ADVERTISEMENT

ಗುಜ್ಜೆ ವೈವಿಧ್ಯ

ಸುಧಾ ಜಯಪ್ರಕಾಶ ತಲವಾಟ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಎಳೆ ಹಲಸಿನ ಕಾಯಿಗಳಿಗೆ ಗುಜ್ಜೆ ಎಂದು ಹೆಸರು. ಗುಜ್ಜೆಯಿಂದ ತಯಾರಿಸಿದ ಅಂತಹ ಕೆಲವು ಅಡುಗೆ ವಿಧಗಳು ಇಲ್ಲಿವೆ:
ಎಳೆ ಹಲಸಿನ ಕಾಯಿ ಪಲ್ಯ

ಸಾಮಗ್ರಿ: ಒಂದು ಹಲಸಿನ ಕಾಯಿ, ಒಂದು ಈರುಳ್ಳಿ, ಒಗ್ಗರಣೆಗೆ ಎರಡು ಹಸಿಮೆಣಸು, ಒಂದು ಸೌಟು ಎಣ್ಣೆ, ಒಂದು ಚಮಚ ಸಾಸಿವೆ, ಚಿಟಿಕೆ ಅರಿಶಿನ, ಒಂದು ಚಮಚ ಉದ್ದಿನ ಬೇಳೆ, ರುಚಿಗೆ ಉಪ್ಪು, ಒಂದೆರಡು ಚಮಚ ನಿಂಬೆರಸ, ಒಂದು ಚಮಚ ಸಕ್ಕರೆ, ಕೊತ್ತಂಬರಿ, ಕರಿಬೇವು.

ವಿಧಾನ: ಮೊದಲು ಕೈಗೆ ಎಣ್ಣೆ ಸವರಿಕೊಂಡು, ಹಲಸಿನ ಕಾಯಿಯ ಸಿಪ್ಪೆ ತೆಗೆದು, ಎಂಟು ಹತ್ತು ಹೋಳು ಮಾಡಿರಿ. ಈ ಹೋಳುಗಳನ್ನು ಕುಕ್ಕರಿನಲ್ಲಿ ಬೇಯಿಸಿ. ಬೆಂದಮೇಲೆ ಹೋಳುಗಳನ್ನು ಹಿಸುಕಿ ಪುಡಿ ಮಾಡಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ, ಸಾಸಿವೆ, ಅರಿಷಿನ ಪುಡಿ, ಹಸಿ ಮೆಣಸು, ಕರಿಬೇವು, ಈರುಳ್ಳಿ ಕ್ರಮವಾಗಿ ಹಾಕಿ ಒಗ್ಗರಣೆ ತಯಾರಿಸಿ. ನಂತರ ಪುಡಿಮಾಡಿದ ಹೋಳುಗಳನ್ನು ಸೇರಿಸಿ ಚನ್ನಾಗಿ ಮಗುಚಿರಿ.  ಉಪ್ಪು ಸಕ್ಕರೆ, ನಿಂಬೆ ರಸ ಹಾಕಿ ಬಿಸಿ ಅನ್ನದ ಮೇಲೆ ಬಡಿಸಿರಿ. ಬೇಕಿದ್ದರೆ ತೆಂಗಿನ ಕಾಯಿ ತುರಿಯನ್ನು ಸೇರಿಸಬಹುದು.

ಹಲಸಿನ ಸಾಂಬಾರು
ಸಾಮಗ್ರಿ:
ಹಲಸಿನ ಹೋಳು, ಒಂದು ಈರುಳ್ಳಿ, ಒಂದು ಕಪ್ ತೊಗರಿ ಬೇಳೆ, ಹುಣಸೇ ಹಣ್ಣು, ರುಚಿಗೆ ಉಪ್ಪು, ಸ್ವಲ್ಪ

ಬೆಲ್ಲ, ಮಸಾಲೆಗೆ ಒಂದು ಕಪ್ ಕಾಯಿ ತುರಿ, ಎರಡು ಚಮಚ ಕೊತ್ತಂಬರಿ, ಒಂದು ಚಮಚ ಜೀರಿಗೆ, ಒಂದು ಚಮಚ ಸಾಸಿವೆ, ಒಂದು ಚಮಚ ಮೆಂತ್ಯ, ನಾಲ್ಕು ಕೆಂಪು ಮೆಣಸಿನ ಕಾಯಿ, ಕರಿಬೇವು, ಇಂಗು.

ವಿಧಾನ: ಕುಕ್ಕರಿನಲ್ಲಿ ಪಾತ್ರೆಗೆ ಸ್ವಲ್ಪ ನೀರು ಹಾಕಿ  ತೊಗರಿ ಬೇಳೆಯೊಂದಿಗೆ ಹಲಸಿನ ಹೋಳು, ಒಂದು ಚಮಚ ಎಣ್ಣೆ, ಚಿಟಿಕೆ ಅರಿಶಿನ ಪುಡಿ ಹಾಕಿ ಬೇಯಿಸಿ.  (೩-ರಿಂದ೪ ಬಾರಿ ಕುಕ್ಕರ್ ವಿಷಲ್ ಕೂಗಿಸಿ) ಮೇಲೆ ಹೇಳಿದ ಎಲ್ಲಾ ಮಸಾಲೆ ವಸ್ತುಗಳನ್ನು ಕೆಂಪಗಾಗುವಂತೆ ಹುರಿದು, ಕಾಯಿ ತುರಿ, ಹುಣಸೆ ಹಣ್ಣಿನ ಜೊತೆ ಸ್ವಲ್ಪ ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ.   ಬೇರೆ ಪಾತ್ರೆಗೆ ಬೆಂದ ಹೋಳು, ತೊಗರಿ ಬೇಳೆ, ಮಸಾಲೆ ಮಿಶ್ರಣ, ಉಪ್ಪು ಬೆಲ್ಲ, ಕರಿಬೇವು ಎಲ್ಲ ಹಾಕಿ ನೀರು ಹಾಕಿ ಕುದಿಸಿ.  ನಂತರ ಇಂಗಿನ ಒಗ್ಗರಣೆ ಕೊಡಿ.

ಹಲಸಿನ ಬೋಂಡ
ಸಾಮಗ್ರಿ:
ಹಲಸಿನ ಹೋಳುಗಳು, ಎರಡು ಕಪ್ ಕಡಲೆ ಹಿಟ್ಟು, ಎರಡು ಚಮಚ ಅಕ್ಕಿ ಹಿಟ್ಟು, ಕೆಂಪು ಮೆಣಸಿನ ಪುಡಿ, ಸಣ್ಣಗೆ ಕತ್ತರಿಸಿದ ಕರಿಬೇವಿನ ಸೊಪ್ಪು, ಕರಿಯಲು ಎಣ್ಣೆ, ರುಚಿಗೆ ಉಪ್ಪು, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಅಡಿಗೆ ಸೋಡ.

ವಿಧಾನ: ಹಲಸಿನ ಹೋಳುಗಳನ್ನು ಅತಿ ತೆಳುವಾಗಿ ಬಿಲ್ಲೆಯಂತೆ ಕತ್ತರಿಸಿ ಬೇಯಿಸಿ.  ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ, ಕಡಲೆ ಹಿಟ್ಟು ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಅರಿಷಿನ ಪುಡಿ, ಉಪ್ಪು, ಅಡಿಗೆ ಸೋಡ ಸೇರಿಸಿ.  ಬೆಂದ ಹೋಳುಗಳನ್ನು ಈ ಮಿಶ್ರಣದಲ್ಲಿ ಅದ್ದಿ ತೆಗೆದು ಬಿಸಿ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ.  ಊಟದ ಜೊತೆ ಮಾತ್ರವಲ್ಲ ಸಂಜೆಯ ಕಾಫಿ ಟೀ ಜೊತೆಗೂ ಈ ಗರಿ ಗರಿ ಹಲಸಿನ ಬೋಂಡ ಅತ್ಯಂತ ರುಚಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT