ADVERTISEMENT

ನೇಂದ್ರ ಬಾಳೆಹಣ್ಣಿನ ವಿಧವಿಧ ಭಕ್ಷ್ಯ

ನಳಪಾಕ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2016, 19:30 IST
Last Updated 4 ನವೆಂಬರ್ 2016, 19:30 IST
ನೇಂದ್ರ ಬಾಳೆಹಣ್ಣಿನ ಕಡುಬು
ನೇಂದ್ರ ಬಾಳೆಹಣ್ಣಿನ ಕಡುಬು   

ನೇಂದ್ರ ಬಾಳೆಹಣ್ಣಿನ ಕಡುಬು
ಬೇಕಾಗುವ ಸಾಮಗ್ರಿಗಳು:
ನೇಂದ್ರ ಬಾಳೆಹಣ್ಣು –4, ಮೊಟ್ಟೆ –4,
ಸಕ್ಕರೆ –4 ಟೀ ಚಮಚ, ಏಲಕ್ಕಿ– ಸ್ವಲ್ಪ, ಕರಿಯಲು ಎಣ್ಣೆ
ಮಾಡುವ ವಿಧಾನ
ಕಡುಬು ತಯಾರಿಸುವಾಗ ಬಾಳೆಹಣ್ಣು ಅತಿ ಹೆಚ್ಚು ಹಣ್ಣಾಗಿರಬಾರದು. ತುಸು ಗಟ್ಟಿಯಾಗಿರುವ 4 ಹಳದಿ ಬಾಳೆಹಣ್ಣನ್ನು ತೆಗೆದುಕೊಂಡು ಆವಿಯಲ್ಲಿ ಬೇಯಿಸಿಕೊಳ್ಳಿ. ಅದು ಆರಿದ ನಂತರ ಸಿಪ್ಪೆ ತೆಗೆದು ಉದ್ದಕ್ಕೆ ಸೀಳಿ ಒಳಗಿನ ಕಪ್ಪು ಬೀಜ ಮತ್ತು ನಾರನ್ನು ತೆಗೆದು ರುಬ್ಬಿಕೊಳ್ಳಿ. ಬಳಿಕ ಮೊಟ್ಟೆ ಮತ್ತು ಸಕ್ಕರೆಯನ್ನು ಗೊಟಾಯಿಸಿ. ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ, ಅದು  ಬಿಸಿಯಾದೊಡನೆ ಅದಕ್ಕೆ ಗೊಟಾಯಿಸಿದ ಮೊಟ್ಟೆ ಮಿಶ್ರಣವನ್ನು ಹಾಕಿ, ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಸೌಟಿನಿಂದ ಮುಗುಜುತ್ತಿರಿ. ಉರಿ ಸ್ವಲ್ಪ ಮಂದವಾಗಿರಲಿ. ಸ್ವಲ್ಪ ಹೊತ್ತಿನ ನಂತರ ಒಲೆಯಿಂದ ಕೆಳಗೆ ಇಳಿಸಿ. ಬಾಳೆಹಣ್ಣಿನ ಹಿಟ್ಟನ್ನು ಸ್ವಲ್ಪ ಸ್ವಲ್ಪ (ನಿಂಬೆ ಹಣ್ಣಿನ ಗಾತ್ರದಷ್ಟು) ತೆಗೆದುಕೊಂಡು ವಡೆಯಂತೆ ಮಾಡಿ ಅದರ ನಡುವೆ ಮೊಟ್ಟೆ ಹೂರಣವನ್ನು ಇಟ್ಟು ಎರಡೂ ಭಾಗವನ್ನು ಸೇರಿಸಿ ಮುಚ್ಚಿ ಕರಿಗಡುಬು ಮಾಡುವಂತೆ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಇದನ್ನು ತುಪ್ಪದಲ್ಲಿಯೂ ಕರಿಯಬಹುದು.

ನೇಂದ್ರ ಬಾಳೆಹಣ್ಣಿನ ಕಟ್ಲೆಟ್‌
ಬೇಕಾಗುವ ಸಾಮಗ್ರಿಗಳು:
ನೇಂದ್ರ ಬಾಳೆಹಣ್ಣು–1, ತೆಂಗಿನಕಾಯಿ ತುರಿ – ಅರ್ಧ ಕಪ್‌,
ಸಕ್ಕರೆ –1/4 ಕಪ್‌, ಏಲಕ್ಕಿ ಪುಡಿ – 1/4 ಟೀ ಚಮಚ, ತುಪ್ಪ –1 ಚಮಚ, ಅಕ್ಕಿ ಹಿಟ್ಟು –1/4 ಕಪ್‌, ಮೈದಾ –3 ಚಮಚ, ಟೋಸ್ಟ್‌ ಹುಡಿ –1/4 ಕಪ್‌, ಅರಶಿನಪುಡಿ –ಚಿಟಿಕೆ, ಉಪ್ಪು –ಚಿಟಿಕೆ
ಮಾಡುವ ವಿಧಾನ: ನೇಂದ್ರ ಬಾಳೆಹಣ್ಣನ್ನು ಆವಿಯಲ್ಲಿ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ತೆಗೆದು ಚೆನ್ನಾಗಿ ನಾದಿಕೊಳ್ಳಿ. ಅದು ಎರಡು ಕಪ್‌ನಷ್ಟು ಆಗಲಿ. ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ನಾದಿದ ಹಣ್ಣಿಗೆ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.  ಇಷ್ಟಿಷ್ಟೇ ಮಿಶ್ರಣವನ್ನು ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡಗಳಂತೆ ಮಾಡಿ ವಡೆಯಂತೆ ತಟ್ಟಿ ಇಟ್ಟುಕೊಳ್ಳಿ. ಈಗ ಮೈದಾ ಮತ್ತು ಅಕ್ಕಿ ಹಿಟ್ಟಿಗೆ ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ದೋಸೆ ಹಿಟ್ಟಿನಂತೆ ಕಲಕಿ. ನಂತರ ಕಟ್ಲೆಟ್ಟನ್ನು ಹಿಟ್ಟಿನಲ್ಲಿ ಮುಳುಗಿಸಿ ಟೋಸ್ಟ್‌ ಪುಡಿ ಉದುರಿಸಿ ಎಣ್ಣೆಯಲ್ಲಿ ಕರಿದು ತೆಗದರೆ ಬಿಸಿ ಬಿಸಿ ಕಟ್ಲೆಟ್‌ ಸವಿಯಲು ಸಿದ್ಧ.

ನೇಂದ್ರ ಬಾಳೆಹಣ್ಣಿನ ಹಲ್ವಾ
ಬೇಕಾಗುವ ಸಾಮಗ್ರಿಗಳು:
ನೇಂದ್ರ ಬಾಳೆಹಣ್ಣು– 1 ಕೆ. ಜಿ., ಸಕ್ಕರೆ –500 ಗ್ರಾಂ, ತುಪ್ಪ –1 ಕಪ್, ನಿಂಬೆರಸ –2 ಟೀ ಚಮಚ, ನೀರು –ಅರ್ಧ ಕಪ್‌, ಏಲಕ್ಕಿ ಪುಡಿ– ಸ್ವಲ್ಪ, ಗೇರು ಬೀಜ– ಸ್ವಲ್ಪ
ಮಾಡುವ ವಿಧಾನ
ಸಕ್ಕರೆಗೆ ನೀರು ಸೇರಿಸಿ ಕುದಿಸಿ ಸೋಸಿ ಇಟ್ಟುಕೊಳ್ಳಿ. ಬಾಳೆಹಣ್ಣನ್ನು ಆವಿಯಲ್ಲಿ ಬೇಯಿಸಿ, ಸಿಪ್ಪೆ ತೆಗೆದು ಒಳಗಿನ ಬೀಜ ಮತ್ತು ನಾರು ತೆಗೆದು ನುಣ್ಣನೆ ರುಬ್ಬಿಕೊಳ್ಳಿ. ಬಳಿಕ ಸಕ್ಕರೆ ನೀರಿಗೆ ನಿಂಬೆರಸ ಹಾಕಿ ಸ್ವಲ್ಪ ಹೊತ್ತು ಕುದಿಸಿ ಕೆಳಗೆ ಇಳಿಸಿ. ನಂತರ ಅದಕ್ಕೆ ನುಣ್ಣಗೆ ರುಬ್ಬಿದ ಬಾಳೆಹಣ್ಣನ್ನು ಹಾಕಿ ಸಮನಾಗಿ ಬೆರೆಸಿ ಪುನಃ ಒಲೆಯ ಮೇಲಿಟ್ಟು ಮುಗುಚಿ. ಮುಗುಚುವಾಗ ಸ್ವಲ್ಪ ಸ್ವಲ್ಪ ತುಪ್ಪವನ್ನು ಸೇರಿಸುತ್ತ ಇರಬೇಕು. ಇದು ಹಲ್ವಾದ ಹದಕ್ಕೆ ಬಂದಾಗ ತುಪ್ಪ ಸವರಿದ ಪಾತ್ರೆಗೆ ಹಾಕಿ ಅದರ ಮೇಲೆ ಏಲಕ್ಕಿ ಪುಡಿ, ಗೇರುಬೀಜವನ್ನು ಹರಡಬೇಕು. ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಬಹುದು.

ADVERTISEMENT

ನೇಂದ್ರ ಬಾಳೆಹಣ್ಣಿನ ಅಪ್ಪಂ
ಬೇಕಾಗುವ ಸಾಮಗ್ರಿಗಳು:
ನೇಂದ್ರ ಬಾಳೆಹಣ್ಣು –2, ಮೈದಾ– ಅರ್ಧ ಕಪ್, ಅಕ್ಕಿ ಹಿಟ್ಟು –ಒಂದು ಡೆಸರ್ಟ್‌ ಸ್ಪೂನ್‌, ಸಕ್ಕರೆ –1 ಟೀ ಚಮಚ ಮತ್ತು ರುಚಿಗೆ ಉಪ್ಪು
ಮಾಡುವ ವಿಧಾನ
ಬಾಳೆಹಣ್ಣನ್ನು ಮೂರು ತುಂಡು ಮಾಡಿ ಒಂದೊಂದು ತುಂಡಿನಲ್ಲಿ ಮೂರು ಭಾಗ ಮಾಡಿ ತುಂಡರಿಸಿ ಇಟ್ಟುಕೊಳ್ಳಬೇಕು. ಬಳಿಕ ಸಿಪ್ಪೆ ತೆಗೆಯಬೇಕು. ನಂತರ ಮೈದಾ, ಅಕ್ಕಿ ಹಿಟ್ಟು, ಸಕ್ಕರೆ ಮತ್ತು ಉಪ್ಪು ಹಾಕಿ, ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಬಿಸಿ ಮಾಡಬೇಕು. ಹಣ್ಣಿನ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ, ಎಣ್ಣೆಯಲ್ಲಿ ಮುಳುಗಿಸಿ ಕಂದುಬಣ್ಣಕ್ಕೆ ಬರುವವರೆಗೆ ಕರಿಯಬೇಕು.

ನೇಂದ್ರ ಬಾಳೆಹಣ್ಣಿನ ಪುಡ್ಡಿಂಗ್‌
ಬೇಕಾಗುವ ಸಾಮಗ್ರಿಗಳು:
ನೇಂದ್ರ ಬಾಳೆಹಣ್ಣು –2 ಕಪ್‌ (ಉರುಟಾಗಿ ತುಂಡು ಮಾಡಿದ್ದು) ಸಕ್ಕರೆ –1/4 ಕಪ್‌, ಮೊಟ್ಟೆ–2, ಕುದಿಸಿದ ಹಾಲು– 2 ಕಪ್‌, ಮೈದಾ– 1 ಟೀ ಚಮಚ, ಏಲಕ್ಕಿ ಪುಡಿ– 1/4 ಟೀ ಚಮಚ, ವೆನಿಲ್ಲಾ ಎಸ್ಸೆನ್ಸ್‌– ಅರ್ಧ ಟೀ ಚಮಚ, ನೀರು– ಅರ್ಧ ಕಪ್‌

ಮಾಡುವ ವಿಧಾನ
ಒಲೆಯ ಮೇಲಿಟ್ಟ ಬಾಣಲೆಗೆ ಒಂದೆರಡು ಚಮಚ ತುಪ್ಪ ಹಾಕಿ. ಅದು ಬಿಸಿಯಾದ ಮೇಲೆ ಅದಕ್ಕೆ ಬಾಳೆಹಣ್ಣಿನ ತುಂಡುಗಳನ್ನು ಸೇರಿಸಿ ಮಂದ ಉರಿಯಲ್ಲಿ ಸ್ವಲ್ಪ ಹೊತ್ತು ಮುಗುಚಿ. ಅದು ಬೆಂದ ಮೇಲೆ ಕೆಳಗೆ ಇಳಿಸಿ. ಇನ್ನೊಂದು ಪಾತ್ರಯಲ್ಲಿ 1/4 ಸಕ್ಕರೆಯನ್ನು ಹಾಕಿ ಮಂದ ಉರಿಯಲ್ಲಿಡಿ. ಅದು ಕಂದು ಬಣ್ಣಕ್ಕೆ ಬಂದೊಡನೆ ಸ್ವಲ್ಪ ನೀರು ಹಾಕಿ ಕುದಿಸಿ ಕೆಳಗೆ ಇಳಿಸಿ. ಎರಡು ಮೊಟ್ಟೆಗಳನ್ನು ಒಡೆದು ಪಾತ್ರೆಗೆ ಹಾಕಿ ಚೆನ್ನಾಗಿ ಬೀಟ್‌ ಮಾಡಿದ ಬಳಿಕ ಅದಕ್ಕೆ ಎರಡು ಕಪ್‌ ಹಾಲು ಹಾಕಿ. ನಂತರ ಕೊಂಚ ಹಾಲಿನಲ್ಲಿ ಮೈದಾ ಕಲಿಸಿ ಅದನ್ನೂ ಹಾಲಿಗೆ ಸೇರಿಸಿ. ಮೇಲೆ ಏಲಕ್ಕಿ ಪುಡಿ, ವೆನಿಲ್ಲಾ ಎಸ್ಸೆನ್ಸ್‌ ಹಾಗೂ ಸಕ್ಕರೆ ಪಾಕವನ್ನು ಸೇರಿಸಿ. ಒಂದು ಅಗಲವಾದ ಪಾತ್ರೆಗೆ ತುಪ್ಪ ಸವರಿ ಅದರಲ್ಲಿ ಬೇಯಿಸಿದ ಬಾಳೆಹಣ್ಣಿನ ತುಂಡುಗಳನ್ನು ಹರಡಿ. ಅದರ ಮೇಲೆ ಸಿದ್ಧಪಡಿಸಿದ ದ್ರಾವಣವನ್ನು ಹಾಕಿ ಆವಿಯಲ್ಲಿ ಬೇಯಿಸಿಯೂ ಅಥವಾ ಬೇಕ್‌ ಮಾಡಿಯೊ ಕೆಳಗಿಳಿಸಿ.

ನೇಂದ್ರ ಬಾಳೆಹಣ್ಣು ಮಂಗಳೂರು, ಉಡುಪಿ, ಕೇರಳದಲ್ಲಿ ಸಾಮಾನ್ಯವಾಗಿ ಸಿಗುವಂತಹ ಹಣ್ಣು.  ಬಾಳೆಹಣ್ಣಿನ ಇತರೆ ಪ್ರಭೇದಗಳಿಗಿಂತ ನೇಂದ್ರ ಬಾಳೆಹಣ್ಣು ಬಹಳ ಸಿಹಿಯಾಗಿರುತ್ತದೆ. ಬಾಳೆಹಣ್ಣಿನಿಂದ ಯಾವುದೇ ಸಿಹಿ ತಯಾರಿಸಬೇಕಾದರೆ ನೇಂದ್ರ ಬಾಳೆಹಣ್ಣನ್ನೇ ಬಳಸುವುದು ಸಾಮಾನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.