ADVERTISEMENT

ಸಮಯದ ಜತೆ ಪ್ರೇಮಕಥೆ

ಕೆ.ಎಚ್.ಓಬಳೇಶ್
Published 19 ಜನವರಿ 2018, 12:29 IST
Last Updated 19 ಜನವರಿ 2018, 12:29 IST
‘3 ಘಂಟೆ 30 ದಿನ 30 ಸೆಕೆಂಡ್‌’ ಚಿತ್ರದ ದೃಶ್ಯ
‘3 ಘಂಟೆ 30 ದಿನ 30 ಸೆಕೆಂಡ್‌’ ಚಿತ್ರದ ದೃಶ್ಯ   

ಸಿನಿಮಾ: 3 ಘಂಟೆ 30 ದಿನ 30 ಸೆಕೆಂಡ್
ನಿರ್ಮಾಪಕರು: ಚಂದ್ರಶೇಖರ್‌ ಆರ್. ಪದ್ಮಶಾಲಿ
ನಿರ್ದೇಶನ: ಜಿ.ಕೆ. ಮಧುಸೂದನ್
ತಾರಾಗಣ: ಅರುಣ್‌ ಗೌಡ, ಕಾವ್ಯಾ ಶೆಟ್ಟಿ, ದೇವರಾಜ್‌, ಸುಧಾರಾಣಿ, ಕೂದವಳ್ಳಿ ಚಂದ್ರಶೇಖರ್, ಜಯಲಕ್ಷ್ಮಿ ಪಾಟೀಲ್

ಅಪ್ಪ ಆಗರ್ಭ ಶ್ರೀಮಂತ. ಸುದ್ದಿವಾಹಿನಿಯೊಂದರ ಒಡೆಯ. ಅದಕ್ಕೆ ಪುತ್ರಿಯೇ ನಿರೂಪಕಿ. ಭ್ರಷ್ಟಾಚಾರ ಬಯಲಿಗೆಳೆಯುವುದರಲ್ಲಿ ಆಕೆ ಎತ್ತಿದ ಕೈ. ಆದರೆ, ಅವಳಿಗೆ ಪ್ರೀತಿಯೆಂದರೆ ಅಲರ್ಜಿ. ಪ್ರೀತಿ ಕೇವಲ ದೈಹಿಕ ಆಕರ್ಷಣೆ ಎನ್ನುವುದು ಅವಳ ತರ್ಕ. ನಾಯಕ ಮಧ್ಯಮವರ್ಗದ ಪ್ರತಿನಿಧಿ. ವೃತ್ತಿಯಲ್ಲಿ ವಕೀಲ. ಯುವಪ್ರೇಮಿಗಳನ್ನು ಬೆಸೆಯುವುದೇ ಅವನ ಕಾಯಕ.

ದೇಹದಲ್ಲಿನ ಹಾರ್ಮೋನ್‌ಗಳ ವ್ಯತ್ಯಾಸವೇ ಪ್ರೀತಿಗೆ ಕಾರಣ ಎನ್ನುವುದು ನಾಯಕಿಯ ವಾದ. ಇದಕ್ಕಾಗಿ ಆಕೆ ಟಿ.ವಿ.ಯಲ್ಲಿ ನೇರ ಪ್ರಸಾರ ಕೂಡ ನಡೆಸುತ್ತಾಳೆ. ಅಲ್ಲಿ ಆಕೆಗೆ ಪ್ರೀತಿಯ ಮಹತ್ವ ತಿಳಿಸಲು ನಾಯಕ ಚಾಲೆಂಜ್‌ ಸ್ವೀಕರಿಸುತ್ತಾನೆ. ತಾನೇ ಮಾಡಿಕೊಂಡ ಅವಾಂತರದಿಂದ ಪೊಲೀಸರ ಬೆತ್ತದ ರುಚಿಯನ್ನೂ ತಿನ್ನುತ್ತಾನೆ. ನೀನು ಈ ಚಾಲೆಂಜ್‌ನಲ್ಲಿ ಗೆಲ್ಲುತ್ತೀಯ ಎಂದು ಅಪ್ಪನೇ ಮಗನಿಗೆ ಬೆನ್ನುತಟ್ಟಿ ಕಳುಹಿಸುತ್ತಾನೆ.

ADVERTISEMENT

ಹೀಗೆ ನಾಯಕಿಗೆ ಪ್ರೀತಿಯ ಮಹತ್ವ ತಿಳಿಸುವ ಲೆಕ್ಕವಿಲ್ಲದಷ್ಟು ಕಥೆಗಳು ಈಗಾಗಲೇ ಬಂದುಹೋಗಿವೆ. ಕಥೆಯ ದೃಷ್ಟಿಯಿಂದ ‘3 ಘಂಟೆ 30 ದಿನ 30 ಸೆಕೆಂಡ್’ ಚಿತ್ರ ಹೊಸದೇನನ್ನೂ ಕಟ್ಟಿಕೊಡುವುದಿಲ್ಲ. ಇದೊಂದು ಬಗೆಯಲ್ಲಿ ಹಳೆಯ ಪಾನೀಯವನ್ನೇ ಹೊಸ ಬಾಟಲಿಯಲ್ಲಿ ನೀಡಿದಂತಾಗಿದೆ.

ಪ್ರೀತಿಯ ಮಹತ್ವ ಹೇಳಲು ನಿರ್ದೇಶಕ ಜಿ.ಕೆ. ಮಧುಸೂದನ್ ಸಮಯದ ಜೊತೆಗೆ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಪ್ರೀತಿ ಸ್ವಾರ್ಥ ಅಥವಾ ಆಕರ್ಷಣೆಯಲ್ಲ. ಅದು ಸಂಬಂಧಗಳ ಬೆಸುಗೆ ಎಂದು ಪ್ರೇಕ್ಷಕರಿಗೆ ಹೇಳಲು ಅವರು ನಡೆಸುವ ವಿಭಿನ್ನ ಕಸರತ್ತು ಚಿತ್ರದುದ್ದಕ್ಕೂ ಕಾಣುತ್ತದೆ. ಪ್ರೀತಿ ಸತ್ಯವೋ ಅಥವಾ ಮಿಥ್ಯವೊ ಎಂದು ನಿರೂಪಿಸುವ ಭರದಲ್ಲಿ ಅವರು ಹೇಳುವ ಉಪಕಥೆಗಳ ಬೋಧನೆಯನ್ನು ಪ್ರೇಕ್ಷಕರು ಸಹಿಸಿಕೊಳ್ಳಬೇಕಿರುವುದು ಅನಿವಾರ್ಯ. 

ಬಾಲ್ಯದಲ್ಲಿಯೇ ತನ್ನನ್ನು ತೊರೆದು ಹೋದ ಅಮ್ಮನ ಬಗ್ಗೆ ನಾಯಕಿಗೆ ಕಡುಕೋಪ. ಇದಕ್ಕೆ ಕಾರಣ ಏನೆಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕಿದೆ. ಚಿತ್ರದ ಮೊದಲಾರ್ಧ ಟಿ.ವಿ. ಚಾನೆಲ್‌ನಲ್ಲಿ ನಡೆಯುವ ಸಂವಾದ, ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರ ಅಬ್ಬರದ ನಡುವೆಯೇ ಕಳೆದುಹೋಗುತ್ತದೆ. ಸಿನಿಮಾದಲ್ಲಿ ಕೆಲವೆಡೆ ತೀರಾ ಸರಳವಾಗಿ ರೂಪಗೊಳ್ಳಬೇಕಿದ್ದ ದೃಶ್ಯಗಳು ಜಾಹೀರಾತು ದೃಶ್ಯಗಳಂತೆ ಕೃತಕ ಎನಿಸಿದರೆ ಪ್ರೇಕ್ಷಕರು ಅಚ್ಚರಿಪಡಬೇಕಿಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ನಾಯಕಿಯನ್ನು ಉಳಿಸಿಕೊಳ್ಳಲು ನಾಯಕ ನಡೆಸುವ ಹರಸಾಹಸ ಪ್ರಹಸನಕ್ಕೆ ಎಡೆಮಾಡಿಕೊಡುತ್ತದೆ.

ಇಡೀ ಚಿತ್ರದಲ್ಲಿ ಮನಸೆಳೆಯುವುದು ದೇವರಾಜ್‌ ಮತ್ತು ಸುಧಾರಾಣಿ ಜೋಡಿ. ಸವಾಲಿನ ಪಾತ್ರದಲ್ಲಿ ದೇವರಾಜ್‌ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಗತ್ತಿನ ಹುಡುಗಿಯಾಗಿ ಕಾವ್ಯಾ ಶೆಟ್ಟಿ ಇಷ್ಟವಾಗುತ್ತಾರೆ. ಅರುಣ್‌ಗೌಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಶ್ರೀಧರ್‌ ವಿ. ಸಂಭ್ರಮ್‌ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ. ಶ್ರೀನಿವಾಸ ರಾಮಯ್ಯ ಅವರ ಛಾಯಾಗ್ರಹಣದ ಕೆಲವು ದೃಶ್ಯಗಳು ಮನಸೆಳೆಯುತ್ತವೆ. ಪ್ರೀತಿಯ ಸುಳಿಯಲ್ಲಿ ಸಿಲುಕಿದ ಯುವಜನರಿಗೆ ಈ ಚಿತ್ರ ಇಷ್ಟವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.