ADVERTISEMENT

ನವರಾತ್ರಿಗೆ ಇಲ್ಲಿದೆ ಖಾದ್ಯ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2016, 19:30 IST
Last Updated 7 ಅಕ್ಟೋಬರ್ 2016, 19:30 IST
ನವರಾತ್ರಿಗೆ ಇಲ್ಲಿದೆ ಖಾದ್ಯ ವೈವಿಧ್ಯ
ನವರಾತ್ರಿಗೆ ಇಲ್ಲಿದೆ ಖಾದ್ಯ ವೈವಿಧ್ಯ   

ನವರಾತ್ರಿಯಲ್ಲಿ ವ್ರತ ಮಾಡುವ ಉತ್ತರ ಭಾರತೀಯರು ಕೆಲ ನಿರ್ದಿಷ್ಟ ಬೇಳೆ/ಕಾಳುಗಳನ್ನು ಅಥವಾ ಅವುಗಳ ಹಿಟ್ಟನ್ನು ಬಳಸುತ್ತಾರೆ. ಆದರೆ ತಿಂಡಿ ತಿನಿಸುಗಳಿಗೆ ಗೋಧಿ, ರಾಗಿ ಮತ್ತು ಅಕ್ಕಿ ಹಿಟ್ಟನ್ನು ಹೆಚ್ಚಾಗಿ ಬಳಸುತ್ತಾರೆ. ನವರಾತ್ರಿಯ ವಿಶೇಷ ತಿನಿಸು ತಯಾರಿಯ ರೆಸಿಪಿಗಳು ಇಲ್ಲಿವೆ.

ಕುಟ್ಟು ಹಿಟ್ಟಿನ ಪೂರಿ
ಜೋಳವನ್ನು ಹೋಲುವ, ಏಕದಳ ಧಾನ್ಯ ಕುಟ್ಟು (ಬಕ್‌ವೀಟ್‌). ಈ ಹಿಟ್ಟನ್ನು ಬರಿಯ ನೀರಿನಲ್ಲಿ ನಾದಲು ಸಾಧ್ಯವಿಲ್ಲ.  ಹಾಗಾಗಿ ಬೇಯಿಸಿದ ಆಲೂಗಡ್ಡೆ ಜತೆಗೇ ನಾದಬೇಕು.

ಸಾಮಗ್ರಿಗಳು: ಕುಟ್ಟು ಹಿಟ್ಟು –100 ಗ್ರಾಂ  (ಅರ್ಧ ಕಪ್‌); ಆಲೂಗಡ್ಡೆ– 100 ಗ್ರಾಂ (ಮಧ್ಯಮ ಗಾತ್ರದ್ದು 2); ಸೈಂಧವ ಉಪ್ಪು –ಮುಕ್ಕಾಲು ಚಮಚ; ಕಾಳುಮೆಣಸಿನ ಪುಡಿ– 1 ಟೇಬಲ್‌ ಚಮಚ.

ವಿಧಾನ: ಆಲೂಗಡ್ಡೆಯನ್ನು ಬೇಯಿಸಿಕೊಂಡು ಸಿಪ್ಪೆ ಸುಲಿದು ಪುಡಿ ಮಾಡಿಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಹಿಟ್ಟು, ಆಲೂ, ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.

ಹಿಟ್ಟು ನಾದುವಾಗ ಆಲೂ ಇರುವ ಕಾರಣ ನೀರಿನ ಅಗತ್ಯವಿರುವುದಿಲ್ಲ. 15–20 ನಿಮಿಷದ ನಂತರ ನಂತರ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಅದರ ಮೇಲೆ ಹಿಟ್ಟು ಉದುರಿಸಿ. ಲಟ್ಟಣಿಗೆಯಿಂದ ಅದನ್ನು ಪೂರಿ ಗಾತ್ರಕ್ಕೆ ಒತ್ತಿ ಬೆರಳಿನಿಂದ ತಟ್ಟಿ ಹದ ಮಾಡಿಕೊಳ್ಳಿ.

