಿಸುತ್ತಲೇ ಮಾಂಝಿಯ ಹೋರಾಟವನ್ನು ಉತ್ಪ್ರೇಕ್ಷೆಗೊಳಪಡಿಸದೆಯೇ ಹದವಾಗಿ ನಿರೂಪಿಸಿದ್ದಾರೆ ಕೇತನ್‌ ಮೆಹ್ತಾ. ಆ ಸಂದರ್ಭದ ದೇಶದ ರಾಜಕೀಯ ಸ್ಥಿತಿಯನ್ನು ಅಷ್ಟೇ ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ.

ನೈಜ ಘಟನೆಯನ್ನು ಸಿನಿಮಾ ರೂಪಾಂತರಗೊಳಿಸುವ ಕ್ಲಿಷ್ಟಕರ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಅವರು. ನವಾಜುದ್ದಿನ್ ಸಿದ್ದಿಕಿ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ. ವಯಸ್ಸಿನ ವಿವಿಧ ಹಂತಗಳ ದೇಹಭಾಷೆಗೆ ಅವರು ತಮ್ಮನ್ನು ಹೊಂದಿಸಿಕೊಂಡ ರೀತಿ ಅಚ್ಚರಿ ಮೂಡಿಸುತ್ತದೆ. ರಾಧಿಕಾ ಆಪ್ಟೆ ಪಾತ್ರ ಪೋಷಣೆ ಆಪ್ತವೆನಿಸುತ್ತದೆ.

‘ಮಾಂಝಿ...’ಯ ಕಥನ ಒಂದು ಸಾಹಸಮಯಿ ಹೋರಾಟವಾಗಿರದೆ, ಇಡೀ ದೇಶದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಒಂದು ಮಗ್ಗಲಿನ ವಿಶ್ಲೇಷಣೆಯಂತೆಯೂ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT