ADVERTISEMENT

ಭಾರತದ ವೇಗ ಹೆಚ್ಚುತ್ತಿದೆ...

ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST
ಭಾರತದ ವೇಗ ಹೆಚ್ಚುತ್ತಿದೆ...
ಭಾರತದ ವೇಗ ಹೆಚ್ಚುತ್ತಿದೆ...   

ಏಷ್ಯಾದ ಮಟ್ಟಿಗೆ ಸೈಕ್ಲಿಂಗ್‌ನಲ್ಲಿ ಭಾರತ ‘ಶಕ್ತಿ ಕೇಂದ್ರ’ವಂತೂ ಅಲ್ಲ. ಆದರೆ ನಮ್ಮ ದೇಶದಲ್ಲಿ ಸೈಕ್ಲಿಂಗ್‌ ಚಟುವಟಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಜನಸಾಮಾನ್ಯರಲ್ಲಿ ಈ ಕುರಿತು ಅರಿವು ದಿನೇ ದಿನೇ ಹೆಚ್ಚುತ್ತಿದೆ. ಪ್ರಸಕ್ತ ಭಾರತ ಶೂಟಿಂಗ್‌, ಬಾಕ್ಸಿಂಗ್‌, ಕುಸ್ತಿ, ಅಥ್ಲೆಟಿಕ್ಸ್‌ಗಳಲ್ಲಿ ಪದಕಗಳನ್ನು ಬಾಚುವಂತೆ ಸೈಕ್ಲಿಂಗ್‌ನಲ್ಲಿಯೂ ಬಾಚಿಕೊಳ್ಳುವ ದಿನ ಬಂದರೆ ಅಚ್ಚರಿ ಏನಿಲ್ಲ.

ಏಷ್ಯಾ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ 1963ರಲ್ಲಿ ಆರಂಭಗೊಂಡಿತು. ಅವತ್ತಿನಿಂದ ಇಂದಿನವರೆಗೂ ಚೀನಾ, ಜಪಾನ್‌, ದಕ್ಷಿಣ ಕೊರಿಯ, ಇರಾನ್‌, ಥಾಯ್ಲೆಂಡ್‌, ಮಲೇಷ್ಯಾ, ಕಜಕಸ್ತಾನ, ಉಜ್ಬೆಕಿಸ್ತಾನ, ಕಿರ್ಗಿಸ್ತಾನ ಮುಂತಾದ ಹತ್ತು ಹಲವು ದೇಶಗಳು ಪದಕಗಳನ್ನು ಸೂರೆಗೊಳ್ಳುತ್ತಲೇ ಬಂದಿವೆ. ಈ ಚಾಂಪಿಯನ್‌ಷಿಪ್‌ನ ಪದಕ ಪಟ್ಟಿಯಲ್ಲಿ ಭಾರತದ ಹೆಸರು ಹೊಳೆದದ್ದು ತೀರಾ ಕಡಿಮೆ.

ಇನ್ನು ಏಷ್ಯನ್‌ ಕ್ರೀಡಾಕೂಟದಲ್ಲಂತೂ ಭಾರತೀಯ ಸೈಕ್ಲಿಸ್ಟ್‌ಗಳಿಗೆ ಹಿಂದಿನಿಂದಲೂ ಬಲು ದೊಡ್ಡ ಸವಾಲು ಎದುರಾಗುತ್ತಲೇ ಬಂದಿದೆ. ಜಪಾನ್‌, ಚೀನಾಗಳಂತಹ ಸೈಕ್ಲಿಸ್ಟ್‌ ‘ಶಕ್ತಿ ಕೇಂದ್ರ’ಗಳನ್ನು ಹಿಂದಿಕ್ಕಲು ಭಾರತ ಬಹಳ ಪ್ರಯಾಸ ಪಟ್ಟಿದೆ. ಆದರೂ ಮುಂದಿನ ದಿನಗಳಲ್ಲಿ ಭಾರತ ಸೈಕ್ಲಿಂಗ್‌ನಲ್ಲಿ ಏಷ್ಯಾ ಮಟ್ಟಿಗೆ ದೊಡ್ಡ ಶಕ್ತಿಯಾಗಿ ಎದ್ದು ನಿಲ್ಲುವ ಎಲ್ಲಾ ಲಕ್ಷಣಗಳು  ಭಾರತದ ಸೈಕ್ಲಿಂಗ್‌ ಕ್ಷೇತ್ರದಲ್ಲಿ ಕಂಡು ಬರುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೈಕ್ಲಿಂಗ್‌ ಕ್ಷೇತ್ರದ ಬಗ್ಗೆ ಪ್ರೀತಿ ಇರಿಸಿಕೊಂಡಿದ್ದರೆ, ಸೈಕ್ಲಿಂಗ್‌ ಫೆಡರೇಷನ್‌, ರಾಜ್ಯ ಸಂಸ್ಥೆಗಳೆಲ್ಲವೂ ಈ ಕ್ರೀಡೆಯನ್ನು ಎತ್ತರಕ್ಕೇರಿಸಲು ಅವಿರತ ಶ್ರಮಿಸುತ್ತಿವೆ.

ಇದೀಗ ಇಂಚೆನ್‌ನಲ್ಲಿ ನಡೆಯು ತ್ತಿರುವ ಏಷ್ಯಾಡ್‌ನಲ್ಲಿ ಭಾರತದ ಆರು ಮಂದಿಯ ತಂಡ ಪಾಲ್ಗೊಳ್ಳುತ್ತಿದೆ. ಪುರುಷರ ವಿಭಾಗದಲ್ಲಿ ಅಮ್ರಿತ್‌ ಸಿಂಗ್‌, ಅಮರ್‌ಜಿತ್‌ ಸಿಂಗ್‌ ನೇಗಿ, ಅಲನ್‌ ಬೇಬಿ ಮತ್ತು ಮಹಿಳಾ ವಿಭಾಗದಲ್ಲಿ ಕೇಜಿಯಾ ವರ್ಗೀಸ್‌, ಮೋಹನಾ ಮಹಿತಾ, ಡೆಬೋರಾ ಅವರು ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆ ಇದೆ. ಮಹಿತಾ ಅವರು ಗುವಾಂಗ್‌ ಜೌನಲ್ಲಿ ನಡೆದಿದ್ದ ಹದಿನಾರನೇ ಏಷ್ಯಾಡ್‌ನಲ್ಲಿಯೂ ಪಾಲ್ಗೊಂಡಿದ್ದ ಅನುಭವಿ. ಅಂಡಮಾನ್‌ ನಿಕೋಬಾರ್‌ ದ್ವೀಪದ ಡೆಬೋರಾ ಅವರು ಈಗಾಗಲೇ ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದು ಗಮನ ಸೆಳೆದಿದ್ದಾರೆ. ಇವರಿಂದ ಭಾರತ ಪದಕ ನಿರೀಕ್ಷಿಸಬಹುದಾಗಿದೆ.

ಭಾರತದಲ್ಲಿ ಇವತ್ತು ಹೈದರಾಬಾದ್‌ ಸೇರಿದಂತೆ ಹಲವು ನಗರಗಳಲ್ಲಿ ವೆಲೊಡ್ರೊಮ್‌ ಸೌಲಭ್ಯ ಇದೆ. ಸಾವಿ ರಾರು ಸೈಕ್ಲಿಸ್ಟ್‌ಗಳು ನಿತ್ಯವೂ ಅಭ್ಯಾಸ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಮಂದಿ ಸೈಕ್ಲಿಂಗ್‌ ಅಭ್ಯಾಸದಲ್ಲಿ ನಿರತರಾಗಿರುವುದನ್ನು ಕಾಣ ಬಹುದಾಗಿದೆ. ಅತ್ಯಾಧುನಿಕ ಸೈಕಲ್‌ಗಳು ಈ ನಾಡಿನ ಟ್ರ್ಯಾಕ್‌ನಲ್ಲಿ ಸಾಗುತ್ತಿವೆ. ಹೌದು, ಭಾರತದಲ್ಲಿಯೂ ಸೈಕ್ಲಿಸ್ಟ್‌ಗಳ ವೇಗ ಹೆಚ್ಚುತ್ತಿದೆ.

(ಲೇಖಕರು ಈಚೆಗೆ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟ ಮತ್ತು ಕಜಕಸ್ತಾನದ ಅಸ್ತಾನ ನಗರದಲ್ಲಿ ನಡೆದ 34ನೇ ಏಷ್ಯನ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿದ್ದ ಭಾರತ ಸೈಕ್ಲಿಂಗ್‌ ತಂಡದಲ್ಲಿದ್ದರು. ರೋಹ್ಟಕ್‌, ಪಟ್ನಾ, ಮುಜಾಫರ್‌ಪುರ, ಪಟಿಯಾಲ, ಪುಣೆಗಳಲ್ಲಿ ನಡೆದ ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸಿ ಬಂಗಾರದ ಸಾಮರ್ಥ್ಯ ತೋರಿದ್ದಾರೆ. ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ವೊಡಾಫೋನ್‌ ರಾಷ್ಟ್ರೀಯ ಸೈಕ್ಲಿಂಗ್‌ ಮ್ಯಾರಥಾನ್‌ನಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ಎರಡೂವರೆ ಲಕ್ಷ ರೂಪಾಯಿಗಳ ನಗದು ಬಹುಮಾನ ಪಡೆದಿದ್ದಾರೆ. ಇಪ್ಪತ್ತರ ಹರೆಯದ ಇವರು ಜಮಖಂಡಿಯ ಹುನ್ನೂರು ಗ್ರಾಮದವರು. ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದಾರೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT