ADVERTISEMENT

ರಂಜಾನ್‌: ರುಚಿಮೊಗ್ಗುಗಳು ಅರಳುವ ಸಮಯ

ರಸಾಸ್ವಾದ

ಸತೀಶ ಬೆಳ್ಳಕ್ಕಿ
Published 17 ಜುಲೈ 2015, 19:30 IST
Last Updated 17 ಜುಲೈ 2015, 19:30 IST

ಹಗಲಿನಲ್ಲಿ ಒಂದು ಹನಿ ನೀರನ್ನೂ ಕುಡಿಯದೇ ಕಠಿಣ ವ್ರತ ಮಾಡುವ ಮುಸ್ಲಿಂ ಬಾಂಧವರು ತಮ್ಮ ಒಂದು ತಿಂಗಳ ಕಠಿಣ ಉಪವಾಸವನ್ನು ಅಂತ್ಯಗೊಳಿಸುವ ದಿನ ಬಂದಿದೆ. ಹೀಗಾಗಿ ಅವರೆಲ್ಲರೂ ರಂಜಾನ್‌ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಪ್ರತಿ ಹಬ್ಬದೊಂದಿಗೆ ಕೆಲವು ವಿಶೇಷ ತಿನಿಸುಗಳು ತಳುಕು ಹಾಕಿಕೊಂಡಿರುತ್ತವೆ. ಅದರಲ್ಲೂ ಮುಸ್ಲಿಂ ಸಮುದಾಯದವರ ಅತಿದೊಡ್ಡ ಹಬ್ಬ ಎನಿಸಿಕೊಂಡಿರುವ ರಂಜಾನ್‌ ಎಂದರೆ ಬಾಯಲ್ಲಿ ನೀರೂರಿಸುವ ನಾನಾ ಬಗೆಯ ಖಾದ್ಯಗಳು ನೆನಪಾಗುತ್ತವೆ. ರಂಜಾನ್‌ ಹಬ್ಬದಂದು ವಿಶೇಷ ತಿನಿಸುಗಳನ್ನು ಮನೆಯಲ್ಲಿ ಮಾಡಿ ಸವಿಯುವವರು ಕೆಲವರಾದರೆ, ಕುಟುಂಬ ಸಮೇತರಾಗಿ ರೆಸ್ಟೋರೆಂಟ್‌ಗೆ ತೆರಳಿ ಹಬ್ಬದೂಟ ಉಣ್ಣುವವರೂ ಸಾಕಷ್ಟು ಇದ್ದಾರೆ. ರಂಜಾನ್‌ ಫುಡ್‌ಗೆ ಹೆಸರುವಾಸಿಯಾದ ತಾಣಗಳು, ರೆಸ್ಟೋರೆಂಟ್‌ಗಳು ನಗರದಲ್ಲಿ ಸಾಕಷ್ಟಿವೆ. ಅಂತಹವುಗಳಲ್ಲಿ ಕೆಲವೊಂದನ್ನು ಇಲ್ಲಿ ಪರಿಚಯಿಸಲಾಗಿದೆ. 

‘ಹಲೀಮ್‌’ಗೆ ತಾಜ್‌ ಬೆಸ್ಟ್‌
ಅದ್ಭುತವೆನಿಸುವ ಪೌಷ್ಟಿಕಾಂಶಗಳಿಂದ ಕೂಡಿದ ಹಲೀಮ್‌, ರಂಜಾನ್‌ನ ವಿಶೇಷ ತಿನಿಸುಗಳಲ್ಲಿ ಒಂದು. ಇದು ಮನೆಯಲ್ಲಿ ಮಾಡಬಹುದಾದ ತಿನಿಸಾದರೂ ಎಲ್ಲರಿಗೂ ಅದನ್ನು ಅಚ್ಚುಕಟ್ಟಾಗಿ ಮಾಡಲು ಬರುವುದಿಲ್ಲ. ಅಲ್ಲದೇ ಸಣ್ಣ ಪ್ರಮಾಣದಲ್ಲಿ ತಯಾರಿಸಿದರೆ ಹಲೀಮ್‌ ರುಚಿಯೂ ಅಷ್ಟು ಚೆನ್ನಾಗಿ ಇರುವುದಿಲ್ಲ.

ಯಶವಂತಪುರದಲ್ಲಿರುವ ತಾಜ್‌ ವಿವಾಂತಾದಲ್ಲಿನ ‘ಪ್ಯಾಲೆಟ್‌’ ರೆಸ್ಟೋರೆಂಟ್‌ ಅದ್ಭುತ ರುಚಿಯ ಹಲೀಮ್‌ ತಯಾರಿಕೆಗೆ ಪ್ರಸಿದ್ಧಿಯಾಗಿದೆ. ಇಲ್ಲಿ ನಿತ್ಯವೂ 200ರಿಂದ 300 ಹಲೀಮ್‌ ಬಿಕರಿಯಾಗುತ್ತದೆ. ರಂಜಾನ್‌ ಹಬ್ಬದ ಇಫ್ತಾರ್‌ ಕೂಟಕ್ಕೆ ಇಲ್ಲಿಂದ ಸಾಕಷ್ಟು ಹಲೀಮ್‌ ಪಾರ್ಸೆಲ್‌ ಆಗುತ್ತಿದೆ. ‘ರಂಜಾನ್‌ ಹಬ್ಬದಂದು ಹಲೀಮ್‌ ಅನ್ನು ಮನೆಗೆ ಕೊಂಡೊಯ್ಯುವವರ ಪ್ರಮಾಣ ಮಾಮೂಲಿಗಿಂತ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ರೆಸ್ಟೋರೆಂಟ್‌ನ ಬಾಣಸಿಗ ಉದ್ದೀಪನ್‌ ಚಕ್ರವರ್ತಿ.

ತಾಜ್‌ನಲ್ಲಿ ಹಲೀಮ್‌ ತಯಾರಿಕೆಯೇ ಸಂಪೂರ್ಣ ಭಿನ್ನ. ಕುರಿ ಮಾಂಸದ ಹಲೀಮ್‌ ತಯಾರಿಸಲು ಅವರು ಬರೋಬ್ಬರಿ 18ರಿಂದ 24 ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ. ‘ಬಿಸಿಯಾಗಿದ್ದಾಗಲೇ ಹಲೀಮ್‌ ಸವಿಯಬೇಕು. ಹಲೀಮ್‌ನಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿರುವುದರಿಂದ ಇದೊಂದು ಶಕ್ತಿವರ್ಧಕದಂತೆಯೂ ಕೆಲಸ ಮಾಡುತ್ತದೆ. ನಮ್ಮಲ್ಲಿ ತಯಾರಿಸುವ ಹಲೀಮ್‌ ವಿಶೇಷ ರುಚಿಯಿಂದ ಕೂಡಿರುತ್ತದೆ. ಅದಕ್ಕೆ ನಾವು ಹಲೀಮ್‌ ತಯಾರಿಸಲು ಅನುಸರಿಸುವ ಕ್ರಮವೇ ಕಾರಣ. ಮೊದಲಿಗೆ ಕುರಿಯ ಮಾಂಸವನ್ನು (ಮೂಳೆ ಸಹಿತವಾಗಿ) ದೊಡ್ಡ ಪಾತ್ರೆಗೆ ಹಾಕಿ ಅದಕ್ಕೆ ಗೋಧಿ ನುಚ್ಚು, ಪುದೀನಾ, ಈರುಳ್ಳಿ, ಮೊಸರು, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ತುಪ್ಪ ಮೊದಲಾದ ಮಸಾಲಾ ಪದಾರ್ಥಗಳ ಮಿಶ್ರಣವನ್ನು ಹಾಕಿ, ಅದಕ್ಕೆ ಬೆಂಕಿ ಕೊಡುತ್ತೇವೆ. ಅದ್ಭುತ ರುಚಿಯ ಹಲೀಮ್‌ ತಯಾರಾಗಲು ಕನಿಷ್ಠವೆಂದರೂ 16–17 ಗಂಟೆ ಬೇಯಬೇಕು. ಇಷ್ಟು ಹೊತ್ತು ಬೇಯಿಸುವುದರಿಂದ ಮಾಂಸದೊಂದಿಗೆ ಮೂಳೆಯೂ ಕಳಿತು ಹೋಗುತ್ತದೆ. ಇನ್ನು, 24 ಗಂಟೆ ಬೇಯಿಸಿದರಂತೂ ಅದರ ಸ್ವಾದ ಮತ್ತಷ್ಟು ಹೆಚ್ಚುತ್ತದೆ’ ಎನ್ನುತ್ತಾರೆ ಚಕ್ರವರ್ತಿ.

