ADVERTISEMENT

ಬಾಡಿದ ಮಲ್ಲಿಗೆ

ಜಾಸ್ಮಿನ್‌

ಡಿ.ಎಂ.ಕುರ್ಕೆ ಪ್ರಶಾಂತ
Published 4 ಜುಲೈ 2014, 19:30 IST
Last Updated 4 ಜುಲೈ 2014, 19:30 IST
ಬಾಡಿದ ಮಲ್ಲಿಗೆ
ಬಾಡಿದ ಮಲ್ಲಿಗೆ   

ನಿರ್ಮಾಪಕರು: ಭವ್ಯಾಸ್ಮಿ ಮೂವೀ ಕ್ರಿಯೇಷನ್ಸ್‌, ನಿರ್ದೇಶನ: ವಿ.ಕೃಷ್ಣ
ತಾರಾಗಣ: ಮೋಹನ್‌, ನವ್ಯಾ, ಗಿರಿಜಾ ಲೋಕೇಶ್‌, ಸಂಗೀತಾ, ಅವಿನಾಶ್‌, ಹೊನ್ನವಳ್ಳಿ ಕೃಷ್ಣ, ಭವ್ಯ ಮತ್ತಿತರರು

ಕಳೆದ ವರ್ಷ ದೇಶದಾದ್ಯಂತ ತಲ್ಲಣ ಎಬ್ಬಿಸಿದ್ದ ದೆಹಲಿಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಪ್ರಭಾವಿತವಾದ ಚಿತ್ರ ‘ಜಾಸ್ಮಿನ್–5’. ಸಿನಿಮಾದ ಔಚಿತ್ಯ ಮತ್ತು ಆಶಯದ ಅರಿವು ನಿರ್ದೇಶಕರಿಗೆ ಇಲ್ಲದಿದ್ದರೆ, ಅತ್ಯಾಚಾರದಂಥ ಕ್ರೌರ್ಯದ ಸಂಗತಿಯೂ ವ್ಯಾಪಾರಿ ಚಿತ್ರದ ಸರಕಾಗುತ್ತದೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ. ಪ್ರಮುಖ ಘಟನೆ–ದುರ್ಘಟನೆಗಳ ಹೆಸರು ಬಳಸಿಕೊಂಡು ಯಾವ ರೀತಿ ಪ್ರಚಾರ ಪಡೆಯಬಹುದು ಎನ್ನುವ ಚಿತ್ರತಂಡದ ಜಾಣ್ಮೆಯನ್ನು ಮೆಚ್ಚಲೇಬೇಕು!

ದುರಂತದ ಪ್ರಕರಣಗಳನ್ನು ತೆರೆ ಮೇಲೆ ನಿರೂಪಿಸುವಾಗ ಎಚ್ಚರ ಅಗತ್ಯ. ಇಲ್ಲವಾದರೆ ಈಗಾಗಲೇ ಘಾಸಿಗೊಂಡಿರುವ ಮನಸ್ಸುಗಳು ಮತ್ತಷ್ಟು ಕದಡುತ್ತವೆ ಎನ್ನುವ ತಿಳಿವಳಿಕೆ ನಿರ್ದೇಶಕ ವಿ.ಕೃಷ್ಣ ಅವರಲ್ಲಿ ಇದ್ದಂತಿಲ್ಲ. ವಾಸ್ತವಗಳನ್ನು ತೆರೆದಿಡುವಾಗ ಕೆಲವು ವೇಳೆ ಎಲ್ಲದಕ್ಕೂ ಮಿತಿ ಹಾಕಲು ಸಾಧ್ಯವಿಲ್ಲ ಎಂಬುದೇನೋ ನಿಜ. ಆದರೆ ಸಂದೇಶದ ಮುಖವಾಡ ಅಂಟಿಸಿಕೊಂಡಿರುವ ‘ಜಾಸ್ಮಿನ್–5’ನಲ್ಲಿ ತುಂಬಿ ತುಳುಕುವುದು ಕ್ರೌರ್ಯ ಮತ್ತು ಬೀಭತ್ಸ. ನಾಯಕನ ಪ್ರವೇಶದ ಸಂದರ್ಭದಲ್ಲಿಯೇ ಕೇಳುವ ‘ಆಂಟಿ ಏಕೆ ನೋಡ್ತಿ, ಮಾರ್ನಿಂಗ್ ಏಕೆ ನೈಟಿ ಹಾಕ್ತಿ’ ಹಾಡು ಚಿತ್ರ ಸಾಗುವ ಹಾದಿಯನ್ನು ತೆರೆದಿಡುತ್ತದೆ.

ಗುಜರಿ ಅಂಗಡಿ ನಡೆಸುವ ಕಾರ್ತಿಕ್‌ ಮತ್ತು ನಿವೃತ್ತ ಕಮೀಷನರ್ ಮಗಳು ಜಾಸ್ಮಿನ್ ನಡುವೆ ಕ್ಷಣ ಮಾತ್ರದಲ್ಲಿಯೇ ಪ್ರೇಮಾಂಕುರವಾಗುತ್ತದೆ. ಇದಕ್ಕೆ ಮನೆಯವರ ಅಡ್ಡಿ. ಇಬ್ಬರೂ ರಾತ್ರೋರಾತ್ರಿ  ಮನೆ ತೊರೆಯುವ ನಿರ್ಧಾರ ಮಾಡುತ್ತಾರೆ. ಈ ವೇಳೆ ಆಕಸ್ಮಿಕವಾಗಿ ಐವರು ಪುಂಡರ ಸುಳಿಯಲ್ಲಿ ಜಾಸ್ಮಿನ್ ಸಿಲುಕುತ್ತಾಳೆ. ಅತ್ಯಾಚಾರಕ್ಕೊಳಗಾಗಿ ಕೊಲೆಯಾಗುವ ಜಾಸ್ಮಿನ್, ದೆವ್ವವಾಗಿ ಅವರನ್ನು ‘ಬಲಿ’ ತೆಗೆದುಕೊಳ್ಳುತ್ತಾಳೆ. ತನ್ನ ಪ್ರೇಯಸಿ ದೆವ್ವವಾಗಿರುವುದು ನಾಯಕನಿಗೆ ತಿಳಿಯುವುದು ಕ್ಲೈಮ್ಯಾಕ್ಸ್‌ನಲ್ಲಿ!

ಈ ಪ್ರೇಮಕಥೆಗೆ ಒಂದಿಷ್ಟು ಅನಗತ್ಯ ಸನ್ನಿವೇಶ, ಉಪಕಥೆಗಳನ್ನು ಜೋಡಿಸಲಾಗಿದೆ. ದೆವ್ವಕ್ಕೆ ದಿಗ್ಬಂಧನ ವಿಧಿಸಲು ಬರುವ ಶಾಸ್ತ್ರಿಗಳ (ಅವಿನಾಶ್) ಪಾತ್ರ ಮತ್ತು ಅತ್ಯಾಚಾರಿಗಳನ್ನು ಪಂಚಭೂತಗಳಲ್ಲಿ ಲೀನವಾಗಿಸುವ ತಂತ್ರ ಪ್ರೇಕ್ಷಕನ ಮುಖ ಕಿವುಚುವಂತೆ ಮಾಡುತ್ತದೆ. ಮಹಿಳಾ ದೌರ್ಜನ್ಯದ ಈ ಕಥೆಯಲ್ಲಿ ಅರೆಬೆತ್ತಲೆಯ ಐಟಂ ಹಾಡಿಗೂ ಸ್ಥಾನವಿದೆ.

‘ದೆಹಲಿ ದೇವತೆಯ ದುರಂತ ಕಥೆ’ ಎನ್ನುವ ಅಡಿಬರಹವುಳ್ಳ ಕಥೆಯನ್ನು ದುರಂತ ಮತ್ತು ಹೃದಯವಿದ್ರಾವಕವಾಗಿ ಚಿತ್ರಿಸಲಾಗಿದೆ. ಒಂದು ಕುಕೃತ್ಯದ ಕಥೆ ಕೊನೆಯಾಗುವಾಗ ಮಹಿಳಾಪರ ಘೋಷಣೆಗಳನ್ನು ಕೂಗುವುದು ಮತ್ತು ಒಬ್ಬ ಅತ್ಯಾಚಾರಿಯನ್ನು ಜನರಿಂದಲೇ ಕೊಲ್ಲಿಸುವ ಹಳೆಯ ‘ತಂತ್ರ’ಕ್ಕೆ ನಿರ್ದೇಶಕರು ಮೊರೆಹೋಗಿದ್ದಾರೆ. ಅಂತಿಮವಾಗಿ ನಾಯಕನಿಗೆ ಮದುವೆ ಮಾಡಿಸಿ ಚಿತ್ರಕ್ಕೆ ‘ಶುಭಂ’ ಹಾಡಿದ್ದಾರೆ. ನಾಯಕ ಮೋಹನ್‌ ‘ಬಂದಾ ಪುಟ್ಟ ಹೋದಾ ಪುಟ್ಟ...’ ಎಂಬಷ್ಟಕ್ಕೆ ಮಾತ್ರ ಸೀಮಿತ.

ನವ್ಯಾ ನಾಯಕಿಯಾಗಿ ಪಡೆದ ಅವಕಾಶಕ್ಕಿಂತ ದೆವ್ವವಾಗಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಸಂಕಲನಕಾರ ಕೂಡ ಕಸುಬುದಾರಿಕೆ ತೋರಿಲ್ಲ. ಹೀಗಾಗಿ ಅತ್ಯಾಚಾರ ಮತ್ತು ಕೊಲೆ ದೃಶ್ಯಗಳು ಭೀಕರ ಎನಿಸುವಂತೆ ಮೂಡಿಬಂದಿವೆ. ಯಾವ ಪಾತ್ರಗಳೂ ಮನದಲ್ಲಿ ಉಳಿದುಕೊಳ್ಳುವುದಿಲ್ಲ. ಸಂಗೀತ ಪ್ರೇಕ್ಷಕನ ಅನುಭವಕ್ಕೆ ತಟ್ಟುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT