ADVERTISEMENT

ಚದುರಿದ ಸ್ವಪ್ನಗಳು

ಗಣೇಶ ವೈದ್ಯ
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST

ಸನ್ನಿವೇಶ1: ಅದೊಂದು ‘ಲಿವಿಂಗ್ ಟುಗೆದರ್’ ಜೋಡಿ. ಅವರಿಗೊಂದು ಮಗು. ಹೆಂಡತಿ ಮಗುವನ್ನು ಬೆಟ್ಟದ ತುದಿಗೆ ಕರೆದುಕೊಂಡು ಹೋಗುವ ಗಂಡ ಅವರಿಬ್ಬರನ್ನು ಪ್ರಪಾತಕ್ಕೆ ಆಹುತಿಯಾಗಿಸುತ್ತಾನೆ (ಗೊಂದಲ ಮೂಡಿಸುವುದರ ಹೊರತು ಇದರಲ್ಲಿ ಬೇರಾವ ಉದ್ದೇಶವಿಲ್ಲ).

ಸನ್ನಿವೇಶ 2: ಹುಡುಗಿಯನ್ನು ಹಿಂಬಾಲಿಸಿದ ನಾಯಕನನ್ನು ಕಣಿ ಹೇಳುವ ಹೆಂಗಸೊಬ್ಬಳು ತಡೆದು ‘ನೀನು ಜಗದೇಕ ಮಲ್ಲ. ನಿನ್ನನ್ನು ಪಡೆಯುವುದು ಸುಲಭವಲ್ಲ’ ಎನ್ನುತ್ತಾಳೆ (ಈ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಫ್ಲಾಶ್‌ಬ್ಯಾಕ್ ‘ಮಗಧೀರ’ ಚಿತ್ರದ ಸನ್ನಿವೇಶವನ್ನು ನಕಲಿಸಿದೆ). ಇವೆರಡೂ ಸನ್ನಿವೇಶಗಳಿಗೂ ಚಿತ್ರದ ಮುಖ್ಯ ಕಥೆಗೂ ಎಳ್ಳಷ್ಟೂ ಸಂಬಂಧ ಇಲ್ಲದಿರುವುದು ವಿಪರ್ಯಾಸ.

ಕೆಲಸವಿಲ್ಲದ, ಕಂಡವರ ಕಷ್ಟಕ್ಕೆ ಕರಗುವ, ವಂಚನೆ ಮಾಡಿಯಾದರೂ ಹಣ ಸಂಪಾದಿಸಿ ಅವರಿಗೆ ನೆರವಾಗುವ ನಾಯಕ ಹಾರನ್ ಕೃಷ್ಣ (ಸೃಜನ್). ಅವನಿಗೆ ಬೆಂಬಲವಾಗಿ ಚಿಕ್ಕ (ಚಿಕ್ಕಣ್ಣ). ಉಂಡಾಡಿಕೊಂಡಿರುವ ಕೃಷ್ಣ ಕವಿತೆಯ ಮೋಹಿ. ಅವನ ಮೆಚ್ಚಿನ ಕವಿ ಪ್ರಿಯಾ. ಈ ಕವಿತೆಗಳನ್ನು ಬರೆಯುತ್ತಿರುವವ ಸಿನಿಮಾ ನಿರ್ದೇಶಕನಾಗುವ ಹಂಬಲದ ಅಶೋಕ್. ಪತ್ರದ ಮೂಲಕವೇ ಕವಿ ಮತ್ತು ಓದುಗನ ಪರಿಚಯವಾಗಿ, ಅದು ಪ್ರೀತಿಗೆ ತಿರುಗುತ್ತದೆ. ಪ್ರಿಯಾ ಎಂಬ ಹೆಸರಿನಲ್ಲಿ ಹೆಣ್ಣು ಧ್ವನಿಯಲ್ಲಿ ಮಾತನಾಡುವುದು ಅಶೋಕನ ಸ್ನೇಹಿತ (ಮಿತ್ರ).

ಪ್ರಿಯಾಳನ್ನು (ಐಶ್ವರ್ಯ ಸಿಂದೋಗಿ) ಕಾಣಲೆಂದು ಬಂದ ನಾಯಕನಿಗೆ, ಈ ಹಿಂದೆ ಕಥೆ ಕಟ್ಟಿದ ಸ್ನೇಹಿತರು ಆ ಸುಳ್ಳನ್ನು ಮುಚ್ಚಿಹಾಕಲು, ಆಕೆ ಸತ್ತಿದ್ದಾಳೆಂದು ಮತ್ತೊಂದು ಕಥೆ ಕಟ್ಟುತ್ತಾರೆ. ಆದರೆ ಪ್ರಿಯಾ ಎಂಬ ಹೆಸರಿನಲ್ಲಿ ನಾಯಕನಿಗೆ ಸಿಕ್ಕ ಫೋಟೊದಲ್ಲಿದ್ದ ಹುಡುಗಿ ಆತನ ಎದುರಿನಲ್ಲೇ ಹಾದು ಹೋಗುತ್ತಾಳೆ. ಆ ಫೋಟೊ ಈ ಮೊದಲು ಬೆಟ್ಟದಿಂದ ಬಿದ್ದು ಸತ್ತ ಹುಡುಗಿಯನ್ನೂ ಹೋಲುತ್ತದೆ. ಚಿತ್ರದಲ್ಲಿ ಕುತೂಹಲ ಉಂಟು ಮಾಡುವ ಒಂದೇ ಅಂಶ ಇದು. ಪ್ರಿಯಾಳನ್ನು ಹುಡುಕಿ ಆಕೆಯ ಊರಿಗೆ ಹೋದಾಗ ಫೋಟೊದಲ್ಲಿ ನೋಡಿದ ಹುಡುಗಿ ಸಿಗುತ್ತಾಳೆ. ಈ ಮೊದಲೇ ಆಕೆ ಸತ್ತಿದ್ದಳಲ್ಲ, ಇದು ಹೇಗೆ ಸಾಧ್ಯ ಎಂದೆಲ್ಲ ತಲೆ ಕೆಡಿಸಿಕೊಳ್ಳುವ ಪ್ರೇಕ್ಷಕನಿಗೆ ‘ಇದು ದ್ವಿಪಾತ್ರ’ ಎಂಬ ಸರಳ ಪರಿಹಾರ ಸಿಕ್ಕುತ್ತದೆ. ಯಾರ್‍ಯಾರನ್ನೋ ಬೆದರಿಸಿ ದುಡ್ಡು ಕೀಳುವ ನಾಯಕನಿಗೆ ಯಾವಾಗಲೂ ತನ್ನ ನಿರೀಕ್ಷೆಗಿಂತ ಹೆಚ್ಚಿನದೇ ದಕ್ಕುತ್ತದೆ. ಪ್ರೀತಿಯ ವಿಷಯದಲ್ಲಿ ಆ ಅದೃಷ್ಟ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಕ್ಲೈಮ್ಯಾಕ್ಸ್.

ಚಿಕ್ಕಣ್ಣ ಎಂದಿನಂತೆ ನಗಿಸಿದರೆ, ಆರಂಭದಲ್ಲಿ ಕಚಗುಳಿಯಿಡುವ ಮಿತ್ರ ಕೊನೆಯ ದೃಶ್ಯದಲ್ಲಿ ಅಷ್ಟೇ ಚೆನ್ನಾಗಿ ಭಾವನೆಗಳನ್ನೂ ತಟ್ಟುತ್ತಾರೆ. ಉಳಿದ ಪಾತ್ರಗಳತ್ತ ನಿರ್ದೇಶಕರ ಗಮನ ಕಡಿಮೆ. ಶಾನ್ ಸಂಭಾಷಣೆಯಲ್ಲಿ ಹಿಡಿತವಿಲ್ಲ. ಧರ್ಮವಿಶ್ ಸಂಗೀತದ ಒಂದು ಹಾಡು ಕೇಳುವಂತಿದೆ. ಕನಿಷ್ಠ ಒಂದು ಹಾಡಿನಲ್ಲಾದರೂ ಮಲೆನಾಡಿನ ಸೌಂದರ್ಯವನ್ನು ಅನಾವರಣಗೊಳಿಸಲು ಸಿಕ್ಕ ಅವಕಾಶವನ್ನು ಛಾಯಾಗ್ರಾಹಕ ಜೆ.ಎಸ್. ವಾಲಿ ಕೈಚೆಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.