ADVERTISEMENT

ತಪ್ಪುಗಳ ಜತೆ ದುರದೃಷ್ಟದ ಪಾಲು

ನಾಗೇಶ್ ಶೆಣೈ ಪಿ.
Published 29 ಮಾರ್ಚ್ 2015, 19:30 IST
Last Updated 29 ಮಾರ್ಚ್ 2015, 19:30 IST

ಕ್ಲೆಂಡ್‌ನ ಈಡನ್‌ಪಾರ್ಕ್‌ನಲ್ಲಿ ವಿಶ್ವಕಪ್‌ ಕ್ರಿಕೆಟ್‌ ಸೆಮಿಫೈನಲ್‌ ಪಂದ್ಯ ಮುಗಿದ ತಕ್ಷಣದ ಆ ದೃಶ್ಯ  ಕ್ರಿಕೆಟ್‌ಪ್ರಿಯರ ಮನಕರಗಿ ಸುವಂತಿತ್ತು. ವಿಶ್ವಕಪ್‌ ಯಶಸ್ಸಿಗೆ ಹಾತೊರೆಯುತ್ತಿದ್ದ ತಂಡವೊಂದು ಮತ್ತೊಮ್ಮೆ ನಿರಾಶೆ, ಹತಾಶೆಯ ಕಡಲಲ್ಲಿ ಮುಳುಗಿದ ಕ್ಷಣ ಅದು. ದಕ್ಷಿಣ ಆಫ್ರಿಕಾದ ನಾಯಕ ಎಬಿ. ಡಿವಿಲಿಯರ್ಸ್‌, ಬೌಲರ್‌  ಮಾರ್ನ್‌ ಮಾರ್ಕೆಲ್‌ ಕಣ್ಣೀರು ಹಾಕಿದರು. ಏನಾದರೂ ಮಾಡಿ ದಕ್ಷಿಣ ಆಫ್ರಿಕಾ ತಂಡಕ್ಕೆ ಕಪ್‌ ಕೊಡಿಸಬೇಕೆಂಬ ಛಲ ತೊಟ್ಟಿದ್ದ ಪ್ರಮುಖ ವೇಗದ ಬೌಲರ್‌ ಡೇಲ್‌ ಸ್ಟೇಯ್ನ್‌ ಮುಖದಲ್ಲೂ ಹತಾಶ ಭಾವವಿತ್ತು....

ಪ್ರತಿ ಬಾರಿ ವಿಶ್ವಕಪ್‌ ಆರಂಭಕ್ಕೆ ಮೊದಲು ದ. ಆಫ್ರಿಕಾ ಈ ಬಾರಿಯಾದರೂ ವಿಶ್ವಕಪ್‌ ಗೆಲ್ಲುವುದೇ ಎಂಬ ಚರ್ಚೆ ಸಾಮಾನ್ಯ. ಕೊನೆಯಲ್ಲಿ ಎಂಥಾ ದುರದೃಷ್ಟದ ತಂಡ ವಿದು ಎಂದು ಕೇಳಿಬರುವ ಉದ್ಗಾರವೂ ಅಷ್ಟೇ ಮಾಮೂಲು. ವೇಗದ ಬೌಲರ್‌ ಆ್ಯಲನ್‌ ಡೊನಾಲ್ಡ್‌, ನಿಪುಣ ಕ್ಷೇತ್ರರಕ್ಷಕ ಜಾಂಟಿ ರೋಡ್ಸ್‌, ಚಾಣಾಕ್ಷ ನಾಯಕನಾಗಿದ್ದ ದಿವಂಗತ ಹ್ಯಾನ್ಸಿ ಕ್ರೊನಿಯೆ, ಆರಂಭ ಆಟಗಾರ ಹರ್ಷೆಲ್‌ ಗಿಬ್ಸ್‌, ಆಲ್‌ರೌಂಡರ್‌ ಲ್ಯಾನ್ಸ್‌ ಕ್ಲೂಸ್ನರ್‌, ಶಾನ್‌ ಪೊಲಾಕ್‌, ಗ್ರೇಮ್‌ ಸ್ಮಿತ್‌, ವಿಕೆಟ್‌ ಕೀಪರ್‌ ಮಾರ್ಕ್‌ ಬೌಚರ್‌, ಎಬಿ ಡಿವಿಲಿ ಯರ್ಸ್‌, ಡೇಲ್‌ ಸ್ಟೇನ್‌. 

