ADVERTISEMENT

ಡೆಂಗಿ ಎಂಬ ‘ಜೈವಿಕ ಅಸ್ತ್ರ’ದ ಸಮರ !

ಎಸ್.ರವಿಪ್ರಕಾಶ್
Published 3 ನವೆಂಬರ್ 2017, 19:30 IST
Last Updated 3 ನವೆಂಬರ್ 2017, 19:30 IST
ಪ್ರಜಾವಾಣಿ ಚಿತ್ರ/ ಸತೀಶ್‌ ಬಡಿಗೇರ್‌
ಪ್ರಜಾವಾಣಿ ಚಿತ್ರ/ ಸತೀಶ್‌ ಬಡಿಗೇರ್‌   

ಅಲ್ಲಿ ಜ್ವರ ಪೀಡಿತ ಮಕ್ಕಳು ತಮ್ಮ ಪೋಷಕರೊಂದಿಗೆ ನಡುಗುತ್ತಾ, ಮುದುಡಿ ಕುಳಿತಿದ್ದಾರೆ. ರಾಜ್ಯದಲ್ಲಿ ಡೆಂಗಿ ಹುಟ್ಟಿಸಿರುವ ಆತಂಕದ ಬಗ್ಗೆ ಪ್ರತ್ಯಕ್ಷದರ್ಶಿ ವರದಿ...

‘ಡೆಂಗಿ’ ಪದ ಕೇಳುತ್ತಲೇ ಬೆಚ್ಚಿ ಬೀಳದವರೇ ಇಲ್ಲ. ನಿಸರ್ಗ ಮತ್ತು ಮಾನವನ ನಡುವಿನ ನಿರಂತರ ಸಂಘರ್ಷದಲ್ಲಿ ಪ್ರಯೋಗಗೊಳ್ಳುತ್ತಿರುವ ‘ಜೈವಿಕ ಅಸ್ತ್ರ’ವಿರಬಹುದೇ ಎಂಬ ಸಂದೇಹ ಉದ್ಭವಿಸಿದರೆ ಅಚ್ಚರಿ ಇಲ್ಲ. ಅದು ದೃಢಗೊಳ್ಳಲು ವೈಜ್ಞಾನಿಕ ಸಂಶೋಧನೆಗಳು ಆಗಬೇಕು. ಆಗಷ್ಟೇ ಉತ್ತರ ಸಿಗಬಲ್ಲದು. ಡೆಂಗಿ ಜ್ವರ ಹಬ್ಬಿಸುವ ಮಾರಕ ವೈರಸ್‌ಗಳ ‘ಸೇನೆ’ಯ ವಿರುದ್ಧ ಮಂಡಿಯೂರುವ ಸ್ಥಿತಿಗೆ ಮಾನವ ತಲುಪಿದ್ದಾನೆ.

ಅವುಗಳನ್ನು ಕೊಲ್ಲುವ ಮಾತು ಹಾಗಿರಲಿ, ಮಣಿಸುವ ದಿವ್ಯಾಸ್ತ್ರವಂತೂ ಮಾನವನ ಬತ್ತಳಿಕೆಯಲ್ಲಿ ಸದ್ಯಕ್ಕೆ ಇಲ್ಲ. ಡೆಂಗಿ ಎಂಬ ಅಗೋಚರ ‘ಶತ್ರು‘ವಿನ ಆಕ್ರಮಣಕ್ಕೆ ಒಳಗಾಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಷ್ಟೇ ಉಳಿದಿರುವ ಏಕೈಕ ಮಾರ್ಗ! ಇದೊಂದು ರೀತಿಯ ‘ಶರಣಾಗತಿ’ ಎನ್ನಬಹುದೇ?

ADVERTISEMENT

ಬೆಂಗಳೂರು ಮಹಾನಗರವೇ ಡೆಂಗಿಯಿಂದ ತಲ್ಲಣಿಸಿದೆ. ಮನೆ– ಮನೆಗಳಲ್ಲೂ ಡೆಂಗಿ ತಾಂಡವದ ಆತಂಕ ಮನೆ ಮಾಡಿದೆ. ಆಸ್ಪತ್ರೆಗಳು, ನರ್ಸಿಂಗ್‌ ಹೋಂ, ಕ್ಲಿನಿಕ್‌ಗಳ ಬಳಿ ಹೋದರೆ ಸಾಕು ವಿವಿಧ ಬಗೆಯ ಜ್ವರಗಳಿಂದ ತತ್ತರಿಸಿದವರ ಉದ್ದುದ್ದ ಸಾಲುಗಳನ್ನು ಕಾಣಬಹುದು. ಅವರಲ್ಲಿ ಡೆಂಗಿಪೀಡಿತರೇ ಹೆಚ್ಚು.

