ADVERTISEMENT

ಗಿಡಬಸಳೆ ಸೊಪ್ಪಿನ ರುಚಿಕರ ಅಡುಗೆ

ಎಸ್.ಸರಸ್ವತಿ ಎಸ್.ಭಟ್ಟ
Published 12 ಡಿಸೆಂಬರ್ 2016, 19:30 IST
Last Updated 12 ಡಿಸೆಂಬರ್ 2016, 19:30 IST
ಗಿಡಬಸಳೆ ಸೊಪ್ಪಿನ ಸಾಂಬಾರು
ಗಿಡಬಸಳೆ ಸೊಪ್ಪಿನ ಸಾಂಬಾರು   

ಗಿಡಬಸಳೆ ಸೊಪ್ಪಿನ ಸಾಂಬಾರು
ಬೇಕಾಗುವ ವಸ್ತುಗಳು:
1/2 ಕಪ್ ತೊಗರಿಬೇಳೆ, 1 ಕಪ್ ತೆಂಗಿನತುರಿ, 2 ಚಮಚ ಕೊತ್ತಂಬರಿ, 1 ಚಮಚ ಉದ್ದಿನಬೇಳೆ, 1/2 ಚಮಚ ಜೀರಿಗೆ, 1/4 ಚಮಚ ಮೆಂತ್ಯ, 2–3 ಕೆಂಪು ಮೆಣಸು, 1 ಚಮಚ ಹುಳಿರಸ, 1 ಚಮಚ ಬೆಲ್ಲ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಾಸಿವೆ, 1 ಚಮಚ ಎಣ್ಣೆ, 2 ಕಪ್ ಸಣ್ಣಗೆ ತುಂಡು ಮಾಡಿದ ಗಿಡಬಸಳೆ ಸೊಪ್ಪು, 1 ಎಸಳು ಕರಿಬೇವಿನ ಎಲೆ.

ಮಾಡುವ ವಿಧಾನ: ಮೊದಲು ತೊಗರಿಬೇಳೆಯನ್ನು ಬೇಯಿಸಿ. ನಂತರ ಸಣ್ಣಗೆ ಹೆಚ್ಚಿಟ್ಟ ಗಿಡಬಸಳೆ ಸೊಪ್ಪು, ಹುಳಿರಸ, ಬೆಲ್ಲ, ಸೇರಿಸಿ ಬೇಯಿಸಿ. ನಂತರ ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಅನುಕ್ರಮವಾಗಿ ಕೊತ್ತಂಬರಿ, ಉದ್ದಿನಬೇಳೆ, ಜೀರಿಗೆ, ಮೆಂತ್ಯ , ಕೆಂಪು ಮೆಣಸು ಹಾಕಿ ಕೆಂಪಗೆ ಹುರಿದು, ತೆಂಗಿನ ತುರಿ ಸೇರಿಸಿ ರುಬ್ಬಿ. ನಂತರ ಬೇಯಿಸಿದ ತೊಗರಿಬೇಳೆ ಗಿಡಬಸಳೆ ಸೊಪ್ಪಿನ ಮಿಶ್ರಣಕ್ಕೆ ರುಬ್ಬಿದ ಮಿಶ್ರಣ ಸೇರಿಸಿ. ಬೇಕಾದಷ್ಟು ನೀರು ಸೇರಿಸಿ ಸ್ವಲ್ಪ ಹೊತ್ತು ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಸಣ್ಣ ತುಂಡು ಕೆಂಪು ಮೆಣಸು ಸೇರಿಸಿ ಒಗ್ಗರಣೆ ಕೊಡಿ. ಅನ್ನ, ಚಪಾತಿ, ಇಡ್ಲಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ಸೊಪ್ಪಿನ ಬಾತ್
ಬೇಕಾಗುವ ವಸ್ತುಗಳು:
1 ಕಪ್ ಸಣ್ಣಗೆ ಹೆಚ್ಚಿದ ಗಿಡಬಸಳೆ ಸೊಪ್ಪು, 1/4 ಕಪ್ ತೆಂಗಿನ ತುರಿ, 1 ಈರುಳ್ಳಿ, 1/2 ಚಮಚ ಸಾಂಬಾರು ಪುಡಿ, 1 ಚಮಚ ಹುಳಿ ರಸ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, 1 ಎಸಳು ಕರಿಬೇವು, 1 ಒಣಮೆಣಸು, 1 ಹಸಿಮೆಣಸು, 1–2 ಎಸಳು ಬೆಳ್ಳುಳ್ಳಿ, 2–3 ಚಮಚ ಎಣ್ಣೆ, 1 ಕಪ್ ಬೆಳ್ತಿಗೆ ಅನ್ನ, 1 ಲವಂಗ, ಸಣ್ಣ ತುಂಡು ಚಕ್ಕೆ, 1 ಚಮಚ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು.

ಮಾಡುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು ಹಾಕಿ ಸ್ವಲ್ಪ ಹುರಿದು, ಈರುಳ್ಳಿ ಚೂರು ಹಾಕಿ. ಸ್ವಲ್ಪ ಕೆಂಪಗೆ ಹುರಿದು, ಹೆಚ್ಚಿಟ್ಟ ಸೊಪ್ಪು ಹಾಕಿ ಚೆನ್ನಾಗಿ ಹುರಿಯಿರಿ. ತೆಂಗಿನ ತುರಿಗೆ ಲವಂಗ, ಚಕ್ಕೆ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಸಾಂಬಾರು ಪುಡಿ ಸೇರಿಸಿ ರುಬ್ಬಿ. ನಂತರ ಸೊಪ್ಪಿನ ಮಿಶ್ರಣಕ್ಕೆ ಸೇರಿಸಿ. ಉಪ್ಪು ಹಾಕಿ ಸರಿಯಾಗಿ ಬೆರೆಸಿ ಒಲೆಯಿಂದ ಕೆಳಗಿಳಿಸಿ. ನಂತರ ಹುಳಿರಸ ಅನ್ನ ಸೇರಿಸಿ ಒಲೆಯ ಮೇಲಿಟ್ಟು 2 ನಿಮಿಷ ಸರಿಯಾಗಿ ಮಿಕ್ಸ್‌ ಮಾಡಿ. ಈಗ ಪೌಷ್ಟಿಕ, ರುಚಿಯಾದ ಗಿಡಬಸಳೆ ಸೊಪ್ಪಿನ ಬಾತ್ ಸವಿಯಲು ಸಿದ್ಧ.

ಸಾಸಿವೆ
ಬೇಕಾಗುವ ವಸ್ತುಗಳು:
1 ಕಪ್ ಸಣ್ಣಗೆ ಹೆಚ್ಚಿದ ಗಿಡಬಸಳೆ ಸೊಪ್ಪು, 1/2 ಕಪ್ ತೆಂಗಿನ ತುರಿ, 1/2 ಚಮಚ ಸಾಸಿವೆ, 1/2 ಹಸಿಮೆಣಸು, 1 ಕಪ್ ಮೊಸರು, ರುಚಿಗೆ ತಕ್ಕ ಉಪ್ಪು, 1 ಚಮಚ ಬೆಲ್ಲ.

ADVERTISEMENT

ಮಾಡುವ ವಿಧಾನ: ಸೊಪ್ಪು ತೊಳೆದು ಸ್ವಲ್ಪನೀರು ಹಾಕಿ ಬೇಯಿಸಿ. ನಂತರ ತೆಂಗಿನ ತುರಿ, ಸಾಸಿವೆ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ. ತಣ್ಣಗಾದ ಸೊಪ್ಪಿಗೆ ರುಬ್ಬಿದ ಮಿಶ್ರಣ, ಉಪ್ಪು, ಬೆಲ್ಲ, ಮೊಸರು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ರುಚಿಕರ ಸೊಪ್ಪಿನ ಸಾಸಿವೆ ಸವಿಯಲು ಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.