ADVERTISEMENT

ಬಹು ಖಾದ್ಯಗಳ ‘ಗೂಡು’

ರಸಾಸ್ವಾದ

ಸತೀಶ ಬೆಳ್ಳಕ್ಕಿ
Published 20 ಆಗಸ್ಟ್ 2015, 19:30 IST
Last Updated 20 ಆಗಸ್ಟ್ 2015, 19:30 IST

ಹೊವರ್ಡ್ ಜಾನ್ಸನ್ ಹೋಟೆಲ್‌ನಲ್ಲಿರುವ ನೆಸ್ಟ್‌ ರೆಸ್ಟೋರೆಂಟ್‌ನಲ್ಲಿ ಈಗ ‘ಬಿರಿಯಾನಿ ಮತ್ತು ಕಬಾಬ್‌ ಫೆಸ್ಟಿವಲ್‌’ ನಡೆಯುತ್ತಿದೆ. ನಮ್ಮ ದೇಶದ ವಿವಿಧ ಭಾಗದ ಜನಪ್ರಿಯ ಬಿರಿಯಾನಿ ಮತ್ತು ಕಬಾಬ್‌ ಸವಿರುಚಿಯನ್ನು ಅಲ್ಲಿಯದೇ ರುಚಿಯಲ್ಲಿ ಒದಗಿಸುತ್ತಿದ್ದಾರೆ ಇಲ್ಲಿನ ಮುಖ್ಯ ಬಾಣಸಿಗ ದೇವ್‌ ಬೋಸ್‌.

‘ನೆಸ್ಟ್‌’ ಮಲ್ಟಿಕ್ವಿಸಿನ್‌ ರೆಸ್ಟೋರೆಂಟ್‌. ವಿಶ್ವದ ಎಲ್ಲ ಬಗೆಯ ಖಾದ್ಯಗಳನ್ನು ಸವಿಯುವ ಅವಕಾಶ ಗ್ರಾಹಕರಿಗೆ ಇಲ್ಲಿ ಲಭ್ಯವಿದೆ. ನೆಸ್ಟ್‌ನಲ್ಲಿ ಸೆಟ್‌ ಬ್ರೇಕ್‌ಫಾಸ್ಟ್‌ (ಅಮೆರಿಕನ್‌, ಕಾಂಟಿನೆಂಟಲ್‌ ಮತ್ತು ಇಂಡಿಯನ್‌) ಕೂಡ ಸಿಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ವೈವಿಧ್ಯಮಯ ತಿನಿಸುಗಳ ಆಯ್ಕೆಯಂತೂ ಇದ್ದೇ ಇದೆ. ಪೊಗದಸ್ತು ಊಟಕ್ಕೆ ಕಿಕ್‌ ನೀಡಲು ಇಲ್ಲಿನ ಬಾರ್‌ ಮೆನುವನ್ನೂ ಮಜಬೂತಾಗಿ ವಿನ್ಯಾಸ ಮಾಡಲಾಗಿದೆ. ಕಾಕ್‌ಟೇಲ್‌, ಮಾಕ್‌ಟೇಲ್‌, ಮದ್ಯ, ಬಿಯರ್‌ಗಳ ವಿಪುಲ ಆಯ್ಕೆ ಇಲ್ಲಿದೆ. ಐದಾರು ಜನರು ಒಟ್ಟಾಗಿ ಕುಳಿತು, ಹರಟುತ್ತಾ ಊಟ ಸವಿಯಲು ಇಷ್ಟಪಡುವ ವರಿಗಾಗಿಯೇ ಇಲ್ಲಿ ಎರಡು ಪ್ರತ್ಯೇಕ ಊಟದ ಕೋಣೆ ವ್ಯವಸ್ಥೆ ಮಾಡಲಾಗಿದೆ. ಖಾಸಗೀತನ ಬಯಸುವವರು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆರಾಮಾಗಿ ಕುಳಿತು ಊಟ ಮಾಡಲು ಈ ಜಾಗ ಸೂಕ್ತವಾಗಿದೆ.

ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ಆಹಾರ ಅಭಿರುಚಿ ಇರುತ್ತದೆ. ಕೆಲವರು ಸ್ಟಾಟರ್ಸ್‌ನಿಂದ ಡೆಸರ್ಟ್ಸ್‌ವರೆಗೂ ಸ್ಪ್ಯಾನಿಶ್‌ ಅಥವಾ ಇಟಾಲಿಯನ್‌ ಫುಡ್‌ಗಳನ್ನು ಸವಿಯಬೇಕು ಎಂದು ಬಯಸುತ್ತಾರೆ. ಇನ್ನು ಕೆಲವರು ಬರೀ ದಕ್ಷಿಣ ಭಾರತೀಯ ತಿನಿಸುಗಳನ್ನೇ ತಿನ್ನಲು ಇಷ್ಟಪಡುತ್ತಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಅವರಿಷ್ಟದ ತಿನಿಸುಗಳನ್ನು 24/7ನಲ್ಲಿ ಒದಗಿಸುವುದು ನೆಸ್ಟ್‌ನ ಹೆಗ್ಗಳಿಕೆ.
 
‘ಮಾಂಸಾಹಾರ ಪ್ರಿಯರಿಗೆ ಬಿರಿಯಾನಿ ಮೇಲೆ ವಿಶೇಷ ಒಲವು. ವಿವಿಧ ಸ್ವಾದದಲ್ಲಿ ಲಭ್ಯವಿರುವ ಬಿರಿಯಾನಿಯ ರುಚಿಗೆ ಮನಸೋಲದವರಿಲ್ಲ. ಕಳೆದ ವರ್ಷ ನಾವು ಬಿರಿಯಾನಿ ಮತ್ತು ಕಬಾಬ್‌ ಫೆಸ್ಟಿವಲ್‌ ಆಯೋಜಿಸಿದ್ದೆವು. ಅವುಗಳ ರುಚಿಗೆ ನಮ್ಮ ಗ್ರಾಹಕರು ಮನಸೋತಿದ್ದರು. ಆ ಆಹಾರೋತ್ಸವಕ್ಕೆ ದೊರೆತ ಅದ್ಬುತ ಪ್ರತಿಕ್ರಿಯೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಬಾರಿಯೂ ನಾವು ಬಿರಿಯಾನಿ ಮತ್ತು ಕಬಾಬ್‌ ಉತ್ಸವ ಆಯೋಜಿಸಿದ್ದೇವೆ. ಹೋದವರ್ಷದಂತೆ ಈ ಬಾರಿ ನಾವು ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಒದಗಿಸಿಲ್ಲ. ದಿ ಬೆಸ್ಟ್‌ ಎನ್ನಿಸುವಂತಹ ಎಂಟ್ಹತ್ತು ಬಗೆಯ ಕಬಾಬ್‌ ಮತ್ತು ಬಿರಿಯಾನಿಗಳ ರುಚಿಯನ್ನು ಗ್ರಾಹಕರು ಸವಿಯಬಹುದು’ ಎನ್ನುತ್ತಾರೆ ದೇವ್‌.

ಆಗಸ್ಟ್‌ 23ರವರೆಗೆ ನಡೆಯಲಿರುವ ಈ ಆಹಾರೋತ್ಸವದಲ್ಲಿ ನಾಲ್ಕು ವೆಜ್‌ ಮತ್ತು ನಾಲ್ಕು ನಾನ್‌ವೆಜ್‌ ಕಬಾಬ್‌ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಹಾಗೆಯೇ, ಸಸ್ಯಾಹಾರ ಮತ್ತು ಮಾಂಸಾಹಾರ ಬಿರಿಯಾನಿಯಲ್ಲೂ ನಾಲ್ಕು ನಾಲ್ಕು ಆಯ್ಕೆಗಳಿವೆ. ತಿನಿಸುಗಳ ಸಂಖ್ಯೆ ಕಡಿಮೆ ಇರುವುದರಿಂದ ಗ್ರಾಹಕರಿಗೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಕಾಡುವುದಿಲ್ಲ. ಸ್ಟಾರ್ಟರ್ಸ್‌ನಲ್ಲಿ ಲಖನೌ ಗಲೋಟಿ ಕಬಾಬ್‌, ಫಿಶ್‌ ಪೇಶಾವರಿ ಟಿಕ್ಕಾ, ಪನ್ನೀರ್‌ ಗುಲ್‌ಮೊಹರ್‌, ಪೊಟೆಟೊ ನಜಾಕತ್‌, ಬಹೋರಿ ಕಬಾಬ್‌ ಪ್ರಮುಖವಾದವು. ಮುಖ್ಯ ಮೆನುವಿನಲ್ಲಿ ಸ್ಪಿನಾಚ್‌, ಮಶ್ರೂಮ್‌, ಅಂಬೂರ್‌ ಮತ್ತು ಹೈದರಾಬಾದಿ ಬಿರಿಯಾನಿ ಆಯ್ಕೆ ಲಭ್ಯವಿದೆ.
ಇಲ್ಲಿನ ಕಬಾಬ್‌ ಮತ್ತು ಬಿರಿಯಾನಿಗಳಿಗೆ ವರ್ಜಿನ್‌ ಸ್ಯಾಂಗ್ರಿಯಾ ಡ್ರಿಂಕ್‌ ಅತ್ಯುತ್ತಮ ಕಾಂಬಿನೇಷನ್‌.

‘ನಾವು ಈ ಬಾರಿಯ ಆಹಾರೋತ್ಸವಕ್ಕೆ ಸಿದ್ಧಪಡಿಸಿರುವ ಮೆನು ಗ್ರಾಹಕರಿಗೆ ತುಂಬ ಇಷ್ಟವಾಗಿದೆ. ಎಂಟರಲ್ಲಿ ಎಂಟಕ್ಕೂ ಭಾರೀ ಬೇಡಿಕೆ ಇದೆ. ವಿಶೇಷ ರುಚಿಯ ಮಟನ್‌ ಬಿರಿಯಾನಿ ನಮ್ಮ ಉತ್ಸವದ ಸಿಗ್ನೇಚರ್‌ ತಿನಿಸು. ಬಿರಿಯಾನಿ ಪ್ರಿಯರು ಈ ಬಗೆಯ ರುಚಿಯನ್ನು ಈವರೆಗೆ ಎಲ್ಲೂ ಸವಿದಿರುವುದಿಲ್ಲ ಎನ್ನುವುದು ನನ್ನ ಭಾವನೆ. ಸಸ್ಯಾಹಾರ ಪ್ರಿಯರ ನಾಲಗೆ ಮೊಗ್ಗುಗಳನ್ನು ಅರಳಿಸುವ ಶಕ್ತಿ ಮಶ್ರೂಮ್‌ ಮತ್ತು ಬೆಂಗಾಲಿ ಬಿರಿಯಾನಿಗಿದೆ. ರಾಯತ ಮತ್ತು ಸಲಾಡ್‌ನೊಂದಿಗೆ ಬಿರಿಯಾನಿ ಬಡಿಸುತ್ತೇವೆ. ಈ ಉತ್ಸವದ ತಿನಿಸುಗಳು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಲಭ್ಯವಿದೆ. ನಾವು ಖಾದ್ಯಗಳ ಬೆಲೆ ನಿಗದಿ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆಹಾರಪ್ರಿಯರು ನಮ್ಮ ರೆಸ್ಟೋರೆಂಟ್‌ಗೆ ಬರಬೇಕು; ಬಂದು ನಮ್ಮ ಖಾದ್ಯಗಳ ರುಚಿಯನ್ನು ಸವಿಯಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ. ಹಣ ನಂತರದ ಸಂಗತಿ. ನೆಸ್ಟ್‌ ರೆಸ್ಟೋರೆಂಟ್‌ಗೆ ಬರುವ ಜನರು ನಮ್ಮ ಆಹಾರ ಬಗ್ಗೆ ಮಾತನಾಡಬೇಕೇ ಹೊರತು ಹಣದ ವಿಚಾರವಾಗಿಯಲ್ಲ’–ಇದು ದೇವ್‌ ಗ್ರಾಹಕರ ಕುರಿತು ಹೇಳುವ ಮಾತು.

ದೆಹಲಿಯ ಸಣ್ಣ ರೆಸ್ಟೋರೆಂಟ್‌ ಒಂದರಿಂದ ಬಾಣಸಿಗ ವೃತ್ತಿ ಆರಂಭಿಸಿದ ದೇವ್‌ ಬೋಸ್‌, ಈಗ ನೆಸ್ಟ್‌ ರೆಸ್ಟೋರೆಂಟ್‌ನ ಮುಖ್ಯ ಬಾಣಸಿಗರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಶ್ಚಿಮಾತ್ಯರಿಗೆ ಇಷ್ಟವಾಗುವ ಅಡುಗೆ ಮಾಡುವುದರಲ್ಲಿ ಪರಿಣತಿ ಸಾಧಿಸಿರುವ ಇವರು, ಬಿರಿಯಾನಿ ಮತ್ತು ಕಬಾಬ್‌ಗಳ ಮೂಲಕ ತಮ್ಮ ರುಚಿಯ ಕೈಚಳಕ ತೋರುತ್ತಿದ್ದಾರೆ. ನೆಸ್ಟ್‌ಗೆ ಹೋಗಿ ಬಿರಿಯಾನಿ, ಕಬಾಬ್‌ ಸವಿದವರಿಗೆ ಸಂತೃಪ್ತಿಯ ಜೊತೆಗೆ ಒಂದು ಹೊಸ ರುಚಿ ಸವಿದ ಅನುಭವವೂ ಜೊತೆಯಾಗುತ್ತದೆ.

ರೆಸ್ಟೋರೆಂಟ್‌: ನೆಸ್ಟ್‌
ಶೈಲಿ
: ಮಲ್ಟಿ ಕ್ವಿಸಿನ್‌
ಬಾಣಸಿಗ: ದೇವ್‌ ಬೋಸ್‌
ಆಹಾರೋತ್ಸವ  ಆಗಸ್ಟ್‌ 23 ಕೊನೆಗೊಳ್ಳುವ ದಿನಾಂಕ:
ಸಿಗ್ನೇಚರ್‌ ತಿನಿಸುಗಳು: ಮಟನ್‌ ಬಿರಿಯಾನಿ, ಫಿಶ್‌ ಪೇಶಾವರಿ ಟಿಕ್ಕಾ, ಪನ್ನೀರ್‌ ಗುಲ್‌ಮೊಹರ್‌. 

₹1200 ಇಬ್ಬರಿಗೆ ತಗಲುವ ವೆಚ್ಚ
ಟೇಬಲ್‌ ಕಾಯ್ದಿರಿಸಲು  080 3040 7000
ಸ್ಥಳ: ಹೊವರ್ಡ್ ಜಾನ್ಸನ್‌, ಥಣೀಸಂದ್ರ ಮುಖ್ಯರಸ್ತೆ, ನಾಗವಾರ ಜಂಕ್ಷನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.