ADVERTISEMENT

ಭಟ್ಟರು ಮಾಡಿದ ಹೊಸರುಚಿ!

ಪದ್ಮನಾಭ ಭಟ್ಟ‌
Published 1 ಸೆಪ್ಟೆಂಬರ್ 2017, 13:35 IST
Last Updated 1 ಸೆಪ್ಟೆಂಬರ್ 2017, 13:35 IST
ಭಟ್ಟರು ಮಾಡಿದ ಹೊಸರುಚಿ!
ಭಟ್ಟರು ಮಾಡಿದ ಹೊಸರುಚಿ!   

ಚಿತ್ರ: ಮುಗುಳುನಗೆ
ನಿರ್ಮಾಣ: ಸಯ್ಯದ್‌ ಸಲಾಂ
ನಿರ್ದೇಶನ: ಯೋಗರಾಜ ಭಟ್‌
ತಾರಾಗಣ: ಗಣೇಶ್‌, ಅಚ್ಯುತ್‌ಕುಮಾರ್‌, ಆಶಿಕಾ, ನಿಕಿತಾ, ಅಪೂರ್ವ

ಕಗ್ಗತ್ತಲ ರಾತ್ರಿ ಹಚ್ಚಿಟ್ಟ ಹಣತೆ... ಭಾವಕೋಶವ ಮೀಟುವಂಥ ಅದರ ಮೃದು ಬೆಳಕು, ಆ ಬೆಳಕು ಸುರಿವಷ್ಟೂ ದೂರ ಹೊಸತಾಗಿ ಹೊಳೆಯುವ ಹಳೆಯದೇ ಜಗತ್ತಿನ ಪರಿಕರಗಳು... ಮೆಲುವಾಗಿ ಕೇಳಿಬರುತ್ತಿರುವ ಮಧುರ ಭಾವಗೀತೆ.. ಬಾಗಿ ನೋಡಿದರೆ ಹಣತೆಯ ಎಣ್ಣೆಯಲ್ಲಿ ಕಾಣುವ ನಮ್ಮದೇ ಕ್ಲೋಸ್ ಅಪ್ ಬಿಂಬ... ಯೋಗರಾಜ್ ಭಟ್ ನಿರ್ದೇಶನದ 'ಮುಗುಳುನಗೆ' ಸಿನಿಮಾ ನೀಡುವ ಅನುಭವ ಇಂಥದ್ದು.

ಆದರೆ ಇದು ಅಷ್ಟಕ್ಕೇ ಮುಗಿಯುವುದಿಲ್ಲ. ಎಣ್ಣೆ ನೀಗುತ್ತಿದ್ದ ಹಾಗೇ ಹಣತೆ ಬೆಳಕು ತನ್ನ ಪ್ರಸನ್ನತೆ ಮೀರಿ ಭಗಭಗ ಉರಿಯುತ್ತದೆ. ಆರಿದ ಮೇಲೆ ದೀಪದ ಕುಡಿಯಗುಂಟ ಏಳುವ ಹೊಗೆಯ ಮೋಹಕ ಬಳ್ಳಿಗೆ ತುಸು ಕಮಟು ವಾಸನೆಯೂ ಇರುತ್ತದೆ. ಅದು ಕೆಲವರಿಗೆ ಇಷ್ಟವಾದರೆ, ಇನ್ನು ಕೆಲವರು ಮುಖ ಕಿವುಚುವಂತೆ ಮಾಡುತ್ತದೆ. ಇಂಥದ್ದೊಂದು ಕಮಟು ವಾಸನೆಯೂ ‘ಮುಗುಳುನಗೆ’ ಸಿನಿಮಾ ಕೊಡುವ ಅನುಭವದೊಳಗೇ ಸೇರಿಕೊಂಡಿದೆ.

