ADVERTISEMENT

ನಿಲ್ಲದ ಹುಡುಕಾಟ; ಮುಗಿಯದ ಪರದಾಟ

ಪದ್ಮನಾಭ ಭಟ್ಟ‌
Published 8 ಡಿಸೆಂಬರ್ 2017, 10:39 IST
Last Updated 8 ಡಿಸೆಂಬರ್ 2017, 10:39 IST
ನಿಲ್ಲದ ಹುಡುಕಾಟ; ಮುಗಿಯದ ಪರದಾಟ
ನಿಲ್ಲದ ಹುಡುಕಾಟ; ಮುಗಿಯದ ಪರದಾಟ   

ಸಿನಿಮಾ: ಅನ್ವೇಷಿ

ನಿರ್ಮಾಪಕ: ವಿ. ಜಯರಾಂ

ನಿರ್ದೇಶಕ: ವೇಮಗಲ್‌ ಜಗನ್ನಾಥ್‌ ರಾವ್‌

ADVERTISEMENT

ತಾರಾಗಣ: ತಿಲಕ್‌, ರಘು ಭಟ್‌, ರಮೇಶ್‌ ಭಟ್‌, ಅನು ಅಗರ್ವಾಲ್‌, ವಿಕ್ರಂ ಸೂರಿ, ಶ್ರದ್ಧಾ ಶರ್ಮ

ಶೀರ್ಷಿಕೆಯೇ ಸೂಚಿಸುವಂತೆ ‘ಅನ್ವೇಷಿ’ ಚಿತ್ರ ಆರಂಭವಾಗುವುದೇ ಹುಡುಕಾಟದ ಮೂಲಕ. ಚಿತ್ರದ ನಾಯಕ ನಿರಂತರವಾಗಿ ಒಬ್ಬರಲ್ಲ ಒಬ್ಬರನ್ನು ಹುಡುಕುತ್ತಲೇ ಇರುತ್ತಾನೆ. ಅವನು ಬಯಸುವವರು ಸಿಗುವುದೂ ಕಷ್ಟವೂ ಅಲ್ಲ. ಸುಲಭವಾಗಿಯೇ ಸಿಕ್ಕುಬಿಡುತ್ತಾರೆ. ಅಷ್ಟು ಸುಲಭವಾಗಿ ಸಿಕ್ಕುಬಿಡುವುದರಿಂದಲೇ ಏನೋ ಒಂದು ಸುತ್ತುಹುಡುಕಾಟ ಮುಗಿದ ಮೇಲೆ ಮತ್ತೊಂದು ಸುತ್ತು ಹುಡುಕಲು ಆರಂಭಿಸುತ್ತಾನೆ.

ತೆರೆಯ ಮೇಲೆ ಹೀಗೆ ನಿರಂತರವಾಗಿ ಅನ್ವೇಷಣೆ ನಡೆಯುತ್ತಿರುವಾಗಲೇ ನೋಡುತ್ತಿರುವ ನಮ್ಮೊಳಗೂ ಸಿನಿಮಾದಲ್ಲಿ ಸಹನೀಯವಾದದ್ದು ಏನಾದರೂ ಇದೆಯಾ ಎಂಬ ಹುಡುಕಾಟ ಆರಂಭವಾಗಿರುತ್ತದೆ. ನಿರ್ಭಾವುಕ ಮುಖಗಳು, ಇದ್ದಕ್ಕಿದ್ದಂತೆಯೇ ದುಡುಂ ಎಂದು ಧುಮುಕಿ ಬೆಚ್ಚಿಬೀಳಿಸುವ ಹಾಡುಗಳು, ಹೇಳಿ ಎಷ್ಟೋ ಹೊತ್ತಾದ ಮೇಲೆ ‘ಓಹೋ.. ಇದು ಕಾಮಿಡಿ’ ಎಂದು ಹೊಳೆಯಿಸುವ ಸಂಭಾಷಣೆಗಳು, ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಕೊಟ್ಟಂತೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಕ್ಷಣಾರ್ಧದಲ್ಲಿ ಜಿಗಿಯುವ ಕಥೆಯೆಂಬ ಮರೀಚಿಕೆ... ಫೈಟಿಂಗ್‌ ದೃಶ್ಯದಲ್ಲಿಯೂ ಟೊಯ್‌.... ಟುಯ್‌... ಎಂದೆಲ್ಲ ನಗುವುಕ್ಕಿಸುವ ಹಿನ್ನೆಲೆ ಸಂಗೀತ... ಇಂಥ ಹತ್ತು ಹಲವು ಆಘಾತಕಾರಿ ಸಂಗತಿಗಳ ನಡುವೆ ಸಿಗುವ ಮೊದಲ ಸಮಾಧಾನಕರ ಅಂಶ ಮಧ್ಯಂತರ!!

