ADVERTISEMENT

ಮಳೆಗಾಲಕ್ಕೆ ಕರಿಬೇವು ವೈವಿಧ್ಯ

ನಮ್ಮೂರ ಊಟ

ಸಹನಾ ಕಾಂತಬೈಲು
Published 17 ಜುಲೈ 2015, 19:30 IST
Last Updated 17 ಜುಲೈ 2015, 19:30 IST

ನಿತ್ಯದ ಅಡುಗೆಯಲ್ಲಿ ಬಳಕೆಯಾಗುವ ಕರಿಬೇವಿಗೆ ಔಷಧೀಯ ಗುಣಗಳಿವೆ. ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ಇದು ರಾಮಬಾಣ. ಕರಿಬೇವು ಕಬ್ಬಿಣದ ಅಂಶವನ್ನು ಹೊಂದಿದೆ. ಇದರ ಸೇವನೆ ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರ ಎಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತಯಾರಿಸಿದ ತೈಲವನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದು ಅಲ್ಲದೆ ಬಾಲನರೆ ವಾಸಿಯಾಗುವುದು.

ಕರಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯಲ್ಲಿ ಮಿಶ್ರಣ ಮಾಡಿ ಸ್ವಲ್ಪ ಉಪ್ಪು ಸೇರಿಸಿ ಕುಡಿಯುವುದರಿಂದ ಅತಿಸಾರ ಭೇದಿಯು ಕಡಿಮೆಯಾಗುತ್ತದೆ. ಒಂದು ಚಮಚ ಕರಿಬೇವಿನ ಎಲೆಯ ರಸಕ್ಕೆ ಅಷ್ಟೇ ಪ್ರಮಾಣದ ನಿಂಬೆರಸವನ್ನು ಬೆರೆಸಿ ಸೇವಿಸುವುದರಿಂದ ಗರ್ಭಿಣಿಯರ ವಾಕರಿಕೆ ನಿವಾರಣೆಯಾಗುತ್ತದೆ.

ಅಡುಗೆಯ ರುಚಿ ಹಾಗೂ ಪರಿಮಳ ಹೆಚ್ಚಿಸಲು ಕರಿಬೇವು ಬೇಕೇ ಬೇಕು. ಒಗ್ಗರಣೆಯಲ್ಲಿ ಕರಿಬೇವಿನದೇ ಪ್ರಧಾನ ಪಾತ್ರ. ಇದರಿಂದ ತಯಾರಿಸಬಹುದಾದ ವೈವಿಧ್ಯಮಯ ಪದಾರ್ಥಗಳ ವಿವರ ಇಲ್ಲಿದೆ.

ಕರಿಬೇವಿನ ಮಸಾಲೆ ವಡೆ

ಸಾಮಗ್ರಿ: ಸಣ್ಣಗೆ ಹೆಚ್ಚಿಕೊಂಡ ಕರಿಬೇವು ಸೊಪ್ಪು 1 ಲೋಟ, ಕಡಲೆಬೇಳೆ 2 ಲೋಟ, ಉದ್ದಿನಬೇಳೆ ಕಾಲು ಲೋಟ, ತೊಗರಿಬೇಳೆ ಕಾಲು ಲೋಟ, ಸ್ವಲ್ಪ ಕೊತ್ತಂಬರಿ ಸೊಪ್ಪು, ಶುಂಠಿ 1 ಇಂಚು, ಹಸಿಮೆಣಸು 6, ಇಂಗು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ವಿಧಾನ: ಕಡಲೆಬೇಳೆ, ಉದ್ದಿನಬೇಳೆ, ತೊಗರಿಬೇಳೆಗಳನ್ನು ಒಟ್ಟಿಗೆ ಎರಡು ಗಂಟೆಗಳ ಕಾಲ ನೆನೆಸಿ ತೊಳೆದು ಹಸಿಮೆಣಸು, ಉಪ್ಪು, ಶುಂಠಿ, ಇಂಗು ಹಾಕಿ ಗಟ್ಟಿಗೆ ತರಿತರಿಯಾಗಿ ರುಬ್ಬಿ. ಹೆಚ್ಚಿಟ್ಟುಕೊಂಡ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರೆಸಿ. ಅದನ್ನು ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ ಕೈಯಲ್ಲಿ ಸ್ವಲ್ಪ ಒತ್ತಿ ಚಪ್ಪಟೆ ಮಾಡಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಘಮ ಘಮಿಸುವ ಕರಿಬೇವಿನ ಮಸಾಲೆ ವಡೆ ಸವಿಯಲು ಸಿದ್ಧ.

ಕರಿಬೇವಿನ ರೊಟ್ಟಿ
ಸಾಮಗ್ರಿ: ಸಣ್ಣಗೆ ಹೆಚ್ಚಿಕೊಂಡ ಕರಿಬೇವು ಸೊಪ್ಪು ಅರ್ಧ ಲೋಟ, ಅಕ್ಕಿ ಹಿಟ್ಟು 2ಲೋಟ, ಈರುಳ್ಳಿ 1, ಹಸಿಮೆಣಸು 3, ಸ್ವಲ್ಪ ಕೊತ್ತಂಬರಿ ಸೊಪ್ಪು, ಜೀರಿಗೆ ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಅಕ್ಕಿ ಹಿಟ್ಟಿಗೆ ಜೀರಿಗೆ, ಉಪ್ಪು, ಹೆಚ್ಚಿಕೊಂಡ ಈರುಳ್ಳಿ ಕರಿಬೇವಿನ ಸೊಪ್ಪು, ಹಸಿಮೆಣಸು, ಕೊತ್ತಂಬರಿ ಸೊಪ್ಪನ್ನು ಹಾಕಿ ಗಟ್ಟಿಯಾಗಿ ಕಲಸಿ. ಬಾಳೆ ಎಲೆಯಲ್ಲಿ ತೆಳುವಾಗಿ ರೊಟ್ಟಿ ತಟ್ಟಿ. ಕಾದ ಕಾವಲಿಯಲ್ಲಿ ಎರಡೂ ಬದಿಯಿಂದಲೂ ತುಪ್ಪ ಹಾಕಿ ಬೇಯಿಸಿ. ಇದು ತಿನ್ನಲೂ ರುಚಿ, ಆರೋಗ್ಯಕ್ಕೂ ಒಳ್ಳೆಯದು.

ಕರಿಬೇವಿನ ತಂಬುಳಿ
ಸಾಮಗ್ರಿ:
ಕರಿಬೇವು ಎಲೆ  ಒಂದು ಲೋಟ, ಕಾಳುಮೆಣಸು 5, ಜೀರಿಗೆ ಅರ್ಧ ಚಮಚ, ತುಪ್ಪ 2 ಚಮಚ, ಕಾಯಿತುರಿ ಅರ್ಧ ಲೋಟ, ಸಿಹಿ ಮಜ್ಜಿಗೆ 2 ಸೌಟು, ಉಪ್ಪು ರುಚಿಗೆ ತಕ್ಕಷ್ಟು.

ADVERTISEMENT

ವಿಧಾನ: ಒಂದು ಬಾಣಲೆಗೆ ಕರಿಬೇವು ಎಲೆ ಹಾಕಿ, ಒಂದು ಚಮಚ ತುಪ್ಪ ಹಾಕಿ ಹುರಿದು ತೆಗೆಯಿರಿ. ನಂತರ ಅದೇ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಕಾಳುಮೆಣಸು, ಜೀರಿಗೆ ಹಾಕಿ ಹುರಿಯಿರಿ. ಎಲ್ಲವನ್ನೂ ಕಾಯಿತುರಿಯ ಜೊತೆ ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಮಜ್ಜಿಗೆ ಬೆರೆಸಿ ಊಟದಲ್ಲಿ ಬಳಸಿ. ಕುಡಿಯಲೂ ಉಪಯೋಗಿಸಬಹುದು. ಈ ತಂಬುಳಿ ಜೀರ್ಣ ಶಕ್ತಿ ಹೆಚ್ಚಿಸಲು ಒಳ್ಳೆಯದು.

ಕರಿಬೇವಿನ ಚಟ್ನಿ
ಸಾಮಗ್ರಿ:
ಕರಿಬೇವಿನ ಎಲೆಗಳು 2ಲೋಟ, ಒಣಮೆಣಸು 3–4, ತೊಗರಿಬೇಳೆ 2 ಚಮಚ, ತೆಂಗಿನ ತುರಿ 1ಲೋಟ, ಹುಳಿ ಹುಣಸೆ ಬೀಜ ಗಾತ್ರ, ತುಪ್ಪ 1 ಚಮಚ, ಬೆಳ್ಳುಳ್ಳಿ 4 ಎಸಳು, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಕರಿಬೇವಿನ ಸೊಪ್ಪನ್ನು ಎಣ್ಣೆಯಲ್ಲಿ ಚೆನ್ನಾಗಿ ಬಾಡಿಸಿ. ಒಣಮೆಣಸು, ತೊಗರಿಬೇಳೆಯನ್ನು ಹುರಿಯಿರಿ. ಬಾಡಿಸಿದ ಕರಿಬೇವಿನ ಸೊಪ್ಪಿಗೆ ತೆಂಗಿನ ತುರಿ, ಹುರಿದ ತೊಗರಿಬೇಳೆ, ಒಣಮೆಣಸು, ಹುಳಿ, ಉಪ್ಪು ಸೇರಿಸಿ ರುಬ್ಬಿ. ತುಪ್ಪದಲ್ಲಿ ಸಾಸಿವೆ, ಬೆಳ್ಳುಳ್ಳಿ ಒಗ್ಗರಣೆ ಮಾಡಿ. ಇದು ಊಟಕ್ಕೆ, ಚಪಾತಿ, ದೋಸೆ ಜೊತೆಗೆ ಚೆನ್ನಾಗಿರುತ್ತದೆ. ಸ್ಥೂಲಕಾಯದವರು ಕೆಲ ತಿಂಗಳವರೆಗೆ ದಿನವೂ ಕರಿಬೇವಿನ ಚಟ್ನಿ ತಯಾರಿಸಿ ಆಹಾರದೊಡನೆ ತಿನ್ನುತ್ತಾ ಬಂದರೆ ದೇಹದ ತೂಕ ಕಡಿಮೆಯಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.