ADVERTISEMENT

ಪಾರ್ಥಿಬನ್ ಅಭಿಮಾನಿಗಳಿಗೆ ಈ ಸಿನಿಮಾ!

ವಿಜಯ್ ಜೋಷಿ
Published 21 ಜುಲೈ 2017, 14:39 IST
Last Updated 21 ಜುಲೈ 2017, 14:39 IST
ಪಾರ್ಥಿಬನ್ ಅಭಿಮಾನಿಗಳಿಗೆ ಈ ಸಿನಿಮಾ!
ಪಾರ್ಥಿಬನ್ ಅಭಿಮಾನಿಗಳಿಗೆ ಈ ಸಿನಿಮಾ!   

ಚಿತ್ರ: ದಾದಾ ಈಸ್ ಬ್ಯಾಕ್‌
ತಾರಾಗಣದಲ್ಲಿ: ಪಾರ್ಥಿಬನ್, ಶರತ್ ಲೋಹಿತಾಶ್ವ, ಅರುಣ್, ಅಜಯ್ ರಾಜ್, ಶ್ರಾವ್ಯಾ, ಸುಧಾರಾಣಿ, ದತ್ತಣ್ಣ
ನಿರ್ಮಾಪಕ: ಅಜಯ್ ರಾಜ್ ಅರಸ್, ಆರ್. ಶಂಕರ್
ನಿರ್ದೇಶನ: ಸಂತೋಷ್

ಒಂದು ಮಾರುಕಟ್ಟೆಯ ಮೇಲೆ ಹಿಡಿತಕ್ಕಾಗಿ ಎರಡು ಗ್ಯಾಂಗ್‌ಗಳ ನಡುವಣ ಹೋರಾಟ. ಎರಡೂ ಗ್ಯಾಂಗ್‌ಗಳ ಕಡೆಯವರು ಬಲಾಢ್ಯರು. ಚಿತ್ರದ ಕೊನೆಯಲ್ಲಿ ನಡೆಯುವ ಗ್ಯಾಂಗ್‌ ವಾರ್‌ ನಂತರ, ಒಂದು ಗ್ಯಾಂಗ್‌ ಗೆಲುವು ಸಾಧಿಸುತ್ತದೆ. ಇನ್ನೊಂದು ಗ್ಯಾಂಗ್‌ ಸೋಲುತ್ತದೆ.

ಇದು ದಾದಾ ಈಸ್ ಬ್ಯಾಕ್‌ ಸಿನಿಮಾದ ಕಥಾಹಂದರ ಎಂದು ಹೇಳಿದರೆ, ‘ಇದರಲ್ಲೇನಿದೆ ಹೊಸದು’ ಎಂಬ ಪ್ರಶ್ನೆ ಖಂಡಿತ ಎದುರಾಗುತ್ತದೆ. ಕಥೆ ಇಷ್ಟೇ ಆಗಿದ್ದರೆ, ‘ಇದರಲ್ಲಿ ಹೊಸದೇನೂ ಇಲ್ಲ’ ಎಂದು ಖಂಡತುಂಡವಾಗಿ ಹೇಳಬಹುದು. ಆದರೆ, ಸಿನಿಮಾದಲ್ಲಿ ಗ್ಯಾಂಗ್‌ ವಾರ್‌ ಮಾತ್ರವಲ್ಲದೆ ಒಂದಿಷ್ಟು ಭಾವುಕ ಸನ್ನಿವೇಶಗಳು, ಪಡ್ಡೆಗಳಿಗೆ ಇಷ್ಟವಾಗಬಹುದಾದ ಒಂದೆರಡು ಹಾಡುಗಳು ಮತ್ತು ತಮಿಳು ನಟ ಪಾರ್ಥಿಬನ್ ಅವರ ಅಭಿನಯವಿದ್ದರೆ ಅಂತಹ ಸಿನಿಮಾ ತುಸು ಭಿನ್ನವಾಗಿದೆ ಎನ್ನಬಹುದೇನೋ. ಅಂಥದ್ದೊಂದು ಸಿನಿಮಾ ಇದು.

ADVERTISEMENT

ಟಿಪ್ಪು (ಪಾರ್ಥಿಬನ್) ಹಾಗೂ ಡೆಲ್ಲಿ (ಶರತ್ ಲೋಹಿತಾಶ್ವ) ಎಂಬ ಇಬ್ಬರು ದಾದಾಗಳ ನಡುವೆ ನಡೆಯುತ್ತದೆ ಗ್ಯಾಂಗ್‌ ವಾರ್‌. ಈ ಗ್ಯಾಂಗ್‌ ವಾರ್‌ಗೆ ಕೂಡ ಒಂದು ಹಿನ್ನೆಲೆ ಇರುತ್ತದೆ. ಟಿಪ್ಪು ಇಬ್ಬರು ಹುಡುಗರನ್ನು (ಅಜಯ್ ರಾವ್ ಹಾಗೂ ಅರುಣ್) ಸಾಕಿ ಬೆಳೆಸಿರುತ್ತಾನೆ. ಈ ಹುಡುಗರ ದೆಸೆಯಿಂದಾಗಿಯೇ ಸಂಸಾರದ ಸುಖ ಕಳೆದುಕೊಂಡಿರುತ್ತಾನೆ.

ಟಿಪ್ಪು ಬಗ್ಗೆ ನಿಷ್ಠೆ, ಒಂದಿಷ್ಟು ಹುಡುಗಾಟಿಕೆಯ ಸ್ವಭಾವದ ಈ ಇಬ್ಬರು ಯುವಕರು ತಮ್ಮ ದಾದಾ ತಮ್ಮ ಕಾರಣದಿಂದಾಗಿಯೇ ಕಳೆದುಕೊಂಡ ಸಂಸಾರ ಸುಖವನ್ನು ಮತ್ತೆ ತಂದುಕೊಡಲು ಮುಂದಾಗುತ್ತಾರಾ? ಗ್ಯಾಂಗ್‌ ವಾರ್‌ನಲ್ಲಿ ಯಾರು ಉಳಿಯುತ್ತಾರೆ? ಯಾರು ಸಾಯುತ್ತಾರೆ? ಉಳಿದವರೆಲ್ಲ ಸತ್ತ ನಂತರ ಗೆದ್ದವನ ಮನಸ್ಸಿನಲ್ಲಿ ‘ಗೆದ್ದೆ’ ಎಂಬ ಭಾವನೆ ಮೂಡುತ್ತದೆಯೇ? ಅಥವಾ ಯುದ್ಧ ಗೆದ್ದ ನಂತರ ‘ಏಕೆ ಬೇಕಿತ್ತು ಈ ಹಿಂಸೆ’ ಎಂಬ ವಿಷಾದವೇ ಸ್ಥಾಯಿಯಾಗಿ ನಿಂತುಬಿಡುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾ ವೀಕ್ಷಿಸಿ ಉತ್ತರ ಕಂಡುಕೊಳ್ಳಬೇಕು.

ಕಥೆಯಲ್ಲಿ ತೀರಾ ಹೊಸತನ ಇಲ್ಲದಿದ್ದರೂ, ಪಾರ್ಥಿಬನ್ ಅಭಿಮಾನಿಗಳು ಒಮ್ಮೆ ವೀಕ್ಷಿಸಬಹುದಾದ ಸಿನಿಮಾ ‘ದಾದಾ ಈಸ್ ಬ್ಯಾಕ್’. ಪಾರ್ಥಿಬನ್ ಅವರ ಗಡಸುತನ, ಅವರ ಮೈಕಟ್ಟು, ಹಾವಭಾವ ಅವರಿಗೆ ನೀಡಿದ ಪಾತ್ರಕ್ಕೆ ತಕ್ಕಂತಿದೆ. ಹಾಗೆಯೇ, ಶರತ್ ಲೋಹಿತಾಶ್ವ ಅವರ ಅಭಿಯನ ಚೆನ್ನಾಗಿದೆ ಎಂಬುದನ್ನು ಕನ್ನಡ ಸಿನಿಮಾ ವೀಕ್ಷಕರಿಗೆ ಹೊಸದಾಗಿ ಹೇಳಬೇಕಾಗಿಲ್ಲ.

ಚಿತ್ರದ ನಾಯಕಿ ಶ್ರಾವ್ಯಾ ಅವರ ಪಾತ್ರ ಪ್ರಮುಖ ಎಂಬುದನ್ನು ಕಥೆಯೇ ಹೇಳುತ್ತದೆಯಾದರೂ, ಸಿನಿಮಾದಲ್ಲಿ ಅದು ಧ್ವನಿಸುವುದಿಲ್ಲ. ಅರುಣ್ ಮತ್ತು ಅಜಯ್ ಅವರ ನಟನೆ ಬೇಸರ ಮೂಡಿಸುವುದಿಲ್ಲ. ಆದರೆ, ಪ್ರೇಮ ಪೋಷಕರಂತೆ ಅಥವಾ ಪ್ರೇಮದ ಸಂದೇಶ ವಾಹಕರಂತೆ ಯಕ್ಷಗಾನ ಮೂವರು ಪಾತ್ರಧಾರಿಗಳನ್ನು ಸಿನಿಮಾದ ಮೊದಲಾರ್ಧದಲ್ಲಿ ಬಳಸಿಕೊಂಡಿದ್ದರ ಮರ್ಮವೇನು ಎಂಬುದು ಕಡೆಗೂ ಅರ್ಥವಾಗುವುದಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.