‘ಹಸಿರು ನಗರಿ’, ‘ಉದ್ಯಾನ ನಗರಿ’ ಎಂಬ ಹಣೆಪಟ್ಟಿ ಕಳಚಿಕೊಂಡು ‘ಐಟಿ ಸಿಟಿ– ಹೈಟೆಕ್ ಸಿಟಿ’ ಎಂದು ರೂಪಾಂತರಗೊಂಡ ಬಳಿಕ ಬೆಂಗಳೂರು ವಲಸಿಗರ ಪಾಲಿನ ‘ಮಾಯಾ ಬಜಾರು’. ಈ ಮಾಯಾನಗರಿಯ ಸೃಷ್ಟಿಯ ಹಿಂದೆ ಪರಿಸರ ನಾಶ, ಕಸದ ಪರ್ವತಗಳ ಸೃಷ್ಟಿ, ಹವಾಮಾನ ಬದಲಾವಣೆಯ ಪರಿಣಾಮ ಐಟಿ ರಾಜಧಾನಿ ಡೆಂಗಿಯ ‘ಹಾಟ್‌ಸ್ಪಾಟ್‘. ಅಷ್ಟೇ ಅಲ್ಲ ‘ಡೆಂಗಿ ವೈರಸ್‌‘ಗಳ ಪಾಲಿಗೂ ರಾಜಧಾನಿ. ವೈರಸ್‌ಗಳ ಸಂತಾನ ಸ್ಫೋಟಕ್ಕೆ ‘ಸ್ವರ್ಗ’ ಆಗಿರುವುದು ಮಾತ್ರವಲ್ಲ, ಸದ್ಯಕ್ಕಂತೂ ಸರಿ ಹೋಗುವ ಆಶಾಕಿರಣವೇ ಗೋಚರಿಸುತ್ತಿಲ್ಲ. ಮುಂದೆ ಏನು– ಎತ್ತ ಬಲ್ಲವರಿಲ್ಲ.

ಬೆಂಗಳೂರಿನಲ್ಲಿ ಬುಧವಾರ ರಾಜ್ಯೋತ್ಸವದ ಸಂಭ್ರಮ, ಸಡಗರ. ಅಂದು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಆವರಣಕ್ಕೆ ಕಾಲಿಟ್ಟಾಗ ಗಾಬರಿ ಹುಟ್ಟಿಸುವ ದೃಶ್ಯ. ಅಲ್ಲಿ ಜ್ವರ ಪೀಡಿತ ಮಕ್ಕಳು ತಮ್ಮ ಪೋಷಕರೊಂದಿಗೆ ನಡುಗುತ್ತಾ, ಮುದುಡಿ ಕುಳಿತಿದ್ದರು (ಬೇರೆ ರೋಗಿಗಳೂ ಇದ್ದರು). ಹೆತ್ತವರ ಕಣ್ಣುಗಳಲ್ಲಿ  ಆತಂಕ ಹೆಪ್ಪುಗಟ್ಟಿತ್ತು.

ಮಕ್ಕಳಿಗೆ ಅತ್ಯುತ್ತಮ ಚಿಕಿತ್ಸೆ ಸಿಗುವ ಈ ಆಸ್ಪತ್ರೆಯ ಆವರಣದಲ್ಲೇ ಈ ಸ್ಥಿತಿ ಇದ್ದರೆ, ನಗರದ ಇತರ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ನರ್ಸಿಂಗ್‌ ಹೋಂಗಳು, ಕ್ಲಿನಿಕ್‌ಗಳ ಸ್ಥಿತಿ ಭಿನ್ನ ಇದ್ದೀತೆ?  ಜುಲೈ, ಆಗಸ್ಟ್‌ಗೆ ಹೋಲಿಸಿದರೆ ಡೆಂಗಿ ಹಾವಳಿ ಈಗ ಸ್ವಲ್ಪ ಕಡಿಮೆ ಎಂಬುದು ವೈದ್ಯಕೀಯ ಸಿಬ್ಬಂದಿ ಸಮಜಾಯಿಷಿ. ಮಲೇರಿಯಾದಂತೆ ಡೆಂಗಿಯನ್ನೂ ಅಧಿಸೂಚಿತ ರೋಗವೆಂದು ರಾಜ್ಯ ಸರ್ಕಾರ ಪ್ರಕಟಿಸಿದೆ. ಇದರ ತಡೆಗೆ ಆರೋಗ್ಯ ಇಲಾಖೆ ದೊಡ್ಡ ‘ಸಮರ’ವನ್ನೇ ಸಾರಿದೆ.

‘ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಈ ವರ್ಷ ಹಿಂದೆಂದಿಗಿಂತಲೂ ಅಧಿಕ. ದೇಶದಲ್ಲಿ ಕೇರಳಕ್ಕೆ ಮೊದಲ ಸ್ಥಾನವಿದ್ದರೆ, ಕರ್ನಾಟಕಕ್ಕೆ ಎರಡನೇ ಸ್ಥಾನ. ಡೆಂಗಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳಿಂದ ಸಾವಿನ ಸಂಖ್ಯೆ ಅತ್ಯಂತ ಕಡಿಮೆ’ ಎನ್ನುತ್ತಾರೆ ಕೇಂದ್ರ ಆರೋಗ್ಯ ಸೇವೆಗಳ ಪ್ರಾದೇಶಿಕ ನಿರ್ದೇಶಕ ಡಾ. ರವಿಕುಮಾರ್‌.

