ADVERTISEMENT

ಚಚ್ಚುವ ಕಿಂಗ್, ಚುಚ್ಚುವ ಚೀಲ

‘ಸ್ಟೈಲ್‌ ಕಿಂಗ್‌’

​ಪ್ರಜಾವಾಣಿ ವಾರ್ತೆ
Published 14 ಮೇ 2016, 5:12 IST
Last Updated 14 ಮೇ 2016, 5:12 IST
ಚಚ್ಚುವ ಕಿಂಗ್, ಚುಚ್ಚುವ ಚೀಲ
ಚಚ್ಚುವ ಕಿಂಗ್, ಚುಚ್ಚುವ ಚೀಲ   

ನಿರ್ಮಾಪಕ: ಮಾರುತಿ ಜಡಿಯವರ್
ನಿರ್ದೇಶಕ: ಪಿ.ಸಿ. ಶೇಖರ್
ತಾರಾಗಣ: ಗಣೇಶ್, ರೆಮ್ಯಾ ನಂಬಿಸನ್‌, ರಂಗಾಯಣ ರಘು, ಸಾಧುಕೋಕಿಲ

‘ಟೆನ್ಷನ್‌ನಲ್ಲೂ ನಗ್ತಾ ಇರೋನು ಕಿಂಗ್ ಕಣೋ’– ಗಣೇಶ್ ಸಿಟ್ಟಿನಿಂದ ಹೇಳುವ ಸಂಭಾಷಣೆ ಪ್ರೇಕ್ಷಕನಿಂದ ಭಾರೀ ಶಿಳ್ಳೆ ಗಿಟ್ಟಿಸುವುದಿಲ್ಲ. ಇದು ಲವ್ವರ್‌ ಬಾಯ್‌ ಇಮೇಜಿನ ಜತೆಗೆ ಆ್ಯಕ್ಷನ್‌ ಪಾತ್ರದಲ್ಲಿ (ದ್ವಿಪಾತ್ರ) ಮೊದಲ ಬಾರಿಗೆ ಕಾಣಿಸಿಕೊಂಡಿರುವ ಗಣೇಶ್, ಅಭಿಮಾನಿಗಳ ನಿರೀಕ್ಷೆಯ ಮಟ್ಟ ಮುಟ್ಟಲಿಲ್ಲ ಎಂಬುದರ ಸಾಕ್ಷಿಯೂ ಇರಬಹುದು.

ಗಣೇಶ್ ಅಭಿನಯದಲ್ಲಿ ಸಿಗುವ ಪಟಪಟ ಮಾತುಗಳು, ಮುಗ್ಧ ನಗೆ ಇಲ್ಲಿ ಕಾಣುವುದಿಲ್ಲ. ಕೌಟುಂಬಿಕ ಡ್ರಾಮಾ, ಪ್ರೀತಿ ಪ್ರೇಮವೂ ಇಲ್ಲ. ಹೊಡಿ ಬಡಿಯ ಸಾಹಸ ದೃಶ್ಯಗಳೂ ಅಪೂರ್ಣ. ಬಾಯಲ್ಲಿ ಸಿಗಾರ್, ಗಡ್ಡದಾರಿ ಸ್ಟೈಲ್‌ಕಿಂಗ್ ಗಣೇಶ್ ಪಾತ್ರದಲ್ಲಿ ಗಟ್ಟಿತನ, ಸಂಭಾಷೆಯಲ್ಲಿನ ಏರಿಳಿತ ಅಷ್ಟಕ್ಕಷ್ಟೆ. ಎಲ್ಲವೂ ಚೌಚೌ. ಪ್ರೇಕ್ಷಕನಿಗೆ ಅರೆಬರೆ ಮನರಂಜನೆ.

ADVERTISEMENT

ಪ್ರಥಮಾರ್ಧದಲ್ಲಿ ಎರಡು ಎಳೆಯಲ್ಲಿ ಕಥೆ ಹೇಳುವ ನಿರ್ದೇಶಕ ಪಿ.ಸಿ. ಶೇಖರ್, ನಂತರ ಒಂದೇ ಗೆರೆಯಲ್ಲಿ ಜೋಡಿಸಿದ್ದಾರೆ. ಈ ಜೋಡಣೆಯ ಕುಸುರಿಯಲ್ಲಿ ಕಲಾತ್ಮಕತೆ ಕೈತಪ್ಪಿದೆ. ಹೊಡೆದಾಟದ ದೃಶ್ಯಗಳು ಮಾದಕ ಪದಾರ್ಥದ ಚೀಲವನ್ನು ವಶ ಮಾಡಿಕೊಳ್ಳಲಷ್ಟಕ್ಕೇ ಸೀಮಿತವಾಗಿವೆ. ಡ್ರಗ್ಸ್‌ ಚೀಲ ಒಬ್ಬರಿಂದ ಇನ್ನೊಬ್ಬರು ಎಗರಿಸುವುದೇ ಕಥೆಯ ತಿರುಳು. ಆದರೆ, ಡ್ರಗ್ಸ್ ಮಾಫಿಯಾದ ಆಳವನ್ನು ಕಟ್ಟಿಕೊಡಲು ಚಿತ್ರದಲ್ಲಿ ಇನ್ನಷ್ಟು ವಿವರಗಳು ಬೇಕಿತ್ತು. ಹಾಗಾಗಿ, ನಿರ್ದೇಶಕರೇ ಹೇಳುವಂತೆ ಈ ಚಿತ್ರಕಥೆ ಇನ್ನೊಂದು ಚಿತ್ರದ ಪೀಠಿಕೆಯೂ ಹೌದು.

ಮಾಮೂಲಿ ಗಣೇಶ ಮಧ್ಯಮ ವರ್ಗದ ಕುಟುಂಬದವನು. ಮತ್ತೊಬ್ಬ ಕಳ್ಳ. ಪೊಲೀಸ್‌ ಇನ್‌ಸ್ಟೆಕ್ಟರ್‌ ಆಗುವ ಕನಸು ಕಾಣುವ ಮಧ್ಯಮ ಕುಟುಂಬದ ಗಣೇಶನಿಗೆ ಬೇಜವಾಬ್ದಾರಿ ಅಪ್ಪ (ರಂಗಾಯಣ ರಘು), ಅಮ್ಮ (ಪದ್ಮಜಾರಾವ್). ಅಪ್ಪನ ಸಾಲ, ಸಿಗದ ಉದ್ಯೋಗ, ಪ್ರೇಯಿಸಿ ಮನೆಯ ಸಮಸ್ಯೆ ಆತನನ್ನು ಕಾಡುತ್ತವೆ. ಮತ್ತೊಬ್ಬ ಗಣೇಶ್, ಡ್ರಗ್ಸ್‌ ಕದ್ದು ಮಾರುವ ಚಾಲಾಕಿ. ಈತ ಎದುರಿಗೆ ಸಿಕ್ಕವರನ್ನೆಲ್ಲ ಏಕೆ ಚಚ್ಚುತ್ತಾನೆ ಎನ್ನುವ ಪ್ರಶ್ನೆಗೆ ಉತ್ತರ ಕೊನೆಗೂ ಗೊತ್ತೇ ಆಗುವುದಿಲ್ಲ. ಅಂತಿಮವಾಗಿ ಎರಡೂ ಗಣೇಶಂದಿರು ಮುಖಾಮುಖಿಯಾಗುತ್ತಾರೆ.

ಸಾಧು ಕೋಕಿಲ ಒಂದಿಷ್ಟು ನಗಿಸುತ್ತಾರೆ. ನಾಯಕಿ ರೆಮ್ಯಾ ನಂಬಿಸನ್‌ ಅಭಿನಯಕ್ಕೆ ಅವಕಾಶ ಕಡಿಮೆ. ಅರ್ಜುನ್ ಜನ್ಯ ಸಂಯೋಜನೆಯಲ್ಲಿ ಎರಡು ಹಾಡುಗಳು ಗುನುಗುನಿಸುವಂತಿವೆ. ರವಿವರ್ಮ ಸಾಹಸ ದೃಶ್ಯಗಳಲ್ಲಿ ಕೊಂಚ ಹೊಸತನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.