ADVERTISEMENT

ಚಳಿಗೆ ಮುದ ನೀಡುವ ಖಾರ ಖಾರ ಶ್ರೀಲಂಕಾ ಆಹಾರ

ನಳಪಾಕ

ಪ್ರಜಾವಾಣಿ ವಿಶೇಷ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST
ಚಳಿಗೆ ಮುದ ನೀಡುವ ಖಾರ ಖಾರ ಶ್ರೀಲಂಕಾ ಆಹಾರ
ಚಳಿಗೆ ಮುದ ನೀಡುವ ಖಾರ ಖಾರ ಶ್ರೀಲಂಕಾ ಆಹಾರ   

ತರಕಾರಿ ಇಡಿಯಪ್ಪಂ ಬಿರಿಯಾನಿ
ಸಾಮಾಗ್ರಿ: 
ಈರುಳ್ಳಿ 1, ಟೊಮೆಟೊ 1, ಪುದಿನ 5 ರಿಂದ 10 ಎಲೆ, ಕೊತ್ತಂಬರಿ ಎರಡು ಚಮಚ, ಮೆಣಸಿನಕಾಯಿ 1, ಕರಿಬೇವು 5 ರಿಂದ 6 ಎಲೆ, ಯಾವುದಾದರು ಹೆಚ್ಚಿದ ತರಕಾರಿ (ಹೂಕೋಸು, ಬೀನ್ಸ್‌ ಮತ್ತು ಅಣಬೆ) ಒಂದು ಬಟ್ಟಲು, ಶುಂಠಿ– ಬೆಳ್ಳುಳ್ಳಿ ಪೇಸ್ಟ್‌ 1 ಚಮಚ, ಚಕ್ಕೆ 1, ಲವಂಗ 2 ರಿಂದ 3, ಪಲಾವ್‌ ಎಲೆ 2, ಅರಿಸಿಣ ಅರ್ಧ ಚಮಚ, ಬಿರಿಯಾನಿ ಮಸಾಲ ಪುಡಿ 1 ಚಮಚ, ಕಾಯಿ ಹಾಲು  1 ಬಟ್ಟಲು, ಶಾವಿಗೆ 2 ಬಟ್ಟಲು, ಅಡುಗೆ ಎಣ್ಣೆ 2 ಚಮಚ.

ವಿಧಾನ: ಸ್ವಲ್ಪ ಕಾದ ಕಡಾಯಿಗೆ ಎಣ್ಣೆ ಹಾಕಿ, ಚಕ್ಕೆ, ಲವಂಗ ಮತ್ತು ಪಲಾವ್‌ ಎಲೆ ಹಾಕಿ ಸ್ವಲ್ಪ ಸಮಯ ಹುರಿಯಿರಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಹಾಕಿ ಬಾಡಿಸಿ.

ಈ ಸ್ಥಿತಿಯಲ್ಲಿ ಅದಕ್ಕೆ ಹೆಚ್ಚಿದ ಟೊಮೆಟೊ ಮತ್ತು ಬೀನ್ಸ್‌ ಹಾಕಿ ಸ್ವಲ್ಪ ಬಾಡಿಸಿ ಉಪ್ಪು ಹಾಕಿ ಕೆಲವು ನಿಮಿಷ ಬೇಯಿಸಿ. ನಂತರ ಹೂಕೋಸು, ಅಣಬೆ ಮತ್ತು ಪುದಿನ ಎಲೆ, ಕೊತ್ತಂಬರಿ ಸೊಪ್ಪು ಮತ್ತು ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಮಿಶ್ರಣ ಮಾಡಿ ತಳ ಹತ್ತದಂತೆ ಕೈಯಾಡಿಸುತ್ತಿರಿ.

