ADVERTISEMENT

ಮಧುಮೇಹಕ್ಕೆ ಮುದದ ಆಹಾರ

ನಮ್ಮೂರ ಊಟ

ಎಸ್.ವಿಜಯ ಗುರುರಾಜ
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST

ಗೋದಿ ಮತ್ತು ಕಾರ್ನ್ ಹುಗ್ಗಿ
ಸಾಮಗ್ರಿ:
ಗೋದಿ ನುಚ್ಚು 1ಲೋಟ, ಜೋಳದ ಕಾಳು- ಕಾಲು ಲೋಟ, ಹೆಸರುಬೇಳೆ ಅಥವಾ ಹೆಸರುಕಾಳು- ಅರ್ಧ ಲೋಟ, ಜೀರಿಗೆ, ಮೆಣಸು ತಲಾ 1 ಚಮಚ, ಶುಂಠಠಿ ಸ್ವಲ್ಪ, ಕೊಬ್ಬರಿ ತುರಿ-ಸ್ವಲ್ಪ, ಅರಿಶಿನ-ಅರ್ಧ ಚಮಚ. ಒಗ್ಗರಣೆಗೆ-ಎಣ್ಣೆ, ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ಮತ್ತು ರುಚಿಗೆ ಉಪ್ಪು.

ವಿಧಾನ: ಒಂದು ಕುಕ್ಕರ್‌ಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಕರಿಬೇವು, ಒಣಮೆಣಸು ಹಾಕಿ ಜೋಳದ ಕಾಳನ್ನು ಸೇರಿಸಿ ನಂತರ ಹೆಸರುಬೇಳೆ ಹಾಕಿ ಹುರಿಯುತ್ತಾ ಜೀರಿಗೆ, ಮೆಣಸಿನಪುಡಿ ಹಾಕಿ. ನಂತರ ಗೋದಿನುಚ್ಚನ್ನು ತೊಳೆದು ಕುಕ್ಕರಿಗೆ ಹಾಕಿ ಅರಿಶಿನ ಮತ್ತು ಕಾಯಿತುರಿ ಹಾಕಿ ಚೆನ್ನಾಗಿ ಕಲಸಿ ಉಪ್ಪು ಹಾಕಿ ಮೂರರಷ್ಟು ನೀರನ್ನು ಸೇರಿಸಿ ಮೂರು ವಿಶಲ್ ಕೂಗಿಸಿ ಕೆಳಗಿಳಿಸಿ. ಈ ಗೋದಿ ಹುಗ್ಗಿಯನ್ನು ಮಧುಮೇಹ ಭಾದಿತರು ಧಾರಾಳವಾಗಿ ಸೇವಿಸಬಹುದು. ಇದೇ ಗೋದಿ ರವೆ ಮತ್ತು ತೊಗರಿಬೇಳೆಯೊಂದಿಗೆ ತರಕಾರಿಗಳನ್ನೆಲ್ಲಾ ಉಪಯೋಗಿಸಿ ಬಿಸಿಬೇಳೆಭಾತ್‌ಅನ್ನು ಸಹ ಮಾಡಬಹುದು.
***
ಮೆಂತ್ಯೆ ಉಂಡೆ
ಸಾಮಗ್ರಿ: ಮೆಂತ್ಯೆಕಾಳು 1 ಲೋಟ,  ಬಾದಾಮಿ ಅರ್ಧ ಲೋಟ, ಗೋದಿ ಹಿಟ್ಟು- ಅರ್ಧ ಲೋಟ, ತುಪ್ಪ-1 ಚಮಚ, ಬೆಲ್ಲದಪುಡಿ1 ಚಮಚ.

ವಿಧಾನ: ಮೆಂತ್ಯೆ ಕಾಳು ಮತ್ತು ಬಾದಾಮಿಯನ್ನು ಹದವಾಗಿ ಹುರಿದು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಗೋದಿ ಹಿಟ್ಟನ್ನು ಘಂ ಎಂದು ಸುವಾಸನೆ ಬರುವಂತೆ ಹುರಿಯಿರಿ. ನಂತರ ಬಾಣಲೆಗೆ ಬೆಲ್ಲದ ಪುಡಿ ಮತ್ತು ಸ್ವಲ್ಪನೀರು ಹಾಕಿ, ಕುದಿಬಂದಾಗ ಕೆಳಗಿಳಿಸಿ ಸಿದ್ದಗೊಳಿಸಲ್ಪಟ್ಟ ಪುಡಿಗಳನ್ನು ಸೇರಿಸಿ. ತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿ ಚಿಕ್ಕ ಉಂಡೆಗಳನ್ನು ಕಟ್ಟಿಡಿ. ಪ್ರತಿ ದಿನ ಮುಂಜಾನೆ ಒಂದು ಉಂಡೆ ತಿಂದು ಬೆಚ್ಚನೆಯ ನೀರನ್ನು ಕುಡಿಯಿರಿ, ಆರೋಗ್ಯಕರ ದಿನಕ್ಕೊಂದು ಶ್ರೀಕಾರ ಹಾಕಿರಿ. ಅಲ್ಪ ಪ್ರಮಾಣದಲ್ಲಿ ಬೆಲ್ಲದ ಸೇವನೆಯಿಂದ ದೇಹಕ್ಕೆ ಏನೂ ತೊಂದರೆಯಿಲ್ಲ
***
ಚೆಟ್ನಿಪುಡಿ
ಸಾಮಗ್ರಿ: ಅಗಸೆ ಬೀಜ -1 ಲೋಟ, ಕಡಲೆ ಬೀಜ- ಅರ್ಧ ಲೋಟ, ಧನಿಯ -1 ಲೋಟ,  ಮೆಂತ್ಯೆ ಕಾಳು ಅರ್ಧ ಲೋಟ, ಜೀರಿಗೆ- ಅರ್ಧ ಲೋಟ, ಸೋಂಪು- 1 ಚಮಚ, ಮೆಣಸು- 1 ಚಮಚ, ಓಂ ಕಾಳು-1 ಚಮಚ, ಉಪ್ಪು- ರುಚಿಗೆ ತಕ್ಕಷ್ಟು.

ವಿಧಾನ: ಉಪ್ಪನ್ನು ಹೊರತುಪಡಿಸಿ ಉಳಿದೆಲ್ಲ ಪದಾರ್ಥಗಳನ್ನು ಬಾಣಲೆಗೆ ಒಂದೊಂದಾಗಿ ಹಾಕಿ, ಎಣ್ಣೆ ಹಾಕದೆ ಹುರಿದು ತೆಗೆಯಿರಿ. ಆರಿದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿಮಾಡಿ ಉಪ್ಪಿನಪುಡಿಯನ್ನು ಸೇರಿಸಿ ಮಿಶ್ರಮಾಡಿ. ಒಂದು ಗಾಜಿನ ಡಬ್ಬಿಗೆ ತುಂಬಿಟ್ಟುಕೊಳ್ಳಿ. ಪ್ರತಿದಿನವೂ ಬಿಸಿ ಅನ್ನಕ್ಕೆ ತುಪ್ಪ ಹಾಕಿ ಕಲಸಿ ತಿನ್ನಿ. ಚಪಾತಿ, ದೋಸೆಗಳಿಗೂ ಈ ಆರೋಗ್ಯಕರವಾದ ಚೆಟ್ನಿಪುಡಿಯನ್ನು ಹಾಕಿ ತಿನ್ನಬಹುದು. ಇದನ್ನು ಸೇವಿಸುವುದರಿಂದ ಶರೀರದಲ್ಲಿ ಉಂಟಾಗುವ ವಾಯುಪ್ರಕೋಪ ಅಲ್ಲದೆ, ರಕ್ತದೊತ್ತಡ, ಮಧುಮೇಹವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು.
***
ಗೋದಿರವೆ ಖರ್ಜೂರದ ಸಜ್ಜಿಗೆ
ಸಾಮಾನ್ಯವಾಗಿ ಮಧುಮೇಹಿಗಳು ಸಿಹಿ ತಿನ್ನಬಾರದು ಎಂಬ ಹೇಳಿಕೆಯಿಂದ ಅವರು ಸಿಹಿ ತಿನ್ನದೆ ಖಿನ್ನತೆಯನ್ನು ಅನುಭವಿಸುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ ಖರ್ಜೂರವನ್ನು ಉಪಯೋಗಿಸಿ ಸಿಹಿ ತಿಂಡಿ ಮಾಡಿಕೊಡುವುದರಿಂದ ಅವರಲ್ಲಿ ಲವಲವಿಕೆ ಕಾಣಬಹುದು.

