ADVERTISEMENT

ನಗರದ ಬದುಕಿಗೆ ಪಾತಾಳಗರಡಿ

ಶುದ್ಧಿ/ನಾವು ನೋಡಿದ ಸಿನಿಮಾ

ಗಣೇಶ ವೈದ್ಯ
Published 17 ಮಾರ್ಚ್ 2017, 13:11 IST
Last Updated 17 ಮಾರ್ಚ್ 2017, 13:11 IST
ನಗರದ ಬದುಕಿಗೆ ಪಾತಾಳಗರಡಿ
ನಗರದ ಬದುಕಿಗೆ ಪಾತಾಳಗರಡಿ   
ಶುದ್ಧಿ
ನಿರ್ಮಾಪಕರು: ನಂದಿನಿ ಮಾದೇಶ್, ಮಾದೇಶ್ ಟಿ. ಭಾಸ್ಕರ್
ನಿರ್ದೇಶಕ: ಆದರ್ಶ್ ಎಚ್. ಈಶ್ವರಪ್ಪ
ತಾರಾಗಣ: ನಿವೇದಿತಾ, ಲಾರನ್ ಸ್ಪಾರ್ಟಾನೋ, ಅಮೃತಾ ಕರಗಡ
 
ರೌಡಿಸಂ ಹಾಗೂ ನವಿರು ಪ್ರೇಮದ ಕಥನಗಳ ಮೂಲಕವೇ ಮಹಾನಗರಗಳನ್ನು ಚಿತ್ರಿಸುವ ಸಾಲು ಸಾಲು ಸಿನಿಮಾಗಳ ನಡುವೆ, ನಗರ ಸಂವೇದನೆಯನ್ನು ಭಿನ್ನವಾಗಿ ಕಟ್ಟಿಕೊಡಲು ಪ್ರಯತ್ನಿಸುವ ಸಿನಿಮಾ ‘ಶುದ್ಧಿ’.
 
ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಲು ಸಿನಿಮಾ ಮಾಧ್ಯಮವನ್ನು ಗಂಭೀರವಾಗಿ ಬಳಸಿಕೊಂಡ ಕಾರಣಕ್ಕಾಗಿ ನಿರ್ದೇಶಕರು ಅಭಿನಂದನಾರ್ಹರು. ದೆಹಲಿಯಲ್ಲಿ ನಡೆದ ‘ನಿರ್ಭಯಾ’ ಅತ್ಯಾಚಾರ ಪ್ರಕರಣ, ಬೆಂಗಳೂರಿನಲ್ಲಿ ಎಟಿಎಂನಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ, ಕರಾವಳಿ ಭಾಗದಲ್ಲಿನ ನೈತಿಕ ಪೊಲೀಸ್‌ಗಿರಿ – ಹೀಗೆ ಅನೇಕ ಘಟನೆಗಳನ್ನು ಒಂದು ಕಥೆಯ ಎಳೆಯಲ್ಲಿ ಜೋಡಿಸುವ ಪ್ರಯತ್ನದಲ್ಲಿ ಅವರು ಬಹುಮಟ್ಟಿಗೆ ಸಫಲರಾಗಿದ್ದಾರೆ. 
 
ಜ್ಯೋತಿ (ನಿವೇದಿತಾ) ಮತ್ತು ದಿವ್ಯಾ (ಅಮೃತಾ) ಪತ್ರಕರ್ತೆಯರು. ಅವರಿಬ್ಬರೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕಗಳನ್ನು ಸಂಘಟಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ದಿವ್ಯಾ ಸ್ವಯಂ ಪ್ರೇರಿತಳಾಗಿ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುತ್ತಿದ್ದಾಳೆ.
 
ಇನ್ನೊಂದು ಕಡೆ, ‘ಹೆಣ್ಣಿಗೆ ಜಗತ್ತಿನ ಯಾವ ಜಾಗವೂ ಸುರಕ್ಷಿತವಲ್ಲ’ ಎನ್ನುವ ಅಮೆರಿಕ ಮೂಲದ ಯುವತಿ ಕ್ಯಾರ್ಲಿನ್ (ಲಾರನ್) ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಗೆ ತೆರಳಿ ಮೊದಲೇ ನಿರ್ಧರಿಸಿದ ಒಂದಷ್ಟು ಜನರನ್ನು ಹುಡುಕಿ ಗುಂಡಿಕ್ಕಿ ಕೊಲ್ಲುತ್ತಿರುತ್ತಾಳೆ.

‘ಹೋರಾಟ ಕಾನೂನಿಗೆ ವಿರುದ್ಧವಾದದ್ದು ಎಂದು ಭಾವಿಸಬೇಕಿಲ್ಲ. ಅದು ಕಾನೂನಿನ ಅಗತ್ಯವೇ’ ಎನ್ನುವ ಜ್ಯೋತಿಯ ಮಾತುಗಳು ಕಾನೂನಿನಲ್ಲಿರುವ ಹುಳುಕುಗಳನ್ನು ಎತ್ತಿತೋರಿಸುತ್ತದೆ.
 
‘ಕೊಲ್ಲಲೆಂದೇ ಸಿದ್ಧವಾಗಿದ್ದೇವೆಂದರೆ ಅದು ಕಷ್ಟವೇನಲ್ಲ’ ಎಂದು ಕ್ಯಾರ್ಲಿನ್ ನಂಬಿದ್ದಾಳೆ. ಹಾಗೇ ಮೊದಮೊದಲು ಹೆಣ ಉರುಳುವುದು ಪ್ರೇಕ್ಷಕನಿಗೆ ಗೊಂದಲ ಉಂಟುಮಾಡಿದರೂ ಅದನ್ನು ನೋಡುವುದೂ ಸಹಜವಾಗಿಬಿಡುತ್ತದೆ. 
 
ಸ್ತ್ರೀ ಶೋಷಣೆ, ಅಪರಾಧಿಗಳಿಗೆ ಪಾರಾಗಲು ಕಾನೂನಿನಲ್ಲಿಯೇ ಇರುವ ಸೋರುಕಿಂಡಿಗಳು, ಹೆಣ್ಣಿನ ಅಸ್ಮಿತೆ, ಹೀಗೆ ಹಲವು ಸಾಧ್ಯತೆಗಳನ್ನು ತಟ್ಟಿ ತೆರೆಯುತ್ತ ಸಾಗುವ ಸಿನಿಮಾ ಕೊನೆಗೂ ಒಬ್ಬಳು ಹುಡುಗಿಯ ಸೇಡಿನ ಕಥೆಯಾಗಿ ಕೊನೆಗೊಳ್ಳುವುದು ಕೊಂಚ ನಿರಾಸೆ ಹುಟ್ಟಿಸುತ್ತದೆ.

ಎರಡು ಭಿನ್ನ ಕಾಲಘಟ್ಟದಲ್ಲಿ ನಡೆಯುವ ಕಥನಗಳನ್ನು ಮಿಳಿತಗೊಳಿಸಿ ನಿರೂಪಿಸುವಲ್ಲಿ ಸಂಕಲನಕಾರರ (ರಾಮಿಸೆಟ್ಟಿ ಪವನ್) ಚಳಕ ಎದ್ದು ಕಾಣುತ್ತದೆ. ಅಂತಿಮವಾಗಿ ಈ ತಂತ್ರವೂ ನಿರ್ದೇಶಕರ ಬುದ್ಧಿವಂತಿಕೆಯ ಪ್ರದರ್ಶನವಾಗಿ ಕಾಣುತ್ತದೆಯೇ ಹೊರತು, ಸಿನಿಮಾದ ಕಥನಕ್ಕೆ ಹೆಚ್ಚಿನದೇನನ್ನೂ ನೀಡುವುದಿಲ್ಲ. 
 
ಆ್ಯಂಡ್ರೂ ಆಯಿಲೊ ಛಾಯಾಗ್ರಹಣ ಸಿನಿಮಾದ ಪ್ರಮುಖ ಧನಾತ್ಮಕ ಅಂಶ. ಕೆಲವು ದೃಶ್ಯಗಳಂತೂ ಸಿನಿಮಾ ಎಂಬುದನ್ನೂ ಮರೆಸಿ ಮನಸ್ಸನ್ನು ತಲ್ಲಣಗೊಳಿಸುವಷ್ಟು ಶಕ್ತವಾಗಿವೆ. ಜೆಸ್ಸಿ ಕ್ಲಿಂಟನ್ ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದೆ.
 
ನಿವೇದಿತಾ, ಶಶಾಂಕ್ ಪುರುಷೋತ್ತಮ್, ಸಿದ್ಧಾರ್ಥ್ ಮಾಧ್ಯಮಿಕ, ಲಾರನ್ ಎಲ್ಲರೂ ಗಮನ ಸೆಳೆಯುತ್ತಾರೆ. ಬೆರಳೆಣಿಕೆಯ ಜನಪ್ರಿಯ ಮುಖಗಳ ಹೊರತಾಗಿ ಉಳಿದ ಕಲಾವಿದರನ್ನು ರಂಗಭೂಮಿ ಮತ್ತು ಕಿರುತೆರೆಯಿಂದ ಆಯ್ಕೆ ಮಾಡಿಕೊಂಡ ನಿರ್ದೇಶಕರನ್ನು ಮೆಚ್ಚಬೇಕು. ಚಿತ್ರಕಥೆಯ ಭಾಗವಾಗಿ ಹೇರಳ ಇಂಗ್ಲಿಷ್ ಸಂಭಾಷಣೆ ಬಳಸಲಾಗಿದ್ದರೂ, ಕನ್ನಡದ ಸಬ್ ಟೈಟಲ್ ಕೊಡುವಷ್ಟು ಔದಾರ್ಯವನ್ನು ನಿರ್ದೇಶಕರು ತೋರಿಸಿಲ್ಲ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.