ADVERTISEMENT

ಮಿತಿಗಳ ನಡುವೆಯೂ ಮನಸ್ಸು ಆರ್ದ್ರಗೊಳಿಸುವ ಕಸರತ್ತು

ವಿಜಯ್ ಜೋಷಿ
Published 16 ಮಾರ್ಚ್ 2018, 14:00 IST
Last Updated 16 ಮಾರ್ಚ್ 2018, 14:00 IST
ಶನಾಯಾ ಮತ್ತು ಸನತ್
ಶನಾಯಾ ಮತ್ತು ಸನತ್   

ಚಿತ್ರ: ಇದಂ ಪ್ರೇಮಂ ಜೀವನಂ

ನಿರ್ದೇಶನ: ರಾಘವಾಂಕ ಪ್ರಭು

ನಿರ್ಮಾಣ: ಗೋಕುಲ್ ಎನ್‌.ಕೆ.

ADVERTISEMENT

ತಾರಾಗಣ: ಸನತ್, ಶನಾಯಾ ಕಾಟ್ವೆ, ಅವಿನಾಶ್, ಬಲ ರಾಜವಾಡಿ

**

‘ಇದಂ ‍ಪ್ರೇಮಂ ಜೀವನಂ’ ಸಿನಿಮಾ ಅಭಿಮನ್ಯು ಎನ್ನುವ ವಿಲಕ್ಷಣ ವ್ಯಕ್ತಿತ್ವದ ಯುವಕ ಮತ್ತು ಅದಿತಿ ಎನ್ನುವ ಸಂಪ್ರದಾಯಸ್ಥ ಹುಡುಗಿಯ ನಡುವಿನ ಪ್ರೇಮಕಥೆ. ಅಪ್ಪ– ಅಮ್ಮ ಕೊಡುವ ಪ್ರೀತಿಯನ್ನು, ಅದರ ಮಹತ್ವವನ್ನು ಕೂಡ ಈ ಪ್ರೇಮಕಥೆಯ ನಡುವೆಯೇ ಹೇಳಲು ಮುಂದಾಗಿದ್ದಾರೆ ನಿರ್ದೇಶಕ ರಾಘವಾಂಕ ಪ್ರಭು.

ರಾಘವಾಂಕ ಪ್ರಭು ಅವರ ಮೊದಲ ಸಿನಿಮಾ ಇದು. ಅವರು ಹೊಸ ಹುಡುಗ– ಹುಡುಗಿಯರ ತಂಡ ಕಟ್ಟಿಕೊಂಡು ಈ ಸಿನಿಮಾ ಮಾಡಿದ್ದಾರೆ. ಯಾವುದೇ ಕ್ಷೇತ್ರದ ಹೊಸಬರ ತಂಡವೊಂದರಲ್ಲಿ ಕಾಣಿಸಬಹುದಾದ ಮಿತಿಗಳನ್ನು ಈ ಸಿನಿಮಾದ ಹುಡುಗರಲ್ಲೂ ಕಾಣಬಹುದು. ಆದರೆ, ಮಿತಿಗಳನ್ನು ಕಾಣುವ, ಅವುಗಳನ್ನು ಹೇಳುವ ಮೊದಲು ಸಿನಿಮಾ ಕೊಡುವ ಕೆಲವು ಖುಷಿಗಳನ್ನು ಹೇಳಬೇಕು.

ಅಭಿಮನ್ಯು (ಸನತ್) ಮತ್ತು ಅದಿತಿ (ಶನಾಯಾ ಕಾಟ್ವೆ) ಒಂದೇ ಕಾಲೇಜಿನಲ್ಲಿ ಓದುತ್ತಿರುವವರು. ಸಿನಿಮಾ ಆರಂಭವಾಗುವ ಹೊತ್ತಿಗಾಗಲೇ ಇಬ್ಬರ ನಡುವೆ ಸ್ನೇಹ ಮೂಡಿರುತ್ತದೆ. ಅಭಿಮನ್ಯುವಿನ ವ್ಯಕ್ತಿತ್ವ ತೀರಾ ವಿಚಿತ್ರ. ಸಾಮಾನ್ಯರನ್ನು ಭಾವುಕರನ್ನಾಗಿಸುವ ಸಂದರ್ಭಗಳು ಅಭಿಮನ್ಯುವನ್ನು ಭಾವುಕ ಆಗಿಸುವುದಿಲ್ಲ. ಆತ ಇಂತಹ ಸಂದರ್ಭಗಳಲ್ಲಿ ಉಡಾಫೆಯಿಂದಲೋ, ಕೂಲ್‌ ಆಗಿಯೋ ಇದ್ದುಬಿಡುತ್ತಾನೆ. ಚೆಂದದ ಹುಡುಗಿ ಸಿಕ್ಕರೆ ಫ್ಲರ್ಟ್‌ ಮಾಡಬಲ್ಲ, ಹಾಗೆಯೇ ಆಕೆಯನ್ನು ಬೇಗನೆ ಮರೆಯಲೂಬಲ್ಲ ಈತ.

ಇದಕ್ಕೆ ತದ್ವಿರುದ್ಧ ವ್ಯಕ್ತಿತ್ವ ಅದಿತಿಯದ್ದು. ಆಕೆ ಬದುಕನ್ನು ಗಂಭೀರವಾಗಿ ಸ್ವೀಕರಿಸಿದವಳು. ರಾಶಿ ರಾಶಿ ಓದಬೇಕು, ಚೆನ್ನಾಗಿ ಕೆಲಸ ಮಾಡಬೇಕು ಎನ್ನುವ ಬಯಕೆ ಹೊಂದಿರುವವಳು. ಚೆನ್ನಾಗಿ ಸಂಪಾದನೆ ಮಾಡಿ ಅಪ್ಪನಿಗೆ ಒಂದು ಕಾರು ಕೊಡಿಸಬೇಕು ಎಂಬ ಆಸೆಯನ್ನೂ ಇಟ್ಟುಕೊಂಡವಳು. ಪ್ರೀತಿ ಮೂಡುವುದು ಪರಸ್ಪರ ತದ್ವಿರುದ್ಧ ಸ್ವಭಾವದ ವ್ಯಕ್ತಿಗಳ ನಡುವೆಯೇ ಎಂಬ ಮಾತಿಗೆ ಅನುಗುಣವಾಗಿ, ಇವರಿಬ್ಬರ ನಡುವೆ ಪ್ರೀತಿ ಅರಳುತ್ತದೆ. ಹಾಗೆ ಅರಳುವ ಪ್ರೀತಿಯನ್ನು ಬಹುಬೇಗ ವ್ಯಕ್ತಪಡಿಸಲು ಎರಡೂ ಪಾತ್ರಗಳಿಗೆ ನಿರ್ದೇಶಕರು ಅವಕಾಶ ಕೊಡುವುದಿಲ್ಲ! ಎರಡು ಕ್ಷಣಗಳಲ್ಲಿ ಪ್ರೀತಿ ಮೂಡಿ, ಮೂರನೆಯ ಕ್ಷಣಕ್ಕೆ ಪ್ರೀತಿಯನ್ನು ವ್ಯಕ್ತಪಡಿಸುವ ದೃಶ್ಯಗಳನ್ನು ಕಂಡು ಬೇಸರವಾದವರಿಗೆ ಇದು ಖುಷಿ ನೀಡಬಹುದು.

ನಿರ್ದೇಶಕರು ಚಿತ್ರದ ಮೊದಲಾರ್ಧದ ದೊಡ್ಡ ಪಾಲನ್ನು ನಾಯಕ ನಟನ ವ್ಯಕ್ತಿತ್ವ ಕಟ್ಟಿಕೊಡಲು ಬಳಸಿಕೊಂಡಿದ್ದಾರೆ. ಕೆಲವು ಸನ್ನಿವೇಶಗಳನ್ನು ಏಕೆ ಸೃಷ್ಟಿಸಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ತಾನು ಬಹಳ ಟಫ್‌ ವ್ಯಕ್ತಿತ್ವದವ, ಸಣ್ಣಪುಟ್ಟದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವವ ಅಲ್ಲ ಎಂದು ನಾಯಕ ತನ್ನ ಮಾತು ಮತ್ತು ಹಾವಭಾವಗಳ ಮೂಲಕ ಹೇಳಲು ಯತ್ನಿಸುತ್ತಾನಾದರೂ, ಅದು ಅವನ ಬಗ್ಗೆ ಅಂತಹ ಚಿತ್ರಣವನ್ನು ವೀಕ್ಷಕರ ಮನಸ್ಸಿನಲ್ಲಿ ಕಟ್ಟುವಲ್ಲಿ ಯಶಸ್ಸು ಕಾಣುವುದಿಲ್ಲ. ತನ್ನ ತಂದೆ– ತಾಯಿಯನ್ನು ಕಿತ್ತುಕೊಂಡ ವಿಧಿಯ ಮೇಲೆ ನಾಯಕ ಚಿತ್ರದ ದ್ವಿತೀಯಾರ್ಧದಲ್ಲಿ ತೋರಿಸುವ ಸಿಟ್ಟು ಕಣ್ಣಲ್ಲಿ ಉಳಿದುಕೊಳ್ಳುತ್ತದೆ.

ಪ್ರೀತಿಯನ್ನು ಹೇಳಿಕೊಳ್ಳಲು ಬಯಸುವ, ಆದರೆ ಹೇಳಿಕೊಳ್ಳಲು ಆಗದೆ ಸಂಕಟಪಡುವ ನಾಯಕಿ ವೀಕ್ಷಕರ ಮನಸ್ಸನ್ನು ತೇವಗೊಳಿಸುತ್ತಾಳೆ. ಹೀಗಿದ್ದರೂ, ಆಕೆಯ ನಟನೆ ಕೆಲವು ದೃಶ್ಯಗಳಲ್ಲಿ ಸಹಜವಾಗಿರುವಂತೆ ಕಾಣಿಸುವುದಿಲ್ಲ. ಇವುಗಳ ನಡುವೆಯೇ, ನಟರಾದ ಬಲ ರಾಜವಾಡಿ, ಅವಿನಾಶ್ ಮತ್ತು ಮಾಳವಿಕಾ ಅಭಿನಯ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ‘ಅಪ್ಪ – ಅಮ್ಮ ಕೊಡುವ ಪ್ರೀತಿ ಎಲ್ಲಕ್ಕಿಂದ ದೊಡ್ಡದು ಎಂಬುದು ಈ ಸಿನಿಮಾ ಹೇಳುವ ಮಾತು’ ಎಂದು ಸಿನಿತಂಡ ಹೇಳಿತ್ತು. ಚಿತ್ರದಲ್ಲಿ ಅದನ್ನು ಇನ್ನಷ್ಟು ಗಾಢವಾಗಿ ಕಟ್ಟಿಕೊಡುವ ಬಗ್ಗೆ ತಂಡ ಆಲೋಚಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.