ಹಲೀಮ್‌ ಜೊತೆಗೆ ‘ಪ್ಯಾಲೆಟ್‌’ ರೆಸ್ಟೋರೆಂಟ್‌ನಲ್ಲಿ ರಂಜಾನ್‌ನ ವಿಶೇಷ ಕಬಾಬ್‌ಗಳನ್ನು ಪರಿಚಯಿಸಲಾಗಿದೆ. ಚಪ್ಲಿ ಕಬಾಬ್‌, ಶೀಕ್‌ ಕಬಾಬ್‌ ಇಲ್ಲಿ ಮಿಸ್‌ ಮಾಡದೇ ತಿನ್ನಬೇಕಾದ ರಂಜಾನ್‌ ತಿನಿಸುಗಳಾಗಿವೆ. 50ಕ್ಕಿಂತಲೂ ಅಧಿಕ ಹಲೀಮ್‌ ಪಾರ್ಸೆಲ್‌ ತೆಗೆದುಕೊಂಡು ಹೋಗುವವರಿಗೆ ಶೇ 20 ರಿಯಾಯಿತಿಯೂ ಇಲ್ಲಿದೆ.

ಶಿವಾಜಿನಗರದ ರಸೆಲ್‌ ಸ್ಟ್ರೀಟ್‌
ನಗರದ ಅತ್ಯಂತ ಹಳೆಯ ಫುಡ್ ಸ್ಟ್ರೀಟ್‌ಗಳಲ್ಲಿ ಇದೂ ಕೂಡ ಒಂದು. ಮಾಮೂಲಿ ದಿನಗಳಿಗಿಂತಲೂ ರಂಜಾನ್‌ ಸಮಯದಲ್ಲಿ ಈ ಸ್ಟ್ರೀಟ್‌ನಲ್ಲಿ ಸ್ಟಾಲ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ತಲೆ ಎತ್ತುತ್ತವೆ. ಬಗೆ ಬಗೆ ಬಿರಿಯಾನಿ, ಪಾಯಾ, ಮಟನ್‌ ಕುರ್ಮಾ, ಶೀಕ್‌ ಕಬಾಬ್‌ ಜೊತೆಗೆ ಒಂಟೆ ಮಾಂಸದ ಕಬಾಬ್‌ ಮಾರಾಟಕ್ಕೂ ಈ ಸ್ಟ್ರೀಟ್‌ ಫೇಮಸ್ಸು.

ಇವುಗಳ ಜೊತೆಗೆ ನಗರದ ಕೆ.ಆರ್‌.ಮಾರುಕಟ್ಟೆ, ಕೋರಮಂಗಲ, ಕಮರ್ಷಿಯಲ್‌ ಸ್ಟ್ರೀಟ್‌, ತಿಲಕ್‌ ನಗರ ಮೊದಲಾದ ಸ್ಥಳಗಳಲ್ಲೂ ವೈವಿಧ್ಯಮಯ ರುಚಿಯ ರಂಜಾನ್‌ ತಿನಿಸುಗಳು ಬಿಕರಿಯಾಗುತ್ತವೆ. 

ಫ್ರೇಜರ್‌ ಟೌನ್‌ನ ಆಹಾರ ವೈವಿಧ್ಯ
ರಂಜಾನ್‌ ಸ್ಟ್ರೀಟ್‌ಫುಡ್‌ಗೆ ಹೆಸರುವಾಸಿಯಾದದ್ದು ಫ್ರೇಜರ್‌ ಟೌನ್‌. ಇಲ್ಲಿ ಬಾಯಲ್ಲಿ ನೀರೂರಿಸುವಂತಹ ಅದ್ಭುತ ರುಚಿಯ ವೆರೈಟಿ ತಿನಿಸುಗಳು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ. ಮುಸ್ಲಿಮರಷ್ಟೇ ಅಲ್ಲದೇ ಬೇರೆ ಬೇರೆ ಜನಾಂಗದ ಆಹಾರಪ್ರಿಯರು ಇಲ್ಲಿಗೆ ಲಗ್ಗೆಯಿಡುತ್ತಾರೆ. ಬೀದಿ ಬದಿಯ ಆಹಾರ ಸವಿಯಲು ಸಂಜೆ ವೇಳೆ ಇಲ್ಲಿ ಜಮಾಯಿಸುವ ಜನರನ್ನು ನೋಡುವುದೇ ಕಣ್ಣಿಗೆ ಹಬ್ಬವೆನಿಸುತ್ತದೆ.

ಮಟನ್‌ ಕೀಮಾ, ಫ್ರೈಡ್‌ ಎಗ್‌, ತರಹೇವಾರಿ ಚಿಕನ್‌ ಖಾದ್ಯಗಳು, 31ಕ್ಕೂ ಅಧಿಕ ಬಗೆಯ ತಂದೂರ್‌ ಐಟಂಗಳು, ಮಟನ್‌ ಬಿರಿಯಾನಿ, ಮಟನ್‌ ಸಮೋಸಾ, ಡ್ರೈಫ್ರೂಟ್‌ ಕುಕ್ಕೀಸ್‌ ಈ ರಸ್ತೆಯಲ್ಲಿ ಸಿಗುವ ರಂಜಾನ್‌ ತಿನಿಸುಗಳಾಗಿವೆ.

ಬೀದಿಬದಿಯ ಸ್ಟಾಲ್‌ಗಳ ಜೊತೆಗೆ ಇಲ್ಲಿ ಸಾಕಷ್ಟು ಜನಪ್ರಿಯ ರೆಸ್ಟೋರೆಂಟ್‌ಗಳೂ ಇವೆ. ಫ್ರೇಜರ್‌ಟೌನ್‌ನಲ್ಲಿರುವ ಚಿಚಾಬಾಸ್‌ ತಾಜ್‌ ರೆಸ್ಟೋರೆಂಟ್‌ 79 ವರ್ಷಗಳಿಂದಲೂ ಇದೆ. ಚಿಚಾಬಾಸ್‌ನಲ್ಲಿ ಸಿಗುವ ಸಮೋಸಾ, ಕೀಮಾ ರೋಟಿ, ಚಿಕನ್‌ ಲಾಲಿಪಪ್‌, ತವಾ ಚಿಕನ್‌, ಹಲೀಮ್‌, ಬಿರಿಯಾನಿ, ಪಾಯ ಸೂಪ್‌, ಮಟನ್‌ ಶೀಕ್‌ ಕಬಾಬ್‌ ರುಚಿ ಚೆನ್ನಾಗಿರುತ್ತೆ. ಹಾಗೆಯೇ, ಫ್ರೇಜರ್‌ ಟೌನ್‌ನಲ್ಲಿರುವ ರಹಾಮ್ಸ್‌, ಅಲ್ಬರ್ಟ್‌ ಬೇಕರಿ (ಮೇಕೆ ಮೆದುಳು ಬಳಸಿ ತಯಾರಿಸುವ ಪಫ್ಸ್‌– ಇದನ್ನು ರಂಜಾನ್‌ ಸಮಯದಲ್ಲಿ ಮಾತ್ರ ತಯಾರಿಸಿ ಮಾರಾಟ ಮಾಡಲಾಗುತ್ತದೆ), ಚಾರ್‌ಮಿನಾರ್‌ ಕಬಾಬ್‌ ಪ್ಯಾರಡೈಸ್‌ನಲ್ಲೂ ವೈವಿಧ್ಯಮಯ ರಂಜಾನ್‌ ತಿನಿಸುಗಳು ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT