ADVERTISEMENT

ಮಾಮೂಲಿ ಕಥೆ, ಹೊಸತನವಿಲ್ಲದ ನಿರೂಪಣೆ

ವಿಜಯ್ ಜೋಷಿ
Published 30 ಜೂನ್ 2017, 13:13 IST
Last Updated 30 ಜೂನ್ 2017, 13:13 IST
ಮಾಮೂಲಿ ಕಥೆ, ಹೊಸತನವಿಲ್ಲದ ನಿರೂಪಣೆ
ಮಾಮೂಲಿ ಕಥೆ, ಹೊಸತನವಿಲ್ಲದ ನಿರೂಪಣೆ   

ಚಿತ್ರ: ನಮ್ಮೂರ ಹೈಕ್ಳು
ನಿರ್ಮಾಪಕರು: ರಘುರಾಜ್ ಹಾಸನ್, ಶ್ರೀನಿವಾಸ ವಿ. ನಾಗೇನಹಳ್ಳಿ
ನಿರ್ದೇಶನ: ಪ್ರಸನ್ನ
ತಾರಾಗಣ: ರಘುರಾಜ್ ಹಾಸನ್, ತೇಜಸ್, ದೀಪ್ತಿ ಮನ್ನೆ, ಮಮತಾ ರಾವುತ್, ಸುಚೇಂದ್ರ ಪ್ರಸಾದ್


ಒಂದು ಊರು. ಎಲ್ಲಾ ಊರುಗಳಂತೆ ಅದೂ. ಊರಿಗೆ ಒಬ್ಬ ಗೌಡ. ಊರಿನಲ್ಲೇ ಹುಟ್ಟಿ, ಅಲ್ಲೇ ಅದು–ಇದು ಮಾಡಿಕೊಂಡಿರುವ ಐದು ಜನ ‘ಹೈಕ್ಳು’. ಊರ ಗೌಡನ ಮನೆಯ ಸುಂದರಿಯ ಜೊತೆ ‘ಹೈಕ್ಳ’ ಪೈಕಿ ಇಬ್ಬರಿಗೆ ಪ್ರೀತಿ ಮೊಳೆಯುತ್ತದೆ.

ಊರಿನ ಕಥೆ, ಪ್ರೀತಿ, ಜಗಳಗಳ ನಡುವೆಯೇ ಐದು ಜನ ‘ಹೈಕ್ಳು’ ಸೇರಿಕೊಂಡು ಊರಿನ ಪಾಲಿಗೆ ಒಂದು ಒಳ್ಳೆಯ ಕೆಲಸ ಮಾಡುವುದು ‘ನಮ್ಮೂರ ಹೈಕ್ಳು’ ಚಿತ್ರದ ಕಥಾವಸ್ತು. ಅವರು ಮಾಡಿದ ಒಳ್ಳೆಯ ಕೆಲಸ ಏನು, ಅದನ್ನು ನಿರ್ದೇಶಕರು ತೆರೆಯ ಮೇಲೆ ಹೇಗೆ ತೋರಿಸಿದ್ದಾರೆ ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.

ದೀಪ್ತಿ ಮನ್ನೆ, ರಘು ಹಾಸನ್, ವಿನಯ್ ರಾಮ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಹಾಗೆಯೇ ಸುಚೇಂದ್ರ ಪ್ರಸಾದ್ ಕೂಡ ಪೋಷಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ, ಮಾತಿನ ನಡುವೆ ಸುಚೇಂದ್ರ ಪ್ರಸಾದ್ ಅವರು (ಬರ್ಮಣ್ಣನ ಪಾತ್ರ) ‘ರಸ್ತೆ, ಆಸ್ಪತ್ರೆ ನಮ್ಮ ಹಕ್ಕು...’ ಎನ್ನುತ್ತಾರೆ. ಇದೇ ಈ ಕಥೆಯ ಮೂಲ ಎಳೆ.