ಆರನೇ ಇಂದ್ರಿಯ ಇರುವ ಬಾಲಕನೊಬ್ಬ ನಾಯಕ ಆದಿತ್ಯನಿಗೆ ‘ಈ ಅಮವಾಸ್ಯೆಯ ಒಳಗಾಗಿ ನಿನ್ನ ಕಾಲೇಜ್‌ ಸ್ನೇಹಿತರ ಗುಂಪನ್ನೆಲ್ಲ ಒಂದೆಡೆ ಸೇರಿಸು. ಇಲ್ಲದಿದ್ದರೆ ದುಷ್ಟ ಶಕ್ತಿಯಿಂದ ನೀವೆಲ್ಲರೂ ಸಾಯುವಿರಿ’ ಎಂದು ಭವಿಷ್ಯ ನುಡಿಯುತ್ತಾನೆ. ಮೂರು ವರ್ಷಗಳ ಹಿಂದೆ ಕಾಲೇಜಿನಲ್ಲಿ ಸ್ನೇಹಿತರಾಗಿದ್ದ ಎಲ್ಲರನ್ನೂ ಹುಡುಕುವ ಕೆಲಸ ಅಲ್ಲಿಂದ ಶುರು. ಅದರಲ್ಲಿ ನಾಯಕನಿಗೆ ಅವನ ಸ್ನೇಹಿತ (ವಿಕ್ರಂ ಸೂರಿ) ನೆರವಾಗುತ್ತಾನೆ.

ಆ ಸ್ನೇಹಿತರನ್ನು ಕಾಡುತ್ತಿರುವ ಆ ದುಷ್ಟಶಕ್ತಿ ಯಾವುದು? ಅದು ಯಾಕೆ ಇವರ ಬೆನ್ನು ಬಿದ್ದಿದೆ? ಅವರೆಲ್ಲರೂ ಒಟ್ಟಿಗೆ ಸೇರಿದರೆ ಸಮಸ್ಯೆ ಹೇಗೆ ನಿವಾರಣೆಯಾಗುತ್ತದೆ? ಈ ಎಲ್ಲ ಪ್ರಶ್ನೆಗಳ ಸುತ್ತ ಸಿನಿಮಾ ಸುತ್ತುತ್ತದೆ. ಹಾಗೆಂದು ಈ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರವಾಗಲಿ, ಗಟ್ಟಿಯಾದ ಸಮರ್ಥನೆಯಾಗಲಿ ಇದೆ ಎಂದಲ್ಲ. ಇಲ್ಲಿ ನಡೆಯುವ ಯಾವ ಘಟನೆಗಳಿಗೂ ತಾರ್ಕಿಕ ಕಾರಣಗಳು ಇಲ್ಲ. ಒಂದಾದಮೇಲೆ ಒಂದರಂತೆ ನಡೆಯುತ್ತಲೇ ಇರುತ್ತವೆ ಅಷ್ಟೆ. ಕೈದಿ ಜೈಲಿನಿಂದ ಸಂಜೆ ವಾಯುವಿಹಾರಕ್ಕೆ ಹೋಗುವಷ್ಟೇ ಸುಲಭವಾಗಿ ತಪ್ಪಿಸಿಕೊಂಡು ಹೋಗುತ್ತಾನೆ. ಗೃಹಿಣಿ ಇದ್ದಕ್ಕಿದ್ದಂತೆ ಮೈಮೇಲಿನ ಬಟ್ಟೆಗಳನ್ನೆಲ್ಲ ಸರಿಸಿಕೊಂಡು ನುಲಿಯುತ್ತಾ ಕುಣಿಯಲಾರಂಭಿಸುತ್ತಾಳೆ. ಒಂದು ದೃಶ್ಯದಲ್ಲಿ ಎಡಗಡೆಯಿದ್ದ ಹಣೆ ಮೇಲಿನ ಗಾಯ ಮರುದೃಶ್ಯದಲ್ಲಿ ಬಲಗಡೆಗೆ ಸ್ಥಳಾಂತರಗೊಂಡಿರುತ್ತದೆ. ಮೋಜು ಮಸ್ತಿಯಲ್ಲಿ ಮಿಂದಿರುತ್ತಿದ್ದ ನಾಯಕ ಮೂರು ದಿನಗಳಲ್ಲಿ ಮಹಾಯೋಗಿಯಾಗಿ ಬದಲಾಗಿಬಿಡುತ್ತಾನೆ.  ಇಂಥ ಚೇಷ್ಟೆಗಳನ್ನೆಲ್ಲ ಪ್ರಶ್ನಿಸುವಂತಿಲ್ಲ. ಯಾಕೆಂದರೆ ಇದು ಆತ್ಮದ ಕಥೆ. ಆತ್ಮಕ್ಯಾವ ತರ್ಕ?

ಡಾಕ್ಟರ್‌ ಆಗಿ ರಮೇಶ್‌ ಭಟ್‌, ಸಾಧುವಾಗಿ ಅವಿನಾಶ್‌ ಹೀಗೆ ಬಂದು ಹಾಗೆ ಹೋಗುತ್ತಾರೆ. ದೆವ್ವದ ಕಥೆಯಾಗಿದ್ದರೂ ಸಿನಿಮಾದೊಳಗೆ ಎಲ್ಲಿಯೂ ಬೆಚ್ಚಿಬೀಳಿಸುವ ಅಂಶಗಳು ಇಲ್ಲ. ಇಂಥ ಸಿನಿಮಾಗಳ ಬಗ್ಗೆಯೇ ನೋಡುಗರಿಗೆ ಭಯ ಹುಟ್ಟಿಸುವ ಕಾರಣದಿಂದ ‘ಅನ್ವೇಷಿ’ಯನ್ನು ಹಾರರ್‌ ಜಾನರ್‌ಗೆ ಸೇರಿಸಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.