ADVERTISEMENT

ಕಥೆಯಿಲ್ಲದೇ ಸಿನಿಮಾ ಮಾಡ್ತಾರೆ ಎನ್ನುವ ಆರೋಪಗಳಿಗೆ ಉತ್ತರ ಎಂಬಂತೆ ಭಟ್ಟರು ಹಲವು ಕಥೆಗಳನ್ನು ಸೇರಿಸಿ 'ಮುಗುಳುನಗೆ'ಯನ್ನು ಕಟ್ಟಿದ್ದಾರೆ. ಪ್ರೇಮದ ಹಲವು ಆಯಾಮಗಳನ್ನು ಅದರ ಜತೆಗೇ ಹೆಣೆದುಕೊಂಡಿರುವ ಬದುಕಿನ ಹಲವು ಆಯಾಮಗಳನ್ನು ಪುಲಕೇಶಿ (ಗಣೇಶ್)ಯೆಂಬ ಒಂದೇ ಕ್ಯಾನ್ವಾಸಿನಲ್ಲಿ ಬಿಡಿಸಿ ತೋರಿಸುವ ಉತ್ಸಾಹ ಅವರದು. ಅತಿಯಾದ ವಾಚಾಳಿತನ, ವಿಪರೀತ ಗದ್ದಲ, ಅತಿಭಾವುಕತೆಯ ಆಮಿಷಗಳಿಂದ ಅವರು ತಪ್ಪಿಸಿಕೊಂಡಿದ್ದಾರೆ ಎನ್ನುವುದೂ ಈ ಸಿನಿಮಾದ ಧನಾತ್ಮಕ ಅಂಶವೇ.

ಹುಟ್ಟಾ ಕಣ್ಣೀರೇ ಬಾರದ ಹುಡುಗ ಪುಲಕೇಶಿ. ಸಾಫ್ಟ್‌ವೇರ್‌ ವೃತ್ತಿಯಲ್ಲಿದ್ದರೂ ಹುಡುಗಿಯರನ್ನು ಹುಡುಕಿಕೊಂಡು ಹೋಗುವುದನ್ನೂ ಪ್ರವೃತ್ತಿಯಾಗಿಸಿಕೊಂಡಂತಿರುವ ಹುಡುಗ. ಅವನ ಮುಖದ ಮುಗುಳು ನಗೆಯ ಆಸ್ತಿಗೆ ಮರುಳಾಗುವ ಹಲವು ಹುಡುಗಿಯರು, ಬದುಕು ತಂದೊಡ್ಡುವ ತಿರುವುಗಳಿಗೆ ಎರವಾಗಿ ದೂರವೂ ಆಗಿಬಿಡುತ್ತಾರೆ. ಮೇಲ್ನೋಟಕ್ಕೆ ವೈಫಲ್ಯವಾಗಿ ಕಾಣುವ ಪ್ರೇಮಗಳೇ ನಾಯಕನ ಅಂತರಂಗದ ಭಾವುಕ ಕೊಳವನ್ನು ತುಂಬಿಸಿ ಕಣ್ಣೀರ ತುಳುಕಿಸುತ್ತವೆ.

ಸ್ಪಷ್ಟವಾಗಿ ವಿಂಗಡಿಸಬಹುದಾದ ಮೂರು ಭಾಗಗಳನ್ನೂ ಬಿಡಿಬಿಡಿಯಾಗಿ ಗಮನಿಸಿದರೆ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ. ಕನಸಿನ ಹಿಂದೆ ಬಿದ್ದ ಹುಡುಗಿ (ಆಶಿಕಾ ರಂಗನಾಥ), ಸಾಂಪ್ರದಾಯಿಕತೆಯನ್ನು ದಾಟಿ ಮುಂದೆ ಹೋದ ಹುಡುಗಿ (ನಿಕಿತಾ ನಾರಾಯಣ), ಜವಾಬ್ದಾರಿಯ ನೊಗ ಹೊತ್ತುಕೊಂಡು ಹುಸಿ ಕಾಠಿಣ್ಯವನ್ನು ಆರೋಪಿಸಿಕೊಂಡ ಹುಡುಗಿ (ಅಪೂರ್ವ ಅರೋರ) ಈ ಮೂರು ಮಾದರಿಗಳನ್ನೂ ಅಷ್ಟೇ ಅಚ್ಚುಕಟ್ಟಾಗಿ ಹೆಣೆದಿದ್ದಾರೆ. ಆದರೆ ಇವೆಲ್ಲವೂ ಸೇರಿ ಪ್ರೇಕ್ಷಕನ ಮನಸಲ್ಲಿ ಒಂದು ಇಡಿಯಾದ ಅನುಭವ ಶಿಲ್ಪವನ್ನು ಕಟ್ಟುವಲ್ಲಿ ಸಿನಿಮಾ ಪೂರ್ತಿ ಯಶಸ್ವಿ ಆಗುವುದೇ ಇಲ್ಲ. ಒಂದು ಕಥೆ ಮನಸ್ಸಿನೊಳಕ್ಕೆ ಇಳಿಯುತ್ತಿರುವ ಹಾಗೆಯೇ ಅದು ಮುಗಿದು ಹೋಗಿ ಮತ್ತೊಂದಕ್ಕೆ ಜಿಗಿಯುವ ಅನಿವಾರ್ಯ ಅವಸರವೂ ಈ ಭಗ್ನತೆಗೆ ಕಾರಣವಾಗಿರಬಹುದು.

ಕಥನದ ದಾರಿಯಲ್ಲಿ ಹಲವು ಅಪೂರ್ವ ಸಾಧ್ಯತೆಗಳನ್ನು ತೆರೆದು ಕೊನೆಗೆ ಅದನ್ನು ಅರ್ಧಮರ್ದವಾಗಿಯೇ ಬಿಟ್ಟುಬಿಡುವ ಭಟ್ಟರ ಖಯಾಲಿ ಈ ಚಿತ್ರದಲ್ಲಿಯೂ ಮುಂದುವರಿದಿದೆ. ಕಥೆಯೊಟ್ಟಿಗೇ ಒಂದು ಒಳ್ಳೆಯ ರೂಪಕದ ಸಾಧ್ಯತೆಯನ್ನು ತೆರೆಯುತ್ತ ಹೋಗುವ ‘ಮೆಟಡೋರು’ ಕೊನೆಗೆ ಏನೂ ಆಗದೇ ಮುಗಿದುಬಿಡುತ್ತದೆ. ಹಾಗೆ ನೋಡಿದರೆ ‘ನಾಯಕನಿಗೆ ಅಳು ಬರದಿರುವ ರೋಗ’ ಇಲ್ಲದಿದ್ದರೂ ಚಿತ್ರಕ್ಕೆ ಹೆಚ್ಚೇನೂ ಕುಂದು ಆಗುತ್ತಿರಲಿಲ್ಲ.

ಅಳಲಾರದೆ ನಗುವ, ನಗುತ್ತಲೇ ಒದ್ದಾಡುವ ನಿರುಪಾಯ ಹುಡುಗನ ಪಾತ್ರದಲ್ಲಿ ಗಣೇಶ್‌ ಅಭಿನಯ ಮನಗೆಲ್ಲುವಂತಿದೆ. ಮೂವರು ನಾಯಕಿಯರಾದ ಆಶಿಕಾ, ನಿಕಿತಾ, ಅಪೂರ್ವ ಕೂಡ ನಟನೆಯಲ್ಲಿ ಜಿದ್ದಿಗೆ ಬಿದ್ದಿರುವುದು ಎದ್ದು ಕಾಣುತ್ತದೆ. ಕಿರುಚಾಡುತ್ತಲೇ ಪ್ರೀತಿಸುವ ಅಪ್ಪನಾಗಿ ಅಚ್ಯುತ್‌ ಕೂಡ ಇಷ್ಟವಾಗುತ್ತಾರೆ. ಧರ್ಮಣ್ಣ ತೊದಲು ಮಾತಿನಲ್ಲಿ ನಗುವುಕ್ಕಿಸುತ್ತಾರೆ.

ಸುಜ್ಞಾನ್‌ ಛಾಯಾಗ್ರಹಣ, ಇಡೀ ಕಥನಕ್ಕೆ ಕುಸುಮ ಕೋಮಲ ಭಿತ್ತಿಯನ್ನು ಒದಗಿಸಿದೆ. ಹರಿಕೃಷ್ಣ ಸಂಯೋಜನೆಯ ಹಾಡುಗಳು ತಮ್ಮದೇ ಹಳೆಯ ಟ್ಯೂನ್‌ಗಳನ್ನು ನೆನಪಿಸಿದರೂ, ಸಾಹಿತ್ಯದ ಕಾರಣಕ್ಕೆ ಗುನುಗಿಕೊಳ್ಳುವಂತಿವೆ.

ಒಟ್ಟಾರೆ ‘ಮುಗುಳುನಗೆ’ ಸುಂದರ ಭಾವಗೀತೆಯೊಂದನ್ನು ಅರ್ಧಮರ್ದ ಕೇಳುವ ಅನುಭವ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.