ಸಾಮಗ್ರಿ: ಗೋದಿ ರವೆ- 1ಲೋಟ, ಖರ್ಜೂರ- 6 , ಗೋಡಂಬಿ 6, ಏಲಕ್ಕಿ 2 , ತುಪ್ಪ2 ಚಮಚ.

ವಿಧಾನ: ಖರ್ಜೂರ ಮತ್ತು ರವೆಯನ್ನು ಅರ್ಧ ಗಂಟೆ ನೆನೆಸಿಟ್ಟು ಮಿಕ್ಸಿಗೆ ಹಾಕಿ ತರಿಯಾಗಿ ರುಬ್ಬಿಕೊಳ್ಳಬೇಕು. ಒಂದು ಬಾಣಲೆಗೆ ಹಾಕಿ ತುಪ್ಪಸೇರಿಸಿ ಮಿಶ್ರಣ ಗಟ್ಟಿಯಾಗುವರೆಗೆ ತಿರುಗಿಸುತ್ತಿರಿ. ಸಜ್ಜಿಗೆಯಂತೆ ಕೂಡಿಕೊಂಡಾಗ ಏಲಕ್ಕಿ ಪುಡಿ ಮತ್ತು ಗೋಡಂಬಿ ಚೂರು ಹಾಕಿ ಕೆಳಗಿಳಿಸಿ. ಈ ಆರೋಗ್ಯಕರವಾದ ಸಜ್ಜಿಗೆಯನ್ನು ಕೊಡಿ.
***
ಮೆಂತ್ಯೆ ಮೂಂಗ್ ಸಲಾಡ್
ಮೆಂತ್ಯೆ ಕಾಳನ್ನು ಮತ್ತು ಹೆಸರುಕಾಳನ್ನು ಬೇರೆ ಬೇರೆ ಯಾಗಿ ಮುಂಜಾನೆ ನೆನೆಸಿ. ರಾತ್ರಿ ನೀರು ಸೋಧಿಸಿಡಿ. ಮರುದಿನಕ್ಕೆ ಮೆಂತ್ಯೆ ಕಾಳು ಮತ್ತು ಹೆಸರು ಕಾಳು ಮೊಳಕೆಯೊಡೆದಿರುತ್ತದೆ. ಅವೆರಡನ್ನೂ ಒಂದೂಂದು ಚಮಚ ಬೌಲ್‌ಗೆ ಹಾಕಿ. ನಿಂಬೆರಸ, ಉಪ್ಪು ಮತ್ತು ಕಾಯಿತುರಿ ಬೆರೆಸಿದ ಸಲಾಡನ್ನು ದಿನವೂ ಊಟಕ್ಕೆ ಮೊದಲು ಸೇವಿಸಿ. ಇಂತಹ ಆರೋಗ್ಯಕರವಾದ ಆಹಾರವನ್ನು ಹದವರಿತು ತಯಾರಿಸಿ ಕೊಡುವುದರಿಂದ ಮಧುಮೇಹದವರಿಗೆ ಬದುಕು ಸಹನೀಯವೆನಿಸುತ್ತದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.