ಹಾಗೆಂದು, ಬೆಂಗಳೂರಿಗರು ನಿಟ್ಟುಸಿರುಬಿಡುವ ಸ್ಥಿತಿಯಲ್ಲಿ ಇಲ್ಲ. ಏಕೆ ಗೊತ್ತೆ, ರಾಜ್ಯದ ಶೇ 25 ರಷ್ಟು ಜನ, ಅಂದರೆ, 1.50 ಕೋಟಿಗೂ ಹೆಚ್ಚು ಜನ ಈ ವೈರಸ್‌ನ ಸೋಂಕಿಗೆ ಒಳಗಾಗುವ ಅಪಾಯದಂಚಿನಲ್ಲಿದ್ದಾರೆ.

ಈ ವರ್ಷ ಅಕ್ಟೋಬರ್‌ ಕೊನೆವರೆಗೆ 15,024 ಡೆಂಗಿ ಪ್ರಕರಣಗಳು ವರದಿ ಆಗಿದ್ದು, 5 ಜನ ಮೃತಪಟ್ಟಿದ್ದಾರೆ. ಈ ಜ್ವರದಿಂದ ಅತಿ ಹೆಚ್ಚು ಬಾಧಿತರಾದವರಲ್ಲಿ (ಶೇ 38 ರಿಂದ ಶೇ 40) ಬೆಂಗಳೂರಿನವರೇ ಹೆಚ್ಚು. ಎರಡನೇ ಸುತ್ತಿನ ಡೆಂಗಿ ಸ್ಫೋಟ (out break) ಅಕ್ಟೋಬರ್‌ನಲ್ಲಿ ಆಗಿದೆ.

ಮೊದಲಿಗೆ ರಾಜಧಾನಿ ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಡೆಂಗಿ ಈಗ ರಾಜ್ಯದ ಮೂಲೆ ಮೂಲೆಯನ್ನೂ ತಲುಪಿದೆ. ಬೆಂಗಳೂರಿನಿಂದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಡೆಂಗಿ ವೈರಸ್ ಹರಡುತ್ತಾ ಹೋಗಿರುವುದನ್ನು ಆರೋಗ್ಯ ಇಲಾಖೆಯ ಡೆಂಗಿ ತಜ್ಞರು ಗುರುತಿಸಿದ್ದಾರೆ. ಮೊದಲ ಮಾರ್ಗವೆಂದರೆ ತುಮಕೂರು, ದಾವಣಗೆರೆ, ಚಿತ್ರದುರ್ಗ ಮೂಲಕ ಉತ್ತರ ಕರ್ನಾಟಕ ಭಾಗದೊಳಗೆ ಡೆಂಗಿ ವೈರಸ್ ವ್ಯಾಪಿಸಿದೆ. ಇನ್ನೊಂದು ರಾಷ್ಟ್ರೀಯ ಹೆದ್ದಾರಿ ರಾಮನಗರ, ಮಂಡ್ಯ, ಮೈಸೂರು ಮತ್ತು ಕೊಡಗು ಮೂಲಕ ಹಬ್ಬುತ್ತಾ ಹೋಗಿದೆ. ಮಲೆನಾಡು ಭಾಗಕ್ಕೂ ತಲುಪಿದೆ.

ರಾಜ್ಯದ ಎಲ್ಲೆಡೆ ಡೆಂಗಿ ವೈರಸ್‌ ಹುಲುಸಾಗಿ ಹಬ್ಬಿದೆ. ಗಮನಿಸಬೇಕಾದ ಮುಖ್ಯವಾದ ವಿಚಾರವೆಂದರೆ, ಡೆಂಗಿ ವೈರಸ್‌ ಅನ್ನು ಇಡೀ ರಾಜ್ಯಕ್ಕೆ ಹಬ್ಬಿಸಿರುವುದು ಸೊಳ್ಳೆಗಳಲ್ಲ. ಮನುಷ್ಯರು... ಎಂದರೆ ಅಚ್ಚರಿ ಆಗುತ್ತದೆ ಅಲ್ಲವೇ ! ಹೌದು, ಈ ಅಪಾಯಕಾರಿ ವೈರಸ್‌ಗಳನ್ನು ಹೊತ್ತು ಊರೂರಿಗೆ ಹಬ್ಬಿಸುತ್ತಾ ಹೋಗುತ್ತಿರುವವರು ಒಂದರ್ಥದಲ್ಲಿ ವೈರಸ್‌ ಬಾಂಬ್‌ಗಳೇ ಆಗಿರುವವರು ನಮ್ಮ ನಿಮ್ಮ ನಡುವಿನ ವ್ಯಕ್ತಿಗಳು.

ಇದು ಹೇಗೆ ಎಂಬ ಪ್ರಶ್ನೆಗೆ ಭಾರತೀಯ ಕೀಟ ಸಂಶೋಧನಾ ಬ್ಯೂರೊದ ವಿಜ್ಞಾನಿ ಡಾ.ಕೇಶವನ್‌ ಸುಬಹರನ್‌ ನೀಡುವ ವಿವರಣೆ ಹೀಗಿದೆ: ‘ಡೆಂಗಿ ವೈರಸ್‌ವಾಹಕ ಈಡಿಸ್‌ ಸೊಳ್ಳೆ 400 ಮೀಟರ್‌ಗಿಂತ ಹೆಚ್ಚು ದೂರ ಹಾರುವ ಸಾಮರ್ಥ್ಯ ಹೊಂದಿಲ್ಲ. ತನ್ನ ಸರಹದ್ದಿನಲ್ಲೇ ವೈರಸ್‌ ಅನ್ನು ಹರಡುತ್ತದೆ. ಆದರೆ, ಈ ಸೊಳ್ಳೆಗಳಿಂದ ಕಚ್ಚಿಸಿಕೊಂಡ ವ್ಯಕ್ತಿಯಲ್ಲಿ ವೈರಸ್‌ ನೆಲೆ ಕಂಡುಕೊಳ್ಳುತ್ತದೆ.

ಸೊಳ್ಳೆಗಳು ಸಂತಾನಾಭಿವೃದ್ಧಿಗೆ ಅದರಲ್ಲೂ ಮೊಟ್ಟೆಗಳ ಪೋಷಣೆಗೆ ಪ್ರೊಟೀನ್‌ ಒದಗಿಸಲು ರಕ್ತ ಹೀರುತ್ತವೆ. ರಕ್ತದ ಜತೆಗೆ ವೈರಸ್‌ ಅನ್ನೂ ಬಳುವಳಿಯಾಗಿ ಪಡೆಯುತ್ತವೆ. ವೈರಸ್‌ನ ಸಂಪರ್ಕ ಪಡೆದ ಸೊಳ್ಳೆಗಳು, ಬೇರೆಯವರನ್ನು ಕಚ್ಚುವ ಮೂಲಕ ವೈರಸನ್ನು ಕೊಡುಗೆಯಾಗಿ ನೀಡುತ್ತವೆ. ಈಡಿಸ್‌ ವೈರಸ್‌ ಅನ್ನು  ’ಪೋಸ್ಟಮನ್‌’ ಎನ್ನಬಹುದು. ಈಡಿಸ್‌ ಇಡುವ ಪ್ರತಿ ಮೊಟ್ಟೆಯೂ ‘ಡೆಂಗಿ ವೈರಸ್‌ ಬಾಂಬ್‌’ ಆಗಿಯೇ ಪರಿವರ್ತನೆಗೊಂಡಿರುತ್ತದೆ’.

ಹುಲಿಗಳಿಗಿರುವ ಪಟ್ಟೆಯಂತೆ ಈಡಿಸ್‌ಗೂ ಕಪ್ಪು– ಬಿಳಿ ಪಟ್ಟೆಗಳಿರುತ್ತವೆ. ಇದಕ್ಕೆ ‘ಟೈಗರ್‌ ಮಸ್ಕಿಟೊ’ ಎಂಬ ಅಡ್ಡ ಹೆಸರೂ ಇದೆ. ಹಗಲು ವೇಳೆ ಕಚ್ಚುವ ಇವು ಬಹಳ ‘ಮಡಿವಂತ’ ಸೊಳ್ಳೆಗಳು. ಏಕೆಂದರೆ, ಮೊಟ್ಟೆಗಳನ್ನು ಇಡಲು ಕೇವಲ ಸ್ವಚ್ಛ ನೀರನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಕೊಳಕು ನೀರು ಅಥವಾ ಹರಿಯುವ ನೀರಿನಲ್ಲಿ ಮೊಟ್ಟೆಗಳನ್ನು ಇಡುವುದಿಲ್ಲ.

ರಾಜ್ಯದಲ್ಲಿ ಈ ವರ್ಷ ಮುಂಗಾರು ಕೈ ಕೊಟ್ಟಿತು. ಅದಕ್ಕೂ ಮೊದಲೇ ಬೇಸಿಗೆಯಲ್ಲಿ ಜನ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಆರಂಭಿಸಿದರು. ಜುಲೈ ಮತ್ತು ಆಗಸ್ಟ್‌ನಲ್ಲಿ ಬಿಟ್ಟು– ಬಿಟ್ಟು ಮಳೆ ಬಂದ ಕಾರಣ ಸಿಕ್ಕ ಸಿಕ್ಕಲ್ಲಿ ನೀರು ಸಂಗ್ರಹವಾಯಿತು. ಅಲ್ಲದೆ, ಮೋಡ ಕವಿದ, ಹೆಚ್ಚು ಉಷ್ಣವಿಲ್ಲದ ಮತ್ತು ತೇವಾಂಶಭರಿತ ವಾತಾವರಣ ಡೆಂಗಿ ತೀವ್ರ ಗತಿಯಲ್ಲಿ ಹರಡುವುದಕ್ಕೆ ಉತ್ತಮ ವಾತಾವರಣ. ಈಡಿಸ್‌ ಸೊಳ್ಳೆಗಳು ನಿಜಕ್ಕೂ ಬುದ್ಧಿವಂತ ಸೊಳ್ಳೆಗಳು. ಇವು ನೇರವಾಗಿ ನೀರಿನ ಮೇಲೆ ಮೊಟ್ಟೆಗಳನ್ನು ಇಡುವುದಿಲ್ಲ.

ಎರಡು ವಾರಗಳಷ್ಟು ಜೀವಿತಾವಧಿ ಹೊಂದಿರುವ ಈ ‘ಟೈಗರ್‌ ಸೊಳ್ಳೆ’ಗಳು ತಮ್ಮ ವಂಶವನ್ನು ಜೋಪಾನ ಮಾಡಲು ನೀರಿನ ತೊಟ್ಟಿ, ಪ್ಲಾಸ್ಟಿಕ್‌ ಡ್ರಮ್‌ ಅಥವಾ ಇನ್ನಾವುದೇ ನೀರಿನ ಟ್ಯಾಂಕ್‌ಗಳ ಗೋಡೆಗೇ ಮೊಟ್ಟೆಗಳನ್ನು ಗಟ್ಟಿಯಾಗಿ ಅಂಟಿಸಿಬಿಡುತ್ತವೆ. ಮೊಟ್ಟೆಗಳು ಸಾಮಾನ್ಯರ ಕಣ್ಣಿಗೆ ಕಾಣುವುದಿಲ್ಲ. ಕೈ ಹಾಕಿ ತೊಳೆದರೂ ಅಷ್ಟು ಸುಲಭಕ್ಕೆ ನಾಶವಾಗುವುದಿಲ್ಲ.  ಸೂಕ್ಷ್ಮ ರೂಪದ ಕಪ್ಪು ಚುಕ್ಕಿಗಳಂತಿರುವ ಈ ಮೊಟ್ಟೆಗಳು ಅತ್ಯಂತ ಗಟ್ಟಿ ಕವಚಗಳನ್ನು ಹೊಂದಿರುತ್ತವೆ. ಎರಡು ವರ್ಷಗಳ ಕಾಲ ನೀರಿನ ಸಂಪರ್ಕ ಇಲ್ಲದೆಯೂ ಬದುಕುಳಿಯಬಲ್ಲವು.

ಒಮ್ಮೆ ನೀರಿನ ಸಂಪರ್ಕ ಬಂದ ತಕ್ಷಣ ಅವು ಜೀವ ಪಡೆಯುತ್ತವೆ. ಅದರೊಳಗೆ ಅವಿತುಕೊಳ್ಳುವ ವೈರಸ್‌ಗಳು ಇನ್ನೂ ಅಪಾಯಕಾರಿ. ಇವು ಜೀವ ಮತ್ತು ನಿರ್ಜೀವಿಗಳ ನಡುವಿನ ಮಧ್ಯಂತರ ರೂಪ. ಅವು ತಮ್ಮಷ್ಟಕ್ಕೆ ತಾವೇ ಪುನರುತ್ಪಾದನೆಗೊಳ್ಳುವ ಸಾಮರ್ಥ್ಯ ಪಡೆದಿಲ್ಲ. ಆದರೆ, ಜೀವಂತ ಜೀವಕೋಶದೊಳಗೆ ಪ್ರವೇಶ ಪಡೆದಾಗ ಪುನರುತ್ಪಾದನೆಗೊಳ್ಳುತ್ತವೆ. ಆತಿಥೇಯ ಜೀವಿಯ ಸ್ವಭಾವವನ್ನು ಗಣನೀಯವಾಗಿ ಬದಲಿಸುತ್ತವೆ. ಅಂದರೆ, ಡೆಂಗಿ ವೈರಸ್‌ ವ್ಯಕ್ತಿಯೊಳಗೆ ಪ್ರವೇಶಿಸಿದಾಗ ಜ್ವರ, ತಲೆ ನೋವು, ವಾಂತಿ, ಕಣ್ಣು ಗುಡ್ಡೆಯ ಹಿಂದೆ ನೋವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತವೆ.

ಡೆಂಗಿ ವೈರಸ್‌ಗಳಲ್ಲಿ ನಾಲ್ಕು ಪ್ರಭೇದಗಳು. ಇದನ್ನು ಸಿರೊ ಟೈಪ್‌ ಎನ್ನಲಾಗುತ್ತದೆ ( flaviviride ವಂಶಕ್ಕೆ ಸೇರಿದ್ದು). ಅಚ್ಚರಿ ಎಂದರೆ ಸಿರೊ ಟೈಪ್‌–1 ವೈರಸ್‌ ಯಾವುದೇ ಒಂದು ವರ್ಷದಲ್ಲಿ ಚಲಾವಣೆಗೊಂಡಿತು ಎಂದಿಟ್ಟುಕೊಳ್ಳಿ ಆ ವರ್ಷ ಉಳಿದ ಬಗೆಯ ಸಿರೊ ಟೈಪ್‌ ವೈರಸ್‌ಗಳು ಚಲಾವಣೆಗೆ ಹೊರಡುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ಸಿರೊ ಟೈಪ್‌– 1 ವೈರಸ್ಸಿನ ಸೋಂಕಿಗೆ ಒಳಗಾದ ಎಂದಿಟ್ಟುಕೊಳ್ಳಿ, ಮುಂದಿನ ವರ್ಷ ಅದೇ ಸಿರೋ ಟೈಪ್‌ ವೈರಸ್‌ ಅದೇ ವ್ಯಕ್ತಿಗೆ ಸೋಂಕಿದರೆ ಆತನಿಗೆ ತೊಂದರೆ ಆಗುವುದಿಲ್ಲ.  ಬದಲಿಗೆ ಸಿರೊ ಟೈಪ್‌–2 ಚಲಾವಣೆಗೊಂಡು ಸೋಂಕಿಗೆ ಒಳಗಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಡೆಂಗಿ ವೈರಸ್ ಎಷ್ಟು ಘಾತಕ ಎಂದರೆ, ದೇಹವನ್ನು ಪ್ರವೇಶಿದರೆ ಪ್ರತಿರೋಧಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ನಿರ್ಜಲೀಕರಣ ಮತ್ತು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಜ್ವರ ಬಂದ ತಕ್ಷಣ ತಕ್ಷಣ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಡೆಂಗಿ ಹೌದೋ ಅಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಡೆಂಗಿಗೆ ನೇರ ಚಿಕಿತ್ಸೆ ಇಲ್ಲ. ಜ್ವರ ನಿಯಂತ್ರಣಕ್ಕೆ ಜ್ವರದ ಮಾತ್ರೆಗಳನ್ನು ನೀಡಲಾಗುತ್ತದೆ. ದ್ರವ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ನೀಡಬೇಕು.

ಮಕ್ಕಳು ಅತಿಬೇಗನೆ ಇದಕ್ಕೆ ಬಲಿಯಾಗುತ್ತಾರೆ. ಇದಕ್ಕೆ ಮುಖ್ಯಕಾರಣ ಮಕ್ಕಳ ದೇಹದ ಮೇಲ್ಮೈ ವಿಸ್ತೀರ್ಣ ಪ್ರದೇಶ (ಬಾಡಿ ಸರ್ಫೇಸ್‌ ಏರಿಯಾ) ಚಿಕ್ಕದು. ಪ್ಲಾಸ್ಮಾ ಪ್ರಮಾಣವೂ ಕಡಿಮೆ ಇರುತ್ತದೆ. ಒಂದು ಲೀಟರ್‌ನಷ್ಟು ಪ್ಲಾಸ್ಮಾ ನಷ್ಟವಾದರೆ, ಬೇಗನೆ ಅದರಿಂದ ಪರಿಣಾಮ ಆಗುತ್ತದೆ. ದೊಡ್ಡವರ ದೇಹದ ಮೇಲ್ಮೈ ಪ್ರದೇಶ ಹೆಚ್ಚು. ಒಂದು ಲೀಟರ್‌ ಪ್ಲಾಸ್ಮಾ ನಷ್ಟವಾದರೆ ವ್ಯತ್ಯಾಸವಾಗುವುದಿಲ್ಲ. ಹೀಗೆ ಪ್ಲಾಸ್ಮಾ ನಷ್ಟವಾಗುವುದೇ ಅನಾಹುತಕ್ಕೆ ಕಾರಣ. ಡೆಂಗಿ ರಕ್ತಸ್ರಾವ ಜ್ವರ ಮತ್ತು ಡೆಂಗಿ ಆಘಾತ ಲಕ್ಷಣ (ಡೆಂಗಿ ಶಾಕ್‌ ಸಿಂಡ್ರೊಮ್‌) ಅತಿ ಅಪಾಯಕಾರಿ. ಇವುಗಳನ್ನು ಸರಿಯಾಗಿ ನಿರ್ವಹಿಸದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರಕಾಶ್‌ ಕುಮಾರ್‌.

ಡೆಂಗಿಗೆ ಶ್ರೀಮಂತ– ಬಡವ ಎಂಬ ತಾರತಮ್ಯವಿಲ್ಲ. ಅರಮನೆಯಂತಹ ಪ್ರದೇಶದಲ್ಲೂ ಈ ವೈರಸ್‌ ವಾಹಕ ಈಡಿಸ್‌ಗಳು ಹುಲುಸಾಗಿ ಬೆಳೆಯುತ್ತವೆ. ಕೊಳೆಗೇರಿಗಳ ಗುಡಿಸಲಲ್ಲೂ ಬೆಳೆಯುತ್ತವೆ. ಮನೆಯಲ್ಲಿ ಒಂದು ಚೂರು ಕಸ ಕಡ್ಡಿ ಇಲ್ಲದೆ, ಫ್ರಿಜ್‌ ಅಡಿ ಟ್ರೇಯಲ್ಲಿ ನೀರಿದ್ದರೆ ಸಾಕು ಸದ್ದು–ಗದ್ದಲವಿಲ್ಲದೆ ಮೊಟ್ಟೆ ಇಡುತ್ತವೆ. ಮನಿ ಪ್ಲಾಂಟ್‌ ಇರಿಸಿದ ಸಣ್ಣ ಬಾಟಲಿಯಲ್ಲೂ ಮೊಟ್ಟೆ ಇಡುತ್ತವೆ.

ರಾಜ್ಯದಲ್ಲಿ ಜೂನ್‌ವರೆಗೆ  2,12,28,552 ಮನೆಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲಿ 6,41,625 ಮನೆಗಳಲ್ಲಿ ಈಡಿಸ್‌ ಲಾರ್ವಾ ಇದ್ದದ್ದು ಪತ್ತೆ ಆಗಿದೆ. ಇದನ್ನು ನಾಶಪಡಿಸಲು ಆರೋಗ್ಯ ಇಲಾಖೆ ಕ್ರಮ ತಗೆದುಕೊಂಡಿದ್ದರೂ, ಯಾವ ವೇಗದಲ್ಲಿ ಈಡಿಸ್‌ ಹಬ್ಬುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ.

