ADVERTISEMENT

ಕುಂಡದಲ್ಲಿ ಬೆಳೆಸಿದ ಸುಂದರ ಕಾಫಿ ಗಿಡ!

ಪದ್ಮನಾಭ ಭಟ್ಟ‌
Published 18 ಆಗಸ್ಟ್ 2017, 10:56 IST
Last Updated 18 ಆಗಸ್ಟ್ 2017, 10:56 IST
ಕುಂಡದಲ್ಲಿ ಬೆಳೆಸಿದ ಸುಂದರ ಕಾಫಿ ಗಿಡ!
ಕುಂಡದಲ್ಲಿ ಬೆಳೆಸಿದ ಸುಂದರ ಕಾಫಿ ಗಿಡ!   

ಚಿತ್ರ: ಕಾಫಿ ತೋಟ

ನಿರ್ಮಾಣ: ಮನ್ವಂತರ ಚಿತ್ರ

ನಿರ್ದೇಶಕರು: ಟಿ.ಎನ್‌. ಸೀತಾರಾಮ್‌

ADVERTISEMENT

ತಾರಾಗಣ: ರಾಧಿಕಾ ಚೇತನ್‌, ರಾಹುಲ್‌ ಮಾಧವ್‌, ರಘು ಮುಖರ್ಜಿ, ಅಪೇಕ್ಷಾ ಪುರೋಹಿತ್‌, ಸಂಯುಕ್ತಾ ಹೊರನಾಡು

ಹಸಿರು ತೋಟ, ಸಮುದ್ರತೀರ, ಕಟಕಟೆ, ವಾರಾಣಸಿ, ಕಲ್ಯಾಣಿಯಲ್ಲಿ ನಡೆವ ಕೊಲೆ, ಕರಿ ಕೋಟು, ಹುಸಿ ಪ್ರೇಮ, ಚೂರು ಹಾಸ್ಯ, ಸ್ವಲ್ಪ ವಿಡಂಬನೆ, ವಿರಕ್ತಿ, ನಿಗೂಢತೆ ಹೀಗೆ ಮೇಲ್ನೋಟಕ್ಕೆ ಪರಸ್ಪರ ಸಂಬಂಧವಿಲ್ಲದಂತೆ ತೋರುವ ಹಲವು ತಂತುಗಳನ್ನು ಹೆಣೆದು ‘ಕಾಫಿ ತೋಟ'ಕ್ಕೆ ಬೇಲಿ ಕಟ್ಟಿದ್ದಾರೆ ಟಿ.ಎನ್. ಸೀತಾರಾಮ್.

ಇಂದಿನ ತರುಣಪೀಳಿಗೆ ಕನ್ನಡ ಚಿತ್ರರಂಗದಲ್ಲಿ ನಡೆಸುತ್ತಿರುವ ಪ್ರಯೋಗಶೀಲತೆಯ ಭಾಗವಾಗಬೇಕು ಎಂಬ ಅವರ ಹಂಬಲ ಖಂಡಿತ ಪ್ರಶಂಸನಾರ್ಹ. ಅದಕ್ಕೆ ಪೂರಕವಾಗಿ ಅವರು ತಮ್ಮ ಮೂಲಗುಣವಾದ 'ಧಾರಾವಾಹಿತನ'ದಿಂದ ಬಿಡಿಸಿಕೊಂಡು ನಡಿಗೆಯಲ್ಲಿ ಹೊಸ ಉತ್ಸಾಹ – ವೇಗ ತುಂಬಿಕೊಳ್ಳಲು ಪಟ್ಟಿರುವ ಶ್ರಮವೂ ಈ ಚಿತ್ರದಲ್ಲಿ ಕಾಣುತ್ತದೆ. ವಸ್ತು, ನಿರೂಪಣೆಯ ಕ್ರಮ, ಪಾತ್ರಗಳು ಎಲ್ಲದರಲ್ಲಿಯೂ ವೈವಿಧ್ಯ ಎದ್ದು ಕಾಣುತ್ತದೆ. ಆದರೆ ಈ ಗುಣ ಸಿನಿಮಾವನ್ನು ಯಶಸ್ವಿಗೊಳಿಸಿದೆ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ.