ಹೀಗೆ ಬೇರೆ ಬೇರೆ ವಿಶ್ವಕಪ್‌ಗಳಲ್ಲಿ  ಪ್ರತಿಭಾನ್ವಿತ ಆಟಗಾರರ ದಂಡನ್ನೇ ಹೊಂದಿದ್ದ ತಂಡ ದಕ್ಷಿಣ ಆಫ್ರಿಕಾ. ಸ್ವಯಂಕೃತ ತಪ್ಪುಗಳಿಂದಲೇ ನಿರ್ಗಮಿಸಿದರೆ, ದುರದೃಷ್ಟವೂ ಅದರ ಬೆನ್ನು ಬಿಡದಿರುವುದು ಕಾಣುತ್ತಿದೆ. ದಕ್ಷಿಣ ಆಫ್ರಿಕಾ ತಂಡ ಎಲ್ಲಿ ಎಡವುತ್ತಿದೆ  ಎಂಬುದೇ ಗೊತ್ತಾಗುತ್ತಿಲ್ಲ. ಉತ್ತಮ ನಾಯಕ, ಆಟಗಾರರ ಜತೆಗೆ ಪರಿಶ್ರಮ ಅಗತ್ಯ. ಆದರೆ ಅದೃಷ್ಟವೂ ಕ್ರಿಕೆಟ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಕ್ಷಿಣ ಆಫ್ರಿಕಾ ಪಾಲಿಗಂತೂ ಇದು ಸತ್ಯವಾಗಿದೆ. ಒಂದಿಷ್ಟು ಹಿನ್ನೋಟ ಇಲ್ಲಿದೆ.

1992ರ ವಿಶ್ವಕಪ್‌: ವರ್ಣಭೇದ ನೀತಿ ಅನುಸರಿಸುತ್ತಿದ್ದ ಕಾರಣ ನಿಷೇಧ ಅನುಭವಿಸಿದ್ದ ದಕ್ಷಿಣ ಆಫ್ರಿಕಾ, ಮೊದಲ ವಿಶ್ವಕಪ್‌  ಪಂದ್ಯಾವಳಿಯಲ್ಲಿ ಆಡಲು 1992ರವರೆಗೆ ಕಾಯಬೇಕಾಯಿತು. ಆಸ್ಟ್ರೇಲಿಯ– ನ್ಯೂಜಿಲೆಂಡ್‌ ಆತಿಥ್ಯದಲ್ಲಿ ನಡೆದಿದ್ದ ಆ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನೇ ಸೋಲಿಸುವಂತೆ ಕಂಡಿತ್ತು. ಆದರೆ ಆಗಿನ ಮಳೆ ನಿಯಮ ಕರಾಳವಾಗಿ ಪರಿಣಮಿಸಿತು. ಗೆಲುವಿಗೆ 13 ಎಸೆತಗಳಲ್ಲಿ 22 ರನ್‌ ಗಳಿಸಬೇಕಾಗಿದ್ದ ದಕ್ಷಿಣ ಆಫ್ರಿಕಾದ 10 ನಿಮಿಷಗಳ ಮಳೆಯ ಕಾರಣ, 1 ಎಸೆತದಲ್ಲಿ 22 ರನ್‌ ಗಳಿಸುವ ಅಸಾಧ್ಯ ಸವಾಲು ಎದುರಿಸಿತು! ಮಳೆಯಿಂದ ಓವರುಗಳ ಕಡಿತ ಕಂಡ ಪಂದ್ಯದಲ್ಲಿ ಇಂಗ್ಲೆಂಡ್‌ ಮೊದಲು ಆಡಿ 45 ಓವರುಗಳಲ್ಲಿ 6 ವಿಕೆಟ್‌ಗೆ 252 ರನ್‌ ಗಳಿಸಿತ್ತು.

ದಕ್ಷಿಣ ಆಫ್ರಿಕಾ  42.5 ಓವರುಗಳಲ್ಲಿ 6 ವಿಕೆಟ್‌ಗೆ 231 ರನ್‌ ಗಳಿಸಿದ್ದಾಗ ಮಳೆ ಅಡಚಣೆ ಉಂಟುಮಾಡಿತ್ತು. 1996ರ ವಿಶ್ವಕಪ್‌ನಲ್ಲಿ ಕೀನ್ಯ ಎದುರು ಪುಣೆಯಲ್ಲಿ ಸೋತು ಹೊರಬೀಳುವ ಭಯದಲ್ಲಿದ್ದ ವೆಸ್ಟ್‌ ಇಂಡೀಸ್‌, ಹೇಗೊ ಕ್ವಾರ್ಟರ್‌ಫೈನಲ್‌ ತಲುಪಿ ಅಲ್ಲಿ ದಕ್ಷಿಣ ಆಫ್ರಿಕಾವನ್ನೇ ಸೋಲಿಸಿತ್ತು. ಆದರೆ ಕರಾಚಿಯಲ್ಲಿ ನಡೆದ ಆ ಪಂದ್ಯದಲ್ಲಿ ಮೆರೆದಿದ್ದು ವೆಸ್ಟ್‌ ಇಂಡೀಸ್‌ನ ವೇಗಿಗಳಲ್ಲ. ಸತತ 10 ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ದಕ್ಷಿಣ ಆಫ್ರಿಕಾದ ಆಟಗಾರರು ಸ್ಪಿನ್ನರ್‌ಗಳಾದ ರೋಜರ್‌ ಹಾರ್ಪರ್‌ ಮತ್ತು ಜಿಮ್ಮಿ ಆ್ಯಡಮ್ಸ್‌ ಹೆಣೆದ ಸ್ಪಿನ್‌ ಬಲೆಗೆ ಬಿದ್ದಿದ್ದರು.

ಬೆನ್ನುಬಿಡದ ದುರದೃಷ್ಟ: ಇಂಗ್ಲೆಂಡ್‌ನಲ್ಲಿ ನಡೆದ 1999ರ ವಿಶ್ವಕಪ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಸೋತರೂ ದಕ್ಷಿಣ ಆಫ್ರಿಕಾ  ತೋರಿದ ಪ್ರದರ್ಶನ ಅವಿಸ್ಮರಣೀಯ. ಆಸ್ಟ್ರೇಲಿಯ ವಿರುದ್ಧ ಸೂಪರ್‌ ಸಿಕ್ಸ್‌ ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಗಿಬ್ಸ್‌ ಶತಕ ಬಾರಿಸಿದ್ದರು. ಆದರೆ ಆಸ್ಟ್ರೇಲಿಯ ಆಡುವಾಗ, 31ನೇ ಓವರಿನಲ್ಲಿ ನಾಯಕ ಸ್ಟೀವ್‌ ವಾ ಅವರ ಕ್ಯಾಚ್‌ ಹಿಡಿದು ಮೇಲಕ್ಕೆ ಚಿಮ್ಮಿಸುವ ಭರದಲ್ಲಿ ಅತ್ಯುತ್ತಮ ಕ್ಷೇತ್ರರಕ್ಷನೆನಿಸಿದ ಗಿಬ್ಸ್‌ ಕ್ಯಾಚನ್ನು ನೆಲಕ್ಕೆ ಹಾಕಿದ್ದರು. ‘ನೀನು ಕೈ ಚೆಲ್ಲಿದ್ದು ವಿಶ್ವಕಪ್‌ಅನ್ನು’ ಎಂಬರ್ಥ ದಲ್ಲಿ ಸ್ಟೀವ್‌ ವಾ ಹೇಳಿದ್ದರಂತೆ (ನಂತರ ಅದನ್ನು ವಾ ನಿರಾಕರಿಸಿದ್ದಾರೆ). ಆಸ್ಟ್ರೇಲಿಯ ಸೆಮಿಫೈನಲ್‌ ತಲುಪಬೇಕಾದರೆ ಆ ಸೂಪರ್‌ಸಿಕ್ಸ್‌  ಪಂದ್ಯ ಗೆಲ್ಲಲೇ ಬೇಕಿತ್ತು. 56 ರನ್‌ಗಳಿಸಿದ್ದಾಗ ಜೀವದಾನ ಪಡೆದ  ನಂತರ ಅದನ್ನು ಶತಕವಾಗಿ ಪರಿವರ್ತಿಸಿ ತಂಡವನ್ನು ಗೆಲ್ಲಿಸಿದರು.

ಸೆಮಿಫೈನಲ್‌ನಲ್ಲಿ ಮತ್ತೆ ಇವೇ ತಂಡಗಳು ಎದುರಾದವು. ಪಂದ್ಯ ‘ಟೈ’! ಲ್ಯಾನ್ಸ್‌ ಕ್ಲೂಸ್ನರ್‌ ಕೊನೆಗಳಿಗೆಯಲ್ಲಿ ಅವಸರ ತೋರಿದ್ದು, ಡೊನಾಲ್ಡ್‌ ರನೌಟ್‌ ಆದರು. ಆಸ್ಟ್ರೇ ಲಿಯ ಸೂಪರ್‌ಸಿಕ್ಸ್‌ ಹಂತದಲ್ಲಿ ತೋರಿದ ಸಾಧನೆ ಯಿಂದ ದಕ್ಷಿಣ ಆಫ್ರಿಕವನ್ನು ಹಿಂದಿಕ್ಕಿ ಫೈನಲ್‌ಗೆ ಮುನ್ನಡೆಯಿತು! ದ. ಆಫ್ರಿಕ 2003ರ ವಿಶ್ವಕಪ್‌ನ ಜಂಟಿ ಆತಿಥ್ಯ ವಹಿಸಿತ್ತು. ಆತಿಥೇಯ ತಂಡದವರು ಗ್ರೂಪ್‌ ಹಂತದಲ್ಲೇ ಹೊರಬಿದ್ದರು. 2007ರಲ್ಲಿ ಆಸ್ಟ್ರೇಲಿಯ ವಿರುದ್ಧ ಸೆಮಿಫೈನಲ್‌ ನಲ್ಲಿ ಮತ್ತು 2011ರಲ್ಲಿ ನ್ಯೂಜಿ ಲೆಂಡ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ ನಲ್ಲಿ ಸೋಲು ಕಂಡಿದ್ದರು.

ಈ ಬಾರಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾ ಗೆಲ್ಲಬಹು ದೆಂಬ ಲೆಕ್ಕಾಚಾರವಿತ್ತು. ಆದರೆ ಮತ್ತೆ ಅದೃಷ್ಟ ಕೈಕೊಟ್ಟಿತು. ವಿಶ್ವದ ಅತ್ಯುತ್ತಮ ಕ್ಷೇತ್ರರಕ್ಷಣೆ  ಖ್ಯಾತಿ ಹೊಂದಿರುವ ದಕ್ಷಿಣ ಆಫ್ರಿಕಾ ಕೊನೆಯ ಕೆಲವು ಓವರುಗಳಿದ್ದಾಗ ರನೌಟ್‌ ಗಳಲ್ಲಿ, ಕ್ಯಾಚ್‌ ಹಿಡಿಯುವಲ್ಲಿ ಎಡವಿದ್ದೇ ಸೋಲಿಗೆ ದಾರಿಯಾಯಿತು. ಆ್ಯಂಡರ್ಸನ್‌ ಮತ್ತು ಗ್ರ್ಯಾಂಟ್‌ ಎಲಿಯಟ್‌ ಜೀವದಾನ ಪಡೆದು ಗೆಲುವಿನ ರೂವಾರಿಗಳಾದರು. ಇನ್ನೊಂದು ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಕಾಯುವಂತಾಗಿದೆ. ಆದರೆ ಈಗಿನ ತಂಡದ ಕೆಲವರು ನಿರಾಶೆ ಯೊಂದಿಗೆ ನಿವೃತ್ತಿ ಹೇಳುವುದೂ ಅನಿವಾರ್ಯವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.