ದೇಶದಲ್ಲಿಯೇ ಪ್ರಥಮ ಬಾರಿಗೆ ಈಡಿಸ್‌ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿ ತಾಣ ನಾಶಗೊಳಿಸಲು ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ₹ 200  ಗೌರವಧನವನ್ನು ಸರ್ಕಾರ ಪ್ರಕಟಿಸಿದೆ.

ರಾಜ್ಯ ಸರ್ಕಾರ ಡೆಂಗಿಯನ್ನು ಅಧಿಸೂಚಿತ ಎಂದು ಪ್ರಕಟಿಸಿರುವುದರಿಂದ ಖಾಸಗಿ ಆಸ್ಪತ್ರೆಗಳು ಜನರಿಂದ ಬೇಕಾಬಿಟ್ಟಿ ಹಣ ಸುಲಿಗೆ ಮಾಡುವಂತಿಲ್ಲ. ಖಾಸಗಿಯವರು ಡೆಂಗಿಯನ್ನು ಖಚಿತಪಡಿಸಿಕೊಳ್ಳಲು ಎಲಿಸಾ ಆಧಾರಿತ ಪರೀಕ್ಷೆಯನ್ನು ಮಾಡಿಸಬೇಕು. ಈ ಪರೀಕ್ಷೆಗೆ ₹ 250 ಶುಲ್ಕ ನಿಗದಿ ಮಾಡಲಾಗಿದೆ. ಪ್ಲೇಟ್‌ಲೆಟ್‌ ಬಹುದಾನಿಗಳಿಂದ ಪಡೆದ ಒಂದು ಯುನಿಟ್‌ಗೆ ₹ 850, ಒಬ್ಬ ದಾನಿಯಿಂದ ಪಡೆದಿದ್ದರೆ ₹ 11,000 ಶುಲ್ಕ ಪಡೆಯಬೇಕು.

ಒಂದು ವೇಳೆ ಹೆಚ್ಚು ಹಣ ತೆಗೆದುಕೊಂಡರೆ, ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಬಹುದು. ಬಹುತೇಕ ಸಂದರ್ಭಗಳಲ್ಲಿ  ಪ್ಲೇಟ್‌ಲೆಟ್‌ ಅವಶ್ಯಕತೆ ಇರುವುದಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ  ಖಾಸಗಿ ಆಸ್ಪತ್ರೆಯವರು, ಇನ್ನು ಕೆಲವು ಸಂದರ್ಭಗಳಲ್ಲಿ ರೋಗಿಗಳ ಸಂಬಂಧಿಕರೂ ಪ್ಲೇಟ್‌ಲೆಟ್‌ ಒತ್ತಾಯಿಸುತ್ತಿರುವುದರಿಂದ ದಂಧೆಯಾಗಿ ಪರಿಣಮಿಸಿದೆ ಎಂಬ ಅಭಿಪ್ರಾಯ ಪ್ರಕಾಶ್‌ ಕುಮಾರ್‌ ಅವರದು.

ಪ್ರತಿ ಮನೆ, ಬೀದಿ, ಬಡಾವಣೆ ಮತ್ತು ಊರು ಹೀಗೆ ಎಲ್ಲೆಲ್ಲೂ ಸ್ವಚ್ಛತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ನೀರಿನ ಸಂಗ್ರಹ ಮತ್ತು ಘನತ್ಯಾಜ್ಯದ ಸಮರ್ಪಕ ನಿರ್ವಹಣೆ ಮಾತ್ರ ಡೆಂಗಿ ವೈರಸನ್ನು ಹಿಮ್ಮೆಟ್ಟಿಸಬಹುದು. ಆದರೆ, ವೈರಸ್‌ ನಾಶ ಸಾಧ್ಯವಿಲ್ಲ. ಇವುಗಳ ನಾಶಕ್ಕೆಂದು ಸಿಂಪಡಿಸುವ ರಾಸಾಯನಿಕಗಳಿಂದ ಮಾನವರಿಗೆ ಆಗುವ ಲಾಭಕ್ಕಿಂತ ಹಾನಿಯೇ ಹೆಚ್ಚು. ಎಂಡೊಸಲ್ಫಾನ್ ಮಾಡಿದ ಪರಿಣಾಮವೇ ಉಂಟಾಗುವ ಅಪಾಯವಿದೆ. ಓಡಮಸ್‌ ಸೇರಿದಂತೆ ಯಾವುದೇ ಸೊಳ್ಳೆ ವಿಕರ್ಷಕ ಅಥವಾ ನಾಶಕಗಳು ಮಾನವ ಆರೋಗ್ಯಕ್ಕೆ ಹಾನಿಕಾರಕ. ಉಳಿದಿರುವ ಏಕೈಕ ಮಾರ್ಗ ಎಂದರೆ, ಸ್ವಚ್ಛತೆ. ಮನೆ, ಬೀದಿ, ನಗರಗಳ ಸ್ವಚ್ಛತೆ. ಇಲ್ಲದಿದ್ದರೆ, ಡೆಂಗಿ ರಾಕ್ಷಸನ ವಿನಾಶ ಖಂಡಿತ ಸಾಧ್ಯವಿಲ್ಲ ಎಂಬ ಒಕ್ಕೊರಲಿನ ಅಭಿಪ್ರಾಯ ತಜ್ಞರದು.

ಮಂಗನಿಂದ ಮಾನವನಿಗೆ: ಡೆಂಗಿ ವೈರಸ್ ಜ್ವರ ಮೊದಲಿಗೆ ಮಂಗಗಳಲ್ಲಿತ್ತು. ಅದು ನಂತರ ಮಾನವರಿಗೆ ವರ್ಗಾವಣೆ ಆಯಿತು. 20 ನೇ ಶತಮಾನದ ಆರಂಭದವರೆಗೆ ಸೀಮಿತ ಪ್ರದೇಶದಲ್ಲಿ ಇತ್ತು. 2ನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಈಡಿಸ್‌ ಸೊಳ್ಳೆಗಳ ಮೂಲಕ ಹಡಗುಗಳ ಮೂಲಕ ವಿಶ್ವದ ಬೇರೆ ಬೇರೆ ಪ್ರದೇಶಗಳಿಗೂ ಹರಡಿತು.

ಸಿರೊ ಟೈಪ್‌ (DENV-1–4) 1 ರಿಂದ 4 ರವರೆಗಿನ ವೈರಸ್‌ಗಳು ಅಮೆರಿಕನ್‌– ಆಫ್ರಿಕನ್‌ ಆನುವಂಶಿಕ ನಮೂನೆಯವು. 1940ರ ಸುಮಾರಿಗೆ ಈ ವೈರಸ್‌ ಭಾರತವನ್ನು ಪ್ರವೇಶಿಸಿತು. ಇದೀಗ 5ನೇ ಸಿರೊ ಟೈಪ್‌ ದಕ್ಷಿಣ ಭಾರತದಲ್ಲಿ ಪತ್ತೆ ಆಗಿದೆ. ಇದು ಏಷ್ಯನ್ ಆನುವಂಶಿಕ ನಮೂನೆಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಇದು ಸಿಂಗಪುರ ಮತ್ತು ಶ್ರೀಲಂಕಾದಿಂದ ಭಾರತವನ್ನು ಪ್ರವೇಶಿಸಿದೆ. ಹೀಗಾಗಿ ಒಟ್ಟು ಐದು ಬಗೆಯ ಡೆಂಗಿ ವೈರಸ್‌ಗಳಿವೆ.

250 ಕೋಟಿ ಜನ ಅಪಾಯದಲ್ಲಿ: ವಿಶ್ವದಲ್ಲಿ 100 ದೇಶಗಳಲ್ಲಿ 250 ಕೋಟಿ ಜನ ಡೆಂಗಿ ಜ್ವರಕ್ಕೆ ಸಿಲುಕುವ ಅಪಾಯದಲ್ಲಿದ್ದಾರೆ. ಪ್ರತಿವರ್ಷ 50 ಲಕ್ಷದಿಂದ 1 ಕೋಟಿ ಜನರಿಗೆ ಈ ಸೋಂಕು ಹರಡುತ್ತಿದೆ.  ವಿಶ್ವದಾದ್ಯಂತ ವಾರ್ಷಿಕ 22,000 ಜನ ಸಾವನ್ನಪ್ಪುತ್ತಿದ್ದಾರೆ. ಇವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು.

ಮಾನವ ನಿರ್ಮಿತ ಘೋರ ದುರಂತ: ಡೆಂಗಿ ಮಾನವ ನಿರ್ಮಿತ ದುರಂತ. ಆಲಸ್ಯ, ಬೇಜಾಬ್ದಾರಿ, ಅಸ್ವಚ್ಛತೆ, ಕಸ ಪ್ರಮಾಣ ಹೆಚ್ಚುತ್ತಿರುವುದೇ ಡೆಂಗಿ ವೈರಸ್‌ ವ್ಯಾಪಕವಾಗಿ ಹರಡಲು ಕಾರಣ. ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಕಾಳಜಿಯೇ ಇಲ್ಲ. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಮತ್ತು ವೈದ್ಯರು ಮಾಡಬೇಕು ಎಂಬ ಭಾವನೆ ಇದೆ. ಸಾರ್ವಜನಿಕರಿಗೆ ಸ್ವಚ್ಛತೆಯ ಪ್ರಜ್ಞೆ ಇರಬೇಕಲ್ಲ. ಕಾಫಿ– ಟೀ ಕುಡಿದು ಎಲ್ಲೆಂದರಲ್ಲಿ ಕಪ್‌ಗಳನ್ನು ಎಸೆಯುತ್ತಾರೆ.

ಪ್ಲಾಸ್ಟಿಕ್‌ ಕವರ್‌ಗಳನ್ನು ಎಸೆಯಲಾಗುತ್ತದೆ. ಪರಿಸರದ ಬಗ್ಗೆ  ‘ಕೇರ್‌ಲೇಸ್‌’ ಮನೋಭಾವವೇ ಈ ದುರಂತಕ್ಕೆ ಕಾರಣ. ಅಕ್ಟೋಬರ್‌ನಲ್ಲಿ ಡೆಂಗಿ ಮತ್ತೊಮ್ಮೆ ಸ್ಫೋಟಗೊಂಡಿದೆ ಎಂಬ ಆಕ್ರೋಶದ ನುಡಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕಿ ಡಾ.ಆಶಾ ಬೆನಕಪ್ಪ ಅವರದು.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.