ಪ್ಯಾನ್‌ಗೆ ಒಂದು ಚಮಚ ಎಣ್ಣೆ ಹಾಕಿ  ಬಿಸಿಯಾದ ಬಳಿಕ ಪೂರಿಯನ್ನು ಒಂದೊಂದಾಗಿ ಹಾಕಿ ಕಂದು ಬಣ್ಣ ಬರುವವರೆಗೂ ತಿರುವಿ ಹಾಕುತ್ತಾ ಇರಿ.  ಒಂದು ತಟ್ಟೆಯ ಮೇಲೆ ತೆಳುವಾದ ಬಟ್ಟೆ ಅಥವಾ ಟಿಶ್ಯೂ ಪೇಪರ್‌ ಹಾಕಿ ಅದರ ಮೇಲೆ ಪೂರಿಯನ್ನು ಹಾಕಿ. ಕುಟ್ಟು ಹಿಟ್ಟಿನ ಪೂರಿಯನ್ನು ಫ್ರೈ ಮಾಡಿದ ಆಲೂಗಡ್ಡೆ ಅಥವಾ ಮೊಸರಿನೊಂದಿಗೆ ಸವಿದರೆ ಚೆನ್ನಾಗಿರುತ್ತದೆ.

ಸಬ್ಬಕ್ಕಿ ರೊಟ್ಟಿ/ ಪೂರಿ
ಮರಾಠಿಗರ ನವರಾತ್ರಿ ವಿಶೇಷ ತಿನಿಸು ಸಬ್ಬಕ್ಕಿ ಪೂರಿ/ರೊಟ್ಟಿ ಬಗ್ಗೆ ಜೆ.ಪಿ.ನಗರ ಎಂಟನೇ ಹಂತದ ರಾಖಿ ಜೈನ್‌ ಅವರು  ಮಾಹಿತಿ ನೀಡಿದ್ದಾರೆ.

ಸಾಮಗ್ರಿಗಳು: ಸಬ್ಬಕ್ಕಿ (ಸಾಬುದಾನ)– 1 ಕಪ್‌, ಅಲೂಗಡ್ಡೆ– 4 ಮಧ್ಯಮ ಗಾತ್ರದ್ದು, ಶೇಂಗಾ ಬೀಜ ಅರ್ಧ ಕಪ್‌, ಜೀರಿಗೆ ಪುಡಿ– 1 ಚಮಚ, ಒಂದೆರಡು ಸಣ್ಣಗೆ ಹೆಚ್ಚಿದ ಹಸಿ ಮೆಣಸು, ಸಣ್ಣಗೆ ಹೆಚ್ಚಿದ ಶುಂಠಿ–1 ಚಮಚ, ಲಿಂಬೆ ರಸ– 2 ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಕುಟ್ಟು ಹಿಟ್ಟು–3 ಚಮಚ, ಸೈಂಧವ ಲವಣ, ಕರಿಯಲು ಎಣ್ಣೆ.

ವಿಧಾನ: ಸಬ್ಬಕ್ಕಿಯನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ನೀರು ಬಸಿದು ಇಟ್ಟುಕೊಳ್ಳಬೇಕು. ಆಲೂಗಡ್ಡೆ ಬೇಯಿಸಿ ಸಿಪ್ಪೆ ಸುಲಿದು ಪುಡಿ ಮಾಡಿಕೊಂಡು ಸಬ್ಬಕ್ಕಿ ಜೊತೆ ಬೆರೆಸಬೇಕು. ಶೇಂಗಾಬೀಜಗಳನ್ನು ಪಟಪಟ ಅನ್ನುವವರೆಗೂ ಹುರಿದು ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಬೇಕು.

ಬೆರೆಸಿಟ್ಟುಕೊಂಡಿರುವ ಮಿಶ್ರಣಕ್ಕೆ ಶೇಂಗಾ ಪುಡಿ ಹಾಗೂ ಇತರ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಸಣ್ಣ ಉಂಡೆ ಕಟ್ಟಿಕೊಂಡು ಪೂರಿ ಅಥವಾ ರೋಟಿ ಗಾತ್ರಕ್ಕೆ ಕೈಯಿಂದ ತಟ್ಟಬೇಕು.

ಇದನ್ನು ಎಣ್ಣೆ ಸವರಿದ ತವಾದಲ್ಲಿ ಎರಡೂ ಕಡೆ ಚೆನ್ನಾಗಿ ಬೇಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.