ADVERTISEMENT

ಬಗೆ ಬಗೆ ನುಗ್ಗೆ ಅಡುಗೆ

​ಪ್ರಜಾವಾಣಿ ವಾರ್ತೆ
Published 5 ಮೇ 2017, 19:30 IST
Last Updated 5 ಮೇ 2017, 19:30 IST
ಬಗೆ ಬಗೆ ನುಗ್ಗೆ ಅಡುಗೆ
ಬಗೆ ಬಗೆ ನುಗ್ಗೆ ಅಡುಗೆ   

ನುಗ್ಗೆಸೊಪ್ಪಿನ ಚಟ್ನಿ
ಬೇಕಾಗುವ ಸಾಮಗ್ರಿ

ನುಗ್ಗೆಸೊಪ್ಪು 2 ಕಪ್ ಒಗ್ಗರಣೆಗೆ,   ಬಿಳಿ ಎಳ್ಳು 5 ಚಮಚ, ಎಣ್ಣೆ 4 ಚಮಚ, ಕಡಲೆಬೇಳೆ 3 ಚಮಚ, ಕರಿಬೇವು 2 ಎಸಳು,  ಉದ್ದಿನಬೇಳೆ 3 ಚಮಚ, ಕಡಲೆಬೇಳೆ 1 ಚಮಚ, ಜೀರಿಗೆ 2 ಚಮಚ, ಉದ್ದಿನಬೇಳೆ 1 ಚಮಚ, ಹಸಿಮೆಣಸಿನಕಾಯಿ 10, ಜೀರಿಗೆ 1/2 ಚಮಚ, ಒಣಮೆಣಸಿನಕಾಯಿ 5, ಹುಣಸೆಹಣ್ಣು  ಸಣ್ಣ ನಿಂಬೆ ಗಾತ್ರ, ಬೆಳ್ಳುಳ್ಳಿ 10 ಹಿಳುಕು, ಶುಂಠಿ 1 ಇಂಚು, ಬೆಲ್ಲದ ತುರಿ 2 ಇಂಚು, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
ಬಿಳಿ ಎಳ್ಳು, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ ಬೇರೆ ಬೇರೆಯಾಗಿ ಎಣ್ಣೆ ಹಾಕದೆ ಹುರಿದು ಪಕ್ಕಕ್ಕಿಡಿ. ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಹಸಿಮೆಣಸಿನಕಾಯಿ, ಒಣಮೆಣಸಿನಕಾಯಿ, ಬೆಳ್ಳುಳ್ಳಿ ಶುಂಠಿ, ಹುಣಸೆಹಣ್ಣು  ಒಂದರ ನಂತರ ಒಂದೊಂದಾಗಿ ಹಾಕಿ ಬಾಡಿಸಿ ಚೆನ್ನಾಗಿ ತೊಳೆದಿಟ್ಟ ನುಗ್ಗೆಸೊಪ್ಪು ಹಾಕಿ ಹುರಿಯಬೇಕು.

ನುಗ್ಗೆಸೊಪ್ಪು ಚೆನ್ನಾಗಿ ಬಾಡಿದ ನಂತರ ಕೆಳಕ್ಕಿಳಿಸಿ ತಣ್ಣಗಾದ ನಂತರ ಹುರಿದ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಮಿಕ್ಸಿಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೆಲ್ಲದ ತುರಿ ಹಾಕಿ ಬೇಕಾಗುವಷ್ಟು ನೀರು ಹಾಕಿ ರುಬ್ಬಿ ತೆಗೆದಿಡಿ. ಒಗ್ಗರಣೆಗೆ ಒಂದು ಸಣ್ಣ  ಬಾಣಲೆಯಿಟ್ಟು  2 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು, ಜೀರಿಗೆ, ಒಣಮೆಣಸಿನ ಕಾಯಿ  ಹಾಕಿ ಒಗ್ಗರಣೆ ತಯಾರಿಸಿ ಚಟ್ನಿ ಮೇಲೆ ಸುರಿದರೆ ಆರೋಗ್ಯಕರ ರುಚಿಕರ ನುಗ್ಗೆಸೊಪ್ಪಿನ ಚಟ್ನಿ ಸವಿಯಲು ಸಿದ್ಧ. ಇದು ದೋಸೆ, ಚಪಾತಿ ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ADVERTISEMENT