ADVERTISEMENT

ತನ್ನ ಊರಿಗೆ ರಸ್ತೆ ಸೌಕರ್ಯ ಇರಬಾರದು ಎಂದು ಊರಿನ ಗೌಡನಿಗೆ ಅದೇಕೋ ಅನಿಸುತ್ತಿರುತ್ತದೆ. ಯಾಕೆ ಹಾಗೆ ಅನಿಸುತ್ತಿರುತ್ತದೆ ಎಂಬುದಕ್ಕೆ ಸೂಕ್ತ ವಿವರಣೆ ಇಲ್ಲ. ಗೌಡನ ಹಠ, ಅದರಿಂದ ಜನ ಅನುಭವಿಸುವ ಕಷ್ಟ–ನಷ್ಟಗಳನ್ನು ಚಿತ್ರತಂಡ ತೆರೆಯ ಮೇಲೆ ತರುವ ಪ್ರಯತ್ನ ನಡೆಸಿದೆ. ಕಥೆ ಉತ್ತಮವಾಗಿದೆ ಎನ್ನಬಹುದಾದರೂ, ಅದನ್ನು ಪರದೆಯ ಮೇಲೆ ಹೇಳುವ ಪ್ರಯತ್ನದಲ್ಲಿ ನಿರ್ದೇಶಕ ಪ್ರಸನ್ನ ಅವರು ಯಶಸ್ಸು ಕಂಡಿಲ್ಲ ಎನ್ನಬೇಕಾಗುತ್ತದೆ.

ಹಳ್ಳಿಯ ಜೀವನವನ್ನು ಕಥಾವಸ್ತು ಮಾಡಿಕೊಂಡ ಚಿತ್ರಗಳು ಕನ್ನಡಕ್ಕೆ ಹೊಸದೇನೂ ಅಲ್ಲ. ಊರಿಗೊಬ್ಬ ಗೌಡ ಇರುವುದು, ಸಿನಿಮಾದ ಕೊನೆಯಲ್ಲಿ ಆತನಲ್ಲಿ ಪರಿವರ್ತನೆ ಕಂಡುಬರುವ ಕಥೆಗಳೂ ಕನ್ನಡದಲ್ಲಿ ಸಾಕಷ್ಟು ಬಂದಿವೆ. ಇಂಥ ಕಥೆಯನ್ನು ನಿರ್ದೇಶಕ ಎಷ್ಟರಮಟ್ಟಿಗೆ ಹೊಸ ರೀತಿಯಲ್ಲಿ ಹೇಳುತ್ತಾನೆ ಎಂಬುದು ವೀಕ್ಷಕನಲ್ಲಿ ಕುತೂಹಲ ಮೂಡಿಸುವ ಸಂಗತಿ. ‘ನಮ್ಮೂರ ಹೈಕ್ಳು’ ಚಿತ್ರದಲ್ಲಿ ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಆಗಿಲ್ಲ ಎಂದರೆ ತಪ್ಪಾಗದು.

ಅಜಯ್ ಪಾತ್ರದಲ್ಲಿ ಅಭಿನಯಿಸಿರುವ ರಘು ಹಾಸನ್, ವಿಜಯ್ ಪಾತ್ರ ನಿಭಾಯಿಸಿರುವ ತೇಜಸ್ ಅವರ ನಟನೆಗಿಂತ ಸುಚೇಂದ್ರ ಪ್ರಸಾದ್ ಹಾಗೂ ನಟಿ ದೀಪ್ತಿ ಅವರ ಅಭಿನಯವೇ ಚೆನ್ನಾಗಿದೆ ಎಂದರೆ ತಪ್ಪಾಗದು. ಸಿನಿಮಾದಲ್ಲಿ ಕಾಡುವಂತಹ ಹಾಡುಗಳು, ಕಾಡುವಂತಹ ಸನ್ನಿವೇಶಗಳು ಇಲ್ಲ. ಮೌನದ ಮಹತ್ವವನ್ನು ಚಿತ್ರತಂಡ ಸರಿಯಾಗಿ ಗ್ರಹಿಸಲಿಲ್ಲವೇನೂ ಎಂಬ ಅನುಮಾನವೂ ಚಿತ್ರ ವೀಕ್ಷಕರನ್ನು ಕಾಡಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.