ADVERTISEMENT

ಸಮಾನತೆ ಸಂಬಂಜದ ಕಥನ

ಕೆ.ಎಚ್.ಓಬಳೇಶ್
Published 19 ಆಗಸ್ಟ್ 2017, 15:11 IST
Last Updated 19 ಆಗಸ್ಟ್ 2017, 15:11 IST
‘ಮಾರಿಕೊಂಡವರು’ ಚಿತ್ರದ ಒಂದು ದೃಶ್ಯ
‘ಮಾರಿಕೊಂಡವರು’ ಚಿತ್ರದ ಒಂದು ದೃಶ್ಯ   

ಚಿತ್ರ: ಮಾರಿಕೊಂಡವರು

ನಿರ್ದೇಶನ: ಕೆ. ಶಿವರುದ್ರಯ್ಯ

ನಿರ್ಮಾಪಕರು: ಎ.ಎಸ್. ವೆಂಕಟೇಶ್, ಗುರುರಾಜ್‌ ಸೇಟ್‌

ADVERTISEMENT

ತಾರಾಗಣ: ಸುಲೀಲ್‌ಕುಮಾರ್, ಸಂಚಾರಿ ವಿಜಯ್‌, ದಿಲೀಪ್‌ರಾಜ್‌, ಸರ್ದಾರ್‌ ಸತ್ಯ, ಸೋನುಗೌಡ, ಸಂಯುಕ್ತಾ ಹೊರನಾಡು

**

ನೋಟಿಗಾಗಿ ವೋಟು ಮಾರಿಕೊಳ್ಳುವ ಮತದಾರರಿಗೆ ಲೆಕ್ಕವಿಲ್ಲ. ಮನೆಮಠ ಮಾರಿಕೊಳ್ಳುವವರಿಗೂ ಕೊರತೆಯಿಲ್ಲ. ವ್ಯವಸ್ಥೆಯಲ್ಲಿನ ತಳ ಸಮುದಾಯಗಳು ತಮ್ಮ ಅರಿವಿಗೆ ಬಾರದಂತೆಯೇ ತಮ್ಮನ್ನು ತಾವೇ ಹೇಗೆ ಮಾರಿಕೊಳ್ಳುತ್ತಿವೆ ಎನ್ನುವುದನ್ನು ನಿರ್ದೇಶಕ ಕೆ. ಶಿವರುದ್ರಯ್ಯ ‘ಮಾರಿಕೊಂಡವರು’ ಚಿತ್ರದ ಮೂಲಕ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

ಜಾತಿ ವ್ಯವಸ್ಥೆಯ ಸೂಕ್ಷ್ಮತೆ ಕುರಿತು ಹೇಳುತ್ತಲೇ ಸಮಾನತೆಯ ಸಂದೇಶ ಸಾರುವಲ್ಲಿಯೂ ಯಶಸ್ವಿಯಾಗಿದ್ದಾರೆ. ಸಮಕಾಲೀನ ಸಮಸ್ಯೆಯಾದ ಮರಳು ದಂಧೆ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಿನಿಮಾದ ಮೂಲಕ ಪ್ರತಿಕ್ರಿಯಿಸುವ ಅವರ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ.

ಆಧುನಿಕ ಯುಗದಲ್ಲೂ ಹಳ್ಳಿಗಳ ಮಧ್ಯದಲ್ಲಿ ಹಾದುಹೋಗುವ ರಸ್ತೆಗಳು ದಲಿತರ ಬದುಕನ್ನು ಇಬ್ಛಾಗಿಸಿವೆ. ಇಂದಿಗೂ ಕೆಲವೆಡೆ ದಲಿತರ ಕೇರಿ ದಾಟಿಕೊಂಡೇ ಮೇಲ್ವರ್ಗದವರು ತಮ್ಮ ಕೇರಿಗಳಿಗೆ ಹೋಗಬೇಕಿರುವುದು ಅನಿವಾರ್ಯ. ಈ ಹಾದಿಯಲ್ಲಿ ಸಾಗುವಾಗ ಅಸ್ಪೃಶ್ಯತೆಯ ಭ್ರಮೆ ಕಾಡಿದರೆ ಅಚ್ಚರಿ ಪಡಬೇಕಿಲ್ಲ. ಚಿತ್ರದಲ್ಲೂ ಇಂತಹ ಅಂಶಗಳು ಚಿತ್ರಿತವಾಗಿವೆ.

ಸಾಹಿತಿ ದೇವನೂರ ಮಹಾದೇವ ಅವರು ಬರೆದಿರುವ ಮೂರು ಕಥೆಗಳ ಸಂಯೋಜನೆಯ ರೂಪವೇ ‘ಮಾರಿಕೊಂಡವರು’ ಸಿನಿಮಾ. ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ದೇವನೂರು ಎಂಬ ಕುಗ್ರಾಮದಲ್ಲಿ ನಡೆದ ಪ್ರಸಂಗಗಳಿವು.

ದೇವೀರಪ್ಪ ಊರಿನ ಪಟೇಲ. ಆತನ ಒಬ್ಬನೇ ಮಗನಾದ ಕಿಟ್ಟಪ್ಪನಿಗೆ ಹೆಣ್ಣಿನ ಸಹವಾಸ, ಕುಡಿತದ ಹುಚ್ಚು. ಕಥಾ ನಾಯಕ ಶಿವು(ಸುಲೀಲ್‌ಕುಮಾರ್) ಅದೇ ಹಳ್ಳಿಯ ವಿಧವೆ ತಾಯವ್ವನ ಪುತ್ರ. ಆತ ಕನ್ನಡ ಎಂ.ಎ ಪದವೀಧರ. ಮಠಾಧಿಪತಿಯೊಬ್ಬರ ಒಡೆತನದ ಕಾಲೇಜೊಂದರಲ್ಲಿ ಉಪನ್ಯಾಸಕ ಹುದ್ದೆ‍ಪಡೆದರೂ ಅಲ್ಲಿ ಘಟಿಸುವ ಜಾತಿಭೇದ ಪ್ರಸಂಗದಿಂದ ಬೇಸತ್ತು ಹುದ್ದೆಗೆ ರಾಜೀನಾಮೆ ನೀಡಿ ಹುಟ್ಟೂರಿಗೆ ಮರಳುತ್ತಾನೆ.

ರೈಲಿನಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸುವ ಬೀರ ಮತ್ತು ಲಚುಮಿ ಪಟೇಲನ ತೋಟದಲ್ಲಿ ಕೆಲಸದಾಳುಗಳಾಗಿ ನೆಲೆಗೊಳ್ಳುತ್ತಾರೆ. ದೇವೀರಪ್ಪನಿಗೆ ನದಿದಂಡೆಯಲ್ಲಿ ಹಾದುಹೋಗುವ ರಸ್ತೆಗೆ ಡಾಂಬರು ಹಾಕಿಸುವ ತವಕ. ಇದರಿಂದ ಕೆಳಜಾತಿಯ ಜನರಿಗೆ ಜಮೀನು ಕಳೆದುಕೊಳ್ಳುವ ಭೀತಿ. ಪಟೇಲನ ಕುತಂತ್ರಕ್ಕೆ ಶಿವು ಮತ್ತು ಸ್ನೇಹಿತರಿಂದ ವಿರೋಧ. ಕೊನೆಗೆ, ಪಂಚಾಯಿತಿ ಸಭೆಯಲ್ಲಿ ಸಿಲಿಕಾನ್‌ಯುಕ್ತ ಮರಳು ಸಾಗಿಲು ಪಟೇಲ ನಡೆಯುತ್ತಿರುವ ಸಂಚು ಬಟಾಬಯಲಾಗುತ್ತದೆ.

ಮರುದಿನ ಬಾಲಕ ರಾಜು ಡಾಂಬರಿನಲ್ಲಿ ಸಿಕ್ಕಿಬಿದ್ದಿರುವ ಸುದ್ದಿ ಹಬ್ಬುತ್ತದೆ. ಬಿಸಿಲು ಹೆಚ್ಚಾದಂತೆ ಡಾಂಬರು ಕಾಯುತ್ತದೆ. ಆಗ ನೆರೆದಿದ್ದ ಜನರಲ್ಲಿ ಆತಂಕ ಹೆಚ್ಚುತ್ತದೆ. ದಮನಿತ ಮಹಿಳೆಯರು ತಾವು ಉಟ್ಟಿದ್ದ ಸೀರೆ ಬಿಚ್ಚಿ ಮಗುವಿನ ರಕ್ಷಣೆಗೆ ಮುಂದಾಗುತ್ತಾರೆ. ಆಗ ಅಲ್ಲಿದ್ದ ಉಳಿದ ಮಹಿಳೆಯರು ಜಾತಿಭೇದ ಮರೆತು ತಾವು ಉಟ್ಟಿದ್ದ ಸೀರೆ ಬಿಚ್ಚಿ ನೆರಳು ನೀಡುತ್ತಾರೆ. ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎಂಬ ಆಶಯದೊಂದಿಗೆ ಸಿನಿಮಾ ಮುಗಿಯುತ್ತದೆ.

ಜಾತಿಭೇದದ ಅರಿವು ಇಲ್ಲದ ಮಗು ಅವರೆಲ್ಲರ ಕನಸಿನ ಸಮಾಜದಂತೆ ಕಾಣುತ್ತದೆ. ಕೈಕಾಲು ಬಡಿಯಲು ಸಾಧ್ಯವಾಗದಂತೆ ಎಲ್ಲರನ್ನೂ ಅಸಹಾಯಕರನ್ನಾಗಿಸಿದ ಟಾರಿನ ಹೊಂಡವು ವ್ಯವಸ್ಥೆಯ ಸಾಂಕೇತಿಕ ಅರ್ಥವಾಗಿದೆ. ಹೊಂಡದಲ್ಲಿ ಬಿದ್ದು ಪಿಳಿಪಿಳಿ ಕಣ್ಣುಬಿಡುವ ಮಗು ಆಶಾದಾಯಕತೆಯ ಸಂಕೇತದಂತೆ ಗೋಚರಿಸುತ್ತದೆ.

ದೇವನೂರ ಮಹಾದೇವ ಅವರ ಪಾತ್ರಧಾರಿಯಾಗಿ ಸುಲೀಲ್‌ಕುಮಾರ್‌ ಅವರದು ಅಚ್ಚುಕಟ್ಟಾದ ಅಭಿನಯ. ಸಂಚಾರಿ ವಿಜಯ್‌, ದಿಲೀಪ್‌ರಾಜ್‌, ಸರ್ದಾರ್‌ ಸತ್ಯ, ಸೋನುಗೌಡ, ಸಂಯುಕ್ತಾ ಹೊರನಾಡು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಲಕ್ಷ್ಮೀಪತಿ ಕೋಲಾರ ಮತ್ತು ದೇವನೂರು ಬಸವರಾಜು ಅವರ ಸಂಭಾಷಣೆಯಲ್ಲಿ ಗಟ್ಟಿತನವಿದೆ. ಮುರಳಿಕೃಷ್ಣ ಕ್ಯಾಮೆರಾ ಕೈಚಳಕ ಪ್ರೇಕ್ಷಕರನ್ನು ಸೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.