ADVERTISEMENT

ಬೊಗಸೆಯಲ್ಲಿ ನದಿ!

ಗಣೇಶ ವೈದ್ಯ
Published 21 ಅಕ್ಟೋಬರ್ 2016, 11:26 IST
Last Updated 21 ಅಕ್ಟೋಬರ್ 2016, 11:26 IST
ಬೊಗಸೆಯಲ್ಲಿ ನದಿ!
ಬೊಗಸೆಯಲ್ಲಿ ನದಿ!   

ಸೀತಾನದಿ
ನಿರ್ಮಾಪಕ: ಎಸ್.ಡಿ. ಶೆಟ್ಟಿ
ನಿರ್ದೇಶಕ: ಕೆ. ಶರತ್
ತಾರಾಗಣ: ಶ್ರೇಯಾ, ವಿಷ್ಣು ವಲ್ಲಭ, ಹೊನ್ನವಳ್ಳಿ ಕೃಷ್ಣ, ನಂದಿನಿ

ಎಷ್ಟೇ ಅಡೆತಡೆಗಳು ಎದುರಾದರೂ ನದಿ ಹರಿಯುವ ತನ್ನ ಪ್ರಯತ್ನವನ್ನು ನಿಲ್ಲಿಸುವುದಿಲ್ಲ, ಸೋಲೊಪ್ಪುವುದಿಲ್ಲ. ಹಾಗೆಯೇ ಮನುಷ್ಯನ ಬಾಳು ನಿರಂತರ ಚಲನೆಯಲ್ಲಿರಬೇಕು. ಎಲ್ಲೋ ಏನೋ ಅವಘಡ ಸಂಭವಿಸಿದಾಗ ಜೀವನವೇ ಮುಗಿಯಿತು, ಮುಂದೆಲ್ಲ ಕತ್ತಲು, ತನ್ನಿಂದ ಏನೂ ಸಾಧ್ಯವಿಲ್ಲ ಎಂದು ಕುಳಿತರೆ ಕಾಲ ನಮ್ಮನ್ನು ನುಂಗಿಬಿಡುತ್ತದೆ. ಏನಾದರೂ ಸಾಧಿಸಬೇಕಾದರೆ ಧೈರ್ಯ ತಂದುಕೊಳ್ಳಬೇಕು, ಪರಿಸ್ಥಿತಿಯನ್ನು ಎದುರಿಸಬೇಕು. ಇಲ್ಲಿ ಸೀತಾ ಎಂಬ ನದಿ ಮತ್ತು ನೇತ್ರಾ (ಶ್ರೇಯ) ಎನ್ನುವ ಬಾಲಕಿಯ ಬದುಕನ್ನು ಒಂದೇ ರೇಖೆಯಲ್ಲಿ ಎಳೆತಂದು ಕಥೆ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಶರತ್. ನದಿಯನ್ನು ರೂಪಕವಾಗಿಟ್ಟುಕೊಂಡು ಹೆಣ್ಣಿನ ಬದುಕನ್ನು ಕಟ್ಟಿಕೊಡುವ ಅವರ ಪ್ರಯತ್ನ ತಕ್ಕಮಟ್ಟಿಗೆ ಯಶಸ್ವಿಯಾಗಿದೆ.

ಮಾಸಲು ಬಟ್ಟೆ ತೊಟ್ಟ, ಗಡ್ಡ ಬಿಟ್ಟ ವ್ಯಕ್ತಿಯೊಬ್ಬ (ವಿಷ್ಣು ವಲ್ಲಭ) ಸೀತಾನದಿ ಎಂಬ ಬಸ್ ನಿಲ್ದಾಣದಲ್ಲಿ ಇಳಿಯುತ್ತಾನೆ. ಈತ ತಮ್ಮ ಊರಿಗೆ ಕೇಡು ಬಗೆಯಲೆಂದು ಬಂದಿದ್ದಾನೆ ಎಂದುಕೊಂಡು ಊರಿನ ಒಂದಷ್ಟು ಹುಡುಗರು ಆತನನ್ನು ಥಳಿಸುತ್ತಾರೆ. ಅದಕ್ಕೂ ಕೆಲವು ವರ್ಷಗಳ ಹಿಂದೆ ಯಾರೋ ವ್ಯಕ್ತಿ ಆ ಊರಿಗೆ ಬಂದು ಊರವರ ವಿಶ್ವಾಸ ಗಳಿಸಿ, ನೇತ್ರಾ ಎಂಬ ಹುಡುಗಿಯ ಮನೆಯವರಿಗೆ ಹತ್ತಿರವಾಗಿರುತ್ತಾನೆ. ಕೊನೆಗೊಂದು ದಿನ ಊರು ಬಿಟ್ಟು ಹೋಗುವಾಗ ನೇತ್ರಾಳ ಬಾಳನ್ನು ಕತ್ತಲಿಗೆ ನೂಕಿಬಿಡುತ್ತಾನೆ.

ADVERTISEMENT

ವಿವಾಹವಾಗದೆ ಚಿಕ್ಕ ವಯಸ್ಸಿಗೇ ತಾಯಿಯಾಗುವ ಹುಡುಗಿ ಮಾನಸಿಕವಾಗಿ ಕುಗ್ಗುತ್ತಾಳೆ. ಮುಂದೆ ಅದೇ ಹುಡುಗಿ ಹಳ್ಳಿಯಲ್ಲೇ ಇದ್ದುಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆ ಬರುತ್ತಾಳೆ. ಸೀತಾನದಿಯನ್ನು ತನ್ನ ಆತ್ಮದ ಗೆಳತಿ ಎಂದುಕೊಳ್ಳುವ ನೇತ್ರಾ ಅದೇ ನದಿಯನ್ನು ಸ್ಫೂರ್ತಿಯ ಸೆಲೆಯಾಗಿ ಸ್ವೀಕರಿಸುತ್ತಾಳೆ. ತಾನು ಬೆಳೆಯುವ ದಾರಿಯಲ್ಲಿ ಏನೆಲ್ಲ ನೋವು, ತೊಡಕುಗಳನ್ನು ಎದುರಿಸಿದರೂ ಆದರ ನಡುವೆಯೇ ಸಿಗುವ ಚಿಕ್ಕ ಚಿಕ್ಕ ಆಸರೆ, ಬೆಂಬಲವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಗೌರವಯುತವಾಗಿ ಬದುಕುತ್ತಾಳೆ.

ಸೀತಾನದಿ ಊರಿನಲ್ಲಿ ನಲಿವಿಗಿಂತ ಹೆಚ್ಚಾಗಿ ಸಂಕಷ್ಟಗಳನ್ನೇ ತೋರಿಸುವುದು ಚಿತ್ರದ ಲವಲವಿಕೆಗೆ ಅಡ್ಡಿಯಾಗಿದೆ. ಕೆಲವು ದೃಶ್ಯಗಳು ಗೊಂದಲವನ್ನೂ ಉಂಟು ಮಾಡುತ್ತದೆ. ಸಂಕಲನಕಾರ ಶಿವಕುಮಾರ್ ಇನ್ನಷ್ಟು ಚುರುಕಾಗಿ ಕೆಲಸ ಮಾಡುವ ಸಾಧ್ಯತೆ ಇತ್ತು. ಎಸ್. ಪುರಂದರ ಅವರ ಸಂಗೀತದಲ್ಲಿ ಹಾಡುಗಳು ಕೇಳಿಸಿಕೊಳ್ಳುತ್ತವೆ.

ಛಾಯಾಗ್ರಾಹಕ ಮಯೂರ್ ಶೆಟ್ಟಿ ಅವರ ಕ್ಯಾಮೆರಾ ಕಣ್ಣುಗಳು ಕರಾವಳಿ ಸೀಮೆಯ ಸೊಬಗನ್ನು ಇನ್ನಷ್ಟು ಚೆನ್ನಾಗಿ ಸೆರೆಹಿಡಿಯಬಹುದಾಗಿತ್ತು. ಸೀತಾನದಿ ಹರಿಯುವ ಪ್ರದೇಶದಲ್ಲಿ ಕಥೆ ನಡೆಯುತ್ತದೆಯಾದರೂ ಅಲ್ಲಿನ ಭಾಷೆಯ ವೈಶಿಷ್ಟ್ಯ ಡಿಬಿಸಿ ಶೇಖರ್ ಅವರ ಸಂಭಾಷಣೆಯಲ್ಲಿ ಸಿಕ್ಕುವುದಿಲ್ಲ. ನಟನೆಯಲ್ಲಿ ಎಲ್ಲ ಕಲಾವಿದರಿಗೂ ಇನ್ನಷ್ಟು ಸುಧಾರಣೆಯ ಅವಕಾಶವೂ ಇದೆ. ಇಷ್ಟರ ನಡುವೆ ಸರ್ಕಾರದ ಒಂದಷ್ಟು ಯೋಜನೆ ಹಾಗೂ ಕಾಯ್ದೆಗಳ ಬಗೆಗೆ ತಿಳಿಸುವ ದೃಶ್ಯಗಳೂ ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.