ನಂತರ ಅದಕ್ಕೆ ಅರಿಶಿಣ ಮತ್ತು ಬಿರಿಯಾನಿ ಮಸಾಲ ಪುಡಿ ಹಾಕಿ. ಈಗ ಈ ಮಿಶ್ರಣಕ್ಕೆ ಕಾಯಿ ಹಾಲು ಹಾಕಿ ಕುದಿಸಿ. ನಂತರ ಮುಚ್ಚಳ ಮುಚ್ಚಿ ನಾಲ್ಕು ನಿಮಿಷ ಬೇಯಿಸಿ. 

ನಂತರ ಅದಕ್ಕೆ ಸ್ವಲ್ಪ ಶಾವಿಗೆಯನ್ನು ಹಾಕಿ ಅದರ ಮೇಲೆ ಸ್ವಲ್ಪ ತುಪ್ಪವನ್ನು ಸುರಿಯಿರಿ. ಸ್ವಲ್ಪ ಸಮಯ ತರಕಾರಿಗಳು ಚೆನ್ನಾಗಿ ಬೆಂದ ಮೇಲೆ ಶಾವಿಗೆ ಮುದ್ದೆಯಾಗದಂತೆ ಎಷ್ಟು ಬೇಕೋ ಅಷ್ಟೇ ಗ್ರೇವಿ ಮಾಡಿಕೊಳ್ಳಿ. ನಂತರ ಸ್ಟೌ ಆರಿಸಿ ಮತ್ತೊಂದು ಬಟ್ಟಲು ಶಾವಿಗೆಯನ್ನು ಸೇರಿಸಿ ಮುಚ್ಚಳ ಮುಚ್ಚಿ ಹತ್ತು ನಿಮಿಷ ಹಾಗೆ ಬಿಡಿ. ರಾಯತದೊಂದಿಗೆ ಬಿಸಿಬಿಸಿ ಇಡಿಯಪ್ಪಂ ಸವಿಯಲು ಸಿದ್ಧ.

*
ಕಿಂಗ್ಸ್‌ ಚಿಕನ್‌ ಕರಿ
ಸಾಮಗ್ರಿ:
ಒಂದು ಕೆ.ಜಿ. ಕೋಳಿಮಾಂಸ,  ಈರುಳ್ಳಿ 100 ಗ್ರಾಂ, ಬೆಳ್ಳುಳ್ಳಿ 4, ಪಂಡನಸ್‌  ಗಿಡದ ಎಲೆ 2, ಒಣಮೆಣಸಿನಕಾಯಿ 2, ಹಸಿಮೆಣಸಿನಕಾಯಿ 4, ಕರಿಬೇವು, ಹುರಿದ ಸಾಸಿವೆ ಸ್ವಲ್ಪ, ಕಾಳುಮೆಣಸು 10, ತಾಜಾ ಅರಿಶಿಣ ಸ್ವಲ್ಪ, ಸಾಸಿವೆ ಅರ್ಧ ಚಮಚ, ಎಣ್ಣೆ 2 ಚಮಚ, ಗಂಧ 1 ಸಣ್ಣ ತುಂಡು, ಬಿಳಿ ವಿನೆಗರ್‌ 2 ಚಮಚ, ಲವಂಗ 6, ಏಲಕ್ಕಿ 4 (ಪುಡಿ), ಚೆನ್ನಾಗಿ ಹುರಿದ ಕರಿಬೇವು ಪುಡಿ ಅರ್ಧ ಚಮಚ, ಕಾಯಿಹಾಲಿನ ಕ್ರೀಂ 500 ಎಂ.ಎಲ್, (ಹುರಿದ ಒಣಮೆಣಸಿನ ಕಾಯಿ ಮತ್ತು ಪಲಾವ್‌ ಎಲೆ ಅಲಂಕಾರಕ್ಕೆ)

ADVERTISEMENT

ವಿಧಾನ: ದೊಡ್ಡ ಕಡಾಯಿಯಲ್ಲಿ ಚಿಕನ್‌, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಪಂಡನಸ್‌, ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಬಿಳಿ ಸಾಸಿವೆ ಮತ್ತು ಕಾಳುಮೆಣಸು ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಉರಿಯಿಂದ ಕೆಳಗಿಳಿಸಿ ಪಕ್ಕಕ್ಕಿಡಿ.

