ADVERTISEMENT

ಆಂಧ್ರದೂಟ ಸುಮ್ಮನೆ, ನೆನೆಸಿಕೊಂಡ್ರೆ ಜುಮ್ಮನೆ...

ರಸಸ್ವಾದ

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 19:30 IST
Last Updated 24 ಜೂನ್ 2016, 19:30 IST
ಹೈದರಾಬಾದಿ ತರಕಾರಿ ಸೋಲೆ
ಹೈದರಾಬಾದಿ ತರಕಾರಿ ಸೋಲೆ   

ಆಂಧ್ರದ ಊಟ ಎಂದೊಡನೆ ಖಾರ ನೆನಪಾಗುತ್ತದೆ. ಅಲ್ಲದೇ ಮಾಂಸಾಹಾರ ಊಟವೂ ಹೆಚ್ಚು ಜನಪ್ರಿಯ. ಆದರೆ ದಕ್ಷಿಣ ಭಾರತದ ಪಕ್ಕಾ ಸಸ್ಯಾಹಾರ ಊಟಕ್ಕೆ ಹೆಸರಾಗಿರುವ ‘ಸೌತ್‌ ಇಂಡೀಸ್‌’ನಲ್ಲಿ ಈಗ ಆಂಧ್ರ ಆಹಾರೋತ್ಸವದ ಸುಗ್ಗಿ. ಇಂದಿರಾನಗರದಲ್ಲಿರುವ ಈ ರೆಸ್ಟೊರೆಂಟ್‌ನಲ್ಲಿ ಆಂಧ್ರದ ವಿವಿಧ ಬಗೆಯ ಊಟ ಸವಿಯಬಹುದು.

ಇಂದಿರಾನಗರ ನೂರು ಅಡಿ ರಸ್ತೆಯಲ್ಲಿ ಹತ್ತಾರು ಬಗೆಯ ರೆಸ್ಟೊರೆಂಟ್‌ಗಳಿವೆ. ಆದರೆ ದಕ್ಷಿಣ ಭಾರತದ ಸಸ್ಯಾಹಾರ ಊಟ ಸವಿಯಲು ಇಚ್ಛಿಸುವವರಿಗೆ ‘ಸೌತ್ ಇಂಡೀಸ್’ ಉತ್ತಮ ಆಯ್ಕೆ.

ತೆಂಗಿನ ಗರಿಗಳಿಂದ ಮಾಡಿದ ಅಲಂಕಾರ ರೆಸ್ಟೊರೆಂಟ್‌ ಅನ್ನು ಸುಂದರವಾಗಿ ಕಾಣುವಂತೆ ಮಾಡಿತ್ತು. ಆಂಧ್ರ ಆಹಾರ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು ಗೋಡೆಯಲ್ಲಿದ್ದವು.

ಸ್ಟಾರ್ಟರ್‌ಗೂ ಮುಂಚೆ ಮಿಲ್ಕಿ ಮಶ್ರೂಂ ಸೂಪ್‌ ತಂದಿಟ್ಟರು ಸಿಬ್ಬಂದಿ. ಪಿಂಗಾಣಿ ಬಟ್ಟಲಿನಲ್ಲಿ ಬಿಸಿಯಾಡುತ್ತಿದ್ದ ಸೂಪ್‌ ಹೆಚ್ಚು ಖಾರವಿರಲಿಲ್ಲ. ತೆಂಗಿನಕಾಯಿ ಹಾಲು ಹಾಗೂ ಅಣಬೆಯಿಂದ ಮಾಡಿದ ಈ ಸೂಪ್‌ ಕುಡಿದಷ್ಟು ಕುಡಿಯಬೇಕೆನಿಸುತ್ತಿತ್ತು.