**

ನುಗ್ಗೆಸೊಪ್ಪಿನ ಅಡೈ
ಬೇಕಾಗುವ ಸಾಮಗ್ರಿ

ನುಗ್ಗೆಸೊಪ್ಪು 2 ಕಪ್, ಎಣ್ಣೆ  2 ಚಮಚ, ಅಕ್ಕಿ 2ಕಪ್, ಸಾಸಿವೆ 1 ಚಮಚ, ಕಡಲೆಬೇಳೆ 4 ಚಮಚ, ಜೀರಿಗೆ 1 ಚಮಚ, ತೊಗರಿಬೇಳೆ 4 ಚಮಚ, ಇಂಗು 1/2 ಚಮಚ, ಧನಿಯಾ 1 ಚಮಚ, ಕರಿಬೇವು 2 ಎಸಳು, ಜೀರಿಗೆ 2ಚಮಚ, ಒಣಮೆಣಸಿನಕಾಯಿ 8, ಶುಂಠಿ 1 ಇಂಚು, ತೆಂಗಿನತುರಿ 1/4 ಕಪ್, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
ಅಕ್ಕಿ ಮತ್ತು ಬೇಳೆಗಳನ್ನು ಚೆನ್ನಾಗಿ ಒಂದೆರಡು ಸಲ ತೊಳೆದು ಸ್ವಲ್ಪವೇ ನೀರಿನಲ್ಲಿ ನೆನೆ ಹಾಕಬೇಕು. ಇದರೊಂದಿಗೆ  ಒಣಮೆಣಸಿನಕಾಯಿ, ಕರಿಬೇವು, ಧನಿಯಾ, ಜೀರಿಗೆ ಹಾಕಿ ನೆನೆಯಿಡಬೇಕು. ರಾತ್ರಿಯಿಡೀ ನೆನೆದ ಅಕ್ಕಿ ಮತ್ತು ಬೇಳೆಗಳನ್ನು ಹೆಚ್ಚು ನೀರು ಹಾಕದೆ ರುಬ್ಬಿಕೊಳ್ಳಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ತೊಳೆದ  ನುಗ್ಗೆಸೊಪ್ಪು ತೆಂಗಿನತುರಿ ಹಾಕಬೇಕು. ಒಂದು ಚಿಕ್ಕ ಬಾಣಲೆಯಲ್ಲಿ 2  ಚಮಚ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಜೀರಿಗೆ ಇಂಗು ಹಾಕಿ ಒಗ್ಗರಣೆ ತಯಾರಿಸಿ ರುಬ್ಬಿದ ಅಕ್ಕಿ ಬೇಳೆಯ ಮಿಶ್ರಣಕ್ಕೆ ಸೇರಿಸಬೇಕು. ಇದರ ಹದ ದೋಸೆ ಹಿಟ್ಟಿಗಿಂತ ಗಟ್ಟಿಯಾಗಿರಬೇಕು. ಕಾದ ಹೆಂಚಿನ  ಮೇಲೆ ಎಣ್ಣೆ ಸವರಿ 2 ಸೌಟಿನಷ್ಟು ಹಿಟ್ಟು ಹಾಕಿ ಕೈಯಿಂದಲೇ ಇದನ್ನು ರೊಟ್ಟಿಯ ರೀತಿ ಹರಡಿ ಇದರ ಮಧ್ಯೆ ದೋಸೆ ಮಗುಚುವ ಸಟ್ಟುಗದಿಂದ   ತೂತು ಮಾಡಬೇಕು. ಈ ಅಡೈ ಸುತ್ತಲೂ ಎಣ್ಣೆ ಬಿಟ್ಟು ಮುಚ್ಚಳ ಮುಚ್ಚಿ ಬೇಯಿಸಬೇಕು. ಚೆನ್ನಾಗಿ ಬೆಂದ ಮೇಲೆ ತಿರುಗಿಸಿ ಹಾಕಿ ಇನ್ನೊಂದಿಷ್ಟು ಎಣ್ಣೆ ಬಿಟ್ಟು ಹದವಾಗಿ ಬೇಯಿಸಿ ತೆಗೆದರೆ ನುಗ್ಗೆ ಸೊಪ್ಪಿನ ಅಡೈ ಬೆಳಗಿನ ಉಪಹಾರಕ್ಕೆ ತಿನ್ನಲು ಸಿದ್ಧ. ಇದನ್ನು  ಚಟ್ನಿ ಜೊತೆ ತಿನ್ನಲು ರುಚಿಯಾಗಿರುತ್ತದೆ. ಅಥವಾ ಮೇಲೆ  ಸ್ವಲ್ಪ ತುಪ್ಪ ಹಾಕಿಕೊಂಡು ಹಾಗೆಯೇ  ಸವಿಯಬಹುದು.

**

ನುಗ್ಗೆಸೊಪ್ಪಿನ ಒಗ್ಗರಣೆ ಅನ್ನ
ಬೇಕಾಗುವ ಸಾಮಗ್ರಿ

ಅನ್ನ  ಒಂದು ಬಟ್ಟಲು, ನುಗ್ಗೆಸೊಪ್ಪು  2 ಕಪ್, ಈರುಳ್ಳಿ  2, ಹಸಿಮೆಣಸಿನ ಕಾಯಿ 6, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ 1 ಚಮಚ, ಕರಿಬೇವು 2 ಎಸಳು, ಕಡಲೆ ಬೇಳೆ 2 ಚಮಚ, ಉದ್ದಿನಬೇಳೆ ­ 2 ಚಮಚ, ಜೀರಿಗೆ 1/2 ಚಮಚ, ಶೇಂಗಾ 1/4 ಕಪ್, ಒಣಮೆಣಸಿನ ಕಾಯಿ  6, ಎಣ್ಣೆ  5 ಚಮಚ, ಸಾಸಿವೆ  1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
4-5 ಚಮಚ ಕಡಲೆಬೀಜ ಮತ್ತು ಒಣಮೆಣಸಿನ ಕಾಯಿ ಬಾಣಲೆಗೆ ಹಾಕಿ ಹುರಿದು ಪುಡಿ ಮಾಡಿಟ್ಟುಕೊಳ್ಳಬೇಕು. ಒಂದು ಕಡಾಯಿಗೆ ಎಣ್ಣೆ ಹಾಕಿ ಉಳಿದ ಕಡಲೆಬೀಜ ಎಣ್ಣೆಯಲ್ಲಿ ಗೋಳಿಸಿ ತೆಗೆದಿಡಬೇಕು. ಅದೇ ಕಡಾಯಿಯಲ್ಲಿನ ಎಣ್ಣೆಗೆ  ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ ಹಾಕಿ ಒಗ್ಗರಣೆ ಮಾಡಿ ಈರುಳ್ಳಿ, ಕರಿಬೇವು ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ  ಹಾಕಿ ಹುರಿದು 1 ನಿಮಿಷದ ನಂತರ ಚೆನ್ನಾಗಿ ತೊಳೆದ ನುಗ್ಗೆಸೊಪ್ಪು, ಕ್ಯಾರೆಟ್ ತುರಿ ಹಾಕಿ ಹುರಿಯುತ್ತ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು. ನುಗ್ಗೆಸೊಪ್ಪು ಬೆಂದ ನಂತರ ಅನ್ನ ಸೇರಿಸಿ ಮೊದಲೇ  ಮಾಡಿಟ್ಟುಕೊಂಡಿದ್ದ ಕಡಲೆಬೀಜ ಒಣಮೆಣಸಿಕಾಯಿಯ ಪುಡಿ ಸೇರಿಸಿ ಮಿಶ್ರ ಮಾಡಬೇಕು. ಓಲೆ ಆರಿಸಿ ಈ ಅನ್ನಕ್ಕೆ ಎಣ್ಣೆಯಲ್ಲಿ ಗೋಳಿಸಿಟ್ಟುಕೊಂಡಿರುವ ಕಡಲೆಬೀಜ ಹಾಕಿದರೆ ನುಗ್ಗೆಸೊಪ್ಪಿನ ಒಗ್ಗರಣೆ ಅನ್ನ ಸವಿಯಲು ಸಿದ್ಧ.

**

ನುಗ್ಗೆಸೊಪ್ಪಿನ ಪಪ್ಪು
ಬೇಕಾಗುವ ಸಾಮಗ್ರಿ

ತೊಗರಿಬೇಳೆ 1ಕಪ್, ನುಗ್ಗೆಸೊಪ್ಪು 2 ಕಪ್, ಹಸಿಮೆಣಸಿನಕಾಯಿ 5-6, ಟೊಮೆಟೊ 3, ಅರಿಶಿನಪುಡಿ 1/2 ಚಮಚ, ಅಚ್ಚಕಾರದಪುಡಿ 2 ಚಮಚ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ1 ಚಮಚ, ಕಿವುಚಿದ ಹುಣಿಸೆ ರಸ 3 ಚಮಚ, ತುಪ್ಪ 2 ಚಮಚ, ಎಣ್ಣೆ  2 ಚಮಚ, ಜೀರಿಗೆ 1/2 ಚಮಚ, ಒಣಮೆಣಸಿನಕಾಯಿ 4, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ 
ಕುಕ್ಕರಿಗೆ ತೊಗರಿಬೇಳೆ 3 ಕಪ್ ನೀರು, ಅರಿಶಿನಪುಡಿ ಹಾಕಿ ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ, ಟೊಮೆಟೊ  ಹಾಕಿ 3 ವಿಷಲ್ ಕೂಗಿಸಿ ತೆಗೆದು ಬೆಂದಿರುವ ಬೇಳೆ ಮತ್ತು ಟೊಮೆಟೊವನ್ನು ಬೇಳೆ ಮಸೆಯುವ ಮಸೆಗೋಲಿನಿಂದ ಇಲ್ಲವೇ ಸೌಟಿನಿಂದ ನುಣ್ಣಗೆ ಮಸೆದಿಟ್ಟುಕೊಳ್ಳಬೇಕು. ಒಂದು ಕಡಾಯಿಗೆ ಎಣ್ಣೆ ಮತ್ತು ತುಪ್ಪವನ್ನು ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಜೀರಿಗೆ ಹಾಕಿ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಒಣಮೆಣಸಿನ ಕಾಯಿ ಹಾಕಿ ಹುರಿಯಬೇಕು. ತೊಳೆದಿಟ್ಟು ಕೊಂಡಿರುವ ನುಗ್ಗೆಸೊಪ್ಪು ಹಾಕಿ ಕಾರದಪುಡಿ, ಉಪ್ಪು ಸೇರಿಸಿ ಹುಣಸೆರಸ ಸೇರಿಸಿ ಚೆನ್ನಾಗಿ  ಕೈಯಾಡಿಸಬೇಕು. ಇದು ಕುದಿ ಬಂದ ತಕ್ಷಣ ಮಸೆದಿಟ್ಟು ಕೊಂಡಿರುವ ಬೇಳೆ ಹಾಕಿ ಮಿಶ್ರ ಮಾಡಿ ಕುದಿಸಬೇಕು. ಹೆಚ್ಚಿಗೆ ನೀರು ಸೇರಿಸಬಾರದು. ಸಾರಿನ ಹದಕ್ಕಿಂತ ಗಟ್ಟಿಯಾಗಿರಬೇಕು. ಆರೋಗ್ಯಕರವಾದ ರುಚಿಕಟ್ಟಾದ ನುಗ್ಗೆ ಸೊಪ್ಪಿನ ಪಪ್ಪು  ಅನ್ನ, ಚಪಾತಿ, ರೊಟ್ಟಿ, ದೋಸೆಗಳ ಜೊತೆ ತಿನ್ನಲು ತಯಾರು.

*

-ವಸುಂಧರಾ ದೇವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.