ನಂತರ ಅರಿಶಿಣ ಕೊಂಬು ಮತ್ತು ಸಾಸಿವೆಯನ್ನು ಸೇರಿಸಿ ರುಬ್ಬಿಕೊಳ್ಳಿ. ಈಗ ಕಡಾಯಿಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ಕಲಸಿ ಇಟ್ಟಿದ್ದ ಮಿಶ್ರಣದಿಂದ ಚಿಕನ್‌ ತುಂಡುಗಳನ್ನು ಹಾಕಬೇಕು. ಚಿಕನ್‌ನ ಸ್ಕಿನ್‌ ಭಾಗ ಕ್ರಿಸ್ಪ್‌ ಆಗುವವರೆಗೂ ಬೇಯಿಸಿ.

ಈ ಮಧ್ಯ ಬೇರೆ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಗೆ ಇಟ್ಟು, ಇದಕ್ಕೆ ತೆಗೆದಿಟ್ಟುಕೊಂಡಿಂದ್ದ ಮಿಶ್ರಣದಲ್ಲಿನ ಮಸಾಲೆ ಮತ್ತು ಗಂಧದ ಚಕ್ಕೆಯನ್ನು ಹಾಕಿ ಚೆನ್ನಾಗಿ ಬಾಡಿಸಿ. ಇದಕ್ಕೆ ಲವಂಗ, ಏಲಕ್ಕಿ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಕೈಯಾಡಿಸಿ.

ರುಬ್ಬಿಕೊಂಡಿದ್ದ ಅರಿಶಿಣ, ಕರಿಮೆಣಸು, ಉಪ್ಪು ಮತ್ತು ಕರಿಬೇವು ಪುಡಿ ಹಾಗಿ ಬಾಡಿಸಿ. ಇದಕ್ಕೆ ಬೇಯುತ್ತಿದ್ದ ಚಿಕನ್‌್ ಅನ್ನು ಸೇರಿಸಿ, ಚಿಕನ್‌ ಮುಳುಗುವವರೆಗೂ ನೀರು ಹಾಕಿ. ಕಡಿಮೆ ಉರಿಯಲ್ಲಿ 45 ರಿಂದ 60 ನಿಮಿಷ ಬೇಯಿಸಿ.

ಚಿಕನ್‌ ಬೆಂದ ನಂತರ ಅದಕ್ಕೆ ಕಾಯಿ ಹಾಲಿನ ಕ್ರೀಂ ಹಾಕಿ. ಸ್ವಲ್ಪ ಹೊತ್ತು ಕುದಿಸಿ. ಕುದಿಯುತ್ತಿರುವಾಗಲೇ ಸ್ಟೌನಿಂದ ಇಳಿಸಿ.  ಬಿಸಿಬಿಸಿಯಾಗಿ ಚಿಕನ್‌ ಕರಿ ಸವಿಯಿರಿ.

ಬೆಂಗಳೂರಿನ ಬಾನ್‌ಸೌತ್‌ನಲ್ಲಿ ಪ್ರಮುಖ ಶೆಫ್‌ ಆಗಿರುವ ಮನು ನಾಯರ್‌ ಅವರಿಗೆ ಚಿಕ್ಕವಯಸ್ಸಿನಿಂದಲೂ ಅಡುಗೆ ಬಗ್ಗೆ ಆಸಕ್ತಿ. ಕೇರಳದವರಾದ ಇವರು ಎಂಟು ವರ್ಷಗಳಿಂದ ಬಾಣಸಿಗವೃತ್ತಿ ನಿರ್ವಹಿಸುತ್ತಿದ್ದಾರೆ. ಇವರಿಗೆ ಅಡುಗೆ ಮಾಡುವ ಒಲವು ಮೂಡಿದ್ದು ಅಜ್ಜಿಯಿಂದ.

ಅಡುಗೆ ಬಗೆಗೆ ಅಜ್ಜಿಗಿದ್ದ ಪಾಂಡಿತ್ಯ ಇವರನ್ನು ಬೆರಗುಗೊಳಿಸುತ್ತಿತ್ತು. ಶೆಫ್‌ ಮನು ಅವರ ವಿಶೇಷ ರುಚಿಗಳೆಂದರೆ ಕಾರೈಕುಡಿ ಕುಷ್ಕಾ, ಯುರುಲೈ ರೋಸ್ಟ್‌ಮ ಮುಟ್ಟೈ ಮಾಂಸಂ, ಚೆಟ್ಟಿನಾಡು ಕೊಡಿ ರೋಸ್ಟ್‌, ಮಸಾಲ ವಡೆ.

ಅಡುಗೆ ಮಾಡುವುದರಲ್ಲೇ ಖುಷಿ ಕಂಡುಕೊಂಡಿರುವ ಮನು ಅವರಿಗೆ ಹೆಚ್ಚು ಕಷ್ಟದ ಪ್ರಕ್ರಿಯೆಯಿಂದ ಕೂಡಿರುವ ಅಡುಗೆಗಳು ಹೆಚ್ಚು ಆಸಕ್ತಿದಾಯಕ ಎನಿಸುತ್ತವೆ. ಎಲ್ಲ ಅಡುಗೆಗಳನ್ನು ರುಚಿ ನೋಡಲು ಬಯಸುವ ಮನು ಅವರಿಗೆ ಪ್ರಾದೇಶಿಕ ಅಡುಗೆಗಳೆಂದರೆ  ಹೆಚ್ಚು ಇಷ್ಟ. ಅಲ್ಲದೇ ದಕ್ಷಿಣ ಭಾರತದ ಅಡುಗೆ ಮಾಡುವಲ್ಲಿ ನಿಪುಣರಾಗಿದ್ದಾರೆ.

ನೀವೂ ಬರೀರಿ
ಹೆಣ್ಣಿನ ಪ್ರತಿ ಆಯ್ಕೆಯಲ್ಲೂ ಅಭಿರುಚಿಯಿರುತ್ತದೆ; ಅದು ಜಡೆ ಇರಬಹುದು, ಅಥವಾ ಕೊಡೆ ಇರಬಹುದು. ಈಗ ಮಳೆಗಾಲ.  ಹೆಣ್ಣುಮಕ್ಕಳ ಪಾಲಿಗೆ ‘ಕೊಡೆ’ ಕೇವಲ ಮಳೆಯಿಂದ ರಕ್ಷಣೆ ಕೊಡುವ ವಸ್ತುವಷ್ಟೆ ಅಲ್ಲ; ಅದು ಅವಳ ಸೌಂದರ್ಯದ ಭಾಗವೂ ಹೌದು, ಅವಳ ಉಡುಗೆ–ತೊಡುಗೆಯ ಭಾಗವೂ ಹೌದು. ಹಾಗಾದರೆ ನೀವು ನಿಮ್ಮ ಕೊಡೆಯನ್ನು ಹೇಗೆ ಆರಿಸಿಕೊಳ್ಳುತ್ತೀರಿ? ನಿಮಗೂ ನಿಮ್ಮ ಕೊಡೆಗೂ ಇರುವ ನಂಟನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಬರಹ  250 ಪದಗಳನ್ನು ಮೀರದಂತಿರಲಿ; ಯೂನಿಕೋಡ್‌ನಲ್ಲಿರಲಿ. ನಿಮ್ಮ ಸಂಪರ್ಕ ವಿಳಾಸ, ದೂರವಾಣಿ ಸಂಖ್ಯೆ ಕಡ್ಡಾಯ. 

ಇ–ಮೇಲ್‌ ವಿಳಾಸ: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.