ನಂತರ ಸ್ಟಾರ್ಟರ್‌ ಸರದಿ. ಮೊದಲು ತಂದಿಟ್ಟಿದ್ದು ‘ಡುಂಪಿಲ ಕಾರಂ’. ಬೇಯಿಸಿದ ಸಣ್ಣ ಸಣ್ಣ ಆಲೂಗಡ್ಡೆಗಳನ್ನು ಸಿಪ್ಪೆತೆಗೆದು ಪಕೋಡದಂತೆ ಕರಿದಿದ್ದರು. ಕೆಂಪಾಗಿದ್ದ ಈ ಡುಂಪಿಲ ಕಾರಂ ಮೃದುವಾಗಿಯೂ, ಖಾರವಾಗಿಯೂ ಇತ್ತು.

ನಂತರ ‘ಪೆಸರು ಪುನುಗುಲು’ ತಂದಿಟ್ಟರು. ಇದು ಹೆಸರುಕಾಳು ಹಿಟ್ಟಿನಿಂದ ಮಾಡಿದ ಪಕೋಡ. ಹೆಚ್ಚು ಖಾರವಿರದೆ, ಕಡ್ಲೆಬೇಳೆ ವಡೆಯ ರುಚಿಯನ್ನು ನೀಡುತ್ತಿತ್ತು.

ನಂತರದ ಸರದಿ ‘ಆರ್ಟಿಪ್ಪು ಗರಿಯೆಳ್ಳು’  ಉದ್ದಿನ ವಡೆಯ ಆಕಾರದಲ್ಲಿದ್ದ ಈ ತಿನಿಸನ್ನು ಬಾಳೆ ಹೂ, ಅಕ್ಕಿಹಿಟ್ಟು, ಖಾರದಪುಡಿ, ಕಾಳು ಮೆಣಸು ಪುಡಿ ಹಾಕಿ ಮಾಡಿದ್ದರು. ಗರಿಗರಿಯಾಗಿದ್ದ ಈ ಗರಿಯೆಳ್ಳು ಸ್ವಲ್ಪ ಒರಟಾಗಿತ್ತು.

ಇದು ಸ್ಟಾರ್ಟರ್‌ನ ಮಾತಾದರೆ ಮೇನ್‌ ಕೋರ್ಸ್‌ ಬಗ್ಗೆ ಹೇಳುವುದು ಬಹಳಷ್ಟಿದೆ. ಆಂಧ್ರ ಪ್ರದೇಶದ ಊಟವೆಂದರೆ ಬಿರಿಯಾನಿ ಇರಲೇಬೇಕು. ಹೌದು, ಹೈದರಾಬಾದಿ ವೆಜ್‌ ಮಿಕ್ಸ್ ಬಿರಿಯಾನಿ, ಪುಳಿಯೊಗರೆ, ವೆಜಿಟಬಲ್‌ ಸ್ಟೀವ್‌, ಮಿರಪಕಾಯ ಪನ್ನೀರ್‌ ಬಟಾಣಿ ಕರ್ರಿ,

ಐದು ಥರದ ಕಾಳುಗಳನ್ನು (ಕಡ್ಲೆಕಾಳು, ಹುರುಳಿ ಕಾಳು, ರಾಜ್ಮಾ, ಹೆಸರು ಕಾಳು ಹಾಗೂ ಅಲಸಂದೆ ) ಹಾಕಿ ಮಾಡಿದ ಪಂಚಧಾನ್ಯ ಕುರ್ಮ, ಕೊತ್ತಮಿರ್‌ ಪುಲಿಪಾಯ ಪಕೋಡ ಮಸಾಲಾ (ಕೊತ್ತಂಬರಿ ಕರ್ರಿಯೊಳಗೆ ಈರುಳ್ಳಿ ಪಕೋಡ ಹಾಕಿ ಮಾಡಿದ ಕರ್ರಿ), ಟೊಮೆಟೊ ಪಪ್ಪು ಆಯ್ಕೆಗಳಿವೆ.

ಕರ್ರಿಯೊಂದಿಗೆ ತಿನ್ನಲು ಅನ್ನ, ಆಪ್ಪಂ ಸಹಾ ಇವೆ. ಜೊತೆಗೆ ಪೆಸರಟ್ಟು ದೋಸೆ ಬಹಳ ಜನರಿಗೆ ಇಷ್ಟವಾಗುತ್ತದೆ.  ಮಸಾಲೆ ದೋಸೆಯ ರೀತಿ ತೆಳ್ಳಗಿರುವ ಇದು ಹೆಚ್ಚು ಖಾರವಾಗಿರುತ್ತದೆ.

‘ನಮ್ಮಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಕೇರಳದ ಸಸ್ಯಾಹಾರ ಊಟ ಹೆಚ್ಚು ಜನಪ್ರಿಯ. ಆಂಧ್ರ ಆಹಾರೋತ್ಸವಕ್ಕೆಂದೆ ನಮ್ಮ ಬಾಣಸಿಗರು ವಿವಿಧ ಬಗೆಯ ಖಾದ್ಯಗಳನ್ನು ಪರಿಚಯಿಸಿದ್ದಾರೆ. ಇಲ್ಲಿ ವಿಭಿನ್ನ ಮೆನುವಿರುತ್ತದೆ.

ಡೆಸರ್ಟ್‌ನಲ್ಲಿ ಎಳನೀರು ಪಾಯಸ, ಪೈನಾಪಲ್‌ ಪೇಸ್ಟ್ರಿ, ಹೈದರಾಬಾದಿ ಫಿರ್ನಿ, ಮೈಸೂರು ಪಾಕ್‌ ಅನ್ನು ಪುಡಿ ಮಾಡಿ, ಅದರ ಮೇಲೆ ಕ್ರೀಂ ಹಾಕಿ ಕೊಡುವ ‘ಮೈಸೂರ್‌ ಪಾಕ್‌ ಮೂಸ್‌’ ನಮ್ಮ ವಿಶೇಷ ತಿನಿಸುಗಳಾಗಿವೆ.’ ಎಂದು ಮಾಹಿತಿ ನೀಡುತ್ತಾರೆ ರೆಸ್ಟೊರೆಂಟ್‌ ವ್ಯವಸ್ಥಾಪಕ ಡೇವಿಡ್‌.

ಈ ಉತ್ಸವದಲ್ಲಿ ಬಫೆ ವ್ಯವಸ್ಥೆ ಮಾತ್ರವಿದ್ದು, ಮಧ್ಯಾಹ್ನ 12ರಿಂದ 3.30 ಹಾಗೂ ಸಂಜೆ 7ರಿಂದ 11ರವರೆಗೆ ರೆಸ್ಟೊರೆಂಟ್‌ ತೆರೆದಿರುತ್ತದೆ. ಒಬ್ಬರಿಗೆ ₹500. ಏಳು ಮಂದಿ ಊಟಕ್ಕೆ ಬಂದರೆ, ಆರು ಮಂದಿಗೆ ಬಿಲ್‌ ಮಾಡಲಾಗುತ್ತದೆ.

ಒಬ್ಬರ ಊಟ ರಿಯಾಯ್ತಿ.  ಇಲ್ಲಿನ ಆಹಾರ ಮೆಚ್ಚಿ ಜಯನಗರ, ಮಲ್ಲೇಶ್ವರ, ಶಿವಾಜಿನಗರ, ಮಾರತ್‌ಹಳ್ಳಿಯಿಂದ ಗ್ರಾಹಕರು ಬರುತ್ತಾರಂತೆ.

ರೆಸ್ಟೊರೆಂಟ್‌: ಸೌತ್‌ ಇಂಡೀಸ್‌
ಆಹಾರೋತ್ಸವದ ಹೆಸರು : ಆಂಧ್ರ ಆಹಾರೋತ್ಸವ
ಕೊನೆಗೊಳ್ಳುವ ದಿನ : ಜೂನ್‌ 26
ಸ್ಥಳ: ನಂ276, 100 ಅಡಿ ರಸ್ತೆ, 6ನೇ ಮುಖ್ಯ ಜಂಕ್ಷನ್‌, ಇಂದಿರಾನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT