ADVERTISEMENT

ಕ್ಯಾಚ್ ಆಫೀಸರ್‌ಗಳೂ ಜಗ್ಗೇಶ್ ಸಲಹೆಯೂ

ಆನಂದತೀರ್ಥ ಪ್ಯಾಟಿ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST
ಕ್ಯಾಚ್ ಆಫೀಸರ್‌ಗಳೂ ಜಗ್ಗೇಶ್ ಸಲಹೆಯೂ
ಕ್ಯಾಚ್ ಆಫೀಸರ್‌ಗಳೂ ಜಗ್ಗೇಶ್ ಸಲಹೆಯೂ   

ಹೊ ಸಬರೇ ಹುಷಾರ್! ಗಾಂಧಿನಗರದಲ್ಲಿ ಕ್ಯಾಚ್ ಆಫೀಸರ್ಸ್‌ ಇದ್ದಾರೆ! ಹತ್ತಾರು ಕನಸು ಹೊತ್ತು ಚಿತ್ರರಂಗಕ್ಕೆ ಬರುವವರಿಗೆ ಮೂರು ದಶಕಗಳ ಕಾಲ ಬಣ್ಣದ ಲೋಕದಲ್ಲಿ ಮಣ್ಣು ಹೊತ್ತ ಜಗ್ಗೇಶ್ ಕೊಡುವ ಮುನ್ನೆಚ್ಚರಿಕೆಯಿದು.

ಸಿನಿಮಾ ಅಂದರೆ ಶ್ರದ್ಧೆಯಿಂದ ಮಾಡುವ ಕೆಲಸ ಎನ್ನುವುದೆಲ್ಲ ಈಗಿಲ್ಲ. ಇನ್ನೊಬ್ಬರಿಗೆ ಟೋಪಿ ಹಾಕುವ ಹುನ್ನಾರವೇ ಕಾಣುತ್ತಿದೆ ಎಂಬ ಕಳವಳದೊಂದಿಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಒಳಹೊರಗನ್ನು ಜಗ್ಗೇಶ್‌ ಎಂದಿನಂತೆ ತಮಾಷೆ ಮಾತುಗಳಲ್ಲಿ ಹಂಚಿಕೊಂಡರು. ಪರಭಾಷೆ ಚಿತ್ರಗಳ ಯಶಸ್ಸೂ ಕನ್ನಡ ಚಿತ್ರಗಳ ಶೋಚನೀಯ ಸ್ಥಿತಿಯೂ ಅವರ ಮಾತುಗಳ ಭಾಗವಾಗಿತ್ತು. ‘ಏನೋ ಎಂತೋ, ಇವೆರಡಕ್ಕೂ ಸ್ಪಷ್ಟ ಕಾರಣ ಗೊತ್ತಾಗ್ತಿಲ್ಲ’ ಎಂದು ಪೇಚಾಡಿದರು ಜಗ್ಗೇಶ್.

ಇದಕ್ಕೆಲ್ಲ ವೇದಿಕೆಯಾಗಿದ್ದು ಜಗ್ಗೇಶ್‌ ನಾಯಕನಾಗಿ ನಟಿಸಿರುವ ‘ಅಗ್ರಜ’ ಚಿತ್ರದ ಪತ್ರಿಕಾಗೋಷ್ಠಿ. ನಿರ್ಮಾಪಕ ಗೋವರ್ಧನ್ ಈ ಮೊದಲು ನಿರ್ಮಾಪಕರೊಬ್ಬನ್ನು ಕರೆ ತಂದಿದ್ದು, ಅವರನ್ನು ನೋಡಿದ ತಾವು ‘ಈ ನಿರ್ಮಾಪಕರಿಂದ ಏನೂ ಆಗೋಲ್ಲ. ನಿಮ್ಮ ಬದುಕನ್ನು ನೋಡಿಕೊಂಡು ಆರಾಮವಾಗಿರಿ’ ಎಂದು ಸಲಹೆ ನೀಡಿದ್ದನ್ನು ನೆನಪಿಸಿಕೊಂಡರು. ಛಲ ಬಿಡದ ತ್ರಿವಿಕ್ರಮನಂತೆ ಎಲ್ಲಿಂದಲೋ ದುಡ್ಡು ತಂದ ಗೋವರ್ಧನ್, ಚಿತ್ರ ನಿರ್ದೇಶನಕ್ಕೆ ಎಚ್‌.ಎಂ .ಶ್ರೀನಂದನ್‌ ಅವರನ್ನು ಗೊತ್ತು ಮಾಡಿದ್ದರು. ಗೋವರ್ಧನ್‌ ಶ್ರದ್ಧೆ ಪ್ರಶಂಸಿಸಿದ ಜಗ್ಗೇಶ್, ಈ ನೆಪದಲ್ಲೇ ಗಾಂಧಿನಗರದಲ್ಲಿ ತಾವು ಕಂಡ ಪ್ರಹಸನಗಳನ್ನೂ ತೆರೆದಿಟ್ಟರು.

ಕ್ಯಾಚ್ ಆಫೀಸರ್ಸ್
ಮೊದಲೆಲ್ಲ ಸಿನಿಮಾ ಅಂದರೆ ಅದೊಂದು ಯೋಜನಾಬದ್ಧ ಕೆಲಸವಾಗಿತ್ತು. ಒಂದು ಚಿತ್ರ ಸೆಟ್ಟೇರುವ ಮುನ್ನ ಬಜೆಟ್ ಹಾಗೂ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಿ ಅಷ್ಟು ಹಣ ಬ್ಯಾಂಕಿನಲ್ಲಿಟ್ಟು, ಕ್ರಮೇಣ ಖರ್ಚು ಮಾಡಲಾಗುತ್ತಿತ್ತು ಎನ್ನುವ ಜಗ್ಗೇಶ್, ‘ಇದನ್ನು ನನ್ನ ಸಂಸ್ಥೆಯಲ್ಲೂ ಮಾಡಿದ್ದೇನೆ. ಆದರೀಗ ಎಲ್ಲ ಬದಲಾಗಿದೆ. ಸಿನಿಮಾ ಮಾಡೋದನ್ನೇ ಕ್ಯಾಚ್ ಆಫೀಸರ್ಸ್‌ ಕಾಯ್ತಾ ಇರ್ತಾರೆ...’ ಎಂದು ಕಣ್ಣರಳಿಸಿ ಅತ್ತಿತ್ತ ನೋಡಿದರು!

ಅಷ್ಟಕ್ಕೂ ಅವರು ಒಂದೇ ಥರ ಇರೋಲ್ಲವಂತೆ. ಸಿನಿಮಾ ನಿರ್ಮಾಪಕರನ್ನು ಹಿಡಿಯುವ ಕ್ಯಾಚ್ ಆಫೀಸರ್ಸ್ ಇದ್ದಾರೆ, ಹಿಡಿದು ಮುಳುಗಿಸೋದಕ್ಕೆ ಕ್ಯಾಚ್ ಆಫೀಸರ್ಸ್, ಟೀವಿ ಹಕ್ಕು ಮಾರಾಟ ಮಾಡಲು ಕ್ಯಾಚ್ ಆಫೀಸರ್ಸ್; ವಿತರಣೆಗೆ ಕ್ಯಾಚ್ ಆಫೀಸರ್ಸ್ ಇದ್ದಾರೆ. ‘ಅವರೇ ಮುಂದಾಗಿ ನಿಂತು ಗ್ರಾಂಡ್ ಆಗಿ ಮುಹೂರ್ತ, ಪೂಜೆ ಮಾಡಿಸ್ತಾರೆ. ನೂರಾರು ಕಾರು ಬರ್ತವೆ. ಭರ್ಜರಿ ಫಂಕ್ಷನ್ ನಡೀತದೆ. ಎರಡು ದಿನದ ಬಳಿಕ ಶೂಟಿಂಗ್ ನಿಂತು ಹೋಗ್ತದೆ. ನಾವು ಅಂದುಕೊಂಡಂತೆ ಆಗುತ್ತೆ!’ ಎನ್ನುತ್ತಾರೆ ಅವರು.
ಈ ಕ್ಯಾಚ್ ಆಫೀಸರ್ಸ್ ಹೇಳುವುದನ್ನು ನೋಡಿದರೆ ಎಂಥವರ ಬಾಯಿಯಲ್ಲೂ ನೀರೂರುತ್ತದೆ. ಆದರೆ ರಿಸಲ್ಟ್ ಮಾತ್ರ ಸೊನ್ನೆ. ಇಂಥವರಿಂದ ಕನ್ನಡ ಚಿತ್ರರಂಗಕ್ಕೆ ಹೆಸರು ಬರುವುದಿಲ್ಲ; ಇರುವ ಹೆಸರೂ ಹಾಳಾಗುತ್ತೆ ಎಂದು ಬೈದರು ಜಗ್ಗೇಶ್.

ಯೇ ಹೈ ಸಿನಿಮಾ!
ಸಿನಿಮಾಕ್ಕೆಂದು ನಡೆಯುವ ಬೂಟಾಟಿಕೆಯತ್ತ ಮಾತು ಹೊರಳಿಸುತ್ತಾರೆ ಜಗ್ಗೇಶ್. ‘ಕೆಲವು ನಿರ್ಮಾಪಕರು ಮಾತಾಡೋದನ್ನು ನೋಡಬೇಕು ಸ್ವಾಮಿ, ಅದೂ ಟೀವಿ ಮೈಕ್ ಎದುರು... ಆಹಾ...! ಅವರು ಬಳಸುವ ಶಬ್ದಗಳೋ! ಸಿನಿಮಾವನ್ನು ಅರೆದು ಕುಡಿದಂತೆ ಮಾತಾಡ್ತಾರೆ. ಅದನ್ನು ಕೇಳಿದರೆ ನಮಗೇ ನಾಚಿಕೆಯಾಗುತ್ತೆ. ಒಂದು ಸಿನಿಮಾಕ್ಕೆ ಎರಡೆರಡು ಪೂಜೆ, ನಾಲ್ಕೈದು ಕಾರ್ಯಕ್ರಮ. ನಾವೂ ಕಲಿಯಬೇಕು ಅನ್ನುವ ಹಾಗೆ ಇರ್ತದೆ. ದೂರದಲ್ಲಿ ನಾವು ಅಗೋಚರವಾಗಿ ಕೂತು ನೋಡಿ, ವಾಪಸು ಮನೆಗೆ ಬಂದು, ಟೀವಿಯಲ್ಲಿ ಅದನ್ನೆಲ್ಲ ನೋಡಿ ಯೇ ಹೈ ಸಿನಿಮಾ ಅಂತ ನಗ್ತೀವಿ’ ಎಂದು ಗಹಗಹಿಸಿ ನಕ್ಕರು ಜಗ್ಗೇಶ್.

ADVERTISEMENT

 ಪಬ್ಲಿಸಿಟಿ ಕೊಡೋದು ಹ್ಯಾಗೆ?
ಸಿನಿಮಾ ಬಿಡುಗಡೆ ಮುನ್ನ ಪ್ರಚಾರ ಬೇಕೇ ಬೇಕು. ಆದರೆ ಎಂಥ ಪ್ರಚಾರ ಗೊತ್ತಾ? ಎಂದು ಪ್ರಶ್ನಿಸಿದರು ಜಗ್ಗೇಶ್. ಅದಕ್ಕೆ ಕೆಲ ಉದಾಹರಣೆಗಳನ್ನೂ ಕೊಟ್ಟರು.

ಒಮ್ಮೆ ಒಬ್ಬ ನಿರ್ಮಾಪಕ ಹೇಳಿದರಂತೆ: ‘ನಾವು ಹ್ಯಾಗೆ ಪಿಕ್ಚರ್ ರಿಲೀಸ್ ಮಾಡ್ತೀವಿ, ಪಬ್ಲಿಸಿಟಿ ಕೊಡ್ತೀವಿ ನೋಡ್ತಿರಿ’. ಅವರು ಬುಧವಾರ ಸಂಜೆ ಪೋಸ್ಟರ್ ಹಚ್ಚಿದ್ದು ಕಾಣಿಸಿತ್ತಂತೆ. ‘ಚಿತ್ರ ರಿಲೀಸ್ ಆಗೋದು ಜನರಿಗೆ ಗೊತ್ತಾಗೋದೇ ಇಲ್ಲ. ಇನ್ಯಾವ ಸೀಮೆ ಪ್ರಚಾರ ಮಾಡ್ತಾರೋ?’ ಎಂದು ಆಗಸದತ್ತ ಎರಡೂ ಕೈ ಮಾಡಿ ವಿಷಾದದ ನಗೆ ಮೂಡಿಸಿದರು.

ಟಿಆರ್‌ಪಿ ತಮಗೇ ಹೆಚ್ಚಿದೆ ಎಂದು ನಂಬಿಸಿ, ಕೆಲವು ಟೀವಿಗಳು ಹಕ್ಕು ಪಡೆಯುತ್ತವೆ. ಅದರೆ ಜನ ಮಾತ್ರ ಆ ಸಿನಿಮಾ ನೋಡಿರುವುದೇ ಇಲ್ಲ. ಎಷ್ಟು ಪ್ರಚಾರ ಮಾಡಿದರೂ ಅದರ ಬಗ್ಗೆ ಜನರಿಗೆ ಗೊತ್ತಿರುವುದೇ ಇಲ್ಲ. ಇನ್ನಾವ ಥರ ಪ್ರಚಾರ ಮಾಡಬೇಕು? ಎಂಬ ಗೊಂದಲ ಜಗ್ಗೇಶ್ ಅವರದು. ಅದಕ್ಕಾಗಿ ಹೊಸ ಮಾಧ್ಯಮಗಳ ಮೊರೆ ಹೋಗಿದ್ದನ್ನೂ ತೆರೆದಿಟ್ಟರು. ‘ಲಕ್ಷಾಂತರ ಜನ ಫೇಸ್ಬುಕ್, ಟ್ವಿಟ್ಟರ್ ಬಳಸ್ತಾರೆ ಅಂತ ಹೇಳ್ತಿದ್ರು. ಹಾಗಾಗಿ ಟ್ವಿಟ್ಟರ್‌ಗೂ ಫೇಸ್ಬುಕ್ಗೂ ಮೆಂಬರ್ ಆದೆ. ಆದರೆ ಜನರಿಗೆ ಕಲಾವಿದರ ಬದುಕು ತಿಳಿದುಕೊಳ್ಳುವ ಆಸೆ ಅಷ್ಟೇ. ಅದು ಬಿಟ್ಟರೆ ಸಿನಿಮಾದ ಪ್ರಚಾರಕ್ಕೆ ಅದೇನೂ ಉಪಯೋಗವಾಗೋಲ್ಲ’ ಎಂಬ ಅನುಭವ ದಕ್ಕಿತಂತೆ.

ಇಷ್ಟೆಲ್ಲದರ ಮಧ್ಯೆ ಪ್ರಚಾರಕ್ಕೆ ಬೇರೆ ಏನೋ ಇದೆ ಎಂದು ಜಗ್ಗೇಶ್‌ಗೆ ಅನಿಸಿದೆ. ಮೊದಲೆಲ್ಲ ಮಾಧ್ಯಮದವರ ಜತೆ ಮಾತಾಡಿದ್ದು ಪತ್ರಿಕೆಗಳಲ್ಲಿ ಬರುತ್ತಿತ್ತು. ಈಗ ಬೇರೆ ಯಾರೋ ಪ್ರೇಕ್ಷಕರನ್ನು ಆಳುತ್ತಿದ್ದಾರೆ ಎಂಬುದು ಅವರ ಶಂಕೆ. ಒಮ್ಮೆ ಒಬ್ಬ ಬಂದು, ವೆಬ್‌ಸೈಟಿನಲ್ಲಿ ನಿಮ್ಮ ಚಿತ್ರಕ್ಕೆ 10 ಲಕ್ಷ ಹಿಟ್ಸ್ ಕೊಡ್ತೀನಿ. ಒಂದಷ್ಟು ಇತ್ತ ತಳ್ಳಿ ಅಂದನಂತೆ. ‘ಆತನನ್ನು ಒಮ್ಮೆ ಮೇಲಿನಿಂದ ಕೆಳಗೆ ನೋಡಿ, ಹೋಗಿ ಬಾಪ್ಪ ರಾಜ ಅಂದೆ’ ಎಂದರು!

ಅವರ್‌ ಹೆಂಗೆ ಆಗ್ತಾರೋ?
ಕನ್ನಡ ಸಿನಿಮಾಗಳ ಕಥೆ ಹೀಗಿದ್ದರೂ ಪರಭಾಷಾ ಚಿತ್ರಗಳು ಅದು ಹೇಗೆ ಯಶಸ್ಸು ಗಳಿಸುತ್ತಿವೆಯೋ ಎಂಬ ಸೋಜಿಗ ಅವರದು.
ಆ ಯಶಸ್ಸು ಹೇಗೆ ಸಿಗುತ್ತದೆ ಎಂಬುದು ಗೊತ್ತಾಗುತ್ತಲೇ ಇಲ್ಲ. ಪ್ರತಿ ಸಿನಿಮಾಕ್ಕೂ ಪ್ರಯಾಸವಿಲ್ಲದೇ ಅವರು ಎಂಟು-ಹತ್ತು ಕೋಟಿ ಜೇಬಿಗಿಳಿಸಿ ಹೋಗುತ್ತಿದ್ದಾರೆ ಎಂಬುದು ಇನ್ನೊಂದು ಅಚ್ಚರಿ. ‘ಎಲ್ಲ ಪರಭಾಷಾ ನಟರು ಕೂಡ ಸಂತೋಷದಿಂದ ಕರ್ನಾಟಕ ತಮ್ಮಪ್ಪಂದು, ತಮ್ಮ ತಾತಂದು ಅನ್ನೋ ಹಂಗೆ ಮಾತಾಡ್ತಾ ಇದ್ದಾರೆ. ಅವರು ಯಾವ ರೀತಿ ಜನರನ್ನು ತಲುಪುತ್ತಿದ್ದಾರೋ? ನಮಗೆ ಗೊತ್ತಾಗ್ತಾನೇ ಇಲ್ಲ’ ಎಂದು ಜಗ್ಗೇಶ್ ತಲೆ ಕೆರೆದುಕೊಂಡರು.

ಕನ್ನಡದ ಚಿತ್ರಗಳ ಬಗ್ಗೆ ಈಗಿರುವಂಥ ಅಭಿಪ್ರಾಯ ನಿವಾರಿಸುವಂತೆ ‘ಅಗ್ರಜ’ ಸಿನಿಮಾ ಮಾಡಿದ್ದಾರೆ ಎಂದು ಗೋವರ್ಧನ್ ಬಗ್ಗೆ ಜಗ್ಗೇಶ್ ಮೆಚ್ಚುಗೆ ಸೂಚಿಸಿದರು. ‘ಆಣೆ ಮಾಡಿ ಹೇಳುತ್ತೇನೆ; ‘ಭಂಡ ನನ್ನ ಗಂಡ’ ಬಳಿಕ ನಾನು ಮಂತ್ರಾಲಯದ ರಾಯರ ವೃಂದಾವನದ ಎದುರು ನಿಂತು ಯಶಸ್ಸಿಗೆ ಬೇಡಿಕೊಂಡ ಎರಡನೇ ಸಿನಿಮಾ ಇದು. ನನ್ನ ಮಿತ್ರ ಶ್ರದ್ಧೆಯಿಂದ ಮಾಡಿದ ಈ ಚಿತ್ರಕ್ಕೆ ಯಶಸ್ಸು ಸಿಗುವಂತೆ ಮಾಡಿ ಎಂದು ರಾಯರಲ್ಲಿ ಪ್ರಾರ್ಥಿಸಿದ್ದೇನೆ’ ಎಂದರು ಜಗ್ಗೇಶ್. ಢೋಂಗಿ ಪ್ರಚಾರವೇ ಎಲ್ಲೆಡೆ ಕಾಣುವ ಮಧ್ಯೆ ಪ್ರಾಮಾಣಿಕತೆ- ಶ್ರದ್ಧೆಯಿಂದ ನಿರ್ಮಿಸಿದ ಈ ಸಿನಿಮಾಕ್ಕೆ ಎಲ್ಲರ ಬೆಂಬಲ ಬೇಕು ಎಂಬ ಕೋರಿಕೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.