ಸಿನಿಮಾದಲ್ಲಿನ ಒಂದು ದೃಶ್ಯ ಹೀಗಿದೆ:

ಮರುದಿನ ಬೆಳಗಾದರೆ ಎರಡುನೂರು ಕೋಟಿ ರೂಪಾಯಿ ಆಸ್ತಿಯ ಒಡತಿ ಮೈಥಿಲಿಯ ಜತೆ ಚಾಮಿಯ ಮದುವೆ. ಹಿಂದಿನ ದಿನ ರಾತ್ರಿ ಅವರ ಮನೆಗೆ ಬರುವ ಸರ್ಕಲ್ ಇನ್ಸ್‌ಪೆಕ್ಟರ್‌ ಚಂಚಲಕುಮಾರಿ ಚಾಮಿಯ ಮುಖ ನೋಡಿ ಇದ್ದಕ್ಕಿದ್ದಂತೆಯೆ 'ಇವನನ್ನು ಮದುವೆಯಾಗಬೇಡಿ. ಇವನು ಕ್ರಿಮಿನಲ್' ಎಂದು ಮೈಥಿಲಿಗೆ ಬುದ್ಧಿ ಹೇಳುತ್ತಾಳೆ. ಅದಕ್ಕೆ ಕೊಡುವ ಕಾರಣ ‘ನಾನು ತರಬೇತಿ ಪಡೆದ ಪೊಲೀಸ್ ಅಧಿಕಾರಿ. ಮುಖ ನೋಡಿಯೇ ಅಪರಾಧಿಗಳನ್ನು ಕಂಡುಹಿಡಿಯಬಲ್ಲೆ. ಇವನು ಕ್ರಿಮಿನಲ್‌ ಥರವೇ ಕಾಣುತ್ತಾನೆ’ ಎಂದು!

ತೀರಾ ಕೃತಕವಾಗಿ ಕಾಣುವ ಈ ಸನ್ನಿವೇಶಕ್ಕೆ ಮುಂದೆ ಸಿನಿಮಾದಲ್ಲಿ ಸಮರ್ಥನೆಯೇನೊ ಸಿಗುತ್ತದೆ. ಆದರೆ ಇಡೀ ಸಿನಿಮಾ ಕಥನದ ಕ್ಯಾನ್ವಾಸಿನಲ್ಲಿಯೇ ಈ ರೀತಿಯ ಕೃತಕತೆ ಸೇರಿಕೊಂಡಿದೆ. ಸಿನಿಮಾ ಭಿನ್ನವಾಗಿ ಕಾಣಿಸುವಂತೆ ಮಾಡಿದ ಆ ‘ಕೃತಕತೆ’ ಅದರ ದೌರ್ಬಲ್ಯವೂ ಆಗಿದೆ. ಆದ್ದರಿಂದಲೇ ಸಿನಿಮಾದಲ್ಲಿನ ಯಾವ ಟ್ವಿಸ್ಟುಗಳೂ ನಮ್ಮನ್ನು ಬೆಚ್ಚಿ ಬೀಳಿಸುವುದಿಲ್ಲ. ಅಚ್ಚರಿಗೆ ಕೆಡಹುವುದಿಲ್ಲ.

ಸುತ್ತುವುದರಲ್ಲಿಯೆ ಬದುಕನ್ನು ಸವಿಯುವ ಚಾಮಿ (ರಾಹುಲ್‌ ಮಾಧವ್‌) ಚಂದಾವರದ ಹೋಂ ಸ್ಟೇಯಲ್ಲಿ ಮೂರು ದಿನಗಳ ಮಟ್ಟಿಗೆ ಉಳಿದುಕೊಳ್ಳಲು ಬರುತ್ತಾನೆ. ಅವನಿಗೆ ಆ ಕಾಫಿ ಎಸ್ಟೇಟ್‌ ಮಾಲೀಕಳಾದ ಮೈಥಿಲಿ ಮೇಲೆ ಪ್ರೇಮವಾಗುತ್ತದೆ. ಆದರೆ ಅವಳಿಗೆ ನಿರಂಜನನ ಮೇಲೆ ಪ್ರೇಮವಿದೆ. ಅವನು ಅವಳನ್ನು ತೊರೆದು ತಂದೆಯನ್ನು ಹುಡುಕಿಕೊಂಡು ವಾರಾಣಸಿಗೆ ಹೋಗಿದ್ದಾನೆ. ಹೀಗೆ ನಾನ್‌ ಲೀನಿಯರ್‌ ನಿರೂಪಣೆಯಲ್ಲಿ ಹಲವು ಎಳೆಗಳು ಹಿಂದಕ್ಕೂ ಮುಂದಕ್ಕೂ ಹೆಣೆದುಕೊಳ್ಳುತ್ತ ಕಥೆ ಬೆಳೆಯುತ್ತದೆ.

ಸಿನಿಮಾ ಆರಂಭವಾಗುವುದೇ ಮೈಥಿಲಿಯ ತಾಯಿಯ ಕೊಲೆಯ ಮೂಲಕ. ಆ ಕೊಲೆಗೆ ಕೊನೆಗೂ ಸಮರ್ಥವಾದ ಕಾರಣ ಸಿಗುವುದೇ ಇಲ್ಲ. ಜಾತ್ರೆಗೆ ಹೋಗಿದ್ದ ಮೈಥಿಲಿಯ ಮಾವ ಮಧ್ಯಾಹ್ನ ಯಾಕೆ ಕಳ್ಳನ ಹಾಗೆ ಮನೆಗೆ ಬಂದು ಹೋಗುತ್ತಾನೆ ಎಂಬ ಪ್ರಶ್ನೆಗೂ ಉತ್ತರವಿಲ್ಲ. ದಾರಿಯಲ್ಲಿ ಬರುತ್ತಿದ್ದ ನಿರಂಜನನಿಗೆ ಯಾಕೆ ಒಮ್ಮಿಂದೊಮ್ಮೆಲೆ ಮಾರಣಾಂತಿಕ ಜ್ವರ ಬರುತ್ತದೆ? ಅದು ಹೇಗೆ ಮೂರೇ ದಿನಗಳಲ್ಲಿ ವಾಸಿಯಾಗಿಬಿಡುತ್ತದೆ? ಕಾಫಿ ತೋಟದ ಪಕ್ಕದಲ್ಲಿ ಸಮುದ್ರ ಎಲ್ಲಿಂದ ಬರುತ್ತದೆ? ಇಂಥ ಹಲವು ಅತಾರ್ಕಿಕ ಅಂಶಗಳು ಸಿನಿಮಾದಲ್ಲಿವೆ.

ಕೋರ್ಟಿನ ದೃಶ್ಯಗಳಿಗೆ ಸೀತಾರಾಮ್‌ ಹೆಸರುವಾಸಿಯಾದವರು. ಆದರೆ ಈ ಚಿತ್ರದಲ್ಲಿ ಆ ದೃಶ್ಯಗಳೂ ಯಾವ ರೋಮಾಂಚನ ಹುಟ್ಟಿಸದಷ್ಟು ಸಪ್ಪೆಯಾಗಿವೆ. ಬೇಗ ಮುಗಿಸುವ ಗಡಿಬಿಡಿಯಲ್ಲಿ ಪಾತ್ರಗಳಲ್ಲಿ ಭಾವನಾತ್ಮಕ ಸಾತತ್ಯವೇ ತಪ್ಪಿಹೋಗಿದೆ. ರಾಧಿಕಾ ಚೇತನ್‌ ಅವರ ಅತಿಶಯದ ಅಭಿನಯವೂ ಕಿರಿಕಿರಿ ಹುಟ್ಟಿಸುತ್ತದೆ. ರಾಹುಲ್‌ ಮಾಧವ್‌ ಗಮನ ಸೆಳೆಯುತ್ತಾರೆ. ಸಂಯುಕ್ತಾ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲ. ಅವರಲ್ಲಿ ಟಿಎನ್‌ಎಸ್‌ ಅವರ ಅಭಿನಯವೇ ಹೆಚ್ಚು ಪಕ್ವವಾಗಿದೆ.

ಎಲ್ಲ ಹಾಡುಗಳೂ ಗುನುಗಿಕೊಳ್ಳುವಂತಿವೆ. ಎಲ್ಲವನ್ನೂ ರಮ್ಯವಾಗಿ ತೋರಿಸಬೇಕು ಎಂಬ ಅಶೋಕ್‌ ಕಶ್ಯಪ್‌ (ಛಾಯಾಗ್ರಹಣ) ಹಂಬಲ ಪ್ರತಿಯೊಂದು ಫ್ರೇಮಿನಲ್ಲಿಯೂ ಎದ್ದು ಕಾಣುತ್ತದೆ. ಈ ಹಂಬಲದ ಕಾರಣದಿಂದಲೇ ಬಿಸಿಲೂ ಬೆಳದಿಂಗಳಷ್ಟು ಮೃದುವಾಗಿ, ರಾತ್ರಿಯೂ ಹಗಲಿನಷ್ಟೇ ನಿಚ್ಚಳವಾಗಿ ಕಥೆಯಲ್ಲಿನ ಕೃತಕತೆಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ. ನಿರೂಪಣೆಯಲ್ಲಿ ಇಲ್ಲದ ವೇಗವನ್ನು ಸಂಕಲನದಲ್ಲಿಯಾದರೂ ಸಾಧಿಸಬಹುದಾದ ಸಾಧ್ಯತೆಯನ್ನೂ ಕೈಚೆಲ್ಲಲಾಗಿದೆ.

ಇದು ಮನೆಯ ಕಿಟಕಿಯ ಪಕ್ಕ ಕುಂಡದಲ್ಲಿ ಇಟ್ಟು ನೀರೆರೆದು, ಬೇಕಾದ ಆಕಾರಕ್ಕೆ ಕತ್ತರಿಸಿ ಬಂದವರು ವಾವ್‌ ಎನ್ನಲಿ ಎಂದೇ ಬೆಳೆಸಿದ ಕಾಫಿ ಗಿಡ. ತೋಟದ ಸತ್ವ ಮತ್ತು ಸ್ವಚ್ಚಂದತೆ ಎರಡನ್ನೂ ಇಲ್ಲಿ ನಿರೀಕ್ಷಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.