ADVERTISEMENT

ಹೌದು, ಹಿಂಗ್ಯಾಕೆ?

ಆನಂದತೀರ್ಥ ಪ್ಯಾಟಿ
Published 17 ಏಪ್ರಿಲ್ 2015, 19:30 IST
Last Updated 17 ಏಪ್ರಿಲ್ 2015, 19:30 IST

ಹಿಂಗ್ಯಾಕೆ
ನಿರ್ದೇಶಕ: ಟಿ.ಎಸ್.ಸತ್ಯಜಿತ್

ತಾರಾಗಣ: ಪ್ರತೀಕ್, ದೀಪ್ತಿ, ಸುನೀಲ್, ಖುಷಿ, ಇತರರು

ಕಾಣುವ ಕನಸುಗಳಲ್ಲಿ ರಮ್ಯತೆ ಇರುತ್ತದೆ. ಒಂದೊಂದು ಕನಸು ಕೂಡ ರೋಮಾಂಚನ ಮೂಡಿಸುವಂತಿರುತ್ತದೆ. ತಾರುಣ್ಯದ ಘಟ್ಟ ಮುಟ್ಟಿರುವ ದೀಪಕ್‌ನ ಕನಸುಗಳಲ್ಲೆಲ್ಲ ಆತನಿಗೆ ಉಜ್ವಲ ಭವಿಷ್ಯ! ಆದರೇನು ಮಾಡುವುದು, ಕನಸು ಕನಸೇ ತಾನೇ? ಬಿಸಿರಕ್ತದ ವಯಸ್ಸಿನಲ್ಲಿ ನಿರಾಳವಾಗಿ ತಣ್ಣಗೇ ಕುಳಿತುಕೊಳ್ಳುವ ಯುವಕನ ಭವಿಷ್ಯ ‘ಹಿಂಗ್ಯಾಕೆ’ ಇದೆ?

ಸಿನಿಮಾ ಮುಗಿದರೂ ಈ ಪ್ರಶ್ನೆಗೆ ಉತ್ತರ ಸಿಗದು! ಇದೊಂದು ವಿಭಿನ್ನ ಸಿನಿಮಾ ಅಂದುಕೊಂಡು ಸುಮ್ಮನೇ ಎದ್ದು ಹೊರಡಬಹುದು. ‘ಚಲ್ತಾ ಹೈ’ ಎಂಬ ಮನೋಭಾವದ ಯುವಕರ ಜೀವನವನ್ನು ‘ಹಿಂಗ್ಯಾಕೆ’ ಮೂಲಕ ತೋರಿಸಲು ಹೊರಟ ನಿರ್ದೇ ಶಕ ಟಿ.ಎಸ್.ಸತ್ಯಜಿತ್, ಸಿನಿಮಾ ನಿರ್ಮಾ ಣದ ಹಲವು ಸೀಮೆಗಳನ್ನು ಉಲ್ಲಂಘಿ ಸಿದ್ದಾರೆ. ಆದರೆ ಆ ಪ್ರಯತ್ನವೇ ಚಿತ್ರಕ್ಕೆ ಮಿತಿ ಹಾಕಿದಂತೆ ಮಾಡಿ ಬಿಡುತ್ತದೆ.

ಭವಿಷ್ಯದ ಬಗ್ಗೆ ಯೋಚನೆಯಿಲ್ಲದ ದೀಪಕ್‌ ಎಂಬ ಯುವಕನ ಸುತ್ತ ಸಿನಿಮಾ ಸುತ್ತುತ್ತದೆ. ಏನೋ ಮಾಡಲು ಹೋದರೆ, ಅದೇನೋ ಎಡವಟ್ಟು ಆಗಿಬಿಡುತ್ತದೆ. ಇಂಥ ಹತ್ತಾರು ಅಧ್ವಾನಗಳನ್ನು ಹಾಸ್ಯದ ನೆಲೆಗಟ್ಟಿನಲ್ಲಿ ತೋರಿಸುವ ಉತ್ಸಾಹ ನಿರ್ದೇಶಕರದು. ‘ಗರ್ಲ್‌ ಫ್ರೆಂಡ್ ಇರಬೇಕು’ ಎಂಬ ಸ್ನೇಹಿತನ ಮಾತನ್ನು ನೆಚ್ಚಿಕೊಂಡು ಆರೆಂಟು ಹುಡುಗಿಯರನ್ನು ‘ಫ್ರೆಂಡ್’ ಮಾಡಿಕೊಳ್ಳಲು ಮುಂದಾಗುವುದು, ಆ ಯತ್ನಗಳು ವಿಫಲವಾಗುವುದು ತಮಾಷೆ ಯಾಗಿವೆ.

ಪ್ರೇಕ್ಷಕನಲ್ಲಿ ನಗು ಉಕ್ಕಿಸಲು ನಾಯಕ ನಟ ಪ್ರತೀಕ್ ಸಫಲವಾಗಿಲ್ಲ. ಅತ್ತ ನಾಯಕ ಅಥವಾ ನಾಯಕಿ ಪ್ರಧಾನ ಚಿತ್ರವೂ ಅಲ್ಲ; ಇತ್ತ ಸಶಕ್ತ ಕಥೆಯೂ ಇಲ್ಲ. ನಿರ್ದೇಶಕರಲ್ಲಿರುವ ಹಾಸ್ಯ ಪ್ರಜ್ಞೆಯಿಂದಾಗಿ ಕಾಮಿಡಿ ಸಂಭಾ ಷಣೆಗಳು ಹಾಗೂ ತಮಾಷೆ ದೃಶ್ಯಗಳು ಧಾರಾಳವಾಗಿವೆ. ಅದಕ್ಕೆ ಕಲಾವಿದರು ಸಾಥ್ ಕೊಟ್ಟಿದ್ದು ತೀರಾ ಕಡಿಮೆ. ಹಾಸ್ಯದ ‘ಶಕ್ತಿ’ ವರ್ಧಿಸುವ ಹಿನ್ನೆಲೆ ಸಂಗೀತ ಕೂಡ ನಾಪತ್ತೆ. ಹೀಗಾಗಿ, ನಗೆಯುಕ್ಕಿಸಬಹುದಾದ ಸನ್ನಿವೇಶಗಳು ನೀರಸ ಮುಕ್ತಾಯ ಕಂಡುಬಿಡುತ್ತವೆ.

ಒಂದು ಗುರಿ ಇಟ್ಟುಕೊಂಡು ಅದನ್ನು ತಲುಪಲು ಮೈಮುರಿದು ದುಡಿಯುವ ಯುವಕರು ನಮ್ಮ ಸುತ್ತ ಇದ್ದಾರೆ; ಏನೂ ಮಾಡದೇ ಸುಮ್ಮನೇ ‘ಟೈಮ್ ಪಾಸ್’ ಮಾಡುವ ತರುಣರೂ ಕಾಣುತ್ತಾರೆ. ಅಂಥ ಎರಡೂ ವರ್ಗಗಳ ಸಂಕೇತವಾಗಿ ಮನೋಜ್ ಹಾಗೂ ಪ್ರತೀಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನ ಯುವಪೀಳಿಗೆಯ ವರ್ತನೆ, ಸಾಧನೆ ದಾರಿಯನ್ನು ‘ಹಿಂಗ್ಯಾಕೆ’ ಮೂಲಕ ಬಿಂಬಿಸುವ ಸತ್ಯಜಿತ್ ಪ್ರಯತ್ನ ಒಳ್ಳೆಯದೇ. ಆದರೆ ಕ್ಯಾಪ್ಟನ್ ಒಬ್ಬನೇ ಚಿತ್ರವನ್ನು ಯಶಸ್ಸಿನ ಮೆಟ್ಟಿಲು ಏರಿಸಲು ಸಾಧ್ಯವಿಲ್ಲವಲ್ಲ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.