ADVERTISEMENT

ತೆಳು ಹದದ ಹೊಸರುಚಿ!

ಪದ್ಮನಾಭ ಭಟ್ಟ‌
Published 21 ಜುಲೈ 2017, 12:50 IST
Last Updated 21 ಜುಲೈ 2017, 12:50 IST
ತೆಳು ಹದದ ಹೊಸರುಚಿ!
ತೆಳು ಹದದ ಹೊಸರುಚಿ!   

ಸಿನಿಮಾ: ಆಪರೇಷನ್‌ ಅಲಮೇಲಮ್ಮ
ನಿರ್ದೇಶನ: ಸುನಿ
ನಿರ್ಮಾಪಕ: ಅಮರೇಶ್‌ ಸೂರ್ಯವಂಶಿ
ತಾರಾಗಣ: ರಿಷಿ, ಶ್ರದ್ಧಾ ಶ್ರೀನಾಥ್‌, ರಾಜೇಶ್‌ ನಟರಂಗ, ಅರುಣಾ ಬಾಲರಾಜ್‌

ಸಸ್ಪೆನ್ಸ್‌ ಕಥೆ, ಮೂರ್ನಾಲ್ಕು ಅನಿರೀಕ್ಷಿತ ಟ್ವಿಸ್ಟುಗಳು, ಸಮಪ್ರಮಾಣದಲ್ಲಿ ಪ್ರೇಮಕಥೆ, ಜತೆಗೆ ಒಂದಿಷ್ಟು ಚಟಾಕಿ ಸಂಭಾಷಣೆಗಳು, ರುಚಿಗೆ ತಕ್ಕಷ್ಟು ಭಾವುಕತೆ, ಚಪ್ಪರಿಸುವಂಥ ಒಂದೆರಡು ಹಾಡುಗಳು –  ಇಂದು ಕನ್ನಡದಲ್ಲಿ ಕಂಡುಬರುತ್ತಿರುವ ಹೊಸಥರದ ಸಿನಿಮಾಗಳನ್ನು ‘ಹೊಸರುಚಿ’ ಶೈಲಿಯಲ್ಲಿ ಹೀಗೆ ವಿವರಿಸಬಹುದು. ‘ಹೊಸರುಚಿ ಸೂತ್ರಗಳು’ ಅಡುಗೆ ತಯಾರಿಸುವ ವಿಧಾನವನ್ನು ಹೇಳುತ್ತವಷ್ಟೆ. ಕೊನೆಗೂ ಸಿದ್ಧಗೊಂಡ ಅಡುಗೆಯ ರುಚಿ ಪಾಕಗೊಳ್ಳುವುದು ಮಾಡುವ ಕೈಗಳ ಕುಶಲತೆಯ ಮೇಲೆಯೇ.

ಹತ್ತು ಜನರಿಗೆ ಎಂದು ಮಾಡಿದ ಹೊಸರುಚಿಯನ್ನು ಐವತ್ತು ಜನರಿಗೆ ಉಣಿಸುವ ಧಾವಂತದಲ್ಲಿ ಅಡುಗೆಗೆ ನೀರು ಸುರಿದರೆ ಏನಾಗುತ್ತದೆ? ಸುನಿ ನಿರ್ದೇಶನದ ‘ಆಪರೇಷನ್‌ ಅಲಮೇಲಮ್ಮ’ ಸಿನಿಮಾ ನಿಜದ ಸ್ವಾದ ಅರಿವಿಗೆ ಬಾರದೇ ಹೋಗುವುದೂ ಇದೇ ಕಾರಣಕ್ಕೆ. ಕೌತುಕತೆ ಮತ್ತು ಪ್ರೇಮಕಥೆಗಳೆಂಬ ಎರಡು ಅಂಚಿನ ಹಳಿಗಳ ಮೇಲೆ ರಂಜನೆಯ ರೈಲು ಬಿಡಲು ಹೊರಟಿದ್ದಾರೆ ಸುನಿ. ಈ ಪ್ರಯಾಣಕ್ಕೆ ಭಾವುಕತೆಯ ಲೇಪವೂ ಇದೆ.

ADVERTISEMENT

ಖ್ಯಾತ ಉದ್ಯಮಿ ಕೆನಡಿಯ ಮಗ ಜಾನ್‌ನ ಕಿಡ್ನಾಪ್‌ ಪ್ರಕರಣದೊಂದಿಗೆ ಸಿನಿಮಾ ಆರಂಭವಾಗುತ್ತದೆ. ತರಕಾರಿ ಮಾರುವ ಸಾಮಾನ್ಯ ಹುಡುಗ ಪರಮೇಶ್‌, ತನ್ನ ಬ್ರ್ಯಾಂಡ್‌ಮೋಹದ ಕಾರಣದಿಂದ ಆ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಜೈಲಿನಲ್ಲಿ ವಿಚಾರಣೆಯೊಟ್ಟಿಗೆ ಅನನ್ಯಾ ಟೀಚರ್‌ ಜತೆಗಿನ ಅವನ ಪ್ರೇಮಕಥೆಯೂ ತೆರೆದುಕೊಳ್ಳುತ್ತಾ ಹೋಗುತ್ತದೆ.

ನಿಧಾನಗತಿಯೇ ‘ಅಲಮೇಲಮ್ಮ’ನ ಮೊದಲ ಶತ್ರು! ನಿರೂಪಣೆಯಲ್ಲಿನ ಏಕತಾನತೆಯನ್ನು ಸಂಗೀತದ ಮೂಲಕ ಜೂಡಾ ಸ್ಯಾಂಡಿ ಅಲ್ಲಲ್ಲಿ ಮುರಿಯುತ್ತಾರೆ. ‘ಎಲ್ಲವನ್ನೂ ರಮ್ಯವಾಗಿ ತೋರಿಸುವುದೇ ಒಳ್ಳೆಯ ಛಾಯಾಗ್ರಹಣ’ ಎಂಬ ಸವಕಲು ಚೌಕಟ್ಟನ್ನು ಮೀರುವ ಪ್ರಯತ್ನದ ಕಾರಣಕ್ಕೆ ಅಭಿಷೇಕ ಕಾಸರಗೋಡು ಅವರ ಛಾಯಾಗ್ರಹಣ ಗಮನ ಸೆಳೆಯುತ್ತದೆ.

ನಗುವಿನಲ್ಲಿಯೂ, ಮುನಿಸಿನಲ್ಲಿಯೂ ಶ್ರದ್ಧಾ ಇಷ್ಟವಾದರೆ, ಎಲ್ಲರನ್ನೂ ನಗಿಸುವ ಲವಲವಿಕೆಯ ಹುಡುಗನಾಗಿ ರಿಷಿ ಮನಸ್ಸು ಕದಿಯುತ್ತಾರೆ. ಅಳತೆ ತೆಗೆದುಕೊಂಡು ಹೊಲಿದಂತೆ ಇಬ್ಬರಿಗೂ ಅವರ ಪಾತ್ರಗಳು ಒಪ್ಪಿವೆ. ಪೊಲೀಸ್‌ ಅಧಿಕಾರಿಯಾಗಿ ರಾಜೇಶ್‌ ನಟರಂಗ, ಧಾರಾವಾಹಿಪ್ರಿಯ ಅಮ್ಮನಾಗಿ ಅರುಣಾ ಬಾಲರಾಜ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಾನ್‌್‌ಸ್ಟೆಬಲ್‌ ಪೂಜಾರಿ ಬಾಯಿಯಿಂದ ಹೊರಬೀಳುವ ಒಂದೊಂದು ಸಂಭಾಷಣೆಗಳೂ ನಗುವುಕ್ಕಿಸುತ್ತವೆ.

ಹಾಸ್ಯ, ಲವಲವಿಕೆ, ಪ್ರೇಮದ ನವಿರುತನ, ಸಸ್ಪೆನ್ಸ್‌ ಎಳೆ ಎಲ್ಲವೂ ‘ಅಲಮೇಲಮ್ಮ’ನಲ್ಲಿ ಇವೆ. ಆದರೆ ಅವು ಕೊಂಚ ಚದುರಿಹೋಗಿವೆ. ಅವುಗಳನ್ನು ಹೊಂದಿಸಿಕೊಂಡು ಅನುಭವಿಸಬಲ್ಲವರಿಗೆ ಅಲಮೇಲಮ್ಮನ ಆಪರೇಷನ್‌ ಯಶಸ್ವಿ ಅನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.