ADVERTISEMENT

‘ಮುಂಬೈ’ ಹೆಸರಲ್ಲಿ ಮಾರಾಮಾರಿ

ಗಣೇಶ ವೈದ್ಯ
Published 26 ಜನವರಿ 2017, 11:37 IST
Last Updated 26 ಜನವರಿ 2017, 11:37 IST
‘ಮುಂಬೈ’ ಹೆಸರಲ್ಲಿ ಮಾರಾಮಾರಿ
‘ಮುಂಬೈ’ ಹೆಸರಲ್ಲಿ ಮಾರಾಮಾರಿ   

ಮುಂಬೈ
ನಿರ್ಮಾಪಕ: ರಾಮು
ನಿರ್ದೇಶಕ: ಎಸ್.ಆರ್. ರಮೇಶ್
ತಾರಾಗಣ: ಕೃಷ್ಣ, ತೇಜು, ರಂಗಾಯಣ ರಘು, ಆಶಿಷ್ ವಿದ್ಯಾರ್ಥಿ

ತನ್ನನ್ನು ನಂಬಿದವರು, ಒಳ್ಳೆಯವರ ಹಿತ ಕಾಯಲು ನಾಯಕ ಎಷ್ಟಾದರೂ ಕಷ್ಟ ಎದುರಿಸುತ್ತಾನೆ. ಎಂಥ ಅಡ್ಡ ದಾರಿಯನ್ನಾದರೂ ಹಿಡಿಯುತ್ತಾನೆ. ತಾನು ಮಾಡುತ್ತಿರುವ ಕೆಲಸಕ್ಕೆ ಯಾವ ಮಾರ್ಗ ಹಿಡಿಯುತ್ತೇನೆ ಎಂಬುದಕ್ಕಿಂತ, ಅಂದುಕೊಂಡಿದ್ದನ್ನು ಸಾಧಿಸುವುದಷ್ಟೇ ಮುಖ್ಯ. ಇದು ಇಂದಿನ ರೌಡಿಸಂ ಸಿನಿಮಾಗಳ ಟ್ರೆಂಡ್. ‘ಮುಂಬೈ’ ಕೂಡ ಅಂಥದ್ದೇ ಸಿನಿಮಾ.

ಬಾರ್‌ನಲ್ಲಿ ಕ್ಯಾಶಿಯರ್ ಆಗಿದ್ದ ಹುಡುಗ ಜಕಾತಿ (ಕೃಷ್ಣ) ಪಾರಿವಾಳಗಳನ್ನು ಸಾಕುತ್ತಾನೆ, ಗಿಡ ನೆಟ್ಟು ಪೋಷಿಸುತ್ತಾನೆ, ಅನಾಥಾಶ್ರಮದ ಕುರುಡು ಮಕ್ಕಳಿಗೆ ಸಹಾಯ ಮಾಡುತ್ತಾನೆ. ಇವೆಲ್ಲ ನಾಯಕನ ಒಳ್ಳೆಯತನವನ್ನು ಹೇಳಲು ನಿರ್ದೇಶಕರು ಬಳಸುವ ರೂಪಕಗಳು.

ಜಕಾತಿ ಇದ್ದ ಮನೆಯ ಪಕ್ಕಕ್ಕೆ ನಾಯಕಿ ಐಶು (ತೇಜು) ಕುಟುಂಬ ಬರುತ್ತದೆ. ಆಕೆಗೂ ಜಕಾತಿಗೂ ಸ್ನೇಹ–ಪ್ರೀತಿ. ಹೀಗೆ ಮಾಮೂಲಿ ಪ್ರಸಂಗಗಳೇ ಚಿತ್ರದ ಮೊದಲರ್ಧವನ್ನು ಆವರಿಸಿಕೊಂಡಿವೆ. ಕಥೆ ಎಂಬುದು ನಿಜಕ್ಕೂ ಇದ್ದರೆ ಅದು ದ್ವಿತೀಯಾರ್ಧದಲ್ಲೇ. ಅನಾಥಾಶ್ರಮದ ಮೇಲಿದ್ದ ದೊಡ್ಡ ಮೊತ್ತದ ಸಾಲವನ್ನು ತೀರಿಸಲು ಜಕಾತಿ ಹಣದ ಬೆನ್ನುಹತ್ತಿ ಬೆಂಗಳೂರಿನಿಂದ ಮುಂಬೈಗೆ ಹೊರಡುತ್ತಾನೆ. ಅಲ್ಲಿ ಭೂಗತ ಜಗತ್ತಿನ ಜೊತೆ ಕೈ ಜೋಡಿಸುವ ಅನಿವಾರ್ಯತೆಗೆ ಒಳಗಾಗುತ್ತಾನೆ.

ಪ್ರೀತಿಸಿದ ಹುಡುಗನನ್ನು ಹುಡುಕಿ ಐಶು ಕೂಡ ಮುಂಬೈ ರೈಲು ಹತ್ತುತ್ತಾಳೆ. ಮುಂಬೈಗೆ ಬಂದ ಆಕೆಗೆ ಏನೆಲ್ಲ ಸತ್ಯದರ್ಶನ ಆಗುತ್ತದೆ, ಆಕೆ ಏನೆಲ್ಲ ಪಾಡು ಪಡುತ್ತಾಳೆ, ಪ್ರೀತಿಯ ಆಯುಧ ಬಳಸಿ ನಾಯಕನ ಕೈಯಿಂದ ಬಂದೂಕನ್ನು ಬಿಡಿಸುತ್ತಾಳೆಯೇ, ಪ್ರೀತಿ–ಹೊಡೆದಾಟಗಳ ನಡುವೆ ಯಾವುದು ಗೆಲ್ಲುತ್ತದೆ, ಯಾರು ಸೋಲುತ್ತಾರೆ – ಹೀಗೆ ‘ಮುಂಬೈ’ ಕಥನ ಹರಡಿಕೊಳ್ಳುತ್ತದೆ. ಮೊದಲರ್ಧದಲ್ಲಿ ಮಿತಿಯಿಲ್ಲದ ಮಾತುಗಳಲ್ಲಿ ತೋಯುವ ಪ್ರೇಕ್ಷಕ, ದ್ವಿತೀಯಾರ್ಧದ ಗುಂಡಿನ ಮೊರೆತವನ್ನೂ ಸಹಿಸಿಕೊಳ್ಳಬೇಕು.

ಗಟ್ಟಿ ಕಥೆ ಇಲ್ಲದ ಕಾರಣ ಅದನ್ನು ಹೇಳಲು ಸುತ್ತಿದ ದೃಶ್ಯಗಳಲ್ಲಿ ತೀವ್ರತೆ ಇಲ್ಲ. ಕಥೆ ಮುಂದಕ್ಕೆ ಓಡುವುದೇ ಇಲ್ಲ. ಅತಿಯಾದ, ಅಶ್ಲೀಲ ಸಂಭಾಷಣೆಗಳನ್ನು ಸಹಿಸಿಕೊಳ್ಳುವುದೂ ಕಷ್ಟವೇ. ಸಂಭಾಷಣೆಗಾರರ (ಮನು ಕಲ್ಯಾಡಿ) ಪ್ರತಿಭಾ ಪ್ರದರ್ಶನಕ್ಕೆ ಧಾರಾಳವಾಗಿ ಸಂಭಾಷಣೆಗಳ ಬಳಕೆಯಾಗಿದ್ದು, ಆ ಮಾತುಗಳಿಗೆ ದೃಶ್ಯಗಳ ಗಾಂಭೀರ್ಯವನ್ನು ಕೆಡಿಸುವ ಶಕ್ತಿಯಿದೆ.

ADVERTISEMENT

ಶ್ರೀಧರ್ ಸಂಭ್ರಮ್ ಸಂಗೀತದಲ್ಲಿ ಎರಡು ಹಾಡುಗಳು ಇಂಪಾಗಿವೆ, ನೋಡಿಸಿಕೊಳ್ಳುತ್ತವೆ. ಹಾಡುಗಳನ್ನು ಸುಂದರವಾಗಿ ತೋರಿಸಲು ರಮೇಶ್ ಚೆಬ್ಬಿನಾಡ್ ಛಾಯಾಗ್ರಹಣದ ಕೊಡುಗೆ ದೊಡ್ಡದು.

ಚಿತ್ರವನ್ನು ಅದ್ದೂರಿಯಾಗಿ ಮಾಡಲು ಶ್ರಮಪಟ್ಟಿರುವುದು ತೆರೆಯ ಮೇಲೆ ಕಂಡರೂ ಅದು ಕಥೆಗೆ ಪೂರಕವಾಗಿ ಪರಿಣಮಿಸಿಲ್ಲ. ರೋಷಾವೇಶದಿಂದ ಹೊಡೆದಾಡುವಾಗ ಕೃಷ್ಣ ಗಮನಸೆಳೆದರೂ ಮತ್ತೂ ಚೆನ್ನಾಗಿ ಅಭಿನಯಿಸಬಹುದಿತ್ತು ಎನ್ನಿಸುತ್ತದೆ. ಮುದ್ದಾಗಿ ಕಾಣಿಸುವ ತೇಜು ಪಾತ್ರಕ್ಕೆ ಇನ್ನಷ್ಟು ಅವಕಾಶವೂ ಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.